ಆನ್‌ಲೈನ್ ಬೆಟ್ಟಿಂಗ್ ಗೇಮ್: ಹಣಗಳಿಸುತ್ತಿರುವವರು ಯಾರು? ಬಲಿಯಾಗುತ್ತಿರುವವರು ಯಾರು?

ಭಾಗ- 1
ಫೆಬ್ರವರಿ 17. ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡರು. ಮೈಸೂರಿನ ಸಮೀಪದ ಹಂಚ್ಯಾ ಗ್ರಾಮದ ಬಳಿ ಈ ದುರಂತ ನಡೆದುಹೋಗಿದೆ. ಮೃತರನ್ನು ಜೋಶ್ ಆಂಥೋನಿ, ಅವರ ಸಹೋದರ ಜೋಬಿ ಆಂಥೋನಿ ಮತ್ತು ಪತ್ನಿ ಶರ್ಮಿಳಾ ಅಲಿಯಾಸ್ ಸ್ವಾತಿ ಎಂದು ಗುರುತಿಸಲಾಗಿದೆ. ಕಾರಣವೇನೆಂದು ಪೊಲೀಸರು ತನಿಖೆ ನಡೆಸಿದಾಗ ಗೊತ್ತಾದ ಸತ್ಯ ಕಳವಳ ಹುಟ್ಟಿಸುವಂಥದ್ದು. ಪೊಲೀಸರ ಪ್ರಕಾರ, ಜೋಬಿ ಆಂಥೋನಿ ಮತ್ತು ಶರ್ಮಿಳಾ ಐಪಿಎಲ್ ಕ್ರಿಕೆಟ್ ಪಂದ್ಯಗಳು ಮತ್ತು ಆನ್‌ಲೈನ್ ಗೇಮಿಂಗ್‌ನಲ್ಲಿ ಬೆಟ್ಟಿಂಗ್ ಮಾಡುವ ಗೀಳಿನಿಂದಾಗಿ ಅಪಾರ ಪ್ರಮಾಣದ ಹಣ ಕಳೆದುಕೊಂಡಿದ್ದರು. ಸಾಲಗಾರರ ಕಾಟ ಹೆಚ್ಚಿತ್ತು. ತೀವ್ರ ಒತ್ತಡದಲ್ಲಿದ್ದ ಜೋಶ್ ಆಂಥೋನಿ ಫೆಬ್ರವರಿ 17ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೋಶ್ ಆತ್ಮಹತ್ಯೆಯ ಬಗ್ಗೆ ತಿಳಿದ ನಂತರ, ಜೋಬಿ ಆಂಥೋನಿ ಮತ್ತು ಶರ್ಮಿಳಾ ಕೂಡ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ಬೆಂಗಳೂರಿನ ಮಹದೇವಪುರ ಮತ್ತು ಬೆಳ್ಳಂದೂರಿನಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಬ್ಬರೂ ಆನ್‌ಲೈನ್ ಜೂಜಾಟದಿಂದ ಆರ್ಥಿಕ ನಷ್ಟ ಅನುಭವಿಸಿದ್ದರು ಎಂದು ವರದಿಗಳು ಹೇಳುತ್ತಿವೆ. ಇಬ್ಬರೂ ಹಲವು ವರ್ಷಗಳಿಂದ ಜೂಜಾಟದ ಚಟ ಅಂಟಿಸಿಕೊಂಡಿದ್ದರು. ಸಾಲ ಮಾಡಿಕೊಂಡಿದ್ದರು. ತೀರಿಸಲಾಗದೆ, ಕಡೆಗೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಧಾನಸಭೆಗೆ ಗೃಹ ಸಚಿವ ಜಿ. ಪರಮೇಶ್ವರ್ ನೀಡಿದ್ದ ಮಾಹಿತಿಯ ಪ್ರಕಾರ,
ಕರ್ನಾಟಕದಲ್ಲಿ ಆನ್‌ಲೈನ್ ರಮ್ಮಿಯಿಂದಾಗಿ ಆರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಐದು ಮತ್ತು ವಿಜಯನಗರ ಜಿಲ್ಲೆಯಲ್ಲಿ ಒಂದು ಸಾವು ಆನ್‌ಲೈನ್ ರಮ್ಮಿ ಕಾರಣದಿಂದ ಸಂಭವಿಸಿದೆ ಎಂದು ಅವರು ಹೇಳಿದ್ದರು.
ಒಂದೆಡೆ ಝಗಮಗಿಸುವ ಕ್ರಿಕೆಟ್. ಇನ್ನೊಂದೆಡೆ ಕರಾಳವಾಗಿ ಕಾಡುವ ಬೆಟ್ಟಿಂಗ್ ದಂಧೆ. ಅಕ್ರಮ ಬೆಟ್ಟಿಂಗ್‌ನ ಭೀತಿ ನಿಷ್ಠಾವಂತ ಅಭಿಮಾನಿಗಳಿಗೆ ಮತ್ತು ಸರಕಾರಕ್ಕೂ ಸಹ ಒಂದು ಬೆದರಿಕೆಯಂತೆ ಇದೆ. ಪ್ರತಿಯೊಂದು ಪ್ರಮುಖ ಕ್ರಿಕೆಟ್ ಪಂದ್ಯಾವಳಿಯೊಂದಿಗೆ, ಅಕ್ರಮ ಬೆಟ್ಟಿಂಗ್ ದಂಧೆಗಳು ಕೂಡ ಬಿಚ್ಚಿಕೊಳ್ಳುತ್ತವೆ. ಅಕ್ರಮ ಬೆಟ್ಟಿಂಗ್ ವೇದಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವುದು, ಅವುಗಳನ್ನು ಕಾನೂನುಬದ್ಧ ದೇಶೀಯ ಗೇಮಿಂಗ್ ಉದ್ಯಮದಿಂದ ಪ್ರತ್ಯೇಕಿಸುವ ಕೆಲಸ ಎಷ್ಟು ಸಮರ್ಥವಾಗಿ ಆಗುತ್ತದೆ ಎಂಬುದನ್ನು ಅವಲಂಬಿಸಿದೆ. ಕಾನೂನುಬದ್ಧ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟಿದೆ. ಅವು ಸರಕಾರಿ ನಿಯಮಗಳು ಮತ್ತು ತೆರಿಗೆ ಕಾನೂನುಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಅಕ್ರಮ ಬೆಟ್ಟಿಂಗ್ ವೇದಿಕೆಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
ಬೆಟ್ಟಿಂಗ್ ಮತ್ತು ಜೂಜಾಟವನ್ನು ಸಾರ್ವಜನಿಕ ಜೂಜಾಟ ಕಾಯ್ದೆ 1867ರ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ದೇಶಾದ್ಯಂತ ಹೆಚ್ಚಿನ ಪ್ರದೇಶಗಳಲ್ಲಿ ಅವುಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಆದರೆ, ಅಂತಹ ಕಾನೂನುಗಳ ಉಪಸ್ಥಿತಿಯ ಹೊರತಾಗಿಯೂ, ಈ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳು ಬೆಟ್ಟಿಂಗ್ ಮತ್ತು ಜೂಜಾಟಗಳನ್ನು ಉತ್ತೇಜಿಸುವಲ್ಲಿ ಮತ್ತು ಜಾಹೀರಾತು ಮಾಡುವಲ್ಲಿ ಮುಂದಿವೆ. ಕಾನೂನುಬದ್ಧ ದೇಶೀಯ ಗೇಮಿಂಗ್ ಘಟಕಗಳ ಸೋಗಿನಲ್ಲಿ ಅವು ಜಾಗ ಪಡೆಯುತ್ತವೆ. ಇಂತಹ ತಪ್ಪು ಗ್ರಹಿಕೆಗಳ ಪರಿಣಾಮವಾಗಿ, ದೇಶೀಯ ಗೇಮಿಂಗ್ ಉದ್ಯಮ ಬಳಲುತ್ತಿದೆ ಮತ್ತು ಬಲಿಪಶುವಾಗುತ್ತಿದೆ.
ಅಕ್ರಮ ಬೆಟ್ಟಿಂಗ್ ವೇದಿಕೆಗಳ ಕಾರಣದಿಂದ ಉಂಟಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು ಬಹಳ ಗಂಭೀರವಾದವು. ಕಾನೂನುಗಳನ್ನು ಉಲ್ಲಂಘಿಸುವ ಇಂಥ ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಯಂತ್ರಣ ಹೇರಲಾಗಿದ್ದರೂ, ಅವು ಟ್ಯಾಕ್ಸಿಗಳು ಮತ್ತು ಕ್ಯಾಬ್‌ಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಸಾಮಾಜಿಕ ಮಾಧ್ಯಮಗಳು, ಡಿಜಿಟಲ್ ಚಾನೆಲ್‌ಗಳು ಮತ್ತು ವಾಟ್ಸ್‌ಆ್ಯಪ್ ಅಥವಾ ಟೆಲಿಗ್ರಾಮ್‌ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳಂಥಲ್ಲೂ ಅವುಗಳ ಹಾವಳಿ ಇರುತ್ತದೆ. ಈ ವೇದಿಕೆಗಳು ತಮ್ಮ ಗುರಿಯಾಗಿರುವವರನ್ನು ತಲುಪಲು ಕ್ರೀಡಾಕೂಟಗಳ ಪ್ರಾಯೋಜಕತ್ವದ ಮಾರ್ಗವನ್ನೂ ಬಳಸುತ್ತವೆ. ಜಾಹೀರಾತು ಉದ್ಯಮ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ದೇಶದಲ್ಲಿನ ಎಲ್ಲಾ ಅಕ್ರಮ ಬೆಟ್ಟಿಂಗ್ ಪ್ರಚಾರಗಳನ್ನು ತಡೆಯುವಲ್ಲಿ ಸರಕಾರ ಯಶಸ್ವಿಯಾದರೆ ಅದು 3,700 ಕೋಟಿ ರೂ.ಗಳಿಂದ 5,810 ಕೋಟಿ ರೂ.ಗಳವರೆಗೆ ಕಳೆದುಕೊಳ್ಳಬಹುದು. ಈ ದಿಗ್ಭ್ರಮೆಗೊಳಿಸುವ ಜಾಹೀರಾತು ವೆಚ್ಚವನ್ನು ನೋಡಿದರೆ, ಅಕ್ರಮ ಬೆಟ್ಟಿಂಗ್ ವೇದಿಕೆಗಳು ಗಳಿಸಬಹುದಾದ ಹಣ ಎಷ್ಟಿರಬಹುದೆಂದು ಅಂದಾಜು ಮಾಡಬಹುದು.
2023ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ‘ಭಾರತದಲ್ಲಿ ಬೆಟ್ಟಿಂಗ್ ಮತ್ತು ಜೂಜಿನ ಉದ್ಯಮದ ಸ್ಥಿತಿ’ ಎಂಬ ಶೀರ್ಷಿಕೆಯ ಥಿಂಕ್ ಚೇಂಜ್ ಫೋರಂ ವರದಿಯ ಪ್ರಕಾರ, ಕೋವಿಡ್ ನಂತರ ಕಳೆದ ಮೂರು ವರ್ಷಗಳಲ್ಲಿ ಈ ವಲಯ ವಾರ್ಷಿಕ ಶೇ. 20 ಬೆಳವಣಿಗೆಯ ದರವನ್ನು ಕಂಡಿದೆ. ಪ್ರಸಕ್ತ ಶೇ. 28 ಜಿಎಸ್‌ಟಿ ದರದಲ್ಲಿ ಭಾರತ ಸರಕಾರ ವರ್ಷಕ್ಕೆ ಹಲವು ಲಕ್ಷ ಕೋಟಿ ರೂ. ಜಿಎಸ್‌ಟಿಯನ್ನು ಕಳೆದುಕೊಳ್ಳುತ್ತಿದೆ. ಈ ಅಕ್ರಮ ವೇದಿಕೆಗಳನ್ನು ತಡೆಯಲು ಕ್ರಮಗಳನ್ನು ಜಾರಿಗೆ ತರದಿದ್ದರೆ, ಈ ವೇದಿಕೆಗಳಿಗೆ ಭಾರತೀಯ ಬಳಕೆದಾರರು ಸಾಮೂಹಿಕವಾಗಿ ವಲಸೆ ಹೋಗುವ ಅಪಾಯವಿದೆ ಎಂದು ಹೇಳಲಾಗುತ್ತದೆ. ಇದು ಕಾನೂನುಬದ್ಧ ಗೇಮಿಂಗ್ ಉದ್ಯಮಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಸರಕಾರಕ್ಕೆ ಹೆಚ್ಚಿನ ನಷ್ಟವನ್ನುಂಟು ಮಾಡುತ್ತದೆ.
ಕಳೆದ ಕೆಲ ವರ್ಷಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಜನಪ್ರಿಯತೆ ಭಾರತದಲ್ಲಿ ವೇಗವಾಗಿ ಹೆಚ್ಚಿದೆ. ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ಯೂಟ್ಯೂಬರ್‌ಗಳು ಮತ್ತು ಕ್ರಿಕೆಟಿಗರವರೆಗೆ, ಅವರು ಈಗ ಅವುಗಳನ್ನು ಪ್ರಚಾರ ಮಾಡುವುದನ್ನು ಕಾಣಬಹುದು. ಅವನ್ನು ಐಪಿಎಲ್ ತಂಡಗಳ ಜೆರ್ಸಿಗಳ ಮೇಲೆ ಪ್ರಚಾರ ಮಾಡಲಾಗುತ್ತದೆ. ಹಾಗೆಯೇ, ಐಪಿಎಲ್ ಮಧ್ಯದಲ್ಲಿ ಪ್ರಚಾರ ಮಾಡಲಾಗುತ್ತದೆ. ಮನೆಯಲ್ಲಿ ಕುಳಿತು ಸಾವಿರಾರು, ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ಹೇಗೆ ಗಳಿಸಬಹುದು? ಎಂಬುದನ್ನೇ ಪದೇ ಪದೇ ಪ್ರಚಾರ ಮಾಡಲಾಗುತ್ತದೆ. ಆದರೆ ವಾಸ್ತವದಲ್ಲಿ, ಈ ಅಪ್ಲಿಕೇಶನ್‌ಗಳ ಉದ್ದೇಶ ಸಂಪೂರ್ಣವಾಗಿ ವಿರುದ್ಧವಾಗಿದೆ. ಅದು ಜನರ ಹಣವನ್ನು ದೋಚುವುದು ಮತ್ತು ಜನರನ್ನು ಜೂಜಾಟದ ವ್ಯಸನಿಯನ್ನಾಗಿ ಮಾಡುವುದು.
ಇದರ ಮೂಲ ರೂಪ ಕ್ಯಾಸಿನೊಗಳು. ಜನರನ್ನು ಮರುಳು ಮಾಡಲು ಮತ್ತು ಅವರ ಹಣವನ್ನು ಲೂಟಿ ಮಾಡಲು ಕ್ಯಾಸಿನೊಗಳು ಯಾವ ಮಾನಸಿಕ ತಂತ್ರಗಳನ್ನು ಬಳಸುತ್ತವೆಯೋ ಅದೇ ತಂತ್ರವನ್ನೇ ಇಲ್ಲಿಯೂ ಬಳಸಲಾಗುತ್ತದೆ. ಅಮೆರಿಕನ್ ಇತಿಹಾಸದಲ್ಲಿ, ಹಳೆಯ ಜೂಜಾಟದ ಅಡ್ಡೆಗಳನ್ನು ಸಲೂನ್‌ಗಳು ಎಂದು ಕರೆಯಲಾಗುತ್ತಿತ್ತು. ಅಲ್ಲಿ ಜನರು ಬಂದು ಪರಸ್ಪರ ಭೇಟಿಯಾಗುತ್ತಿದ್ದರು. ಸಾಮಾಜಿಕ ಕೂಟಗಳು ಇರುತ್ತಿದ್ದವು. ಆಹಾರ ಮತ್ತು ಪಾನೀಯಗಳು ಇರುತ್ತಿದ್ದವು ಮತ್ತು ಆಗಾಗ ಜನರು ಪರಸ್ಪರ ಜೂಜಾಡುತ್ತಿದ್ದರು. ಸಾಮಾಜಿಕ ಕೂಟಗಳ ಸಮಯದಲ್ಲಿನ ಈ ಸಣ್ಣ ಪ್ರಮಾಣದ ಜೂಜಾಟಗಳು ಭಾರತದಲ್ಲಿ ಕೂಡ ಸಾಮಾನ್ಯವಾಗಿವೆ. ಕ್ಯಾಸಿನೊಗಳನ್ನು ಮೂಲತಃ ಈ ಉದ್ದೇಶಕ್ಕಾಗಿ ಮಾಡಲಾಗಿತ್ತು. ಆದರೆ ಇಂದು ಅವುಗಳ ಹೆಸರು ಹಾಗೆಯೇ ಇದ್ದರೂ, ಉದ್ದೇಶ ಬದಲಾಗಿದೆ. ಈಗ, ಅವೇನಿದ್ದರೂ ಸಾಧ್ಯವಾದಷ್ಟೂ ಹಣವನ್ನು ಗಳಿಸುವ ಮತ್ತು ಜನರನ್ನು ಜೂಜಾಟಕ್ಕೆ ಹಚ್ಚುವ ಕೇಂದ್ರಗಳಾಗಿವೆ. ಏಕೆಂದರೆ ಯಾವುದೇ ಕ್ಯಾಸಿನೊಗೆ, ಆದಾಯದ ಮೂಲವೆಂದರೆ ಅವುಗಳಲ್ಲಿನ ಜೂಜು.
ಮೂಲತಃ, ಕ್ಯಾಸಿನೊ ಆಟಗಳಲ್ಲಿ ಮೂರು ಸಾಮಾನ್ಯ ವರ್ಗಗಳಿವೆ. ಒಂದು, ಗೇಮಿಂಗ್ ಯಂತ್ರಗಳು; ಎರಡು, ಟೇಬಲ್ ಆಟಗಳು; ಮತ್ತು ಮೂರು, ಸ್ಲಾಟ್ ಯಂತ್ರಗಳಂತಹ ಗೇಮಿಂಗ್ ಯಂತ್ರಗಳು. ಹೇಳಲಷ್ಟೇ ಇವು ಅದೃಷ್ಟದ ಆಟಗಳು. ಆದರೆ ಕ್ಯಾಸಿನೊದ ದೃಷ್ಟಿಕೋನದಿಂದ ನೋಡಿದರೆ, ಇವುಗಳಲ್ಲಿ ಯಾವುದೂ ಅದೃಷ್ಟದ ಆಟಗಳಲ್ಲ. ಯಾರು ಆಡುತ್ತಿದ್ದರೂ ಅಥವಾ ಎಷ್ಟು ಬಾರಿ ಆಡಿದರೂ, ಕ್ಯಾಸಿನೊ ಯಾವಾಗಲೂ ಗೆಲ್ಲುತ್ತದೆ. ಎಲ್ಲಾ ಆಟಗಳಿಗೂ ನಿರ್ದಿಷ್ಟ ಸಮಯದ ಚೌಕಟ್ಟಿರುತ್ತದೆ. ಎಲ್ಲಾ ಆಟಗಳನ್ನು ಕ್ಯಾಸಿನೊಗೆ ಲಾಭ ತರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿರುತ್ತದೆ. ಜನರು ಈ ಯಂತ್ರಗಳ ವ್ಯಸನಿಗಳಾಗುತ್ತಾರೆ ಮತ್ತು ಅವರನ್ನು ವ್ಯಸನಿಯಾಗಿ ಉಳಿಸಲು ಆಗಾಗ ಸ್ವಲ್ಪ ಗೆಲ್ಲಲು ಬಿಡಲಾಗುತ್ತದೆ. ಕ್ಯಾಸಿನೊ ಮಾತ್ರ ಗರಿಷ್ಠ ಲಾಭ ಪಡೆಯುತ್ತದೆ. ಹೀಗೆ ಇಲ್ಲಿ ಹಲವು ಮಾನಸಿಕ ತಂತ್ರಗಳನ್ನು ಬಳಸಲಾಗುತ್ತದೆ.