ಆನ್‌ಲೈನ್ ಬೆಟ್ಟಿಂಗ್ ಗೇಮ್: ಹಣಗಳಿಸುತ್ತಿರುವವರು ಯಾರು? ಬಲಿಯಾಗುತ್ತಿರುವವರು ಯಾರು?

ಭಾಗ- 2
ಬ್ರೌನ್ ವಿಶ್ವವಿದ್ಯಾನಿಲಯದ ಮನೋವೈದ್ಯ ರಾಬರ್ಟ್ ಬ್ರೀನ್ ಅಧ್ಯಯನದ ಪ್ರಕಾರ, ಸ್ಲಾಟ್ ಯಂತ್ರಗಳನ್ನು ಆಡುವ ಜನರು ಕಾರ್ಡ್‌ಗಳನ್ನು ಆಡುವ ಜನರಿಗಿಂತ 3-4 ಪಟ್ಟು ವೇಗವಾಗಿ ಜೂಜಾಟಕ್ಕೆ ವ್ಯಸನಿಯಾಗುತ್ತಾರೆ. ಅಮೆರಿಕದಲ್ಲಿ, ಕ್ಯಾಸಿನೊ ಗಳಿಸಿದ ಹಣದ ಸರಿಸುಮಾರು ಶೇ. 65ರಿಂದ ಶೇ. 80ರಷ್ಟು ಹಣ ಸ್ಲಾಟ್ ಯಂತ್ರಗಳಿಂದಲೇ ಬರುತ್ತದೆ.
ಮೊದಲ ಬಾರಿಗೆ ಕ್ಯಾಸಿನೊಗೆ ಹೋಗುವ ಜನರಿಗೆ ಆಗಾಗ ಕೆಲ ಉಚಿತ ನಾಣ್ಯಗಳನ್ನು ನೀಡಲಾಗುತ್ತದೆ. ತಾವು ಕಳೆದುಕೊಳ್ಳುವುದೇನೂ ಇಲ್ಲವಲ್ಲ ಎಂದುಕೊಂಡು ಅವರು ಆಡಲು ಪ್ರಾರಂಭಿಸುತ್ತಾರೆ. ಸ್ವಲ್ಪ ಹಣವನ್ನು ಗೆಲ್ಲಲು ಪ್ರಾರಂಭಿಸಿದಾಗ, ದುರಾಸೆಯಾಗುತ್ತದೆ. ತಮ್ಮದೇ ಹಣ ಹಾಕಿ ಆಡಲು ಶುರು ಮಾಡುತ್ತಾರೆ. ಹಾಗೆಯೇ ವ್ಯಸನಿಗಳಾಗುತ್ತಾರೆ. ಕ್ಯಾಸಿನೊಗಳನ್ನು ಹೋಟೆಲ್‌ಗಳ ಒಳಗೆ ಇರಿಸುವ ಮೂಲಕವೂ ಹಣ ಮಾಡಲಾಗುತ್ತದೆ.
ಹಾಗಾದರೆ, ಈ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳೊಂದಿಗೆ ಕ್ಯಾಸಿನೊಗಳ ಹೋಲಿಕೆ ಏನು? ಮೊದಲನೆಯದಾಗಿ, ಅಲ್ಲಿನ ಎಲ್ಲಾ ಮಾನಸಿಕ ತಂತ್ರಗಳನ್ನು ಇಲ್ಲಿ ಅನ್ವಯಿಸಲಾಗುತ್ತಿದೆ. ಸ್ಲಾಟ್ ಯಂತ್ರಗಳಂತೆ, ಈ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಸಹ ಕಂಪ್ಯೂಟರ್ ಪ್ರೋಗ್ರಾಮ್ ಮಾಡಲಾಗಿದೆ. ನೀವು ಗೆದ್ದಾಗಲೆಲ್ಲಾ, ನೀವು ಮಿನುಗುವ ದೀಪಗಳು ಅಥವಾ ಖುಷಿಯಿಂದ ಕೂಡಿದ ಶಬ್ದ ಬರುವಂತೆ ವಿನ್ಯಾಸ ಮಾಡಲಾಗಿದೆ. ಈ ಬೆಟ್ಟಿಂಗ್ ಅಪ್ಲಿಕೇಶನ್‌ಗಳಲ್ಲಿ ಹಲವು ಡಾರ್ಕ್ ಮೋಡ್ ಇರುವುದಿಲ್ಲ. ಫೋನ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಿದಾಗಲೂ, ಇಂಟರ್‌ಫೇಸ್ ಬಿಳಿ ಮತ್ತು ಪ್ರಕಾಶಮಾನವಾಗಿರುತ್ತದೆ. ಕಿಟಕಿಗಳಿಲ್ಲದ ಕ್ಯಾಸಿನೊಗಳ ಹಾಗೆಯೇ ನಿಮ್ಮನ್ನು ಮೈಮರೆಸುವ ತಂತ್ರ. ಎರಡನೆಯದಾಗಿ, ಈ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಾಗಿ ಕ್ರಿಕೆಟ್ ಪಂದ್ಯಗಳ ನೈಜ ಸಮಯದ ಅಪ್ಡೇಟ್ಸ್ ಬರುತ್ತದೆ. ಮೂರನೆಯದಾಗಿ, ಕ್ಯಾಸಿನೊಗಳಲ್ಲಿ ನೀವು ಮೊದಲ ಬಾರಿಗೆ ಹೋದಾಗ ಉಚಿತ ಪಾನೀಯಗಳನ್ನು ನೀಡುವಂತೆ, ಈ ಅಪ್ಲಿಕೇಶನ್‌ಗಳು ಸೈನ್-ಅಪ್ ಬೋನಸ್‌ಗಳನ್ನು ಸಹ ಹೊಂದಿವೆ. ಉಚಿತ ಬೆಟ್‌ಗಳಿವೆ. ನಾಲ್ಕನೆಯದಾಗಿ, ಲಿವರ್‌ಗಳು ಮತ್ತು ಬಟನ್‌ಗಳ ಮೂಲಕ ಸ್ಲಾಟ್ ಯಂತ್ರಗಳಲ್ಲಿ ರಚಿಸಲಾದ ನಿಯಂತ್ರಣದ ಭ್ರಮೆಯಂತೆ, ಇಲ್ಲಿ ನಿಮಗೆ ಬಹಳಷ್ಟು ಡೇಟಾ ಮತ್ತು ಪರಿಕರಗಳನ್ನು ಒದಗಿಸುವ ಮೂಲಕ ಭ್ರಮೆ ಸೃಷ್ಟಿಸಲಾಗುತ್ತದೆ. ಕ್ರಿಕೆಟ್ ಪಂದ್ಯಗಳಿಂದ ಡೇಟಾವನ್ನು ವಿಶ್ಲೇಷಿಸುವ ಆಯ್ಕೆಯನ್ನು ಅವರು ನಿಮಗೆ ನೀಡುತ್ತಾರೆ. ಯಾವ ತಂಡ ಉತ್ತಮ ಪ್ರದರ್ಶನ ತೋರಲಿದೆ ಎಂಬುದನ್ನು ವಿಶ್ಲೇಷಿಸುವ ಮೂಲಕ ಗೆಲ್ಲುವ ಸಾಧ್ಯತೆಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ಅದು ಪ್ರಿಪ್ರೋಗ್ರಾಮ್ ಮಾಡಲಾದ ಆಟವಾಗಿದ್ದು, ನೀವು ಗೆಲ್ಲುವುದಕ್ಕಲ್ಲ ಎಂಬುದು ನಿಮಗೆ ತಿಳಿಯುವುದಿಲ್ಲ. ಗೆದ್ದೇಬಿಟ್ಟಿರಿ ಎಂಬಂತೆ ತೋರಿಸಿ, ಸೋಲಿಸುವ ತಂತ್ರಗಾರಿಕೆ ಕೂಡ ಅಲ್ಲಿರುತ್ತದೆ.
ಹಲವು ಬೆಟ್ಟಿಂಗ್ ಅಪ್ಲಿಕೇಶನ್‌ಗಳಿವೆ. ಈ ಅಪ್ಲಿಕೇಶನ್‌ಗಳಲ್ಲಿ ವಿವಿಧ ರೀತಿಯ ಆಟಗಳಿವೆ. ಮತ್ತು ಪ್ರತೀ ಆಟದಲ್ಲಿ, ಈ ತಂತ್ರಗಳನ್ನು ವಿಭಿನ್ನ ರೀತಿಯಲ್ಲಿ ಬಳಸಲಾಗುತ್ತದೆ. ಈ ಬೆಟ್ಟಿಂಗ್ ಅಪ್ಲಿಕೇಶನ್‌ಗಳಲ್ಲಿ. ನೀವು ಲೀಡರ್‌ಬೋರ್ಡ್‌ಗಳನ್ನು ಕಾಣಬಹುದು. ಹೆಚ್ಚಿನ ಬಾರಿ ಗೆದ್ದವರು ಮತ್ತು ಅವರು ಗಳಿಸಿದ ಅಂಕಗಳು ಎಂದೆಲ್ಲ ತೋರಿಸಲಾಗುತ್ತದೆ.
ಒಂದು ವಿಷಯವನ್ನು ನೆನಪಿಡಬೇಕು, ಮನೆಯಲ್ಲಿ ಕುಳಿತಲ್ಲೇ ಹಣ ಮಾಡಬಹುದು ಎಂದು ಯಾರಾದರೂ ಆಮಿಷವೊಡ್ಡಿದರೆ ಅದು ಸುಳ್ಳು ಮತ್ತು ಮೋಸದ ಜಾಲ ಮಾತ್ರ.
ಪೊಲೀಸರು ಜೂಜುಕೋರರನ್ನು ಬಂಧಿಸಿದ ಸುದ್ದಿ, ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಮಾಡುವ ಜನರ ಬಗೆಗಿನ ಸುದ್ದಿ ಕಿವಿಗೆ ಬೀಳುತ್ತಲೇ ಇರುತ್ತವೆ. ಈಗ ಜೂಜಾಟ ಮತ್ತು ಬೆಟ್ಟಿಂಗ್ ಕಾನೂನುಬಾಹಿರವಾಗಿದೆ. ಆದರೆ ಗೋವಾದ ಕ್ಯಾಸಿನೊದಲ್ಲಿ ಸುಲಭವಾಗಿ ಬೆಟ್ಟಿಂಗ್ ಮಾಡಬಹುದು. ಕುದುರೆ ರೇಸ್‌ಗಳಲ್ಲಿ ಹಣ ಹಾಕಬಹುದು. ಅದರ ಮೇಲೆಯೂ ಬೆಟ್ಟಿಂಗ್ ಆಡಬಹುದು. ಭಾರತದಲ್ಲಿ ಆನ್‌ಲೈನ್‌ನಲ್ಲಿ ಜೂಜಾಟ ಆಡುವುದು ಕಾನೂನುಬಾಹಿರ. ಮತ್ತೊಂದೆಡೆ, ಕೆಲವು ಜನರು ಸುಲಭವಾಗಿ ಆನ್‌ಲೈನ್‌ನಲ್ಲಿ ತಂಡಗಳನ್ನು ರಚಿಸುತ್ತಾರೆ ಮತ್ತು ಹಣವನ್ನು ಬೆಟ್ಟಿಂಗ್ ಮಾಡುತ್ತಾರೆ. ಒಂದೆಡೆ ಇದು ಕಾನೂನುಬಾಹಿರವಾಗಿದ್ದರೆ, ಮತ್ತೊಂದೆಡೆ ಇದೇ ರೀತಿಯ ಪರಿಕಲ್ಪನೆ ಕಾನೂನುಬದ್ಧವಾಗಿರುತ್ತದೆ. ಹಾಗಾದರೆ, ಅದರ ಹಿಂದಿನ ನಿಜವಾದ ಕಾರಣಗಳೇನು? ಭಾರತದಲ್ಲಿ ಕಾನೂನಿನ ಪ್ರಕಾರ ಜೂಜಾಟದ ನಿಜವಾದ ಸ್ಥಿತಿ ಏನು? ಯಾವುದಕ್ಕೆ ಅನುಮತಿ ಇದೆ ಮತ್ತು ಯಾವುದಕ್ಕೆ ಅನುಮತಿ ಇಲ್ಲ?
ಭಾರತದಲ್ಲಿ ಜೂಜಾಟ ಆಡುವ ಇತಿಹಾಸ ಬಹಳ ಹಳೆಯದು. ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ಜನರು ದಾಳಗಳೊಂದಿಗೆ ಆಟವಾಡುತ್ತಿದ್ದರು. ಮಹಾಭಾರತದಲ್ಲಿಯೂ ಜೂಜಿನ ಪ್ರಸ್ತಾಪ ಇದೆ. ಬ್ರಿಟಿಷರು ಭಾರತದಲ್ಲಿ ಕುದುರೆ ರೇಸ್ ಪರಿಚಯಿಸಿದರು. ಕ್ರಿಕೆಟ್ ಅನ್ನು ಪರಿಚಯಿಸಿದರು. ಜನರು ಅದರ ಮೇಲೆ ಬೆಟ್ಟಿಂಗ್ ಮತ್ತು ಜೂಜಾಟ ಪ್ರಾರಂಭಿಸಿದರು. ಅದೇ ವೇಳೆ ಜೂಜಾಟದ ಮನೆಗಳೂ ಆರಂಭವಾಗಿ, ಅಲ್ಲಿ ಜನರು ಒಟ್ಟುಗೂಡುವುದು, ಜೂಜಾಡುವುದು ಶುರುವಾಯಿತು. ಜೂಜಾಟದ ಮನೆಗಳಲ್ಲಿ ಜಗಳಗಳು, ದರೋಡೆಗಳು ನಡೆಯತೊಡಗಿದವು. ಇದನ್ನೆಲ್ಲಾ ನಿಭಾಯಿಸಲು ಬ್ರಿಟಿಷರು 1867ರ ಜನವರಿ 25ರಂದು ಸಾರ್ವಜನಿಕ ಜೂಜಾಟ ಕಾಯ್ದೆ 1867 ಅನ್ನು ಜಾರಿಗೆ ತಂದರು. ಈ ಕಾಯ್ದೆಯನ್ನು ಭಾರತದಲ್ಲಿ ಅನುಸರಿಸಲಾಗುತ್ತದೆ. ಕಾಯ್ದೆಯ ಸೆಕ್ಷನ್ 13ರಲ್ಲಿ ಅವರು ಪ್ರಾಣಿಗಳ ಕಾದಾಟದ ಮೇಲೆ ಜೂಜಾಟವನ್ನು ನಿಷೇಧಿಸಿದರು. ಆ ನಿರ್ದಿಷ್ಟ ಸಮಯದಲ್ಲಿ ಇಂಟರ್‌ನೆಟ್ ಎಂಬುದಿರಲಿಲ್ಲ, ಆದ್ದರಿಂದ, ಈ ಆನ್‌ಲೈನ್ ಆಟಗಳು, ಫ್ಯಾಂಟಸಿ ಆಟಗಳ ಬಗ್ಗೆ ಆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿಲ್ಲ. ಕಾಯ್ದೆಯ ಸೆಕ್ಷನ್ 12 ಮತ್ತು 18ರಲ್ಲಿ ಭಾರತದಲ್ಲಿ ಜೂಜಾಟ ಕಾನೂನುಬಾಹಿರ ಚಟುವಟಿಕೆ ಎಂದು ಉಲ್ಲೇಖಿಸಲಾಗಿದೆ. ಆದರೆ ಯಾರಾದರೂ ಯಾವುದೇ ಕೌಶಲ್ಯ ಆಧಾರಿತ ಆಟವನ್ನು ಆಡಿದರೆ, ಅದನ್ನು ಆಡಬಹುದು. ಇದು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಅಂದರೆ ಅವಕಾಶದ ಆಟ ಕಾನೂನು ಬಾಹಿರ ಮತ್ತು ಕೌಶಲ್ಯದ ಆಟ ಕಾನೂನು ಬಾಹಿರವಲ್ಲ. ಹಾಗಾದರೆ ಕೌಶಲ್ಯದ ಆಟ ಯಾವುದು ಮತ್ತು ಅವಕಾಶದ ಆಟ ಯಾವುದು ಎಂದು ಈ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾಗಿಲ್ಲ.
ಈ ಕಾಯ್ದೆಯನ್ನು ಇಡೀ ಬ್ರಿಟಿಷ್ ಭಾರತದಲ್ಲಿ ಜಾರಿಗೆ ತರಲಾಯಿತು. ಸ್ವಾತಂತ್ರ್ಯಾನಂತರ ಸಂವಿಧಾನವನ್ನು ಸಿದ್ಧಪಡಿಸುವಾಗ, 1867ರ ಸಾರ್ವಜನಿಕ ಜೂಜಾಟ ಕಾಯ್ದೆಯನ್ನು ಯಾವುದೇ ಬದಲಾವಣೆಯಿಲ್ಲದೆ ಅಂಗೀಕರಿಸಲಾಯಿತು. ಆದರೆ ಈ ಕಾಯ್ದೆಯನ್ನು ಏಳನೇ ಷೆಡ್ಯೂಲ್‌ನ ರಾಜ್ಯ ಪಟ್ಟಿಯಲ್ಲಿ ವರ್ಗೀಕರಿಸಲಾಗಿದ್ದು, ರಾಜ್ಯ ಬಯಸಿದರೆ, ಅದು ಇರುವಂತೆಯೇ ಅನುಸರಿಸಬಹುದು ಅಥವಾ ಅದನ್ನು ಬದಲಾಯಿಸಬಹುದು ಮತ್ತು ತನ್ನದೇ ಆದ ಹೊಸ ಕಾನೂನನ್ನು ಮಾಡಬಹುದು. ಆದ್ದರಿಂದ, ಬಿಹಾರ, ಛತ್ತೀಸ್‌ಗಡ, ಚಂಡಿಗಡ, ಮಧ್ಯಪ್ರದೇಶ, ಮಣಿಪುರ ಮತ್ತಿತರ ಹಲವು ರಾಜ್ಯಗಳು ತಮ್ಮ ರಾಜ್ಯದಲ್ಲಿ ಇದ್ದಂತೆಯೇ ಅನುಸರಿಸಿದವು. ಮತ್ತೊಂದೆಡೆ, ಆಂಧ್ರಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಮಹಾರಾಷ್ಟ್ರ, ಕೇರಳ ಈ ರಾಜ್ಯಗಳು ಈ ಕಾನೂನನ್ನು ತಿದ್ದುಪಡಿ ಮಾಡಿ ನಂತರ ತಮ್ಮ ರಾಜ್ಯದಲ್ಲಿ ಜಾರಿಗೆ ತಂದವು.
ಆದರೆ ಕಾನೂನು ಹಳೆಯದಾಗಿತ್ತು, ಅದಕ್ಕಾಗಿಯೇ ನಂತರವೂ ಸಮಸ್ಯೆ ಬಗೆಹರಿಯಲಿಲ್ಲ. ಆನ್‌ಲೈನ್ ಜೂಜಾಟದ ಆ್ಯಪ್‌ಗಳು, ಅವನ್ನು ಬಳಸುವವರು ವ್ಯಸನಿಯಾಗುವ ಮತ್ತು ಹಣ ನಷ್ಟವಾಗುವ ರೀತಿಯಲ್ಲಿಯೇ ತಯಾರಾಗಿವೆ. 1955ರಲ್ಲಿ ಜೂಜಿನ ಮನೆಗಳನ್ನು ನಿಷೇಧಿಸಲಾಯಿತು. ಆದರೆ ಜೂಜಾಟ ಸ್ಪರ್ಧೆಯಿಂದ ಪ್ರಾರಂಭವಾಯಿತು. ಈ ಸ್ಪರ್ಧೆ ಕಾನೂನುಬಾಹಿರವಲ್ಲ. ಸಾರ್ವಜನಿಕ ಜೂಜಾಟ ಕಾಯ್ದೆ, 1867ರ ಅಡಿಯಲ್ಲಿ ಸಂಪೂರ್ಣ ಕಾನೂನುಬದ್ಧವಾಗಿದೆ. ಏಕೆಂದರೆ ಇದು ಕೌಶಲ್ಯದ ಆಟ. ಆದರೆ ಕೌಶಲ್ಯದ ಆಟ ಯಾವುದು ಎಂಬುದು ಬಗೆಹರಿಯದೇ ಉಳಿದಿತ್ತು. ಸುಪ್ರೀಂ ಕೋರ್ಟ್ ನೀಡಿದ ತೀರ್ಪು, ಕೌಶಲ್ಯದ ಆಟ ಯಾವುದು ಎಂದು ಸ್ಪಷ್ಟನೆ ನೀಡಿತು. ಕೌಶಲ್ಯ ಆ ಆಟದಲ್ಲಿ ಪ್ರಾಬಲ್ಯ ಹೊಂದಿದ್ದರೆ ಅದು ಕೌಶಲ್ಯದ ಆಟ ಮತ್ತು ಜೂಜಾಟವಲ್ಲ. ಆದರೆ ಅದೃಷ್ಟ ಮಾತ್ರ ಆಟದಲ್ಲಿ ಪ್ರಾಬಲ್ಯ ಹೊಂದಿದ್ದರೆ ಅದು ಅವಕಾಶದ ಆಟ. ಕೌಶಲ್ಯದ ಆಟದಲ್ಲಿ ಮಾನಸಿಕ ಸಾಮರ್ಥ್ಯ, ದೈಹಿಕ ಸಾಮರ್ಥ್ಯ, ತಂತ್ರವನ್ನು ಅಭ್ಯಾಸ ಮಾಡುವ ಮೂಲಕ ಒಬ್ಬರು ಚೆಸ್‌ನಂತೆ ತಮ್ಮ ಕೌಶಲ್ಯವನ್ನು ಸುಧಾರಿಸಬಹುದು. ಆದರೆ, ಅವಕಾಶದ ಆಟದಲ್ಲಿ ಪ್ರಮುಖ ಅಂಶವೆಂದರೆ ಅದೃಷ್ಟ, ಅದರ ಮೇಲೆ ಯಾರಿಗೂ ಯಾವುದೇ ನಿಯಂತ್ರಣವಿಲ್ಲ.
ನೀವು ಎಷ್ಟೇ ಪ್ರಯತ್ನಿಸಿದರೂ, ಸ್ಲಾಟ್ ಯಂತ್ರದಂತೆ ಅದೃಷ್ಟವನ್ನು ಅವಲಂಬಿಸಿ ನೀವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. 1968ರಿಂದ ಭಾರತದಲ್ಲಿ ರಮ್ಮಿ ಆಟ ಕಾನೂನುಬದ್ಧವಾಗುತ್ತದೆ. ಈಗ, ಭಾರತದಾದ್ಯಂತ ರಮ್ಮಿ ಆಟ ಕಾನೂನುಬದ್ಧವಾಗಿಲ್ಲ ಎಂದು ಕೆಲವರು ಹೇಳುತ್ತಾರೆ, ಆಂಧ್ರಪ್ರದೇಶ, ಅಸ್ಸಾಂ, ಸಿಕ್ಕಿಂ, ನಾಗಾಲ್ಯಾಂಡ್, ಮೇಘಾಲಯ, ತೆಲಂಗಾಣ ಮುಂತಾದ ಕೆಲ ರಾಜ್ಯಗಳಲ್ಲಿ ರಮ್ಮಿ ಆಟ ಕಾನೂನುಬದ್ಧವಾಗಿಲ್ಲ. ಈ ರಾಜ್ಯಗಳಲ್ಲಿ ಹಣ ಪಾವತಿಸಿ ರಮ್ಮಿ ಆಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಈ ರಾಜ್ಯಗಳು ನಿಯಮಗಳನ್ನು ಬದಲಾಯಿಸಿವೆ ಮತ್ತು ಪ್ರತ್ಯೇಕ ನಿಯಮಗಳನ್ನು ಮಾಡಿವೆ.
ಭಾರತದಲ್ಲಿ ಯಾವುದೇ ಆಟವನ್ನು ಉಲ್ಲೇಖಿಸಿದಾಗಲೆಲ್ಲಾ, ಮೊದಲು ಆ ಆಟ ಯಾವ ರಾಜ್ಯದಲ್ಲಿ ಆಡಲಾಗುತ್ತಿದೆ ಎಂಬುದನ್ನು ನೋಡಬೇಕು, ದಾಮನ್ ಮತ್ತು ದಿಯು ಸಾರ್ವಜನಿಕ ಜೂಜಾಟ ಕಾಯ್ದೆ, 1976 ಅನ್ನು ಗೋವಾ, ಸಿಕ್ಕಿಂ ಮತ್ತು ದಾಮನ್‌ನಲ್ಲಿ ಮಾತ್ರ ಜಾರಿಗೆ ತರಲಾಯಿತು. ಈ ಕಾಯ್ದೆಯ ನಂತರ, ಗೋವಾ, ಸಿಕ್ಕಿಂ ಮತ್ತು ದಾಮನ್ ಕ್ಯಾಸಿನೊಗಳು ಮತ್ತು ಸ್ಲಾಟ್ ಯಂತ್ರಗಳಿಗೆ ಅನುಮತಿ ಕೊಡಲಾಯಿತು. 1996ರಲ್ಲಿ ಭಾರತದಲ್ಲಿ ಕುದುರೆ ರೇಸ್‌ನಲ್ಲಿ ಬೆಟ್ಟಿಂಗ್ ಕಾನೂನುಬದ್ಧವಾಗಿತ್ತು. ಲಾಟರಿ ನಿಯಂತ್ರಣ ಕಾಯ್ದೆ 1998 ಅನ್ನು ಸರಕಾರ ಪರಿಚಯಿಸಿದ ನಂತರ ಲಾಟರಿಗಳನ್ನು ಭಾರತದಲ್ಲಿ ನಿಷೇಧಿಸಲಾಯಿತು. ಆದರೆ ಇದರ ನಂತರವೂ, ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿದವು, ಆದ್ದರಿಂದ 13 ರಾಜ್ಯಗಳನ್ನು ಬಿಟ್ಟರೆ, ಇಡೀ ಭಾರತದಲ್ಲಿ ಲಾಟರಿ ಆಡುವುದನ್ನು ನಿಷೇಧಿಸಲಾಗಿದೆ. ಮತ್ತು ಈ 13 ರಾಜ್ಯಗಳಲ್ಲಿ ಅನೇಕ ರಾಜ್ಯ ಸರಕಾರಗಳು ಸ್ವತಃ ಲಾಟರಿ ನಡೆಸುತ್ತವೆ ಮತ್ತು ಹಣವನ್ನು ಸಹ ನೀಡುತ್ತವೆ. ಈಗ 2000 ದ ಆರಂಭದಲ್ಲಿ ಫ್ಯಾಂಟಸಿ ಮತ್ತು ಆನ್‌ಲೈನ್ ಗೇಮಿಂಗ್ ಬಂದಿದೆ. ಕೌಶಲ್ಯದ ಆಟ ಮತ್ತು ಅವಕಾಶದ ಆಟ ಭಾರತದಲ್ಲಿ ಈಗಾಗಲೇ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಆನ್‌ಲೈನ್ ಗೇಮಿಂಗ್ ನಂತರ ಹಣವನ್ನು ಬೆಟ್ಟಿಂಗ್ ಮಾಡುವುದಕ್ಕೆ ಯಾವುದೇ ನಿಯಮವಿರದೆ, ಹೆಚ್ಚಿನ ಸಮಸ್ಯೆಗಳು ಪ್ರಾರಂಭವಾದವು.
2001ರಲ್ಲಿ ಇಎಸ್‌ಪಿಎನ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಒಟ್ಟಾಗಿ ಸೂಪರ್ ಸೆಲೆಕ್ಟರ್ ಎಂಬ ಫ್ಯಾಂಟಸಿ ಅಪ್ಲಿಕೇಶನ್ ಅನ್ನು ತಂದಾಗ ಇದೆಲ್ಲವೂ ಶುರುವಾಯಿತು. ಆದರೆ 2003ರಲ್ಲಿ ಅವು ನಷ್ಟಕ್ಕೆ ಒಳಗಾಗುತ್ತವೆ. ಜನರು ಇಂಟರ್‌ನೆಟ್‌ನಲ್ಲಿ ಹೆಚ್ಚು ಸಕ್ರಿಯರಾಗಿರಲಿಲ್ಲ, ಜನರ ಬಳಿ ಮೊಬೈಲ್ ಇರಲಿಲ್ಲ. ಆದ್ದರಿಂದ ಈ ಅಪ್ಲಿಕೇಶನ್ ಮುಚ್ಚಿತು. ಆದರೆ 4 ವರ್ಷಗಳ ನಂತರ 2007 ರಲ್ಲಿ ಅಮೆರಿಕದಲ್ಲಿ ಅಧ್ಯಯನ ಮಾಡಿದ ಹರ್ಷ್ ಜೈನ್ ಭಾರತದಲ್ಲಿ ಫ್ಯಾಂಟಸಿ ಅಪ್ಲಿಕೇಶನ್‌ಗಳನ್ನು ಪರಿಚಯಿಸಿದ ಸಮಯ ತುಂಬಾ ಚೆನ್ನಾಗಿತ್ತು. ಒಂದು ವರ್ಷದ ನಂತರ 2008ರಲ್ಲಿ ಐಪಿಎಲ್ ಪ್ರಾರಂಭವಾಯಿತು ಮತ್ತು ಜನರು ಇಂಟರ್‌ನೆಟ್‌ಗೆ ಬಹಳ ವೇಗವಾಗಿ ಬಂದರು, ಜನರ ಕೈಯಲ್ಲಿ ಮೊಬೈಲ್ ಫೋನ್‌ಗಳು ಇದ್ದವು ಮತ್ತು ಅದೇ ಸಮಯದಲ್ಲಿ ಅವರು ತಮ್ಮ ಫ್ಯಾಂಟಸಿ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿದರು. 2012ರಲ್ಲಿ ಉಚಿತವಾಗಿ ಬಳಸಲು ಅವಕಾಶ ಮಾಡಿಕೊಡಲಾಯಿತು. ಅದಾದ ಬಳಿಕ ಅನೇಕ ಫ್ಯಾಂಟಸಿ ಅಪ್ಲಿಕೇಶನ್‌ಗಳು ಭಾರತದಲ್ಲಿ ಬಂದವು. ಯಾವುದೇ ನಿಯಂತ್ರಣವಿರಲಿಲ್ಲ,
ಈ ಫ್ಯಾಂಟಸಿ ಅಪ್ಲಿಕೇಶನ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರನ್ನು ಜಾಹೀರಾತುಗಳಲ್ಲಿ ತೊಡಗಿಸುತ್ತದೆ. ಆದ್ದರಿಂದ ಅವರು ಸಹ ಹಣವನ್ನು ಪಡೆಯುತ್ತಾರೆ. ಅವರು ಬಿಸಿಸಿಐನಿಂದ ವಿಭಿನ್ನ ಹಕ್ಕುಗಳನ್ನು ಪಡೆಯುವುದರಿಂದ ಬಿಸಿಸಿಐ ಸಹ ಸಾವಿರಾರು ಕೋಟಿ ರೂ.ಗಳನ್ನು ಪಡೆಯುತ್ತದೆ. ಹೀಗೆ ಬಿಸಿಸಿಐ ಇದರಿಂದ ಗಳಿಸುತ್ತಿದೆ, ರಾಜ್ಯ ಸರಕಾರಕ್ಕೂ ಇದರಿಂದ ಆದಾಯ ಬರುತ್ತಿದೆ. ಕೇಂದ್ರ ಸರಕಾರವೂ ಗಳಿಸುತ್ತಿದೆ, ಕ್ರಿಕೆಟಿಗರು, ಸೆಲೆಬ್ರಿಟಿಗಳು ಇದರಿಂದ ಹಣ ಗಳಿಸುತ್ತಿದ್ದಾರೆ ಮತ್ತು ಎಲ್ಲರೂ ಗಳಿಸುತ್ತಿದ್ದರೆ, ಹಣ ಎಲ್ಲಿಂದ ಬರುತ್ತದೆ? ಈ ಹಣ ಜನರದ್ದು.
ಈ ಫ್ಯಾಂಟಸಿ ಅಪ್ಲಿಕೇಶನ್‌ಗಳು ಯುನಿಕಾರ್ನ್ ಆಗುತ್ತಿವೆ, ಸಾವಿರಾರು ಕೋಟಿ ಹಣ ಗಳಿಸುತ್ತಿವೆ, ಜನರನ್ನು ಮಿಲಿಯನೇರ್ ಆಗುವ ಕನಸು ಕಾಣುವಂತೆ ಮಾಡುತ್ತವೆ ಮತ್ತು ಯಾರಾದರೂ ಒಂದು ಅಥವಾ ಎರಡು ಬಾರಿ ಗೆದ್ದರೂ ಸಹ, ಸಾವಿರಾರು ಜನರು ಅವರಿಂದಾಗಿ ಅಪ್ಲಿಕೇಷನ್‌ಗಳಿಗೆ ಹೋಗುತ್ತಾರೆ. ಈ ಫ್ಯಾಂಟಸಿ ಅಪ್ಲಿಕೇಶನ್‌ಗಳ 18 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ, ಅಂದರೆ, ಯಾವುದೇ ಪರಿಸ್ಥಿತಿಯಲ್ಲಿ ಈ 18 ಕೋಟಿ ಬಳಕೆದಾರರು ಪಂದ್ಯವನ್ನು ವೀಕ್ಷಿಸುತ್ತಾರೆ ಮತ್ತು 2027ರಲ್ಲಿ ಈ ಬಳಕೆದಾರರು 50 ಕೋಟಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿಯೇ ಇದು ಬಿಸಿಸಿಐ, ಐಪಿಎಲ್, ಅವರ ತಂಡದ ಮಾಲಕರು ಇವರೆಲ್ಲರಿಗೂ ಸೂಕ್ತವಾಗಿದೆ. ಈ ಫ್ಯಾಂಟಸಿ ಅಪ್ಲಿಕೇಶನ್‌ಗಳು ನಿಲ್ಲುವುದನ್ನು ಅವರು ಎಂದಿಗೂ ಬಯಸುವುದಿಲ್ಲ. ಈ ಫ್ಯಾಂಟಸಿ ಅಪ್ಲಿಕೇಶನ್‌ಗಳು ಸ್ವತಃ ಬೆದರಿಕೆ ಹಾಕುವಷ್ಟು ಶಕ್ತಿಯನ್ನು ಹೊಂದಿವೆ. ಸರಕಾರ ಕೂಡ ಅದರ ಎದುರು ಅಸಹಾಯಕವಾಗುತ್ತದೆ. ಏಕೆಂದರೆ ಈ ಫ್ಯಾಂಟಸಿ ಲೋಕದ ಇಡೀ ಆರ್ಥಿಕತೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅದು ಜಿಡಿಪಿಯಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡುತ್ತದೆ.
ಆದರೆ ಈ ಫ್ಯಾಂಟಸಿ ಲೋಕ ಇನ್ನೊಂದು ಕಡೆ ಸೃಷ್ಟಿಸುತ್ತಿರುವ ನರಕ ಎಂಥವರನ್ನೂ ಬೆಚ್ಚಿ ಬೀಳಿಸುತ್ತದೆ.