ರನ್ಯಾ ರಾವ್‌ರಂತಹವರು ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಳ್ಳಲು ಕಾರಣವೇನು?

ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಕನ್ನಡ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಮಾಡಲು ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ. ತನ್ನದೇನೂ ತಪ್ಪಿಲ್ಲ, ತಾನು ಟ್ರ್ಯಾಪ್ ಆಗಿದ್ದೇನೆ. ಹೇಳಿದಂತೆ ಕೇಳುತ್ತಿದ್ದೇನೆ ಎಂದೂ ಹೇಳಿದ್ದಾರೆ. ಆದರೆ ಲಕ್ಷಗಟ್ಟಲೆ ಕಮಿಷನ್ ಗಾಗಿ ಆವರು ಈ ಕೆಲಸ ಮಾಡುತ್ತಿದ್ದಾರೆ ಎಂಬುದು ಕೂಡ ತನಿಖೆಯಲ್ಲಿ ಬಯಲಾಗುತ್ತಿದೆ. ಡಿಜಿಪಿ ಡಾ. ಕೆ. ರಾಮಚಂದ್ರ ರಾವ್ ಅವರ ಮಲಮಗಳು ಅವರೆಂಬುದು ಕೂಡ ತಿಳಿದಿದೆ. ಡಿಜಿಪಿ ಮಾತ್ರ ಈ ವಿಷಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಭದ್ರತಾ ತಪಾಸಣೆಯನ್ನು ಕೂಡ ತಾನು ಡಿಜಿಪಿ ಮಗಳು ಎಂದು ಹೇಳಿಯೇ ತಪ್ಪಿಸಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ. ಕೆಲದಿನಗಳಿಂದ ಇದ್ದ ಅನುಮಾನದ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಸೋಮವಾರ ರಾತ್ರಿ ಬಂದಿಳಿಯುತ್ತಿದ್ದಂತೆಯೇ ವಶಕ್ಕೆ ಪಡೆಯಲಾಯಿತು. ಅವರ ಬಳಿ 14.8 ಕಿಲೋಗ್ರಾಂಗಳಷ್ಟು ಚಿನ್ನ ಪತ್ತೆಯಾದ ನಂತರ ಅವರನ್ನು ಬಂಧಿಸಲಾಯಿತು. ರನ್ಯಾ ರಾವ್ ಬಂಧನದ ನಂತರ ಅಧಿಕಾರಿಗಳು ಲ್ಯಾವೆಲ್ಲೆ ರಸ್ತೆಯ ನಂದ್ವಾನಿ ಮ್ಯಾನ್ಷನ್‌ನಲ್ಲಿರುವ ಅವರ ಫ್ಲ್ಯಾಟ್ ಮೇಲೆಯೂ ದಾಳಿ ನಡೆಸಿದ್ದಾರೆ. ಶೋಧದ ಸಮಯದಲ್ಲಿ 2.67 ಕೋಟಿ ರೂ. ನಗದು ಮತ್ತು 2.06 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ದಾಳಿಯ ನಂತರ ಅಧಿಕಾರಿಗಳು ಅವರ ಮನೆಯಿಂದ ಮೂರು ದೊಡ್ಡ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಸೀಝ್ ಆಗಿರುವ ಮೊತ್ತ 17.29 ಕೋಟಿ ರೂ. ಎಂದು ವರದಿಗಳಿವೆ.
ಇತ್ತೀಚಿನ ತಿಂಗಳುಗಳಲ್ಲಿ ರನ್ಯಾ ರಾವ್ ಅವರ ಅನೇಕ ವಿದೇಶ ಪ್ರವಾಸಗಳ ಮೇಲೆ ಡಿಆರ್‌ಐ ಕಣ್ಣಿಟ್ಟಿತ್ತು. 15 ದಿನಗಳಲ್ಲೇ ನಾಲ್ಕು ಬಾರಿ ರನ್ಯಾ ದುಬೈ ಪ್ರವಾಸ ಕೈಗೊಂಡಿದ್ದರು. ಕಳೆದೊಂದು ವರ್ಷದಲ್ಲಿ 27 ಬಾರಿ ದುಬೈಗೆ ಹೋಗಿ ಬಂದಿದ್ದರು. ಇದೆಲ್ಲವೂ ಅವರ ಮೇಲೆ ತೀವ್ರ ಅನುಮಾನ ಮೂಡಿಸಿದ್ದವು. ಮೊನ್ನೆ ಅವರ ಬಳಿ ಸಿಕ್ಕ 12 ಕೋಟಿಗೂ ಹೆಚ್ಚು ಮೌಲ್ಯದ 14.8 ಕೆಜಿ ಚಿನ್ನ ಇತ್ತೀಚಿನ ದಿನಗಳಲ್ಲೇ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಪ್ರಮಾಣವಾಗಿದೆ.
ಚಿನ್ನ ಕಳ್ಳಸಾಗಣೆ ಮೂಲಕ ಪ್ರತೀ ಪ್ರವಾಸದಲ್ಲಿಯೂ ಅವರು 12ರಿಂದ 13 ಲಕ್ಷ ಗಳಿಸುತ್ತಿದ್ದರು ಎಂದು ವರದಿಗಳು ಹೇಳುತ್ತಿವೆ. ಈ ಹಿಂದೆ ಗಗನಸಖಿಯೊಬ್ಬಳು 1 ಕೆಜಿ ಚಿನ್ನವನ್ನು ದೇಹದೊಳಗೆ ಅಡಗಿಸಿಕೊಂಡು ಬಂದು ಕೇರಳದಲ್ಲಿ ಸಿಕ್ಕಿಬಿದ್ದಿದ್ದಳು.
ಚಿನ್ನದ ಮೇಲಿನ ಸರಕಾರಿ ನೀತಿಗಳು ಮತ್ತು ಕಸ್ಟಮ್ಸ್ ಸುಂಕಗಳಲ್ಲಿ ಬದಲಾವಣೆಗಳನ್ನು ತಂದ ಬಳಿಕ ಭಾರತದಲ್ಲಿ ಕಳ್ಳಸಾಗಣೆ ಮತ್ತೆ ಪ್ರಾರಂಭವಾಯಿತು. ಚಿನ್ನದ ಆಮದು ಕಡಿಮೆ ಮಾಡುವ ಉದ್ದೇಶದ ಸಾವರಿನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ಸ್ಕೀಮ್ ಕೂಡ ವಿಫಲವಾಗಿರುವ ನಿದರ್ಶನ ನಮ್ಮ ಕಣ್ಣೆದುರೇ ಇದೆ. ಚಿನ್ನದ ಕಳ್ಳಸಾಗಣೆ ನೇರವಾಗಿ ಆಮದು ಸುಂಕಗಳು, ಸರಕಾರಿ ನೀತಿಗಳು ಮತ್ತು ನಿಯಮಗಳ ಜೊತೆ ಸಂಬಂಧ ಹೊಂದಿದೆ. ಆಮದು ಸುಂಕಗಳು ಹೆಚ್ಚಾದಂತೆ ಮತ್ತು ಚಿನ್ನದ ಬೆಲೆಗಳು ಹೆಚ್ಚಾದಂತೆ, ಕಳ್ಳಸಾಗಣೆ ಮಾರುಕಟ್ಟೆ ಹೆಚ್ಚು ಲಾಭದಾಯಕ ಎನ್ನಲಾಗುತ್ತದೆ. 1970ರ ದಶಕದಲ್ಲಿ ಮುಂಬೈನಲ್ಲಿ ಹವಾಲಾ ದಂಧೆಗಳು ಮತ್ತಿತರ ಅಪರಾಧ ಚಟುವಟಿಕೆಗಳಲ್ಲಿನ ಮುಖ್ಯ ವ್ಯವಹಾರವೇ ಚಿನ್ನದ ಕಳ್ಳಸಾಗಣೆಯಾಗಿತ್ತು. ಆ ವಿದ್ಯಮಾನವೇ ಮರಳಿದೆ ಮತ್ತು ಕಳೆದ ದಶಕದಲ್ಲಿ ಚಿನ್ನದ ವಶಪಡಿಸಿಕೊಳ್ಳುವಿಕೆ ಹೆಚ್ಚಾಗಿದೆ.
1992ರಲ್ಲಿ ಆಗಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಚಿನ್ನದ ಆಮದು ಕಾನೂನುಬದ್ಧಗೊಳಿಸಿದಾಗ, ಚಿನ್ನದ ಕಳ್ಳಸಾಗಣೆ ಕಡಿಮೆಯಾಗಿತ್ತು. ಆದರೆ 2012ರಿಂದ 2023ರ ಅವಧಿಯಲ್ಲಿ ಚಿನ್ನದ ಸುಂಕಗಳು ನಿರಂತರವಾಗಿ ಹೆಚ್ಚಿದವು. ಅದರೊಂದಿಗೇ ಕಳ್ಳಸಾಗಣೆ ಮತ್ತೆ ಪ್ರಾರಂಭವಾಯಿತು. ಇತ್ತೀಚೆಗೆ, ಸೂಟ್‌ಕೇಸ್ ಚಕ್ರಗಳು, ಮಕ್ಕಳ ಡೈಪರ್‌ಗಳು ಅಥವಾ ದೇಹದೊಳಗೆ ಚಿನ್ನವನ್ನು ಮರೆಮಾಡಿ ವಿಮಾನ ಪ್ರಯಾಣಿಕರು ಮತ್ತು ಸಿಬ್ಬಂದಿ ಸಿಕ್ಕಿಬಿದ್ದಿರುವ ಬಗ್ಗೆ ಅನೇಕ ವರದಿಗಳಿವೆ. ಹೆಚ್ಚಿನ ಕಳ್ಳಸಾಗಣೆ ಮ್ಯಾನ್ಮಾರ್ ಗಡಿಯ ಮೂಲಕ ನಡೆಯುತ್ತದೆ ಎನ್ನುತ್ತವೆ ವರದಿಗಳು. ಕಳೆದ ವರ್ಷ ಕೇಂದ್ರ ಸರಕಾರ ಚಿನ್ನದ ಸುಂಕವನ್ನು ಶೇ. 6ಕ್ಕೆ ಇಳಿಸಿದೆ ಮತ್ತು ಅದು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಈ ಬೆಳವಣಿಗೆ ಕಳ್ಳಸಾಗಣೆಯನ್ನು ಮತ್ತೆ ಕಡಿಮೆ ಮಾಡುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯಿರುವಾಗಲೇ ಇಂಥ ಪ್ರಕರಣಗಳು ನಡೆದೇ ಇದೆ.
ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 15ರಿಂದ ಶೇ. 6ಕ್ಕೆ ಇಳಿಸಿರುವ ಕಾರಣದಿಂದ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಗಮನಾರ್ಹವಾಗಿ ತಗ್ಗಿವೆ ಎಂದು ಮೊನ್ನೆ ಫೆಬ್ರವರಿಯಲ್ಲಿ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ (ಸಿಬಿಐಸಿ) ಮುಖ್ಯಸ್ಥ ಸಂಜಯ್ ಕುಮಾರ್ ಅಗರ್ವಾಲ್ ಹೇಳಿದ್ದನ್ನು ಪಿಟಿಐ ವರದಿ ಮಾಡಿತ್ತು. ಅದರ ಹೊರತಾಗಿಯೂ, ಕಳೆದ ವರ್ಷದ ಅಂದರೆ 2024 ರ ಎಪ್ರಿಲ್‌ನಿಂದ ಜೂನ್‌ವರೆಗೆ ಕೇವಲ ಮೂರು ತಿಂಗಳಲ್ಲಿ ಡಿಆರ್‌ಐ ಅಧಿಕಾರಿಗಳು 544 ಕೋಟಿ ರೂ. ಮೌಲ್ಯದ 847 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿರುವ ಬಗ್ಗೆ ಸರಕಾರದ ಅಂಕಿಅಂಶಗಳು ಹೇಳುತ್ತಿವೆ.
ಭಾರತೀಯರು ಸಾಂಪ್ರದಾಯಿಕವಾಗಿ ಚಿನ್ನ ಸಂಗ್ರಹಿಸುವುದು ಆರ್ಥಿಕ ಭದ್ರತೆ ಇರುತ್ತದೆ ಎಂಬ ನಂಬಿಕೆಯಿಂದ. ವಿಶ್ವದ ಅತಿ ದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾದ ಭಾರತದಲ್ಲಿ ಕಳ್ಳಸಾಗಣೆ ಕೂಡ ದಾಖಲೆಯ ಏರಿಕೆ ಕಾಣುತ್ತಿದೆ. ಭಾರತಕ್ಕೆ ಪ್ರತಿದಿನ ಅಂದಾಜು 700 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತದೆ ಎಂದು 2014ರಲ್ಲಿ ಬಿಬಿಸಿ ಪ್ರಕಟಿಸಿದ್ದ ವರದಿಯೊಂದು ಹೇಳಿತ್ತು. ಭಾರತದ ಹಣಕಾಸು ಗುಪ್ತಚರ ಘಟಕದ (ಎಫ್‌ಐಯು) ಅಧಿಕಾರಿಗಳು ಹೇಳುವಂತೆ, ಕಳ್ಳಸಾಗಣೆದಾರರು ಚಿನ್ನವನ್ನು ಅಕ್ರಮವಾಗಿ ತರಲು ನವೀನ ವಿಧಾನಗಳನ್ನು ಬಳಸುತ್ತಿದ್ದಾರೆ. ಕೆಲವೊಮ್ಮೆ ಚಿನ್ನವನ್ನು ಬೀಜದ ಆಕಾರದ ಚಿಪ್‌ಗಳಾಗಿ ಕರಗಿಸಿ ದುಬೈನಿಂದ ತರುವ ಖರ್ಜೂರದಲ್ಲಿ ಮರೆಮಾಡಲಾಗುತ್ತದೆ ಅಥವಾ ಕಣಗಳಾಗಿ ಪುಡಿಮಾಡಿ ಅದಿರಿನಂತೆ ಕಾಣಲು ಇತರ ಲೋಹಗಳೊಂದಿಗೆ ಬೆರೆಸಲಾಗುತ್ತದೆ. ಅದನ್ನು ಬೆಲ್ಟ್ ಬಕಲ್‌ಗಳು ಮತ್ತು ಟಾರ್ಚ್ ಬ್ಯಾಟರಿಗಳಾಗಿ ಪರಿವರ್ತಿಸಲಾಗುತ್ತಿದೆ. ವರದಿಗಳ ಪ್ರಕಾರ, ಕಳ್ಳಸಾಗಣೆ ತಡೆಯುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ನಿಯಂತ್ರಕರು ಒಪ್ಪಿಕೊಳ್ಳುತ್ತಾರೆ. ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ಹೇಳುವಂತೆ ಕಳ್ಳಸಾಗಣೆದಾರರು ನಿಯಮಿತವಾಗಿ ವಾಯು ಮಾರ್ಗವನ್ನು ಬಳಸುತ್ತಿದ್ದಾರೆ. ಭಾರತೀಯ ವಾಣಿಜ್ಯ ಸಚಿವಾಲಯದ ಮುಂಬೈ ಮೂಲದ ಸಂಸ್ಥೆಯಾದ ರತ್ನಗಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿಯ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದಂತೆ, 2013ರ ಮಾರ್ಚ್‌ನಿಂದ 2014ರ ಎಪ್ರಿಲ್ ಅವಧಿಯಲ್ಲಿ ಚಿನ್ನ ಕಳ್ಳಸಾಗಣೆ ಸುಮಾರು ಶೇ. 300ರಷ್ಟು ಹೆಚ್ಚಾಗಿದೆ.
2013ರ ಜೂನ್‌ನಲ್ಲಿ ಚಿನ್ನದ ಆಭರಣಗಳ ಆಮದಿನ ಮೇಲಿನ ತೆರಿಗೆ ಹೆಚ್ಚಳದಿಂದ ಕಳ್ಳಸಾಗಣೆಯೂ ಹೆಚ್ಚಾಯಿತು. 250 ಕೋಟಿ ರೂ. ಮೌಲ್ಯದ ಕಳ್ಳಸಾಗಣೆ ಮಾಡಿದ ಚಿನ್ನವನ್ನು 2013ರ ಮಾರ್ಚ್ ಮತ್ತು ಡಿಸೆಂಬರ್ ನಡುವೆ ವಿವಿಧ ಬಂದರುಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಆದರೆ, ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿನ ಇದೇ ಅವಧಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಚಿನ್ನದ ಪ್ರಮಾಣ 50 ಕೋಟಿ ರೂ. ಮೌಲ್ಯದ್ದಾಗಿತ್ತು. 2023ರಲ್ಲಿ ಸರಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಮೂರು ಬಾರಿ ಹೆಚ್ಚಿಸಿತು.
ಅಂತಿಮವಾಗಿ ಅದು ಶೇ. 15ಕ್ಕೆ ತಲುಪಿತು. ಮೇ 2013ರಲ್ಲಿ 1,62,000 ಕೆಜಿಗೆ ತಲುಪಿದ್ದ ಚಿನ್ನದ ಆಮದು, ಸರಕಾರ ಸುಂಕ ಹೆಚ್ಚಿಸಿದ ನಂತರ ಅದೇ ನವೆಂಬರ್‌ನಲ್ಲಿ 19,300 ಕೆಜಿಗೆ ಇಳಿದಿತ್ತು. ಆದರೆ ಮುಖ್ಯವಾಗಿ ದುಬೈ ಮತ್ತು ಶಾರ್ಜಾದಿಂದ ಚಿನ್ನದ ಕಳ್ಳಸಾಗಣೆ ಹೆಚ್ಚುತ್ತಿದ್ದ ಬಗ್ಗೆ, ಅಲ್ಲಿ ಚಿನ್ನ ಅಗ್ಗ ಎಂದು ಅಧಿಕಾರಿಗಳು ಹೇಳುವುದನ್ನು ವರದಿಗಳು ಉಲ್ಲೇಖಿಸುತ್ತವೆ. ಆಮದು ಸುಂಕ ಹೆಚ್ಚಿಸುವ ಕ್ರಮದಿಂದ ಯಾವುದೇ ಪ್ರಯೋಜನವಿಲ್ಲ. ಯಾಕೆಂದರೆ, ಭಾರತದಲ್ಲಿ ಎಲ್ಲರೂ, ಬಡವರಲ್ಲಿ ಬಡವರು ಕೂಡ ಚಿನ್ನವನ್ನು ಬಯಸುವವರೇ ಆಗಿದ್ದಾರೆ ಎಂಬುದು ತಜ್ಞರ ಅಭಿಪ್ರಾಯ.
ಚಿನ್ನವನ್ನು ಬೇರೆ ದೇಶಗಳಲ್ಲಿ ಅಗ್ಗದಲ್ಲಿ ಖರೀದಿಸಿ ಭಾರತದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂಬುದೇ ಸದ್ಯದ ಪರಿಸ್ಥಿತಿಯಲ್ಲಿ ತಪ್ಪು ಕಲ್ಪನೆ ಎಂದೂ ಹೇಳಲಾಗುತ್ತದೆ. ಚಿನ್ನ ಅಂತರ್‌ರಾಷ್ಟ್ರೀಯ ಸರಕಾಗಿರುವುದರಿಂದ ಮತ್ತು ಅದರ ಬೆಲೆ ಎಲ್ಲಾ ದೇಶಗಳಲ್ಲೂ ಹೆಚ್ಚು ಕಡಿಮೆ ಒಂದೇ ರೀತಿ ಇರುವುದರಿಂದ, ಅಲ್ಲಿಂದ ತಂದು ಇಲ್ಲಿ ಲಾಭ ಗಳಿಸುವುದು ಸಾಧ್ಯ ಎನ್ನುವ ಹಾಗಿಲ್ಲ. ಆದರೆ ಈಗ ರನ್ಯಾ ರಾವ್ ತನಿಖೆಯಲ್ಲಿ ಬಯಲಾಗಿರುವಂತೆ, ಕಮಿಷನ್ ಆಸೆಗೆ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗುವವರಿದ್ದಾರೆ. ಒಂದು ಕೆಜಿ ಚಿನ್ನ ಸಾಗಿಸಲು ಆಕೆ ರೂ. 5 ಲಕ್ಷದವರೆಗೆ ಕಮಿಷನ್ ಪಡೆಯುತ್ತಿದ್ದರು ಮತ್ತು ಒಂದೇ ಪ್ರವಾಸದಲ್ಲಿ 10 ಕೆಜಿಗೂ ಹೆಚ್ಚು ಚಿನ್ನವನ್ನು ಸಾಗಿಸುತ್ತಿದ್ದರು ಎನ್ನುತ್ತಿವೆ ವರದಿಗಳು. ಮೊನ್ನೆಯಂತೂ 14.8 ಕೆಜಿ ಚಿನ್ನದ ಜೊತೆ ಸಿಕ್ಕಿಬಿದ್ದರು.
ಆದರೆ ಪ್ರಶ್ನೆ ಏನೆಂದರೆ, ಇಷ್ಟೊಂದು ಚಿನ್ನದ ಕಳ್ಳಸಾಗಣೆ ಏಕೆ ನಡೆಯುತ್ತಿದೆ ಎಂಬುದು. ಜನರು ತಮ್ಮ ಹೆಸರು ಹಾಳು ಮಾಡಿಕೊಳ್ಳುವ ಮಟ್ಟಕ್ಕೆ ಹೋಗುವಷ್ಟು ಈ ಜಾಲ ಪ್ರಬಲವಾಗಿದೆಯೆ? 70ರ ದಶಕದಲ್ಲಿದ್ದ ಚಿನ್ನ ಕಳ್ಳಸಾಗಣೆಯನ್ನು ಏಕೆ ಪುನಃ ನೋಡುವಂತಾಗಿದೆ?
ನಮ್ಮ ದೇಶದಲ್ಲಿ ಚಿನ್ನಕ್ಕೆ ಸಾಂಸ್ಕೃತಿಕ ಮಹತ್ವವಿದೆ ಎಂದು ಜನರಿಗೆ ತಿಳಿದಿದೆ. ಅದು ನಮ್ಮ ಸಂಪ್ರದಾಯದ ಭಾಗವಾಗಿದೆ. ಸರಕಾರ ಯಾವುದೇ ನೀತಿಯನ್ನು ತಂದರೂ, ಜನರು ಕೇಳುವುದಿಲ್ಲ. ಏಕೆಂದರೆ, ಅವರು ಭಾವನಾತ್ಮಕವಾಗಿ ಚಿನ್ನಕ್ಕೆ ಸೋಲುತ್ತಾರೆ. ನೀತಿ ಬದಲಾವಣೆ, ಹೊಸ ತೆರಿಗೆ, ನಂತರ ಹಣದುಬ್ಬರ, ನಂತರ ರೂಪಾಯಿ ಅಪಮೌಲ್ಯ ಇವೆಲ್ಲದರ ಪರಿಣಾಮವಾಗಿ ಚಿನ್ನದ ಬೆಲೆ ಹೆಚ್ಚುತ್ತಲೇ ಇದೆ. ಅದಕ್ಕಿರುವ ಬೇಡಿಕೆಯೂ ಹೆಚ್ಚುತ್ತಿದೆ. ನಮ್ಮ ದೇಶದ ಚಿನ್ನದ ಶೇ. 70ರಷ್ಟನ್ನು ಆಭರಣ ಮತ್ತು ಬಾರ್ ರೂಪದಲ್ಲಿ ಭದ್ರತೆಯ ಹೆಸರಿನಲ್ಲಿ ಇಡಲಾಗುತ್ತದೆ. 1968ರ ಚಿನ್ನದ ನಿಯಂತ್ರಣ ಕಾಯ್ದೆ, ಚಿನ್ನದ ಗಟ್ಟಿಗಳನ್ನು ಇಟ್ಟುಕೊಳ್ಳಲು ಅವಕಾಶ ಕೊಡಲಿಲ್ಲ ಮತ್ತು ಚಿನ್ನದ ಸಾಲ ತೆಗೆದುಕೊಳ್ಳಬೇಡಿ ಎಂದು ಸರಕಾರ ಹೇಳಿತು. ಬ್ಯಾಂಕುಗಳು ಚಿನ್ನವನ್ನು ಹಿಂದಿರುಗಿಸಿದವು ಮತ್ತು ಸಾಲವನ್ನು ರದ್ದುಗೊಳಿಸಲಾಯಿತು. 14 ಕ್ಯಾರೆಟ್‌ಗಿಂತ ಹೆಚ್ಚಿನ ಆಭರಣ ಉತ್ಪಾದನೆಯನ್ನು ನಿಷೇಧಿಸಲಾಯಿತು. ಚಿನ್ನದ ಗಟ್ಟಿ ಮತ್ತು ಚಿನ್ನದ ನಾಣ್ಯ ಹೊಂದಿರುವವರು ತಮ್ಮ ಚಿನ್ನವನ್ನು ಆಭರಣವಾಗಿ ಪರಿವರ್ತಿಸಬೇಕಾಗಿತ್ತು. ಇಲ್ಲದಿದ್ದರೆ ಅದನ್ನು ವಶಪಡಿಸಿಕೊಳ್ಳುವ ಎಚ್ಚರಿಕೆ ನೀಡಲಾಗಿತ್ತು. ಸರಕಾರದ ಸೂಚನೆಯ ಪ್ರಕಾರ ಚಿನ್ನದ ಕೆಲಸಗಾರರು 100 ಗ್ರಾಂ ಚಿನ್ನವನ್ನು ಮಾತ್ರ ಹೊಂದಬಹುದು. ಆದರೆ ಈ ಒಂದು ದೊಡ್ಡ ಮಾಸ್ಟರ್‌ಸ್ಟ್ರೋಕ್ ವಿಫಲವಾಯಿತು. ಏಕೆಂದರೆ ಇದರ ನಂತರ, 70 ಮತ್ತು 80ರ ದಶಕಗಳಲ್ಲಿ ಸರಕಾರದ ಸಂಪೂರ್ಣ ಕ್ರಮವನ್ನು ಬೈಪಾಸ್ ಮಾಡಲಾಯಿತು. ದುಬೈನಂತಹ ದೇಶಗಳಿಂದ ಚಿನ್ನ ಕಳ್ಳ ಸಾಗಣೆ ದಂಧೆಯಲ್ಲಿ ತೊಡಗುವ ಮೂಲಕವೇ ದೇಶದ ಡಾನ್‌ಗಳು ಬೆಳೆದರು. ಉದಾರೀಕರಣದ ನಂತರ ಚಿನ್ನದ ಬೆಲೆ ಕಡಿಮೆಯಾಯಿತು. ಮನಮೋಹನ್ ಸಿಂಗ್ ಒಂದು ದೊಡ್ಡ ಬದಲಾವಣೆಯನ್ನು ಮಾಡಿದರು. ಸರಕಾರ 2015ರಲ್ಲಿ ಚಿನ್ನವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ ಮತ್ತು ಬಡ್ಡಿ ಸಿಗುತ್ತದೆ ಎಂದು ಘೋಷಿಸಿದ್ದರೂ, ಇಡೀ ದೇಶ 25 ಟನ್ ಚಿನ್ನವನ್ನು ಮಾತ್ರ ಠೇವಣಿ ಮಾಡಿತು. ಆದ್ದರಿಂದ ಈ ಯೋಜನೆಯೂ ವಿಫಲವಾಯಿತು. ಜನರು ತಮ್ಮ ಭೌತಿಕ ಚಿನ್ನವನ್ನು ಸರಕಾರಕ್ಕೆ ನೀಡಲು ಬಯಸುವುದಿಲ್ಲ. ನಂತರ 2016ರಲ್ಲಿ ನೋಟ್ ಬ್ಯಾನ್ ಆಯಿತು. ಜನರು ಆಸ್ತಿ ಮತ್ತು ಚಿನ್ನವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಸರಕಾರ ಇದ್ದಕ್ಕಿದ್ದಂತೆ ಭಾವಿಸಿತು. ಆದರೆ ಮುಂದೆ ನಡೆದದ್ದು ಅದಕ್ಕೆ ವಿರುದ್ಧವಾಗಿತ್ತು. ಜನರು ಮತ್ತೆ ಮತ್ತೆ ಚಿನ್ನವನ್ನು ಖರೀದಿಸಿದರು. ಹೀಗೆ ಈ ಯೋಜನೆಯೂ ವಿಫಲವಾಯಿತು. 2017ರಲ್ಲಿ ಸರಕಾರ ಜಿಎಸ್‌ಟಿ ಹಾಕಲು ನಿರ್ಧರಿಸಿತು.
ಇದರೊಂದಿಗೆ, 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಚಿನ್ನವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೂ ಖರೀದಿ ಹೆಚ್ಚುತ್ತಲೇ ಇತ್ತು. ಅಂತಿಮವಾಗಿ, ಸರಕಾರ ಚಿನ್ನದ ಬಾಂಡ್ ಯೋಜನೆಯನ್ನು ತಂದಿತು. ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಬಗ್ಗೆ ಸರಕಾರ ಬಹಳ ಆಶಾವಾದ ಹೊಂದಿತ್ತು. ಈ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
ಜನರು ಭೌತಿಕ ಚಿನ್ನವನ್ನು ಖರೀದಿಸುವುದಿಲ್ಲ ಎಂದು ಸರಕಾರ ಭಾವಿಸಿತ್ತು. ಬಾಂಡ್‌ಗಳನ್ನು ಖರೀದಿಸಿ. ಶೇ. 2.5 ತೆರಿಗೆ ರಹಿತ ಬಡ್ಡಿ ನೀಡಲಾಗುವುದು ಎಂದಿತು. ಜನರಿಂದ ಹಣ ಸಂಗ್ರಹಿಸಿ, ಅದನ್ನು ಆರ್ಥಿಕತೆಗೆ ಬಳಸುವ ಆಲೋಚನೆ ಸರಕಾರದ್ದಾಗಿತ್ತು. ಚಿನ್ನದ ಬೆಲೆ ಇಷ್ಟು ಹೆಚ್ಚಾಗಿದೆ ಮತ್ತು ಭವಿಷ್ಯದಲ್ಲಿ ಇಷ್ಟು ಹೆಚ್ಚಾಗುತ್ತದೆ ಎಂಬ ಊಹೆ ಇತ್ತು. ಆದರೆ ಏನಾಯಿತು? ಕಳೆದ 2-3 ವರ್ಷಗಳಲ್ಲಿನ ಚಿನ್ನದ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಿನ್ನೆಲೆಯಲ್ಲಿ ಸರಕಾರದ ಲೆಕ್ಕಾಚಾರ ತಪ್ಪಾಗಿತ್ತು. ಅದಕ್ಕಾಗಿಯೇ ಅದು ಈಗ ಚಿನ್ನದ ಬಾಂಡ್‌ಗಳನ್ನು ನೀಡುತ್ತಿಲ್ಲ. ವಾಸ್ತವವಾಗಿ, ಸರಕಾರದ ಮೇಲೆ ಈ ಯೋಜನೆಯಿಂದಾಗಿ 1.12 ಲಕ್ಷ ಕೋಟಿಗೂ ಹೆಚ್ಚಿನ ಹೊರೆ ಇದೆ ಎಂದು ವರದಿಗಳು ಹೇಳುತ್ತಿವೆ. ಆದ್ದರಿಂದ, ಇದು ಕೂಡ ವಿಫಲ ಮಾಸ್ಟರ್‌ಸ್ಟ್ರೋಕ್ ಆಗಿದೆ.
ಚಿನ್ನದ ಆಮದು 2016ರಲ್ಲಿ 27.5 ಬಿಲಿಯನ್ ಡಾಲರ್ ಇದ್ದದ್ದು 2021-22ರಲ್ಲಿ 46.14 ಬಿಲಿಯನ್ ಡಾಲರ್‌ಗೆ ಏರಿದೆ. 2024ರಲ್ಲಿ ಆಮದು 37.4 ಬಿಲಿಯನ್ ಡಾಲರ್‌ಗೆ ಇಳಿದಿದೆ. ಆದರೆ ಎಸ್‌ಜಿಬಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಸರಕಾರದ ಮೇಲಿನ ಹೊರೆ 2017ರಲ್ಲಿ 6,664 ಕೋಟಿ ರೂ. ಇದ್ದದ್ದು, 2023ರ ವೇಳೆಗೆ 68,598 ಕೋಟಿ ರೂ.ಯಷ್ಟು ಹೆಚ್ಚಾಗಿದೆ. ಅಂದರೆ ಶೇ.930ರಷ್ಟು ಭಾರೀ ಹೆಚ್ಚಳವಾಗಿದೆ. 2024ರಲ್ಲಿ ರೂ. 60,566 ಕೋಟಿಗೆ ಸರಕಾರದ ವೆಚ್ಚ ಇಳಿದ ನಂತರ, ಈ ಹಣಕಾಸು ವರ್ಷದಲ್ಲಿ ಯಾವುದೇ ಹೊಸ ಬಾಂಡ್‌ಗಳನ್ನು ನೀಡದ ಕಾರಣ ಸರಕಾರದ ಮೇಲಿನ ಹೊರೆ 2025ರಲ್ಲಿ 55,000 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಇಳಿಯುವ ನಿರೀಕ್ಷೆಯಿದೆ. ಸರಕಾರ ಹೊಸ ಎಸ್‌ಜಿಬಿ ವಿತರಣೆಗಳ ಮೇಲೆ ಬ್ರೇಕ್ ಹಾಕುತ್ತಲೇ ಇರುವುದರಿಂದ 61 ಚಿನ್ನದ ಬಾಂಡ್ ಕಂತುಗಳನ್ನು ಇನ್ನೂ ಮರುಪಾವತಿಸಬೇಕಾಗಿದೆ. ಮಾರುಕಟ್ಟೆ ಅಂದಾಜಿನ ಪ್ರಕಾರ ಪ್ರಸಕ್ತ ಚಿನ್ನದ ಬೆಲೆಗಳನ್ನು ನೀಡಿದರೆ 2032 ರ ವೇಳೆಗೆ ಸರಕಾರದ ಹೊಣೆಗಾರಿಕೆ ರೂ. 1.12 ಲಕ್ಷ ಕೋಟಿಗೆ ಏರುವ ನಿರೀಕ್ಷೆಯಿದೆ. ಆದರೆ, ಸರಕಾರ ಹೊಸ ಚಿನ್ನದ ಬಾಂಡ್‌ಗಳನ್ನು ನೀಡುವುದನ್ನು ನಿಲ್ಲಿಸಿರುವುದು ತಪ್ಪಾದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ ಎನ್ನಲಾಗುತ್ತಿದೆ. ಬಾಂಡ್‌ಗಳನ್ನು ಬಿಡುಗಡೆ ಮಾಡಿದಾಗಿನಿಂದ ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ ಹೊಣೆಗಾರಿಕೆಗಳು ಹೆಚ್ಚಾಗಿವೆ. ಆದರೆ ಬೆಲೆ ಇದಕ್ಕಿಂತ ಹೆಚ್ಚು ಏರಿಕೆಯಾಗುವ ಸಾಧ್ಯತೆಯಿಲ್ಲ ಮತ್ತು ರಶ್ಯ ಮತ್ತು ಉಕ್ರೇನ್ ನಡುವೆ ಶಾಂತಿ ಮೂಡಿದರೆ ಚಿನ್ನದ ಬೆಲೆ ಇನ್ನೂ ಕಡಿಮೆಯಾಗಬಹುದು ಎಂದು ತಜ್ಞರು ಹೇಳುತ್ತಾರೆ. ಚಿನ್ನದ ಬೆಲೆಗಳು ಕುಸಿದರೆ, ಈಗ ನೀಡಲಾದ ಚಿನ್ನದ ಬಾಂಡ್‌ಗಳು ವಾಸ್ತವವಾಗಿ ಅವುಗಳನ್ನು ಗ್ರಾಹಕರು ಮರಳಿ ಪಡೆಯುವ ಹೊತ್ತಿಗೆ ಸರಕಾರದ ಹಣ ಬರುವ ಸಾಧ್ಯತೆಯಿತ್ತು. ಆದರೆ ಹೊಸ ಚಿನ್ನದ ಬಾಂಡ್‌ಗಳನ್ನು ನೀಡಲಾಗುತ್ತಿಲ್ಲ. ಎಸ್‌ಜಿಬಿ ಯೋಜನೆಯ ಮೂಲ ವಿನ್ಯಾಸ ಚಿನ್ನದ ಬೆಲೆ ಬದಲಾವಣೆಗಳ ಅಪಾಯವನ್ನು ಭರಿಸುವ ಚಿನ್ನದ ಮೀಸಲು ನಿಧಿ ಕುರಿತ ನಿಬಂಧನೆಯನ್ನು ಸಹ ಒಳಗೊಂಡಿತ್ತು. ಆದರೆ ಈಗ ಯಾವುದೇ ಎಸ್‌ಜಿಬಿಗಳನ್ನು ನೀಡಲಾಗುತ್ತಿಲ್ಲವಾದ್ದರಿಂದ ಸರಕಾರಕ್ಕೆ ಅಂತಹ ಯಾವುದೇ ಪ್ರಯೋಜನಗಳಿಲ್ಲ ಮತ್ತು ಹಣ ಬರುವುದಿಲ್ಲ. 2023-24ರಲ್ಲಿ ಸರಕಾರ ಈ ನಿಧಿಗೆ ಸುಮಾರು ರೂ. 3,500 ಕೋಟಿಗಿಂತ ಸ್ವಲ್ಪ ಹೆಚ್ಚು ವರ್ಗಾಯಿಸಲು ಸಾಧ್ಯವಾಗಿದ್ದಾಗಲೂ, 2024-25 ರಲ್ಲಿ ಈ ಮೊತ್ತ ಗಣನೀಯವಾಗಿ ರೂ. 28,600 ಕೋಟಿಗೆ ಹೆಚ್ಚಿತ್ತು. ಆದರೆ ಹೊಸ ಬಾಂಡ್‌ಗಳಿಲ್ಲದ ಒಂದು ವರ್ಷದ ನಂತರ ಅದು 2025-26 ರಲ್ಲಿ ಈ ನಿಧಿಗೆ ಕೇವಲ 697 ಕೋಟಿ ರೂ.ಗಳನ್ನು ಹಾಕಿದೆ. ಒಟ್ಟಾರೆಯಾಗಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಿಂದ ಚಿನ್ನದ ಆಮದನ್ನು ಕಡಿಮೆಗೊಳಿಸಲು ಸಾಧ್ಯವಾಗಲಿಲ್ಲ. ಜೊತೆಗೆ, ಅದು ಸರಕಾರಕ್ಕೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ದುಬಾರಿಯಾಗಿ ಪರಿಣಮಿಸಿದೆ.
ಹಾಗಾದರೆ, ನಾವು ಕಳ್ಳಸಾಗಣೆಯನ್ನು ಹೇಗೆ ನಿಲ್ಲಿಸಬಹುದು? ಆರ್ಥಿಕ ನೀತಿ ಏನು? ಮೊದಲನೆಯದಾಗಿ, ಭಾರತದಲ್ಲಿ ಕಾನೂನುಬದ್ಧವಾಗಿ ಚಿನ್ನವನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಹೆಚ್ಚಿನ ಆಮದು ಸುಂಕಗಳು ಇದ್ದವು, ಚಿನ್ನ ದುಬಾರಿಯಾಗಿತ್ತು, ಹಣವಿದ್ದರೂ, ಕಾನೂನುಬದ್ಧವಾಗಿ ಚಿನ್ನವನ್ನು ಪಡೆಯಲು ಸಾಧ್ಯವಿಲ್ಲ. ಇಂಥ ಹೊತ್ತಲ್ಲಿ ಚಿನ್ನದ ಆಸೆ ಪೂರೈಸುವ ಅವಕಾಶದ ಲಾಭ ಮಾಡಿಕೊಂಡವರು ಚಿನ್ನ ಕಳ್ಳಸಾಗಣೆದಾರರು. ಕಳ್ಳಸಾಗಣೆದಾರರು ಬಹಳಷ್ಟು ಹಣವನ್ನು ಪಡೆದರು. ಲಾಭದ ಪ್ರಮಾಣ ಹೆಚ್ಚಿತ್ತು. ಗಲ್ಫ್‌ನಲ್ಲಿ ಅದು ಕಾನೂನುಬದ್ಧವಾಗಿತ್ತು, ಇಲ್ಲಿ ಅದು ಕಾನೂನುಬಾಹಿರವಾಗಿತ್ತು. ಆಗ ಮನಮೋಹನ್ ಸಿಂಗ್ ಬಂದರು, ಕ್ರಾಂತಿಕಾರಿ ಕೆಲಸ ಮಾಡಿದರು. 5 ಕೆಜಿ ವರೆಗೂ ಚಿನ್ನವನ್ನು ಹೊರಗಿನಿಂದ ತರಬಹುದು ಎಂದರು. ಆಮದು ಸುಂಕವನ್ನು ನಿಧಾನವಾಗಿ ಕಡಿಮೆ ಮಾಡಲಾಯಿತು. ಅದು ಕಳ್ಳಸಾಗಣೆ ವ್ಯವಹಾರದ ಮೇಲೆ ಪರಿಣಾಮ ಬೀರಿತು. ನಂತರ ಪ್ರಣವ್ ಮುಖರ್ಜಿ ಹಣಕಾಸು ಸಚಿವರಾಗಿ ಬಂದರು. ಚಿನ್ನದ ಆಮದು ತೈಲೇತರ ಆಮದಿನ ಶೇ. 20ರಷ್ಟು ಇರುವುದನ್ನು ಅವರು ಗಮನಿಸಿದರು. ಜನರು ಚಿನ್ನದ ಬದಲು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಅವರು ಮತ್ತೆ ಚಿನ್ನಕ್ಕೆ ಸುಂಕ ಹಾಕಿದರು. ಜನರು ಅನಿವಾರ್ಯವಾಗಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ ಎಂದು ಭಾವಿಸಿದ್ದ ಅವರಿಗೆ, ಚಿನ್ನದೊಂದಿಗೆ ಜನರಿಗೆ ಭಾವನಾತ್ಮಕ ಸಂಬಂಧವಿದೆ ಎಂಬುದು ಅರ್ಥವಾಗಿರಲಿಲ್ಲ. ಬಿಜೆಪಿ ಸರಕಾರ ನಿಧಾನವಾಗಿ ತೆರಿಗೆಯನ್ನು ಹೆಚ್ಚಿಸಿತು. ಅದು ಕಡೆಗೆ ಶೇ.15ಕ್ಕೆ ಮುಟ್ಟಿತು ಮತ್ತು 2019ರ ನಂತರ ಕಳ್ಳಸಾಗಣೆಯೂ ಹೆಚ್ಚಾಯಿತು. ಈಗೇನೋ ಸರಕಾರ ಚಿನ್ನ ಆಮದು ಸುಂಕವನ್ನು ಶೇ. 6ಕ್ಕೆ ಇಳಿಸಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಟ್ರಂಪ್ ಸುಂಕಗಳನ್ನು ಹೇರುವ ಮಾತಾಡುತ್ತಿದ್ದಾರೆ, ಆದ್ದರಿಂದ ಬೇಡಿಕೆ ಹೆಚ್ಚುತ್ತಿದೆ.
ಕಪ್ಪುಹಣ ಉಳ್ಳವರು ಅದರಿಂದ ಖರೀದಿಸಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಅಕ್ರಮ ಹಣ ವರ್ಗಾವಣೆಗೂ ಚಿನ್ನವನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಒಬ್ಬರಿಗೆ ಎಷ್ಟೋ ಕೋಟಿ ಹಣ ಕೊಡಬೇಕಿದೆ ಎಂದಾದರೆ, ಅಷ್ಟು ಮೌಲ್ಯದ ಚಿನ್ನವನ್ನು ಅವರಿಗೆ ತಲುಪಿಸಲಾಗುತ್ತದೆ. ಹೀಗಾಗಿಯೂ ಚಿನ್ನ ಕಳ್ಳಸಾಗಣೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಕಪ್ಪುಹಣವನ್ನು ಹೀಗೆ ಚಿನ್ನದೊಂದಿಗೆ ವಿನಿಮಯಿಸಿಕೊಳ್ಳುವುದು ಸುಲಭವಾಗಿಬಿಡುತ್ತಿದೆ. 2023ರಲ್ಲಿ 5,000 ಕಳ್ಳಸಾಗಣೆ ಪ್ರಯತ್ನಗಳನ್ನು ಹಿಡಿದುಹಾಕಲಾಗಿತ್ತು. ಈಗಿನ ಕಥೆ ನೋಡಿದರೆ, ಚಿನ್ನ ಆಮದು ಸುಂಕ ಶೇ. 6ಕ್ಕೆ ಇಳಿದರೂ ಕಳ್ಳಸಾಗಣೆ ಇನ್ನೂ ನಡೆಯುತ್ತಿದೆ. ಇನ್ನೂ ಬಹಳಷ್ಟು ಹಣವನ್ನು ಗಳಿಸಬಹುದು ಎಂಬ ಆಮಿಷ ಕೆಲಸ ಮಾಡುತ್ತಿದೆ. ಯಾರಾದರೂ ಕಳ್ಳಸಾಗಣೆ ಮಾಡುವ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ, ಅದರಿಂದ ಅಷ್ಟೇ ಹಣವೂ ಇದೆ ಎಂದಾಯಿತು. ಸರಕಾರಕ್ಕೆ ಹೋಗಬೇಕಾದ ಸುಂಕವೂ ತಪ್ಪುತ್ತದೆ. ವಿಶೇಷವಾಗಿ ಅಮೆರಿಕ ಸುಂಕಗಳ ಬಗ್ಗೆ ಮಾತನಾಡುತ್ತಿರುವಾಗ, ಸುಂಕ ತಗ್ಗಿಸುವುದು ಪ್ರಾಯೋಗಿಕ ಪರಿಹಾರವಾಗಿದೆ ಎಂದೇ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚಿನ್ನ ಅಂತರ್‌ರಾಷ್ಟ್ರೀಯ ಬೆಲೆಗಳೊಂದಿಗೆ ಹೊಂದಿಕೆಯಾಗಲು ಸುಂಕ ಮುಕ್ತವಾಗಿರಬೇಕು. ಇಲ್ಲದಿದ್ದರೆ ಗಗನಸಖಿ ಮಾತ್ರವಲ್ಲದೆ ನಟಿಯೂ ಕಳ್ಳಸಾಗಣೆಗೆ ಇಳಿಯುವ ಇಂಥ ಪ್ರಕರಣಗಳನ್ನು ನೋಡುತ್ತಲೇ ಇರಬೇಕಾಗುತ್ತದೆ.