ಖಾಲಿಸ್ತಾನಿ ಹೋರಾಟದ ಕರಿನೆರಳು: ಮತ್ತೆ ಕದಡಿದ ಭಾರತ-ಕೆನಡಾ ಸಂಬಂಧ
ಭಾರತ ಮತ್ತು ಕೆನಡಾ ಸಂಬಂಧದ ಮೇಲೆ ಖಾಲಿಸ್ತಾನಿಗಳ ಪ್ರತ್ಯೇಕತಾವಾದಿ ಹೋರಾಟದ ಕರಾಳ ನೆರಳು ಬೀಳಲು ಶುರುವಾಗಿ ಬಹಳ ಸಮಯವೇ ಆಗಿದೆ. ಇತ್ತೀಚೆಗೆ ಅಲ್ಲಿ ಖಾಲಿಸ್ತಾನ್ ಪರ ಹೋರಾಟ ತೀವ್ರಗೊಳ್ಳುತ್ತಿದ್ದು, ಸಂಬಂಧ ಇನ್ನಷ್ಟು ಬಿಗಡಾಯಿಸಿದೆ. ಸೆಪ್ಟಂಬರ್ ಆರಂಭದಲ್ಲಿ ಹೊಸದಿಲ್ಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಔಪಚಾರಿಕ ದ್ವಿಪಕ್ಷೀಯ ಮಾತುಕತೆ ಕಹಿಯಾಗಿಯೇ ಮುಗಿದಾಗಲೇ, ಉಭಯ ದೇಶಗಳ ಸಂಬಂಧ ಬಿಗಡಾಯಿಸಿರುವುದು ಬೆಳಕಿಗೆ ಬಂತು.
ಇತ್ತೀಚಿನ ವರ್ಷಗಳಲ್ಲಿ ಕೆನಡಾ ಸಿಖ್ ಪ್ರತ್ಯೇಕತಾವಾದಿ ಚಳವಳಿಯ ಬಗ್ಗೆ ಸಹಾನುಭೂತಿಯನ್ನು ತೋರಿಸುತ್ತಿದೆ ಎಂಬುದು ಭಾರತದ ವಾದವಾದರೆ, ತನ್ನ ಆಂತರಿಕ ರಾಜಕೀಯದಲ್ಲಿ ಭಾರತೀಯ ಅಧಿಕಾರಿಗಳು ಹಸ್ತಕ್ಷೇಪ ಮಾಡುತ್ತಿರುವುದಾಗಿ ಕೆನಡಾ ಆಕ್ಷೇಪವೆತ್ತುತ್ತಿದೆ. ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರವಿರುವುದಾಗಿ ಟ್ರುಡೊ ಅಲ್ಲಿನ ಸಂಸತ್ತಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ ಬಳಿಕವಂತೂ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಇನ್ನಷ್ಟು ಕುಸಿಯಿತು. ಟ್ರುಡೊ ಹೇಳಿಕೆ ಬೆನ್ನಲ್ಲೇ ಕೆನಡಾದ ಸರಕಾರ ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿತು. ನಿಜ್ಜಾರ್ ಹತ್ಯೆಯಲ್ಲಿ ಪಾತ್ರವಿದೆಯೆಂಬ ಕೆನಡಾ ಆರೋಪವನ್ನು ನಿರಾಕರಿಸಿದ ಭಾರತ ಕೂಡ ಕೆನಡಾದ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಹೊರಹಾಕಿತು. ಈಗ ಕೆನಡಾದವರಿಗೆ ಭಾರತದ ಹೊಸ ವೀಸಾ ನೀಡುವ ಪ್ರಕ್ರಿಯೆಯನ್ನೂ ಭಾರತ ನಿಲ್ಲಿಸಿದೆ.
ಕೆನಡಾದೊಂದಿಗೆ ಸಾಗಿಬಂದ
ಭಾರತದ ಸಂಬಂಧ
ಭಾರತ ಹೊರತುಪಡಿಸಿದರೆ ಕೆನಡಾದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಸಿಖ್ಖರಿದ್ದಾರೆ. ಸುಮಾರು 7,70,000 ಸಿಖ್ಖರು ಕೆನಡಾದಲ್ಲಿದ್ದು, ಇದು ಆ ದೇಶದ ಜನಸಂಖ್ಯೆಯ ಶೇ.2.1ರಷ್ಟು.
2015ರಲ್ಲಿ ಜಸ್ಟಿನ್ ಟ್ರುಡೊ ಅಧಿಕಾರಕ್ಕೆ ಬಂದಾಗ ತಮ್ಮ ಸಂಪುಟಕ್ಕೆ ನಾಲ್ವರು ಸಿಖ್ ಸಚಿವರನ್ನು ಸೇರಿಸಿಕೊಂಡಿದ್ದು ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು. ಈ ಹಿಂದೆ ಕೂಡ, ಖಾಲಿಸ್ತಾನ್ ಹೋರಾಟವನ್ನು ಬೆಂಬಲಿಸುವ ಕೆನಡಾದ ಸಿಖ್ಖರ ವಿರುದ್ಧ ಭಾರತೀಯ ರಾಜತಾಂತ್ರಿಕರು ಆಕ್ಷೇಪ ಎತ್ತಿದ್ದಿತ್ತು. ಕಳೆದ ವರ್ಷ ಕೆನಡಾದ ಒಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು. ಕೆನಡಾದ ಸಿಖ್ಖರು ಖಾಲಿಸ್ತಾನಿಗಳ ಪರ ಸ್ಥಳೀಯ ಜನಾಭಿಪ್ರಾಯ ಸಂಗ್ರಹಿಸಿದ್ದರು. 2018ರಲ್ಲಿ ಟ್ರುಡೊ ಭಾರತ ಪ್ರವಾಸದಲ್ಲಿ, ಅವರ ನಿಯೋಗ ಸಿಖ್ ಪ್ರಾತಿನಿಧ್ಯವನ್ನು ಒಳಗೊಂಡಿದ್ದಕ್ಕಾಗಿ ಟೀಕೆಗೆ ತುತ್ತಾಗಿತ್ತು.
ಆದರೆ ಬೀಜಿಂಗ್ ಅನ್ನು ಎದುರಿಸಲು ಎರಡೂ ದೇಶಗಳು ಬಾಂಧವ್ಯ ವೃದ್ಧಿಗೆ ಮುಂದಾದಾಗ ಇವಾವುದೂ ದೊಡ್ಡ ಅಡ್ಡಿಯಾಗ ಲಿಲ್ಲ. ಇತ್ತೀಚಿನ ತಿಂಗಳುಗಳವರೆಗೂ ಭಾರತ-ಕೆನಡಾ ಸಂಬಂಧಗಳು ಸಾಕಷ್ಟು ಉತ್ತಮವಾಗಿಯೇ ಇದ್ದವು ಎಂದು ಪರಿಣಿತರು ಹೇಳುತ್ತಾರೆ. ಪರಸ್ಪರ ವಾಣಿಜ್ಯ ಸಂಬಂಧಗಳು ದೃಢಗೊಂಡಿದ್ದವು. ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಿದ್ದವು. ತನ್ನ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಅಡಿಯಲ್ಲಿ ಭಾರತವನ್ನು ನಿರ್ಣಾಯಕ ಪಾಲುದಾರ ದೇಶವಾಗಿ ಕೆನಡಾ ಪರಿಗಣಿಸಿತ್ತು. ಮೇ ತಿಂಗಳಿನಲ್ಲಿ ವಾಹನಗಳು, ಕೃಷಿ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿ ವ್ಯಾಪಾರ ಒಪ್ಪಂದದ ವಿಚಾರವಾಗಿ ಎರಡೂ ದೇಶಗಳು ನಿರೀಕ್ಷೆ ಇಟ್ಟುಕೊಂಡಿದ್ದವು.
ಇತ್ತೀಚಿನ ತಿಂಗಳುಗಳಲ್ಲಿ ಭಾರತ ಮತ್ತು ಕೆನಡಾ ಸಂಬಂಧಗಳು ತೀವ್ರವಾಗಿ ಹದಗೆಡತೊಡಗಿದ್ದವು. ಸಿಖ್ ಪ್ರತ್ಯೇಕತಾವಾದಿಗಳಿಗೆ ಕೆನಡಾ ಬೆಂಬಲ ಉಭಯ ದೇಶಗಳ ನಡುವಿನ ಬಾಂಧವ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಜೂನ್ ಆರಂಭದಲ್ಲಿ ಎಚ್ಚರಿಸಿದ್ದರು. ಜೂನ್ 4ರಂದು ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ನಡೆಸಿದ ಮೆರವಣಿಗೆ ಹಿನ್ನೆಲೆಯಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದ್ದರು.
ಜೈಶಂಕರ್ ಈ ಎಚ್ಚರಿಕೆ ನೀಡಿದ ಹತ್ತು ದಿನಗಳ ನಂತರ, ವ್ಯಾಂಕೋವರ್‌ನ ಸಿಖ್ ಗುರುದ್ವಾರದಲ್ಲಿ ನಿಜ್ಜಾರ್‌ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸೆಪ್ಟಂಬರ್ 1ರಂದು ಅಚ್ಚರಿಯ ಬೆಳವಣಿಗೆಯಲ್ಲಿ ಕೆನಡಾ ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳಿಂದ ಹಿಂದೆ ಸರಿಯಿತು. ಇದೇ ಅಕ್ಟೋಬರ್‌ನಲ್ಲಿ ಎರಡೂ ದೇಶಗಳ ನಡುವೆ ವಾಣಿಜ್ಯ-ವ್ಯಾಪಾರ ಸಹಕಾರ ಕುರಿತ ಮಾತುಕತೆ ನಡೆಯಬೇಕಿತ್ತು.
ನಿಜ್ಜಾರ್ ಕೊಲೆ ಎರಡು ದೇಶಗಳ ನಡುವೆ ಬಿಕ್ಕಟ್ಟು ಸೃಷ್ಟಿಸಿದ್ದ ನಡುವೆಯೇ ಸೆಪ್ಟಂಬರ್ 20ರಂದು ಕೆನಡಾದಲ್ಲಿ ಇನ್ನೊಬ್ಬ ಖಾಲಿಸ್ತಾನಿ ಪ್ರತ್ಯೇಕತಾವಾದಿ ಸುಖಾ ದುನೇಕೆ ಎಂಬವನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದರ ಬೆನ್ನಿಗೆ ಭಾರತದಲ್ಲಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಹಾಗೂ ಉಗ್ರ ಲಾರೆನ್ಸ್ ಬಿಷ್ಣೋಯಿಯ ಗ್ಯಾಂಗ್ ನಾವೇ ಆತನನ್ನು ಕೊಂದಿದ್ದೇವೆ ಎಂದು ಹೊಣೆ ಹೊತ್ತುಕೊಂಡಿತು.
ರಾಜತಾಂತ್ರಿಕ ಸಂಬಂಧಗಳ ಮೇಲೆ
ಪರಿಣಾಮಗಳೇನು?
ಕೆನಡಾ ಸಿಖ್ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಮತ್ತು ತನ್ನ ಸಿಖ್ ಪ್ರಜೆಗಳ ಇಂತಹ ಚಟುವಟಿಕೆಗಳನ್ನು ಕಂಡರೂ ಕಾಣದಂತಿದೆ ಎಂದು ಭಾರತ ವರ್ಷಗಳಿಂದ ಆರೋಪಿಸುತ್ತ ಬಂದಿದೆ.
1985ರಲ್ಲಿ ಮಾಂಟ್ರಿಯಲ್‌ನಿಂದ ಹೊಸದಿಲ್ಲಿಗೆ ಹೊರಟಿದ್ದ ಏರ್ ಇಂಡಿಯಾದ ಕನಿಷ್ಕ ವಿಮಾನವನ್ನು ಕೆನಡಾ ಮೂಲದ ಸಿಖ್ ಭಯೋತ್ಪಾದಕರು ಸ್ಫೋಟಿಸಿ, ಎಲ್ಲಾ 329 ಜನರು ಬಲಿಯಾಗುವುದಕ್ಕೆ ಕಾರಣರಾಗಿದ್ದರು. ಕೆನಡಾದಲ್ಲಿ ತನಿಖೆಯ ನಂತರ, ಹೆಚ್ಚಿನ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಕೆನಡಾ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ತಕರಾರುಗಳು ಎದ್ದಿದ್ದವು.
ಆ ದಿನಗಳಿಂದಲೂ, ಖಾಲಿಸ್ತಾನಿಗಳಿಗೆ ಕೆನಡಾ ಬೆಂಬಲ ನೀಡುತ್ತಿರುವುದನ್ನು ಭಾರತ ದ್ವಿಪಕ್ಷೀಯ ಮಾತುಕತೆಗಳಲ್ಲಿ, ರಾಜ ತಾಂತ್ರಿಕ ಮಾರ್ಗಗಳ ಮೂಲಕ ಅನೇಕ ಬಾರಿ ಆಕ್ಷೇಪಿಸಿದೆ. ಆದರೂ, ಜಸ್ಟಿನ್ ಟ್ರುಡೊ ಅವಧಿಯಲ್ಲಿ ಭಾರತ-ಕೆನಡಾ ಸಂಬಂಧ ಕುಸಿದಿದೆ. ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಒಡ್ಡಿದವರ ಮೇಲೆ ಕೆನಡಾ ಕ್ರಮ ಕೈಗೊಳ್ಳದಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಟ್ರುಡೊ ಸಿಖ್ ಸಮುದಾಯದ ರಾಜಕೀಯ ಬೆಂಬಲಕ್ಕಾಗಿ ಹೀಗೆ ಮಾಡುತ್ತಿದ್ದಾರೆಂಬುದು ಭಾರತದ ಆರೋಪ.
ಅಮೆರಿಕ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಸೇರಿದಂತೆ ಕೆನಡಾದ ಹಲವಾರು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಭಾರತ ವಿರುದ್ಧದ ಕೆನಡಾದ ಆರೋಪಗಳಿಗೆ ಎಚ್ಚರಿಕೆಯ ಪ್ರತಿಕ್ರಿಯೆ ಕೊಟ್ಟಿವೆ. ಈ ರಾಷ್ಟ್ರಗಳೆಲ್ಲ ಭಾರತದ ಪರವಾಗಿಯಾಗಲಿ, ಕೆನಡಾದ ಪರವಾಗಿಯಾಗಲಿ ಮಾತಾಡಿಲ್ಲವಾದರೂ, ಬಿಕ್ಕಟ್ಟನ್ನು ಬಹುಬೇಗ ಬಗೆಹರಿಸಿಕೊಳ್ಳಬೇಕೆಂಬ ಆಗ್ರಹವನ್ನು ಮಾಡಿವೆ. ಈ ಯಾವ ದೇಶಗಳೂ ಬಹಿರಂಗವಾಗಿ ಕೆನಡಾದ ಪರ ಬೆಂಬಲಕ್ಕೆ ನಿಲ್ಲದಿದ್ದರೂ, ಭಾರತದೊಂದಿಗಿನ ಸಂಬಂಧದ ವಿಷಯವಾಗಿ ಅವು ಒಂದು ಹೆಜ್ಜೆ ಹಿಂದೆ ಸರಿಯುವಂತಾಗಲು ಈ ಬೆಳವಣಿಗೆ ಕಾರಣವಾದೀತೇ ಎಂಬ ಸಣ್ಣ ಅನುಮಾನವನ್ನೂ ಪರಿಣಿತರು ವ್ಯಕ್ತಪಡಿಸುತ್ತಾರೆ.
ಕೆನಡಾ ಸರಕಾರಕ್ಕೆ ಮಾತ್ರ ಖಾಲಿಸ್ತಾನಿಗಳ ರಾಜಕೀಯ ಬೆಂಬಲ ಬೇಕಾಗಿರುವುದು ನಿಜ. ಕೆನಡಾದಲ್ಲಿ ಸಿಖ್ಖರು, ಪ್ರಪಂಚದ ಇತರ ಭಾಗಗಳಿಂದ ವಲಸೆ ಬಂದವರಿಗಿಂತ ಹೆಚ್ಚು ರಾಜಕೀಯ ಪ್ರಾಬಲ್ಯವನ್ನು ಹೊಂದಿದ್ದಾರೆ
ಅಲ್ಲಿನ ಸಿಖ್ ಜನಸಂಖ್ಯೆ ಕಳೆದ 20 ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಸಿಖ್ ಸಮುದಾಯದ ಹೆಚ್ಚಿನವರು ಪಂಜಾಬ್‌ನಿಂದ ಶಿಕ್ಷಣ, ವೃತ್ತಿ, ಉದ್ಯೋಗಗಳನ್ನು ಹುಡುಕಿಕೊಂಡು ಅಲ್ಲಿಗೆ ವಲಸೆ ಹೋಗುತ್ತಾರೆ. ವರದಿಗಳು ಹೇಳುವಂತೆ, ಭಾರತದ ನಂತರ ವಿಶ್ವದ ಎರಡನೇ ಅತಿದೊಡ್ಡ ಸಿಖ್ ಜನಸಂಖ್ಯೆ ಇರುವುದು ಕೆನಡಾದಲ್ಲಿ. ಭಾರತದಲ್ಲಿ ಪಂಜಾಬ್ ಮತ್ತು ಚಂಡೀಗಡದ ನಂತರ ಕೆನಡಾದ ಬ್ರಿಟಿಷ್ ಕೊಲಂಬಿಯಾ ಮೂರನೇ ಅತಿದೊಡ್ಡ ಸಿಖ್ ಜನಸಂಖ್ಯೆಯನ್ನು ಹೊಂದಿದೆ.
ಖಾಲಿಸ್ತಾನ್ ಹೋರಾಟ ಮತ್ತು ರಾಜಕೀಯ ಹೇಗೆ ಬೆಸೆದುಕೊಂಡಿವೆ ಎಂಬುದನ್ನು ಗಮನಿಸುವುದಾದರೆ, ಕೆನಡಾ ಪ್ರಧಾನಿ ಟ್ರುಡೊ ಸರಕಾರ ಅಲ್ಪಮತದ್ದಾಗಿದ್ದು, ಅಸ್ತಿತ್ವಕ್ಕಾಗಿ ಜಗ್ಮೀತ್ ಸಿಂಗ್ ‘ಜಿಮ್ಮಿ’ ಧಲಿವಾಲ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿಯ (ಎನ್‌ಡಿಪಿ) ಬೆಂಬಲ ಬೇಕಿದೆ. ಇದು ಖಾಲಿಸ್ತಾನ್ ಪ್ರತ್ಯೇಕತಾ ಹೋರಾಟದಲ್ಲಿ ಸಕ್ರಿಯವಾಗಿರುವ ಪಕ್ಷ. ಎನ್‌ಡಿಪಿ 2021ರಲ್ಲಿ 24 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಟ್ರುಡೊ ಸರಕಾರದ ಉಳಿವಿಗೆ ಅದರ ಬೆಂಬಲ ನಿರ್ಣಾಯಕವಾಗಿದೆ. ಹಾಗಾಗಿ, ಖಾಲಿಸ್ತಾನಿ ಬೆಂಬಲಿಗರನ್ನು ವಿರೋಧಿಸುವಷ್ಟು ಟ್ರುಡೊ ಶಕ್ತರಾಗಲು ಸಾಧ್ಯವಿಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯ.
ಹೀಗಾಗಿಯೇ ಕೆನಡಾದಲ್ಲಿ ಇತ್ತೀಚೆಗೆ ಖಾಲಿಸ್ತಾನಿ ಪರ ರ್ಯಾಲಿಗಳು, ಪ್ರತಿಭಟನೆಗಳು ಹೆಚ್ಚುತ್ತಿರುವುದು ಎನ್ನಲಾಗುತ್ತಿದೆ. ಅವನ್ನೆಲ್ಲ ನಿಯಂತ್ರಿಸುವಂತೆ ಕೆನಡಾವನ್ನು ಭಾರತ ಒತ್ತಾಯಿಸುತ್ತಲೇ ಇದೆ. ರಾಜತಾಂತ್ರಿಕ ಪ್ರತಿಭಟನೆಯನ್ನೂ ಭಾರತ ಹಲವು ಸಲ ದಾಖಲಿಸಿದೆ. ದಶಕಗಳಿಂದ ಖಾಲಿಸ್ತಾನಿಗಳು ಕೆನಡಾ ನೆಲದಿಂದ ಕಾರ್ಯಾಚರಿಸುತ್ತಿದ್ದರೂ, ಕೆನಡಾ ಸಂಪೂರ್ಣ ಮೌನವಾಗಿದೆ ಎನ್ನುತ್ತವೆ ವರದಿಗಳು.
ಕನಿಷ್ಕ ವಿಮಾನ ಸ್ಫೋಟ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾದ ಬಳಿಕವಂತೂ ಖಾಲಿಸ್ತಾನಿ ಉಗ್ರರು ಇನ್ನಷ್ಟು ನಿರ್ಭೀತರಾದರು. ಕಳೆದೊಂದು ದಶಕದಲ್ಲಿ ಪಂಜಾಬ್‌ನಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಅರ್ಧದಷ್ಟು ಕೃತ್ಯಗಳ ಹಿಂದೆ ಕೆನಡಾ ಮೂಲದ ಖಾಲಿಸ್ತಾನಿ ಉಗ್ರರ ಕೈವಾಡವಿರುವುದು ಪತ್ತೆಯಾಗಿದೆ ಎನ್ನುತ್ತವೆ ಮೂಲಗಳು.
ಇನ್ನು, ಭಾರತ-ಕೆನಡಾ ಜನಾಂಗೀಯ ಸಂಬಂಧಗಳ ವಿಚಾರ. ಕೆನಡಾದಲ್ಲಿ ಮೊದಲ ಸಿಖ್ ವಲಸಿಗ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವ, ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ರಿಸಾಲ್ದಾರ್ ಮೇಜರ್ ಆಗಿದ್ದ ಕೇಸೂರ್ ಸಿಂಗ್‌ನಿಂದ ಶುರುವಾದ ಕೆನಡಾ-ಸಿಖ್ ಬಾಂಧವ್ಯ ಇಂದು ಬಹುದೂರ ಸಾಗಿ ಬಂದಿದ್ದು, ಕೆನಡಾದ ಪ್ರಬಲ ಸಮುದಾಯವಾಗಿ ಬೆಳೆದಿದೆ. ಇಷ್ಟು ಅವಧಿಯಲ್ಲಿ ಕೆನಡಾದಲ್ಲಿನ ಸಿಖ್ ಸಮುದಾಯ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿದೆ.
ಭಾರತ ಮತ್ತು ಕೆನಡಾ ನಡುವಿನ ಹದಗೆಡುತ್ತಿರುವ ಸಂಬಂಧಗಳು ಕೆನಡಾದಲ್ಲಿರುವ ಸಂಬಂಧಿಕರನ್ನು ಹೊಂದಿರುವ ಪಂಜಾಬ್‌ನ ಸಿಖ್ಖರ ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕೆನಡಾ ನೆಲದಲ್ಲಿ ನಿಂತು, ಭಾರತದಲ್ಲಿನ ಸಮುದಾಯವೊಂದರ ಪ್ರತ್ಯೇಕ ರಾಜ್ಯಕ್ಕಾಗಿ ಉಗ್ರರು ನಡೆಸುತ್ತಿರುವ ಹೋರಾಟ ಇದ್ದಕ್ಕಿದ್ದಂತೆ ತೀವ್ರಗೊಂಡಿರುವ ಹಾಗೆ ಕಾಣಿಸುತ್ತಿರುವ ವಿದ್ಯಮಾನ, ಅಂತರ್‌ರಾಷ್ಟ್ರೀಯ ಸಂಬಂಧಗಳ ಹಿನ್ನೆಲೆಯಲ್ಲಿ ಪಡೆಯಬಹುದಾದ ತಿರುವು ಏನಿದ್ದೀತು ಎಂಬುದು ಕೂಡ ಸದ್ಯಕ್ಕೆ ಉತ್ತರ ಸ್ಪಷ್ಟವಾಗದ ಪ್ರಶ್ನೆ.