ಜಿದ್ದಾಜಿದ್ದಿನ ಕಣಗಳಾಗಿರುವ ರಾಜ್ಯದ ಉಪಚುನಾವಣಾ ಕ್ಷೇತ್ರಗಳು
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿದೆ. ಮೂರೂ ಕ್ಷೇತ್ರಗಳಲ್ಲಿ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಮಧ್ಯೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಇಬ್ಬರು ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಉಪ ಚುನಾವಣೆ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಮೂರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳು ಅಂತಿಮಗೊಂಡಿವೆ. ವಿಶೇಷವೆಂದರೆ, ಮೂರೂ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣದ ಆಟವೂ ಪ್ರಾಮುಖ್ಯತೆ ಪಡೆದಿದೆ. ಎಲ್ಲಿ ಕುಟುಂಬ ರಾಜಕಾರಣ ಗೆಲ್ಲಲಿದೆ ಮತ್ತು ಎಲ್ಲಿ ಏಟು ತಿನ್ನಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿರುವ ಸಂಗತಿಯಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಂದೊಂದು ಕ್ಷೇತ್ರ ಗೆದ್ದಿದ್ದವು. ಬಳಿಕ ಈ ಕ್ಷೇತ್ರಗಳ ಶಾಸಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಕಾರಣದಿಂದ ತೆರವಾಗಿರುವ ಕ್ಷೇತ್ರಗಳಿಗೆ ಈಗ ಉಪ ಚುನಾವಣೆ ನಡೆಯುತ್ತಿದೆ. ಸಂಸದರಾಗಿ ಆಯ್ಕೆಯಾದ ಮಾಜಿ ಸಿಎಂಗಳಾದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ (ಚನ್ನಪಟ್ಟಣ), ಬಿಜೆಪಿಯ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ) ಮತ್ತು ಕಾಂಗ್ರೆಸ್‌ನ ಇ. ತುಕಾರಾಂ (ಸಂಡೂರು-ಎಸ್‌ಟಿ) ರಾಜೀನಾಮೆ ನೀಡಿದ ನಂತರ ಈ ಸ್ಥಾನಗಳು ತೆರವಾಗಿದ್ದವು.
ಮೂರೂ ಕ್ಷೇತ್ರಗಳಿಗೆ ಅಂತಿಮಗೊಂಡಿರುವ ಅಭ್ಯರ್ಥಿಗಳು: 1. ಜೆಎಡಿಎಸ್‌ನ ಕುಮಾರಸ್ವಾಮಿಯವರಿಂದ ತೆರವಾಗಿದ್ದ ಚನ್ನಪಟ್ಟಣದಲ್ಲಿ ಈಗ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ. ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿದಿದ್ದಾರೆ; 2. ಬಿಜೆಪಿಯ ಬಸವರಾಜ ಬೊಮ್ಮಾಯಿಯಿಂದ ತೆರವಾಗಿದ್ದ ಶಿಗ್ಗಾಂವಿಯಲ್ಲಿ ಈ ಸಲದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರ ಪುತ್ರ, ಹೊಸ ಮುಖ ಭರತ್ ಬೊಮ್ಮಾಯಿ. ಕಾಂಗ್ರೆಸ್‌ನಿಂದ ಕಣದಲ್ಲಿರುವವರು ಕಳೆದ ಸಲದ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್; 3. ಕಾಂಗ್ರೆಸ್‌ನ ತುಕಾರಾಂ ಅವರಿಂದ ತೆರವಾಗಿದ್ದ ಸಂಡೂರಿನಲ್ಲಿ ಈ ಸಲದ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ. ಬಿಜೆಪಿಯಿಂದ ಕಣಕ್ಕಿಳಿದಿರುವವರು ಬಂಗಾರು ಹನುಮಂತು. ಗೆದ್ದು ಕ್ಷೇತ್ರ ಬಿಟ್ಟುಕೊಟ್ಟಿದ್ದವರ ಕುಟುಂಬದವರೇ ಈ ಸಲ ಆಯಾ ಪಕ್ಷಗಳ ಅಭ್ಯರ್ಥಿಗಳಾಗಿರುವುದೇ ಈ ಮೂರೂ ಚುನಾವಣಾ ಕಣಗಳ ವಿಶೇಷ. ಇದು ಆಯಾ ಕುಟುಂಬ ಮತ್ತು ಪಕ್ಷಗಳ ಪಾಲಿನ ಅಗ್ನಿಪರೀಕ್ಷೆಯೂ ಹೌದು, ಎದುರಾಳಿಗಳ ಪಾಲಿನ ಸವಾಲೂ ಹೌದು.
ಚನ್ನಪಟ್ಟಣ ಅಖಾಡ:
ಚನ್ನಪಟ್ಟಣ ಬಹಳ ಸ್ಪಷ್ಟವಾಗಿ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿನ ಕಣ. ಈ ಹಿನ್ನೆಲೆಯಲ್ಲಿ, ಅಭ್ಯರ್ಥಿ ಕಣಕ್ಕಿಳಿಸುವ ಹಂತದಲ್ಲಿ ಡಿ.ಕೆ. ಶಿವಕುಮಾರ್ ಗೆದ್ದಿದ್ದಾರೆ. ವೈರಿಯ ವೈರಿಯನ್ನೇ ಕಣಕ್ಕಿಳಿಸಿದ್ದಾರೆ. ಇನ್ನೊಂದೆಡೆ ಮೈತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ತನ್ನ ತೀರ್ಮಾನದ ಮೂಲಕ ಯೋಗೇಶ್ವರ್ ರಾಜಕೀಯವನ್ನೇ ತಣ್ಣಗಾಗಿಸಲು ಬಯಸಿದ್ದ ಕುಮಾರಸ್ವಾಮಿ ತಂತ್ರ ಫಲಿಸಿಲ್ಲ. ಮುನಿಸಿಕೊಂಡ ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಪುತ್ರನನ್ನು ಕಣಕ್ಕಿಳಿಸಿರುವ ಕುಮಾರಸ್ವಾಮಿಗೆ ದೊಡ್ಡ ಸವಾಲಾಗಿದೆ.
ಇನ್ನು ಯೋಗೇಶ್ವರ್ ಚುನಾವಣಾ ರಾಜಕಾರಣ, ಗೆಲುವು ಶುರುವಾದದ್ದೇ ಬಂಡಾಯದಿಂದ. ಕಾಂಗ್ರೆಸ್‌ನಲ್ಲಿದ್ದ ಅವರು 1999ರಲ್ಲಿ ಟಿಕೆಟ್ ಸಿಗದಿದ್ದುದಕ್ಕೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದರು. ಈ ಮೊದಲ ಗೆಲುವಿನ ಬಳಿಕ ಮತ್ತೆ ಕಾಂಗ್ರೆಸ್ ಸೇರಿ 2004 ಮತ್ತು 2008ರ ಚುನಾವಣೆಗಳನ್ನು ಗೆದ್ದರು. ನಂತರ ಆಪರೇಷನ್ ಕಮಲಕ್ಕೊಳಗಾಗಿ ಬಿಜೆಪಿ ಸೇರಿದ್ದ ಅವರಿಗೆ 2009ರ ಉಪ ಚುನಾವಣೆಯಲ್ಲಿ ಸೋಲಾಯಿತು. ಆದರೆ 2011ರ ಉಪ ಚುನಾವಣೆಯಲ್ಲಿ ಗೆದ್ದರು. 2013ರಲ್ಲಿ ಎಸ್‌ಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದ ಅವರು 2018 ಮತ್ತು 2023ರ ಚುನಾವಣೆಗಳಲ್ಲಿ ಕುಮಾರಸ್ವಾಮಿ ಎದುರು ಸೋಲು ಕಂಡಿದ್ದರು. ಇದು ಯೋಗೇಶ್ವರ್ ಎದುರಿಸುತ್ತಿರುವ ಮೂರನೇ ಉಪ ಚುನಾವಣೆ. ಈಗ ಕಾಂಗ್ರೆಸ್‌ಗೆ ಮರಳಿ ಚನ್ನಪಟ್ಟಣದಿಂದ ಕಣಕ್ಕಿಳಿದಿದ್ದು, ಕುಮಾರಸ್ವಾಮಿ ಪುತ್ರ ನಿಖಿಲ್ ಎದುರಾಳಿಯಾಗಿದ್ದಾರೆ. ಈಗಾಗಲೇ ಒಮ್ಮೆ ಲೋಕಸಭೆ ಮತ್ತು ಇನ್ನೊಮ್ಮೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿರುವ ನಿಖಿಲ್ ಅವರಿಗೆ ಈ ಉಪಚುನಾವಣೆ ನಿಜಕ್ಕೂ ಅಗ್ನಿಪರೀಕ್ಷೆಯಾಗಿದೆ.
ಜಾತಿ ಲೆಕ್ಕಾಚಾರ ನೋಡುವುದಾದರೆ, ಚನ್ನಪಟ್ಟಣ ಒಕ್ಕಲಿಗರ ಶಕ್ತಿ ಕೇಂದ್ರ. ಕ್ಷೇತ್ರದಲ್ಲಿ ಪ್ರಸಕ್ತ ಸುಮಾರು 2.32 ಲಕ್ಷ ಮತದಾರರಿದ್ದಾರೆ. ಒಕ್ಕಲಿಗರು -ಸುಮಾರು 1.05 ಲಕ್ಷ; ಮುಸ್ಲಿಮರು -30 ಸಾವಿರ; ದಲಿತರು -40 ಸಾವಿರ; ಬೆಸ್ತರು ಮತ್ತು ತಿಗಳರು -ತಲಾ 10 ಸಾವಿರ; ಇತರ ಹಿಂದುಳಿದ ವರ್ಗದವರು ಸುಮಾರು 25 ಸಾವಿರ; ಲಿಂಗಾಯತರು, ಬ್ರಾಹ್ಮಣರು ಹಾಗೂ ಇನ್ನಿತರ ಮುಂದುವರಿದ ಸಮುದಾಯದವರು -ಸುಮಾರು 5 ಸಾವಿರ. ದಲಿತ, ಮುಸ್ಲಿಮ್, ಒಕ್ಕಲಿಗ ಸಮುದಾಯದ ಹೆಚ್ಚು ಮತಗಳು ಕಾಂಗ್ರೆಸ್ ಪರವಾಗಿದ್ದು ಸಿ.ಪಿ. ಯೋಗೇಶ್ವರ್ ಅವರಿಗೆ ಆನೆ ಬಲ ನೀಡಲಿದೆ. ಇದೆಲ್ಲಾ ವಿಚಾರಗಳನ್ನು ಅಳೆದು ತೂಗಿಯೇ ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದು ಮತ್ತು ಡಿ.ಕೆ. ಶಿವಕುಮಾರ್ ತಂತ್ರಗಾರಿಕೆ ಹಿಂದೆಯೂ ಇದೇ ಲೆಕ್ಕಾಚಾರವಿದೆ.
ಕಳೆದ ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ 96,592 ಮತಗಳು ಸಿಕ್ಕರೆ, ಯೋಗೇಶ್ವರ್ ಅವರಿಗೆ 80,677 ಮತಗಳು ಬಂದಿದ್ದವು. ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಗಂಗಾಧರ್ 15,374 ಮತಗಳನ್ನು ಪಡೆದಿದ್ದರು. ಇದೇ ಲೆಕ್ಕಾಚಾರವನ್ನು ಇಟ್ಟುಕೊಂಡರೆ, ಈ ಬಾರಿ ಯೋಗೇಶ್ವರ್ ತಮ್ಮ ಪಾಲಿನ ಮತಗಳ ಜೊತೆಗೆ ಕಾಂಗ್ರೆಸ್‌ನ ಮತಗಳನ್ನೂ ಪಡೆಯುವುದರಿಂದ ಸಹಜವಾಗಿ ಗೆಲುವು ಅವರದಾಗಬಹುದು. ಅಲ್ಲದೆ ಡಿ.ಕೆ. ಶಿವಕುಮಾರ್ ಬಲವೂ ಇದೆ. ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತಬಲದ ಕೊರತೆ ಕಾಡಲಿದ್ದು, ಯೋಗೇಶ್ವರ್ ಗೆಲುವು ಬಹುತೇಕ ಖಚಿತ ಎನ್ನಲಾಗಿದೆ. ಚನ್ನಪಟ್ಟಣದಲ್ಲಿ ಸೋಲು, ಗೆಲುವು ಎರಡನ್ನೂ ಕಂಡಿರುವ ಯೋಗೇಶ್ವರ್ ಎಲ್ಲ ಚುನಾವಣೆಗಳಲ್ಲಿಯೂ 50,000ಕ್ಕಿಂತ ಹೆಚ್ಚು ಮತಗಳನ್ನೇ ಪಡೆಯುತ್ತ ಬಂದಿದ್ದಾರೆ.
1999ರಿಂದ 2023ರವರೆಗಿನ ಚನ್ನಪಟ್ಟಣ ಚುನಾವಣೆಗಳಲ್ಲಿ ಯೋಗೇಶ್ವರ್ ಪಡೆದಿರುವ ಮತಗಳು: 1999 -50,716 ಮತಗಳು; 2004-64,162 ಮತಗಳು; 2008 -69,356 ಮತಗಳು; 2013 -80,099 ಮತಗಳು; 2018 -66,465 ಮತಗಳು; 2023 -80,677 ಮತಗಳು.
ಎರಡು ಸತತ ಸೋಲುಗಳ ಬಳಿಕ ಯೋಗೇಶ್ವರ್ ಈಗ ಉಪಚುನಾವಣೆ ಕಣದಲ್ಲಿದ್ದಾರೆ. ಹಾಗೆಯೇ ನಿಖಿಲ್ ಕುಮಾರಸ್ವಾಮಿ ಕೂಡ ಎರಡು ಸೋಲುಗಳನ್ನು ಕಂಡ ಬಳಿಕ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಒಡ್ಡಿಕೊಂಡಂತಾಗಿದೆ. ಅವರಿಗಿದು ಬೇಕಿರದ, ಬಲವಂತದ ಮಾಘಸ್ನಾನ ಎಂದೂ ಹೇಳಲಾಗುತ್ತಿದೆ. ಅದೇನೇ ಇದ್ದರೂ, ಇಬ್ಬರಲ್ಲಿ ಯಾರೇ ಸೋತರೂ ಅವರಿಗದು ಸತತ ಮೂರನೇ ಸೋಲಾಗಲಿದೆ. ಯೋಗೇಶ್ವರ್ ಬಿಜೆಪಿಯಿಂದ ಎರಡು ಸಲ ಸೋತ ಬಳಿಕ ಈಗ ಪಕ್ಷ ಬದಲಿಸಿ ಸ್ಪರ್ಧಿಸಿದ್ದಾರೆ. ಆದರೆ ಕ್ಷೇತ್ರ ಬದಲಿಸಿಲ್ಲ. ಇನ್ನು ನಿಖಿಲ್ ಒಂದೇ ಪಕ್ಷದಿಂದ ಮೂರನೇ ಬಾರಿ ಸ್ಪರ್ಧಿಸುತ್ತಿದ್ದರೂ, ಇದು ಅವರು ಕಣಕ್ಕಿಳಿಯುತ್ತಿರುವ ಮೂರನೇ ಕ್ಷೇತ್ರವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಸೋಲು ಕಂಡಿದ್ದರು.
ಸಿ.ಪಿ. ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ನಿಂತರೂ ಸೋಲು ಖಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ‘‘ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದೇವೆ. ನಾನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಚನ್ನಪಟ್ಟಣದಲ್ಲೇ ಇದ್ದು ಚುನಾವಣಾ ಪ್ರಚಾರ ಮಾಡುತ್ತೇನೆ’’ ಎಂದು ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಲು ತಯಾರಾಗಿದ್ದಾರೆ. ಕುಮಾರಸ್ವಾಮಿಯವರಿಗೆ ಕ್ಷೇತ್ರ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೊಂದಿಗೇ ಪುತ್ರನ ಗೆಲುವಿಗಾಗಿಯೂ ಪ್ರತಿಷ್ಠೆ ಪಣಕ್ಕಿಡುವಂತಾಗಿದೆ.
ಶಿಗ್ಗಾಂವಿ ಅಖಾಡ:
ಇಲ್ಲಿ ಪುತ್ರನನ್ನು ಗೆಲ್ಲಿಸಲು ಪ್ರತಿಷ್ಠೆ ಪಣಕ್ಕಿಟ್ಟಿರುವವರು ಬಸವರಾಜ ಬೊಮ್ಮಾಯಿ. ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಶಿಗ್ಗಾಂವಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಇದು 2008ರಿಂದಲೂ ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರ ಮತ್ತು ಪ್ರತಿನಿಧಿಸುತ್ತಿದ್ದವರು ಬಸವರಾಜ ಬೊಮ್ಮಾಯಿ ಎಂಬುದು ಬಿಜೆಪಿ ಗೆಲುವಿಗೆ ಸಹಕಾರಿಯಾಗಬಹುದು. ಕಾಂಗ್ರೆಸ್ ಅಳೆದೂ ಸುರಿದೂ ಕಡೆಗೆ ಯಾಸಿರ್ ಅಹಮದ್ ಖಾನ್ ಪಠಾಣ್ ಅವರಿಗೇ ಮತ್ತೊಮ್ಮೆ ಟಿಕೆಟ್ ನೀಡಿದೆ.
ಆದರೆ ಕಾಂಗ್ರೆಸ್‌ನಲ್ಲಿಯ ಗೊಂದಲಗಳು ಬೀರಬಹುದಾದ ಪರಿಣಾಮಗಳೇನು ಎಂಬ ಪ್ರಶ್ನೆ ಎದ್ದಿದೆ. ಲಿಂಗಾಯತ ಸಮುದಾಯದ ಸಾದರ ಉಪಪಂಗಡಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿಯನ್ನು ಎದುರಿಸಲು ಲಿಂಗಾಯತ ಪಂಚಮಸಾಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯ ಕಾಂಗ್ರೆಸ್‌ನಲ್ಲಿ ಕೇಳಿಬಂದಿತ್ತು. ಆದರೆ ವರಿಷ್ಠರು ಕಡೆಗೆ ಕಳೆದ ಸಲದ ಅಭ್ಯರ್ಥಿಗೇ ಮಣೆ ಹಾಕಿದ್ದಾರೆ. ಅದರ ಪರಿಣಾಮವಾಗಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿ, ಕ್ಷೇತ್ರದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು. ಕಡೆಗೆ ಅವರು ಡಿ.ಕೆ. ಶಿವಕುಮಾರ್ ಮತ್ತು ಝಮೀರ್ ಅಹಮದ್ ಖಾನ್ ಸಂಧಾನದ ಬಳಿಕ ಕಣದಿಂದ ಹಿಂದೆ ಸರಿದಿದ್ದಾರೆ. ತನ್ನ ಒಂದು ಕಾಲದ ಭದ್ರಕೋಟೆಯನ್ನು ಮತ್ತೆ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಅವಕಾಶವಂತೂ ಇದೆ.
ಶಿಗ್ಗಾಂವಿಯಲ್ಲಿ ಲಿಂಗಾಯತ ಹಾಗೂ ಮುಸ್ಲಿಮ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ಧಾರೆ. ಒಟ್ಟು ಮತದಾರರು ಸುಮಾರು 2,26,079. ಲಿಂಗಾಯತರು -80,000ಕ್ಕೂ ಹೆಚ್ಚು; ಮುಸ್ಲಿಮರು -55,000ಕ್ಕೂ ಹೆಚ್ಚು; ಕುರುಬರು -32,000; ಎಸ್‌ಸಿ, ಎಸ್‌ಟಿ -25,000; ಲಂಬಾಣಿ -22,000; ಇತರರು -20,000.
ಸಂಡೂರು ಅಖಾಡ:
1985ರಲ್ಲಿ ಜನತಾ ಪಕ್ಷ, 2004ರಲ್ಲಿ ಜೆಡಿಎಸ್ ಗೆದ್ದಿದ್ದು ಬಿಟ್ಟರೆ, 1978ರಿಂದಲೂ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. 2008ರಿಂದಲೂ ಸತತವಾಗಿ ಗೆಲುವು ಸಾಧಿಸುತ್ತ ಬಂದಿದ್ದ ಇ. ತುಕಾರಾಂ ಸಂಸದರಾದ ಹಿನ್ನೆಲೆಯಲ್ಲಿ ಕ್ಷೇತ್ರ ತೆರವಾಗಿತ್ತು. ಈಗ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರೇ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಅಭ್ಯರ್ಥಿ. ಬಿಜೆಪಿಯಿಂದ ಯುವ ಮುಖಂಡ ಬಂಗಾರು ಹನುಮಂತು ಕಣದಲ್ಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನು ಈ ಸಲವೂ ಉಳಿಸಿಕೊಳ್ಳುವುದು ಸಿಎಂ ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಬಂಗಾರು ಹನುಮಂತು ಸಂಘನಿಷ್ಠರಾಗಿದ್ದು, ವಿಜಯೇಂದ್ರ, ಪ್ರಹ್ಲಾದ್ ಜೋಶಿ, ಜನಾರ್ದನ ರೆಡ್ಡಿ ಮೊದಲಾದ ನಾಯಕರಿಗೆ ಹತ್ತಿರದವರು. ಸಿನೆಮಾವೊಂದರಲ್ಲಿ ನಟಿಸಿದ್ದೂ ಇದೆ. ಆದರೆ ರಾಜಕೀಯ ಅವರ ಕೈಹಿಡಿದಿದೆ.
ಸಂಡೂರು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಪರಿಶಿಷ್ಟ ಪಂಗಡದವರು ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಒಟ್ಟು ಮತದಾರರು -2,21,753. ಎಸ್‌ಟಿ ಸುಮಾರು -54,747; ಎಸ್‌ಸಿ ಸುಮಾರು -39,890; ಮುಸ್ಲಿಮರು ಸುಮಾರು -25,163; ಇತರರು -40,000.
ಮೂರೂ ಕ್ಷೇತ್ರಗಳಲ್ಲಿ ಈ ಸಲ ರಾಜಕೀಯ ಸಮೀಕರಣ ಹೇಗೆಲ್ಲ ಕೆಲಸ ಮಾಡಲಿದೆ ಮತ್ತು ಏನು ಫಲಿತಾಂಶ ಬರಲಿದೆ ಎಂಬುದು ಸದ್ಯಕ್ಕೆ ಕುತೂಹಲಕರ ಸಂಗತಿ.