ವಯನಾಡು ದುರಂತ ಉಳಿಸಿ ಹೋದ ಪ್ರಶ್ನೆಗಳು
ಕಳೆದ ಮಂಗಳವಾರ ತಡರಾತ್ರಿ ಸಂಭವಿಸಿದ ದಿಢೀರ್ ಪ್ರವಾಹ ಮತ್ತು ಗುಡ್ಡ ಕುಸಿತಕ್ಕೆ ಕೇರಳದ ವಯನಾಡಿನ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಈಗ ಕಾಣಿಸುತ್ತಿರುವುದು ಪ್ರಕೃತಿ ವಿಕೋಪದ ಕರಾಳತೆಯಷ್ಟೆ. ಊರೆಲ್ಲ ಬರಿದಾಗಿರುವಲ್ಲಿ ಉಳಿದಿರುವುದು ಬರೀ ನೆನಪು, ಸಂಕಟ ಮತ್ತು ಕಣ್ಣೀರು. ಬಲಿಯಾಗಿ ಹೋಗಿರುವ ನೂರಾರು ಜೀವಗಳು, ನಾಪತ್ತೆಯಾಗಿರುವ ಇನ್ನು ನೂರಾರು ಮಂದಿ. ರಾತ್ರಿ ಕಳೆದು ಬೆಳಗಾಗುವಾಗ ಬದುಕೇ ಬದಲಾಗಿ, ಛಿದ್ರವಾಗಿ ಹೋದುದನ್ನು ನೆನೆಯುತ್ತ ರಕ್ಷಣಾ ಶಿಬಿರದೊಳಗೆ ಕಂಗೆಟ್ಟು ಕೂತಿರುವ ಸಾವಿರಾರು ಸಂತ್ರಸ್ತರು. ದೇವರ ನಾಡು ದಿಕ್ಕೆಟ್ಟಿದೆ.
ಕೇರಳದಲ್ಲಿ ಇಂಥ ದುರಂತ ಇದೇ ಮೊದಲಲ್ಲ. 2019ರ ಆಗಸ್ಟ್ 8ರಂದು ಇದೇ ವಯನಾಡ್ ಜಿಲ್ಲೆಯ ಮೆಪ್ಪಾಡಿ ಸಮೀಪದ ಪುತ್ತುಮಲ ಗ್ರಾಮದ ಸುತ್ತಮತ್ತ 24 ಗಂಟೆಗಳಲ್ಲಿ 50 ಸೆಂ.ಮೀ. ಮಳೆ ಸುರಿದಿತ್ತು. ಪರಿಣಾಮವಾಗಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಆ ತೀವ್ರತೆಗೆ 20 ಹೆಕ್ಟೇರ್‌ನಷ್ಟು ಭೂಮಿ 2 ಕಿ.ಮೀ.ನಷ್ಟು ದೂರಕ್ಕೆ ಸರಿದಿತ್ತು.
ನೂರಾರು ಎಕರೆ ಚಹ ತೋಟ ಕೊಚ್ಚಿಹೋಗಿತ್ತು. ಆಗ 17 ಮಂದಿ ಬಲಿಯಾಗಿದ್ದರು. ಪೂತ್ತುಮಲ ಭೂಕುಸಿತದ ನೆನಪಿನ್ನೂ ಕಾಡುತ್ತಿರುವಾಗಲೇ ಈಗ ವಯನಾಡಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕರಾಳ ಚಿತ್ರಗಳನ್ನು ಕೇರಳದ ನೆಲದಲ್ಲಿ ಬಹುಕಾಲ ಉಳಿಸಿಬಿಡುವ ದುರಂತ ಇದಾಗಿದೆ.
ಇನ್ನು ಪ್ರವಾಹದ ವಿಚಾರ ಗಮನಿಸಿದರೆ, ಕೇರಳದಲ್ಲಿ ಕರಾಳ ನೆನಪಾಗಿ ಉಳಿದಿರುವುದು 2018ರ ದುರಂತ. 2018ರ ಆಗಸ್ಟ್ 14ರಿಂದ 19ರವರೆಗೆ ಕೇರಳದಲ್ಲಿ ಸುರಿದ ಭಾರೀ ಮಳೆಗೆ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಉಂಟಾದ ಪ್ರವಾಹಕ್ಕೆ 480ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. 1924ರ ಮಹಾಪೂರದ ನಂತರ ಕೇರಳ ಕಂಡಿದ್ದ ಭೀಕರ ಪ್ರವಾಹ ಸ್ಥಿತಿ ಅದಾಗಿತ್ತು.
ವಯನಾಡ್ ದುರಂತಕ್ಕೆ ಕಾರಣಗಳೇನು?:
ದಕ್ಷಿಣ ಏಶ್ಯದ ಅರಬಿ ಸಮುದ್ರ ತೀವ್ರವಾಗಿ ಬಿಸಿಯಾಗುತ್ತಿದೆ. ಹೀಗಾಗಿ ಹವಾಮಾನ ಅಸ್ಥಿರತೆ ತಲೆದೋರುತ್ತದೆ ಮತ್ತು ಪ್ರವಾಹ, ಭಾರೀ ಮಳೆ ಭೂಕುಸಿತಕ್ಕೆ ಕಾರಣವಾಗುತ್ತದೆ. ಕೇರಳದಲ್ಲಿ ಈಗ ಆಗಿರುವುದು ಇದೇ. ಮೊದಲು ಈ ಸ್ಥಿತಿ ಉತ್ತರ ಕೊಂಕಣ ಬೆಲ್ಟ್‌ನಲ್ಲಿ ಆಗುತ್ತಿತ್ತು. ಈಗ ಹವಾಮಾನ ಬದಲಾವಣೆಯಿಂದಾಗಿ ದಕ್ಷಿಣದ ಕಡೆಗೆ ತಿರುಗಿದೆ.
ದೇಶ ಹವಾಮಾನ ಬದಲಾವಣೆ ಎಂಬ ಅತ್ಯಂತ ಅಪಾಯದ ಸನ್ನಿವೇಶದಲ್ಲಿ ಸಿಲುಕಿದೆ. ಈಗ ನೋಡುತ್ತಿರುವ ಈ ಭೀಕರ ಘಟನೆಗಳು ಇನ್ನೂ ಆರಂಭಿಕ ಹಂತದ ಹವಾಮಾನ ಬದಲಾವಣೆಯ ಪರಿಣಾಮವಷ್ಟೆ. ಈಗಲೇ ಜಾಗರೂಕರಾಗದೆ ಹೋದರೆ ಮುಂದಿನ ದಿನಗಳು ಎಂಥದಿರಬಹುದೆಂಬುದನ್ನು ಉಹಿಸುವುದೂ ಕಷ್ಟ. ಲಡಾಖ್, ಬೆಂಗಳೂರು, ಜೋಶಿಮಠ, ದಿಲ್ಲಿ, ಸಿಕ್ಕಿಂ, ಅಸ್ಸಾಂ, ಕೇರಳಗಳಲ್ಲೆಲ್ಲ ಕಾಣುತ್ತಿರುವ ವೈಪರೀತ್ಯಗಳು ಹವಾಮಾನ ಬಿಕ್ಕಟ್ಟಿನ ಪರಿಣಾಮಗಳೇ ಆಗಿವೆ.
ಈ ಹಿಂದಿನ ವರ್ಷಗಳಲ್ಲಿ ನಡೆದ ಅಧ್ಯಯನಗಳು ಕೂಡ, ಕೇರಳದಲ್ಲಿನ ಈ ದುರಂತಕ್ಕೆ ಹವಾಮಾನ ಬದಲಾವಣೆ, ಅರಣ್ಯ ನಾಶ ಮತ್ತದು ಸೂಕ್ಷ್ಮ ಪ್ರದೇಶವಾಗಿರುವುದೇ ಕಾರಣ ಎನ್ನುತ್ತಿವೆ.
1.ವಯನಾಡಿನಲ್ಲಿ ಅರಣ್ಯ ನಾಶ ಕುರಿತು 2022ರಲ್ಲಿ ನಡೆದ ಅಧ್ಯಯನದ ಪ್ರಕಾರ, 1950ರಿಂದ 2018ರವರೆಗಿನ ಅವಧಿಯಲ್ಲಿ ಶೇ.62ರಷ್ಟು ಅರಣ್ಯನಾಶವಾಗಿದೆ. ಇದೇ ಸಮಯದಲ್ಲಿ ತೋಟಗಳಿರುವ ಪ್ರದೇಶ ಶೇ.1,800ರಷ್ಟು ಹೆಚ್ಚಿದೆ.
2.ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್‌ಮೆಂಟಲ್ ರಿಸರ್ಚ್ ಪಬ್ಲಿಕ್ ಹೆಲ್ತ್ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಅಧ್ಯಯನ ವರದಿ ಪ್ರಕಾರ, 1950ರವರೆಗೆ ವಯನಾಡಿನ ಒಟ್ಟು ಪ್ರದೇಶದ ಶೇ.85ರಷ್ಟು ಭಾಗ ಅರಣ್ಯದಿಂದ ಕೂಡಿತ್ತು.
3.ಇಸ್ರೋ ವರದಿಯ ಪ್ರಕಾರ, ಪಶ್ಚಿಮ ಘಟ್ಟಗಳು ಹಾಗೂ ಕೊಂಕಣ ಪ್ರದೇಶಗಳ, ಅಂದರೆ ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿನ ಪ್ರದೇಶಗಳ ಪೈಕಿ 0.09 ಚದರ ಕಿ.ಮೀ.ನಷ್ಟು ಪ್ರದೇಶ ಭೂಕುಸಿತದ ಅಪಾಯ ಎದುರಿಸುತ್ತಿದೆ.
4.ಸ್ಪ್ರಿಂಗರ್ ನಿಯತಕಾಲಿಕದಲ್ಲಿ 2021ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೇರಳದಲ್ಲಿ ಭೂಕುಸಿತದ ಅಪಾಯ ಎದುರಿಸುತ್ತಿರುವ ಪ್ರದೇಶಗಳೆಲ್ಲ ಪಶ್ಚಿಮಘಟ್ಟಗಳ ವ್ಯಾಪ್ತಿಗೇ ಬರುತ್ತವೆ. ಅಂಥ ಬಹುತೇಕ ಪ್ರದೇಶಗಳು ಇಡುಕ್ಕಿ, ಎರ್ನಾಕುಲಂ, ಕೊಟ್ಟಾಯಂ, ವಯನಾಡ್, ಕೋಯಿಕ್ಕೋಡ್, ಮಲಪ್ಪುರಂ ಜಿಲ್ಲೆಗಳಲ್ಲಿವೆ. ಅಲ್ಲದೆ, ಕೇರಳದಲ್ಲಿನ ಭೂಕುಸಿತಗಳ ಪೈಕಿ ಶೇ.59ರಷ್ಟು ಪ್ರಕರಣಗಳು ತೋಟಗಳಿರುವ ಪ್ರದೇಶಗಳಲ್ಲಿಯೇ ಸಂಭವಿಸಿವೆ.
5.ಕೊಚ್ಚಿ ವಿವಿಯ ಅಡ್ವಾನ್ಸ್ಡ್ ಸೆಂಟರ್ ಫಾರ್ ಅಟ್ಮಾಸ್ ಪಿಯರಿಕ್ ರೇಡಾರ್ ರಿಸರ್ಚ್ ಕಂಡುಕೊಂಡಿರುವ ಪ್ರಕಾರ, ಹವಾಮಾನ ಬದಲಾವಣೆಯ ಪರಿಣಾಮವಾಗಿ ಹವಾಮಾನ ಅಸ್ಥಿರತೆ ತಲೆದೋರುತ್ತಿದೆ. ಇದು ದಟ್ಟವಾದ ಮೋಡಗಳನ್ನು ಉಂಟುಮಾಡುವುದರಿಂದಾಗಿ ದೇಶದ ಪಶ್ಚಿಮ ಕರಾವಳಿಯಲ್ಲಿ ಅತಿ ಕಡಿಮೆ ಸಮಯದಲ್ಲಿ ಅತ್ಯಧಿಕ ಮಳೆಯಾಗುತ್ತದೆ.
ವಯನಾಡ್ ಜಿಲ್ಲೆಯ ನಾಲ್ಕು ಗ್ರಾಮಗಳು ನಾಮಾವಶೇಷ ಆಗುತ್ತಿದ್ದಂತೆ ಮನುಷ್ಯ ಕೃತ ಅಪರಾಧ ಎಂಬ ಆಕ್ಷೇಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ 2011ರಲ್ಲಿ ಮಾಧವ್ ಗಾಡ್ಗೀಳ್ ಸಮಿತಿ ಸಲ್ಲಿಸಿದ್ದ ವರದಿಯನ್ನು ನಿರ್ಲಕ್ಷಿಸಿದ್ದೇ ಈ ಘೋರ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಕಲ್ಲುಗಣಿಗಾರಿಕೆ, ಕ್ವಾರಿಗಳಿಗೆ ಅವಕಾಶ ನೀಡದಿರುವಂತೆ ಗಾಡ್ಗೀಳ್ ವರದಿಯಲ್ಲಿ ಸೂಚಿಸಲಾಗಿತ್ತು. ಈಗ ದುರಂತ ನಡೆದಿರುವ ಮುಂಡಕ್ಕೈ, ಮೆಪ್ಪಾಡಿ, ಚೂರಲ್‌ಮಲ ಸುತ್ತಮುತ್ತಲ ಗ್ರಾಮಗಳನ್ನೇ ವರದಿಯಲ್ಲಿಯೂ ಉಲ್ಲೇಖಿಸಲಾಗಿತ್ತು. ಅದರ ನಂತರ 2013ರಲ್ಲಿ ಕಸ್ತೂರಿ ರಂಗನ್ ಸಮಿತಿ ಸಲ್ಲಿಸಿದ್ದ ವರದಿಯನ್ನೂ ಕೇರಳ ಸರಕಾರ ವಿರೋಧಿಸಿತ್ತು. ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿರುವ 123 ಹಳ್ಳಿಗಳ ವ್ಯಾಪ್ತಿಯ 13,108 ಚದರ ಕಿ.ಮೀ. ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಪರಿಗಣಿಸಲು ಕಸ್ತೂರಿ ರಂಗನ್ ವರದಿ ಶಿಫಾರಸು ಮಾಡಿತ್ತು. 123 ಹಳ್ಳಿಗಳ ಪೈಕಿ 60 ಹಳ್ಳಿಗಳು ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳಿಗೆ ಸೇರಿವೆ. ಗಣಿಗಾರಿಕೆ, ಕ್ವಾರಿ, ಮರ ಕಡಿಯುವುದು, ಕೈಗಾರಿಕೆ ಸ್ಥಾಪನೆ, ಕಟ್ಟಡ ನಿರ್ಮಾಣದಂಥ ಚಟುವಟಿಕೆಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಅದರೆ ಅದರ ವಿರುದ್ಧ ವ್ಯಾಪಕ ಪ್ರತಿಭಟನೆಗಳ ಬಳಿಕ 13,108 ಚದರ ಕಿ.ಮೀ. ವ್ಯಾಪ್ತಿಯಲ್ಲಿನ 3,100 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯದಿಂದ ಹೊರಗಿಡಲಾಯಿತು. ಇಷ್ಟಾದ ಮೇಲೂ ಕಸ್ತೂರಿ ರಂಗನ್ ವರದಿ ಜಾರಿಗೆ 2014, 2015, 2017, 2018 ಹಾಗೂ 2022 ಹೀಗೆ ಒಟ್ಟು ಐದು ಬಾರಿ ಕೇಂದ್ರ ಸರಕಾರ ಅಧಿಸೂಚನೆ ಪ್ರಕಟಿಸಿದೆ. ಆದರೆ ಪ್ರತೀ ಬಾರಿಯೂ ವಿರೋಧ ವ್ಯಕ್ತವಾಗಿ, ವರದಿ ಜಾರಿ ವಿಚಾರ ಮುಂದಕ್ಕೆ ಹೋಗುತ್ತಲೇ ಇದೆ.
ಇಸ್ರೋ ಅಂಗಸಂಸ್ಥೆ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಸಿದ್ಧಪಡಿಸಿರುವ ದೇಶದ ಭೂಕುಸಿತ ನಕ್ಷೆಯಲ್ಲಿ, 17 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಭೂಕುಸಿತ ಸಂಭವಿಸಿರುವ ಮತ್ತು ಅಂಥ ಸಾಧ್ಯತೆಯಿರುವ ಜಿಲ್ಲೆ ಮತ್ತು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗಿದೆ. ಅದರ ಪ್ರಕಾರ, ಭೂಕುಸಿತದ ಅಪಾಯ ಎದುರಿಸುತ್ತಿರುವ ಜಿಲ್ಲೆಗಳು 147. ಈ ಪಟ್ಟಿಯಲ್ಲಿ ಕೇರಳದ ಎಲ್ಲ ಜಿಲ್ಲೆಗಳೂ ಇವೆ.
ಪ್ರತಿಕೂಲ ಹವಾಮಾನ, ಅಕಾಲಿಕ ಹಾಗೂ ಅಸಮರ್ಪಕ ಮಳೆ, ಅತಿಯಾದ ಮಾನವ ಹಸ್ತಕ್ಷೇಪ ಭೂಕುಸಿತಕ್ಕೆ ಕಾರಣ. ಕಳೆದ 20 ವರ್ಷಗಳ ದಾಖಲೆಗಳ ಪ್ರಕಾರ, ದೇಶದ ದಕ್ಷಿಣ ರಾಜ್ಯಗಳಲ್ಲಿ ಭೂಕುಸಿತ ಪ್ರಮಾಣ ಹೆಚ್ಚಿದೆ. 2015ರಿಂದ 2022ರವರೆಗೆ ದೇಶದಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣಗಳು 3,782; ಇವುಗಳಲ್ಲಿ ಕೇರಳವೊಂದರಲ್ಲೇ ಸಂಭವಿಸಿದ ಪ್ರಕರಣಗಳು 2,239. ದೇಶದ ಒಟ್ಟು ಭೂಪ್ರದೇಶದ ಶೇ.4.3ರಷ್ಟು ಭೂಮಿ ಅಪಾಯದಲ್ಲಿದೆ.
ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಪ್ರಕಾರ, ಯಾವಾಗ ಬೇಕಾದರೂ ಭೂಮಿ ಕುಸಿಯಬಹುದಾದ ಅಪಾಯ ಹೆಚ್ಚಿರುವ ಪ್ರದೇಶಗಳು: ಅರುಣಾಚಲ ಪ್ರದೇಶ 71,000 ಚದರ ಕಿ.ಮೀ.; ಹಿಮಾಚಲ ಪ್ರದೇಶ 42,000 ಚದರ ಕಿ.ಮೀ.; ಲಡಾಖ್ 40,000 ಚದರ ಕಿ.ಮೀ.; ಉತ್ತರಾಖಂಡ 39,000 ಚದರ ಕಿ.ಮೀ.; ಕರ್ನಾಟಕ 31,000 ಚದರ ಕಿ.ಮೀ.
ಇನ್ನು, ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ 11 ಜನರನ್ನು ಬಲಿ ತೆಗೆದುಕೊಂಡಿದೆ.ಇದು ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜನರಲ್ಲಿ ಮತ್ತೊಮ್ಮೆ ಭೂಕುಸಿತದ ಕರಾಳತೆಯ ನೆನಪುಗಳನ್ನು ಎಬ್ಬಿಸಿದೆ.
ಭೂಕುಸಿತ ಕರ್ನಾಟಕದಲ್ಲಿಯೂ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ 7 ಜಿಲ್ಲೆಗಳ 30 ತಾಲೂಕುಗಳಲ್ಲಿ ಪ್ರತೀ ಮಳೆಗಾಲದಲ್ಲೂ ಭೂಕುಸಿತ ಸಂಭವಿಸುತ್ತದೆ.
ಕೆಲವು ಭೀಕರ ದುರಂತಗಳನ್ನು ಗಮನಿಸುವುದಾದರೆ,
2009ರಲ್ಲಿ ಕಾರವಾರದ ಕಡವಾಡ ಸಮೀಪ ಸಂಭವಿಸಿದ ಭೂಕುಸಿತವೇ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಈ ಶತಮಾನದ ಮೊದಲ ಭೂಕುಸಿತ ಎನ್ನಲಾಗುತ್ತದೆ.
2018ರಲ್ಲಿ ಇಡೀ ರಾಜ್ಯವನ್ನೇ ನಡುಗಿಸಿದ ಭೂಕುಸಿತ ಕೊಡಗಿನಲ್ಲಿ ಸಂಭವಿಸಿತು. 20 ಮಂದಿ ಸಾವಿಗೀಡಾಗಿ, 18,000 ಜನ ನೆಲೆ ಕಳೆದುಕೊಂಡಿದ್ದರು.
ಭೂಕುಸಿತಕ್ಕೆ ಕಾರಣಗಳೇನು?:
ಬೆಟ್ಟಗಳಲ್ಲಿನ ಗಣಿಗಾರಿಕೆ, ಗುಡ್ಡ ಕೊರೆತ, ಕಲ್ಲುಗಣಿಗಳಲ್ಲಿನ ಸ್ಫೋಟ, ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳು, ಅರಣ್ಯನಾಶ ಮತ್ತು ಅದರಿಂದ ಉಂಟಾಗುವ ಭೂಸವಕಳಿ, ನೀರಿನ ಸಹಜ ಹರಿವಿಗೆ ಒಡ್ಡಲಾಗುವ ತಡೆ, ದಿಢೀರ್ ಸೃಷ್ಟಿಯಾಗುವ ಪ್ರವಾಹ, ಭಾರೀ ಮಳೆ ಮತ್ತು ದೀರ್ಘಾವಧಿ ಮಳೆ, ಮಣ್ಣಿನ ರಚನೆಯಂಥ ಭೂವಿಜ್ಞಾನದ ಕಾರಣಗಳು ಭೂಕುಸಿತದ ಹಿಂದಿವೆ. ಅಭಿವೃದ್ಧಿಯ ಹೆಸರಲ್ಲಿನ ಅವೈಜ್ಞಾನಿಕ ಕ್ರಮಗಳು ಭೂಕುಸಿತಗಳಿಗೆ ಕಾರಣವಾಗುತ್ತವೆ. ಉದಾಹರಣೆಗೆ, ಕೊಡಗಿನಂಥ ಕಡೆಗಳಲ್ಲಿ ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ರೆಸಾರ್ಟ್‌ಗಳು, ಹೋಂ ಸ್ಟೇಗಳ ನಿರ್ಮಾಣ, ಬೆಟ್ಟ, ಗುಡ್ಡ, ಅರಣ್ಯ, ಹೊಳೆಯ ಪ್ರದೇಶಗಳನ್ನೆಲ್ಲ ಮೋಜು ಮಸ್ತಿಗೆ ಬೇಕಾಗುವಂತೆ ಬಳಸಿಕೊಳ್ಳುತ್ತಿರುವುದರ ಪರಿಣಾಮ ನೆಲದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ.
ಹೋಂ ಸ್ಟೇಗಳ ಆಶಯವೇ ಒಂದು, ಅವುಗಳ ಈಗಿನ ಸ್ವರೂಪವೇ ಇನ್ನೊಂದು. ಪ್ರವಾಸಕ್ಕೆ ಹೋದವರು ಆ ಊರಿನ ಸಂಸ್ಕೃತಿ, ಆಹಾರ ಪದ್ಧತಿ ತಿಳಿಯಲು ಅಲ್ಲಿನ ಮನೆಯೊಂದರಲ್ಲಿ ವಾಸ್ತವ್ಯವಿದ್ದು, ಊಟೋಪಚಾರ ಸವಿಯಬೇಕು ಎಂಬ ಪರಿಕಲ್ಪನೆ ಈಗ ಮಾಯವಾಗಿದೆ. ಅವು ಈಗ ದುಡ್ಡು ಮಾಡುವ ದಾರಿಯಾಗಿ, ಅಕ್ರಮ ಚಟುವಟಿಕೆಗಳಿಗೂ ಬಳಕೆಯಾಗುತ್ತಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೋಂ ಸ್ಟೇಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದ್ದು, ಹೆಚ್ಚಿನವು ಅನಧಿಕೃತ ಹೋಂ ಸ್ಟೇಗಳೇ ಆಗಿವೆ ಎನ್ನುತ್ತವೆ ವರದಿಗಳು. ಅನೇಕ ಹೋಂ ಸ್ಟೇಗಳು ಒತ್ತುವರಿ ಜಾಗದಲ್ಲಿಯೇ ನಿರ್ಮಾಣವಾಗಿರುತ್ತವೆ ಎಂದೂ ಹೇಳಲಾಗುತ್ತದೆ.
ವಿವಿಧ ನಿರ್ಮಾಣ ಕಾಮಗಾರಿಗಳಿಗಾಗಿ ಭಾರೀ ಯಂತ್ರಗಳ ಬಳಕೆಯಿಂದ ಮಣ್ಣು ಸಡಿಲಗೊಳ್ಳುವುದು, ಭೂಪರಿವರ್ತನೆ ಸಂದರ್ಭದಲ್ಲಿ ಸರಕಾರ ತೋರಿಸುವ ನಿರ್ಲಕ್ಷ್ಯ, ಪರಿಸರದ ಬಗ್ಗೆ ಕಾಳಜಿಯೇ ಇಲ್ಲವಾಗಿರುವುದು ಇವೆಲ್ಲವೂ ಭೂಮಿಯನ್ನು ದುರ್ಬಲಗೊಳಿಸುತ್ತಿವೆ.
ಹವಾಮಾನ ಬದಲಾವಣೆಯ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಕೇಳಿದ ಗಂಭೀರ ಪ್ರಶ್ನೆಗೆ ದೇಶದ ಪ್ರಧಾನಿ ‘‘ಹವಾಮಾನ ಬದಲಾಗಿಲ್ಲ, ನಮಗೆ ವಯಸ್ಸಾದಂತೆ ಚಳಿ, ಸೆಖೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ’’ ಎಂದು ಹೇಳಿದರೆ ನಮ್ಮ ಸರಕಾರ ಈ ಗಂಭೀರ ಸಮಸ್ಯೆ ಬಗ್ಗೆ ಅದೆಷ್ಟು ಗಂಭೀರವಾಗಿದೆ ಎಂದು ಇಡೀ ಜಗತ್ತು ತಿಳಿದು ಕೊಳ್ಳುತ್ತದೆ.
ಇನ್ನಾದರೂ, ಈಗಲಾದರೂ ಎಚ್ಚೆತ್ತುಕೊಳ್ಳದೆ ಹೋದರೆ, ರಾಜಕೀಯವನ್ನು ಬದಿಗಿಟ್ಟು, ಪರಿಸರ ಮತ್ತು ಭೂಮಿಯ ಕಾಳಜಿ ವಹಿಸದೆ ಹೋದರೆ, ಪ್ರಕೃತಿಯೇ ಲಯಕಾರಕವಾಗಿ ಬದಲಾಗುತ್ತದೆ. ಆಗ ಕ್ಷಮೆಯೂ ಇರುವುದಿಲ್ಲ, ರಕ್ಷಣೆಯೂ ಇರುವುದಿಲ್ಲ,
ಕರ್ನಾಟಕದಲ್ಲಿ ಭೂಕುಸಿತದ ಅಪಾಯ ಇರುವ ಜಿಲ್ಲೆಗಳು, ತಾಲೂಕುಗಳು:
ಉತ್ತರ ಕನ್ನಡ ಜಿಲ್ಲೆ: ಅಂಕೋಲಾ, ಹೊನ್ನಾವರ, ಕಾರವಾರ, ಕುಮಟಾ, ಸಿದ್ಧಾಪುರ, ಶಿರಸಿ, ಜೊಯಿಡಾ, ಯಲ್ಲಾಪುರ, ಭಟ್ಕಳ.
ಶಿವಮೊಗ್ಗ ಜಿಲ್ಲೆ: ಹೊಸನಗರ, ಸಾಗರ, ತೀರ್ಥಹಳ್ಳಿ.
ಉಡುಪಿ ಜಿಲ್ಲೆ: ಹೆಬ್ರಿ, ಬೈಂದೂರು, ಕಾರ್ಕಳ, ಕುಂದಾಪುರ.
ಚಿಕ್ಕಮಗಳೂರು ಜಿಲ್ಲೆ: ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ.
ದಕ್ಷಿಣ ಕನ್ನಡ ಜಿಲ್ಲೆ: ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಕಡಬ, ಸುಳ್ಯ, ಪುತ್ತೂರು.
ಕೊಡಗು ಜಿಲ್ಲೆ: ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ
ಕರ್ನಾಟಕದಲ್ಲಿನ ಭೂಕುಸಿತ ಪ್ರಕರಣಗಳು:
2016 125 ಪ್ರಕರಣಗಳು
2017 219 ಪ್ರಕರಣಗಳು
2018 462 ಪ್ರಕರಣಗಳು 26 ಮಂದಿ ಸಾವು
2019 161 ಪ್ರಕರಣಗಳು 10 ಸಾವು
2020 264 ಪ್ರಕರಣಗಳು 7 ಸಾವು
2021 66 ಪ್ರಕರಣಗಳು 1 ಸಾವು