ಟ್ರಂಪ್ ಸುಂಕ: ಭಾರತಕ್ಕಿರುವ ಸವಾಲುಗಳು ಮತ್ತು ಅವಕಾಶಗಳು

ಭಾಗ- 1
ಟ್ರಂಪ್ ಸುಂಕ ನೀತಿ ಜಗತ್ತನ್ನು ಬೆಚ್ಚಿಬೀಳಿಸಿದೆ. ಶತಮಾನದಲ್ಲಿಯೇ ಅತ್ಯಂತ ಹೆಚ್ಚಿನ ಅಮೆರಿಕ ಸುಂಕಗಳು ಇವಾಗಿವೆ ಎನ್ನಲಾಗಿದೆ. ಭಾರತ ಸೇರಿದಂತೆ ಜಗತ್ತಿನ 180 ದೇಶಗಳು ಟ್ರಂಪ್ ಪ್ರತಿಸುಂಕಕ್ಕೆ ಗುರಿಯಾಗಿವೆ. ಅಮೆರಿಕಕ್ಕೆ ಆಮದಾಗುವ ಎಲ್ಲಾ ದೇಶಗಳ ಉತ್ಪನ್ನಗಳ ಮೇಲೆ ಅವರು ಶೇ. 10ರಷ್ಟು ಮೂಲ ತೆರಿಗೆ ಘೋಷಿಸಿದ್ದಾರೆ. ಇದೇ ವೇಳೆ, ಅಮೆರಿಕದೊಂದಿಗೆ ಹೆಚ್ಚುವರಿ ವ್ಯಾಪಾರ ನಡೆಸುವ ಅನೇಕ ರಾಷ್ಟ್ರಗಳ ಮೇಲೆ ಹೆಚ್ಚಿನ ತೆರಿಗೆ ದರಗಳನ್ನು ಘೋಷಿಸಿದ್ದಾರೆ. ಸುಮಾರು 60 ದೇಶಗಳ ಮೇಲೆ ಇಂತಹ ಅತಿ ಹೆಚ್ಚು ಸುಂಕಗಳನ್ನು ಹೇರಲಾಗಿದೆ. ಕನಿಷ್ಠ ಶೇ. 10ರಿಂದ ಶುರುವಾಗಿ ಶೇ. 50ರವರೆಗೂ ಅವರು ತೆರಿಗೆ ವಿಧಿಸಿದ್ದಾರೆ. ಶೇ. 10ರ ಸಾರ್ವತ್ರಿಕ ಸುಂಕ ಎಪ್ರಿಲ್ 5ರಿಂದಲೇ ಜಾರಿಗೆ ಬಂದಿದೆ. ಆದರೆ ಪ್ರತಿಸುಂಕಗಳು ಕೆಲ ನಿರ್ದಿಷ್ಟ ದೇಶಗಳ ಮೇಲೆ ಎಪ್ರಿಲ್ 9ರಿಂದ ಜಾರಿಯಾಗಲಿವೆ.
ಚೀನಾಕ್ಕೆ ಟ್ರಂಪ್ ಪ್ರತಿಸುಂಕದ ಮೂಲಕ ಬಹಳ ದೊಡ್ಡ ಹೊಡೆತ ಕೊಟ್ಟಿದ್ದಾರೆ. ಆಸ್ಟ್ರೇಲಿಯಕ್ಕೆ ಹೊಂದಿಕೊಂಡಂತಿರುವ ಜನರೇ ಇಲ್ಲದ ದ್ವೀಪಗಳಿಗೂ ಟ್ರಂಪ್ ಸುಂಕ ವಿಧಿಸಿರುವುದು ಲೇವಡಿಗೆ ತುತ್ತಾಗಿದೆ. ಮೆಕ್ಸಿಕೊ, ಕೆನಡಾ ದೇಶಗಳಲ್ಲಿನ ಸುಂಕ ವ್ಯವಸ್ಥೆಯಲ್ಲಿ ಮಾತ್ರವೇ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲವೆಂದಿದ್ದಾರೆ. ಮೆಕ್ಸಿಕೊ ಮತ್ತು ಕೆನಡಾ ಹೊಸ ಪ್ರತಿಸುಂಕದಿಂದ ಪಾರಾಗಿದ್ದರೂ, ಈ ವರ್ಷದ ಆರಂಭದಲ್ಲಿ ವಿಧಿಸಲಾದ ಶೇ. 25 ಸುಂಕಗಳ ಹೊರೆ ಅವುಗಳ ಮೇಲೆ ಇದೆ. ಮೋದಿ ಮಿತ್ರ ಟ್ರಂಪ್ ಭಾರತದ ಮೇಲೂ ದೊಡ್ಡ ಬರೆಯನ್ನೇ ಎಳೆದಿದ್ದಾರೆ. ಭಾರತದ ಮೇಲೆ ಶೇ. 26ರ ಪ್ರತಿಸುಂಕ ಹೇರಲಾಗಿದೆ.
ಸುಂಕದ ವಿಚಾರದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಟ್ರಂಪ್ ದೂಷಿಸಿದ್ದಾರೆ. ವೈರಿ ರಾಷ್ಟ್ರಗಳು ಮಾತ್ರವಲ್ಲ, ಮಿತ್ರರಾಷ್ಟ್ರಗಳೂ ಅಮೆರಿಕವನ್ನು ಲೂಟಿ ಮಾಡಿವೆ ಎಂದು ಅವರು ಕಿಡಿ ಕಾರಿದ್ದಾರೆ. 50 ವರ್ಷಗಳಿಗೂ ಹೆಚ್ಚು ಕಾಲ ವಂಚಿಸಲಾಗಿದೆ, ಆದರೆ ಅದು ಇನ್ನು ಮುಂದೆ ಆಗುವುದಿಲ್ಲ ಎಂದಿದ್ದಾರೆ. ನಾವೀಗ ಎಲ್ಲವನ್ನೂ ಬದಲಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ ಮತ್ತು ಅವರು ಮಾಡಿರುವ ಈ ಬದಲಾವಣೆ ವಿಶ್ವ ಆರ್ಥಿಕತೆಗೆ ದೊಡ್ಡ ಹೊಡೆತವಾಗುವುದು ಸ್ಪಷ್ಟವಾಗಿದೆ.
ಕೆಲವು ಪ್ರಮುಖ ದೇಶಗಳ ಮೇಲಿನ ಟ್ರಂಪ್ ಸುಂಕಗಳನ್ನು ನೋಡುವುದಾದರೆ,
ಚೀನಾ ಈಗಾಗಲೇ ಇರುವ ಶೇ. 20 ಸುಂಕ ಮತ್ತು ಈಗ ಹೇರಲಾಗಿರುವ ಶೇ.34 ಸೇರಿ ಒಟ್ಟು ಶೇ. 54, ವಿಯೆಟ್ನಾಂ ಶೇ. 46, ಜಪಾನ್ ಶೇ. 24, ದಕ್ಷಿಣ ಕೊರಿಯ ಶೇ. 25, ಭಾರತ ಶೇ. 26, ತೈವಾನ್ ಶೇ. 32, ಥಾಯ್ಲೆಂಡ್ ಶೇ. 36, ಯೂರೋಪಿಯನ್ ಒಕ್ಕೂಟ ಶೇ. 20, ಇಸ್ರೇಲ್ ಶೇ. 17 ಮತ್ತು ಕಾಂಬೋಡಿಯಾ ಶೇ. 49.
ವಿಶ್ವನಾಯಕರು, ಪರಿಣಿತರು ಹೇಳಿರುವುದೇನು?
ಇದು ಜಗತ್ತಿನ ಆರ್ಥಿಕ ವ್ಯವಸ್ಥೆಯ ಮೇಲೆ ಟ್ರಂಪ್ ಎಸೆದಿರುವ ಅಣುಬಾಂಬ್ ಎಂದು ಐಎಂಎಫ್ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕೆನೆತ್ ರಾಗಫ್ ಹೇಳಿದ್ದಾರೆ.
ಇದರ ಭೀಕರ ಪರಿಣಾಮಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕಾಡಲಿವೆ.
ದಿನಸಿ, ಸಾರಿಗೆ ಮತ್ತು ಔಷಧಿಗಳು ಹೆಚ್ಚು ವೆಚ್ಚದಾಯಕವಾಗಲಿವೆ. ವಿಶೇಷವಾಗಿ ಅತ್ಯಂತ ದುರ್ಬಲ ವರ್ಗದ ಜನ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಐರೋಪ್ಯ ಒಕ್ಕೂಟದ ಉರ್ಸುಲಾ ವಾನ್ ಡೆರ್ ಲೇಯೆನ್ ಪ್ರತಿಕ್ರಿಯಿಸಿದ್ದಾರೆ.
ಇದು ಅಮೆರಿಕದ ಆರ್ಥಿಕತೆಗೆ ಮಾತ್ರವಲ್ಲ, ಜಾಗತಿಕ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸುವಂತಿದೆ.
ಅನೇಕ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು ಎಂದು ಫಿಚ್ ರೇಟಿಂಗ್ಸ್‌ನ ಅಮೆರಿಕದ ಆರ್ಥಿಕ ಸಂಶೋಧನೆಯ ಮುಖ್ಯಸ್ಥ ಓಲು ಸೊನೊಲಾ ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಸುಂಕಕ್ಕೆ ವಿವಿಧ ದೇಶಗಳ ಪ್ರತಿಕ್ರಿಯೆ ಏನು?
ಹೊಸ ಸುಂಕಗಳಿಂದ ಚೀನಾಕ್ಕೆ ತೀವ್ರ ಹೊಡೆತ ಬಿದ್ದಿದೆ. ಚೀನಾದ ಆಮದುಗಳ ಮೇಲಿನ ಒಟ್ಟು ಸುಂಕ ಶೇ. 54 ಆಗಿದೆ. ಸುಂಕಗಳನ್ನು ತಕ್ಷಣ ರದ್ದುಗೊಳಿಸುವಂತೆ ಚೀನಾ ಒತ್ತಾಯಿಸಿದ್ದು, ಇದು ಜಾಗತಿಕ ಆರ್ಥಿಕ ಅಭಿವೃದ್ಧಿಗೆ ಅಪಾಯಕಾರಿಯಲ್ಲದೆ, ಅಮೆರಿಕದ ಹಿತಾಸಕ್ತಿಗಳು ಮತ್ತು ಅಂತರ್‌ರಾಷ್ಟ್ರೀಯ ಪೂರೈಕೆ ಸರಪಳಿಗಳಿಗೆ ಹಾನಿ ಮಾಡುತ್ತದೆ ಎಂದು ಎಚ್ಚರಿಸಿದೆ. ತನ್ನ ಸ್ವಂತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ದೃಢನಿಶ್ಚಯದಿಂದ ಪ್ರತಿಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಚೀನಾದ ವಾಣಿಜ್ಯ ಸಚಿವಾಲಯ ಹೇಳಿದ್ದು, ಅಮೆರಿಕದ ವಿರುದ್ಧ ಪ್ರತಿಸುಂಕ ಘೋಷಿಸಿದೆ. ಆದರೆ ಈ ಹೆಚ್ಚಿನ ಸುಂಕಗಳು ಯುಎಸ್-ಚೀನಾ ದ್ವಿಪಕ್ಷೀಯ ವ್ಯಾಪಾರ ಪ್ರಮಾಣ ಹಾಗೂ ಯುಎಸ್ ಜೊತೆಗಿನ ಚೀನಾದ ವ್ಯಾಪಾರ ಹೆಚ್ಚುವರಿಯನ್ನು ಕಡಿಮೆ ಮಾಡಿಲ್ಲ. ಚೀನಾ ವಿರುದ್ಧದ ಯುಎಸ್ ಸುಂಕ ಯುದ್ಧ ಪರಿಣಾಮ ಬೀರುವುದಿಲ್ಲ ಎಂದೇ ಹೆಚ್ಚಿನವರು ಭಾವಿಸುತ್ತಾರೆ.
ಯುಕೆ ಮೇಲೆ ಶೇ. 10 ಪ್ರತಿಸುಂಕ ಹೇರಲಾಗಿದೆ. ವ್ಯಾಪಾರ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ, ಅದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲ ಎಂದು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ.
ದಕ್ಷಿಣ ಕೊರಿಯಾ ಮೇಲೆ ಶೇ. 25 ಸುಂಕ ಹೇರಲಾಗಿದೆ. ಹಾನಿ ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಚಿಸುವುದಾಗಿ ದಕ್ಷಿಣ ಕೊರಿಯಾದ ಪ್ರಧಾನಿ ಹಾನ್ ಡಕ್-ಸೂ ಹೇಳಿದ್ದಾರೆ.
ಜಪಾನ್ ಶೇ. 24 ಸುಂಕ ಎದುರಿಸಬೇಕಾಗಿದೆ. ಜಪಾನ್ ಅಮೆರಿಕಕ್ಕೆ ಅತಿದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿರುವ ದೇಶ. ಇಷ್ಟು ಸುಂಕ ಹೇರಿಕೆ ಎಷ್ಟು ಸರಿ ಎಂದು ಅಚ್ಚರಿಯಾಗುತ್ತದೆ ಎಂದು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಹೇಳಿದ್ದಾರೆ. ಈ ಏಕಪಕ್ಷೀಯ ಸುಂಕ ಕ್ರಮ ಅತ್ಯಂತ ವಿಷಾದಕರ ಎಂದು ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಯೋಜಿ ಮುಟೊ ಹೇಳಿದ್ದಾರೆ. ಯುಎಸ್ ಸುಂಕಗಳು ಮತ್ತು ಅವುಗಳ ಪರಿಣಾಮವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗುವುದು ಎಂದು ಜಪಾನ್‌ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.
ಆಸ್ಟ್ರೇಲಿಯ ಮೇಲೆ ಶೇ. 10 ಸುಂಕ ವಿಧಿಸಲಾಗಿದೆ. ಹೊಸ ಸುಂಕ ಪದ್ಧತಿ ಮಿತ್ರರಾಷ್ಟ್ರದ ವಿರುದ್ಧದ ಪ್ರತಿಕೂಲ ಕೃತ್ಯವಾಗಿದೆ ಎಂದು ಆಸ್ಟ್ರೇಲಿಯ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.
ನ್ಯೂಝಿಲ್ಯಾಂಡ್ ಮೇಲೆ ಶೇ. 10 ಸುಂಕ ಇದೆ. ಇದು ಪ್ರಪಂಚದಾದ್ಯಂತ ನಿಜವಾದ ಒತ್ತಡವನ್ನು ಉಂಟುಮಾಡುತ್ತದೆ ಎಂದು ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಹೇಳಿದ್ದಾರೆ.
ತೈವಾನ್ ಶೇ. 32 ಸುಂಕ ಎದುರಿಸಬೇಕಾಗಿದೆ. ಇದು ತುಂಬಾ ಅಸಮಂಜಸ ಮತ್ತು ಈ ವಿಷಯವನ್ನು ಅಮೆರಿಕ ಸರಕಾರದೊಂದಿಗೆ ಚರ್ಚಿಸುವುದಾಗಿ ತೈವಾನ್ ಸರಕಾರ ಹೇಳಿದೆ.
ಥಾಯ್ಲೆಂಡ್ ಮೇಲೆ ಶೇ. 36 ಸುಂಕ ಹೇರಲಾಗಿದೆ. ಇದು ಅನಿವಾರ್ಯವಾಗಿ ಎಲ್ಲಾ ವ್ಯಾಪಾರ ಪಾಲುದಾರರ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಅಮೆರಿಕದ ಗ್ರಾಹಕರ ಖರೀದಿ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಥಾಯ್ ಸರಕಾರ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ಮೇಲೆ ಏನು ಪರಿಣಾಮ?
ಭಾರತ ಟ್ರಂಪ್ ಸುಂಕದ ಸವಾಲುಗಳನ್ನು ಎದುರಿಸಲು ಸಾಧ್ಯವಿದೆ ಎಂದು ವರದಿಗಳು ಹೇಳುತ್ತಿವೆ. ಭಾರತ ವ್ಯಾಪಾರ ವಿವಾದವನ್ನು ಮಾಡಿಕೊಳ್ಳುವ ಬದಲು ಅಮೆರಿಕದೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಕೆಲವು ಆರಂಭಿಕ ನಕಾರಾತ್ಮಕ ಮಾರುಕಟ್ಟೆ ಪ್ರತಿಕ್ರಿಯೆ ಇದ್ದರೂ, ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎನ್ನುತ್ತದೆ ವರದಿ.
ಟ್ರಂಪ್ ಸುಂಕ ಭಾರತದ ಜಿಡಿಪಿಗೆ ಅಲ್ಪಾವಧಿಯಲ್ಲಿ ಶೇ. 0.1ರಷ್ಟು ಮಾತ್ರ ಪರಿಣಾಮ ಬೀರುತ್ತದೆ ಎಂದು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಪಿಎಚ್‌ಡಿಸಿಸಿಐ) ಹೇಳಿದೆ. ಭಾರತದ ಪ್ರಬಲ ದೇಶೀಯ ಉತ್ಪಾದನೆ ಮತ್ತು ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗಳು, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಅಂಥ ಕಾರ್ಯತಂತ್ರಗಳ ಪರಿಣಾಮವಾಗಿ ಇದು ಹೆಚ್ಚಿನ ಹೊಡೆತ ಕೊಡಲಾರದು ಎಂದು ಪಿಎಚ್‌ಡಿಸಿಸಿಐ ಅಧ್ಯಕ್ಷ ಹೇಮಂತ್ ಜೈನ್ ಹೇಳಿದ್ದಾರೆ.
ಈ ಸುಂಕಗಳಿಂದ ಭಾರತದ ಮೇಲೆ ಕೆಟ್ಟ ಪರಿಣಾಮಗಳೇನೂ ಇರುವುದಿಲ್ಲ ಎಂದು ಅಸ್ಸೋಚಾಮ್ ಅಧ್ಯಕ್ಷ ಸಂಜಯ್ ನಾಯರ್ ಹೇಳಿದ್ದಾರೆ. ಚೀನಾ, ವಿಯೆಟ್ನಾಂ, ತೈವಾನ್, ಥಾಯ್ಲೆಂಡ್ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ಏಶ್ಯನ್ ಮತ್ತು ಯುರೋಪಿಯನ್ ರಾಷ್ಟ್ರಗಳ ಮೇಲೆ ಹೆಚ್ಚಿನ ಪ್ರತಿಸುಂಕ ವಿಧಿಸುವ ಟ್ರಂಪ್ ಕ್ರಮದಿಂದಾಗಿ, ಜಾಗತಿಕ ವ್ಯಾಪಾರ ಮತ್ತು ಉತ್ಪಾದನೆಯಲ್ಲಿ ಭಾರತ ತನ್ನ ಸ್ಥಾನ ಬಲಪಡಿಸಲು ಅವಕಾಶವಾಗಲಿದೆ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ. ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋ-ಸಂಬಂಧಿತ ಸರಕುಗಳ ಭಾರತೀಯ ರಫ್ತುಗಳು ಶೇ. 25 ಸುಂಕ ಎದುರಿಸಬೇಕಾಗಿದೆ. ಆದರೆ ಔಷಧಗಳು, ಸೆಮಿ ಕಂಡಕ್ಟರ್, ತಾಮ್ರ ಮತ್ತು ಇಂಧನ ಉತ್ಪನ್ನಗಳಿಗೆ ತೆರಿಗೆ ಇರುವುದಿಲ್ಲ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಆದರೆ, ಅಮೆರಿಕ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿರುವುದರಿಂದ, ವ್ಯಾಪಕ ಪ್ರತಿಸುಂಕಗಳು ಭಾರತದ ರಫ್ತಿಗೆ ಗಮನಾರ್ಹ ಸವಾಲನ್ನು ಒಡ್ಡುತ್ತವೆ ಎಂದು ಕೈಗಾರಿಕಾ ಸಂಸ್ಥೆ ಐಇಎಸ್‌ಎ ಹೇಳಿದೆ.
ಹೊಸ ಸುಂಕಗಳು ಅಮೆರಿಕದ ಕೆಲವು ದೊಡ್ಡ ವ್ಯಾಪಾರ ಪಾಲುದಾರ ದೇಶಗಳನ್ನು ಗುರಿಯಾಗಿಸಿಕೊಂಡಿವೆ.
ಚೀನಾ ಈಗ ಅನೇಕ ಸರಕುಗಳ ಮೇಲೆ ಶೇ. 50ಕ್ಕಿಂತ ಹೆಚ್ಚಿನ ಸುಂಕಗಳನ್ನು ಎದುರಿಸುತ್ತಿದೆ.
ಯುರೋಪಿಯನ್ ಒಕ್ಕೂಟ, ಜಪಾನ್, ವಿಯೆಟ್ನಾಂ ಮತ್ತಿತರ ದೇಶಗಳ ಮೇಲೆಯೂ ಭಾರೀ ಸುಂಕ ಹೇರಲಾಗಿದೆ. ಈ ಕ್ರಮ ಸಂಬಂಧಿತ ದೇಶಗಳಿಂದ ಪ್ರತೀಕಾರಕ್ಕೂ ಕಾರಣವಾಗಬಹುದು ಎನ್ನಲಾಗಿದೆ. ಜಾಗತಿಕ ವ್ಯಾಪಾರ ಹರಿವಿನಲ್ಲಿ ಸಂಭಾವ್ಯ ಅಡಚಣೆಗಳ ಬಗ್ಗೆ ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಅಮೆರಿಕದ ಆರ್ಥಿಕ ಬೆಳವಣಿಗೆಯ ಮೇಲಿನ ಪರಿಣಾಮದ ಬಗ್ಗೆ ಹೂಡಿಕೆದಾರರು ಭಯಭೀತರಾಗಿದ್ದಾರೆ.
ಭಾರತದ ಮೇಲಿನ ಶೇ. 26 ಸುಂಕ, ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕಿಂತ ಹೆಚ್ಚಾಗಿದೆ. ಮೋದಿಗೆ ಟ್ರಂಪ್ ಮಿತ್ರರಾಗಿರುವುದರ ಹೊರತಾಗಿಯೂ, ಭಾರತದ ಮೇಲೆ ಸುಂಕ ಹೆಚ್ಚಳ ತಪ್ಪಲಿಲ್ಲ. ಭಾರತದ ಮೇಲೆ ಹೇರಲಾದ ಸುಂಕ ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ವಿಧಿಸಲಾದ ಸುಂಕಗಳಿಗಿಂತ ಹೆಚ್ಚು.
ಹೋಲಿಸಿ ನೋಡುವುದಾದರೆ,
ಯುರೋಪಿಯನ್ ಒಕ್ಕೂಟದ ಮೇಲೆ ಶೇ. 20 ಸುಂಕ, ಜಪಾನ್ ಮೇಲೆ ಶೇ. 24, ದಕ್ಷಿಣ ಕೊರಿಯಾದ ಮೇಲೆ ಶೇ. 25. ಆದರೆ ಇದು ಚೀನಾದ ಮೇಲೆ ವಿಧಿಸಲಾದ ಅತಿ ಹೆಚ್ಚಿನ ಶೇ. 54 ಸುಂಕಕ್ಕಿಂತ ಬಹಳ ಕಡಿಮೆ.
ಚೀನಾದ ಮೇಲೆ ಈಗಾಗಲೇ ಶೇ. 20 ಸುಂಕ ಇತ್ತು. ಈಗ ಮತ್ತೆ ಹೊಸದಾಗಿ ಶೇ. 34 ಪ್ರತಿಸುಂಕವನ್ನು ಚೀನಾ ಮೇಲೆ ವಿಧಿಸಲಾಗಿದೆ. ಒಟ್ಟಾರೆಯಾಗಿ ಅದರ ಮೇಲೆ ಈಗ ಶೇ. 54 ಸುಂಕ ಹೇರಿದಂತಾಗಿದೆ.
ವಿಯೆಟ್ನಾಂ ಮೇಲೆ ಶೇ. 46, ಥಾಯ್ಲೆಂಡ್ ಮೇಲೆ ಶೇ. 36, ಇಂಡೋನೇಶ್ಯ ಮೇಲೆ ಶೇ. 32 ಸುಂಕ ವಿಧಿಸಲಾಗಿದೆ.
ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮೇಲೆ ಕಡಿಮೆ ಸುಂಕಗಳನ್ನು ಹಾಕಲಾಗಿದೆ. ಉದಾಹರಣೆಗೆ ಯುಕೆ ಮೇಲೆ ಶೇ. 10, ಸ್ವಿಟ್ಸರ್‌ಲ್ಯಾಂಡ್ ಮೇಲೆ ಶೇ. 34 ಸುಂಕ ಇದೆ. ಆದರೆ ಈ ದೇಶಗಳು ಪ್ರಮುಖ ರಫ್ತು ವಿಭಾಗಗಳಲ್ಲಿ ಭಾರತದೊಂದಿಗೆ ನೇರವಾಗಿ ಸ್ಪರ್ಧಿಸುವುದಿಲ್ಲ. ಏಶ್ಯದ ಆರ್ಥಿಕತೆಗಳಲ್ಲಿ, ಶೇ. 24 ಸುಂಕ ಎದುರಿಸುತ್ತಿರುವ ಮಲೇಶ್ಯ ಮಾತ್ರ ಕೆಲವು ವಲಯಗಳಲ್ಲಿ ಭಾರತದೊಂದಿಗೆ ಸ್ಪರ್ಧಿಸುತ್ತಿದೆ.
ಸುಂಕಗಳನ್ನು ಘೋಷಿಸಿದ ಟ್ರಂಪ್, ಮೋದಿಯನ್ನು ಉತ್ತಮ ಸ್ನೇಹಿತ ಎಂದು ಬಣ್ಣಿಸಿದರಾದರೂ, ಭಾರತದ ವ್ಯಾಪಾರ ನೀತಿಗಳಿಗೆ ಪ್ರತಿಯಾಗಿ ತಾವು ಹೇರಿರುವ ಸುಂಕವನ್ನು ಸಮರ್ಥಿಸಿಕೊಂಡಿದ್ದಾರೆ. ‘‘ಮೋದಿ ನನ್ನ ಸ್ನೇಹಿತ. ಆದರೆ ಅವರು ಅಮೆರಿಕವನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’’ ಎಂದು ಅವರು ದೂಷಿಸಿದ್ದಾರೆ.
ಟ್ರಂಪ್ ಸುಂಕಗಳಿಂದ ಕೆಲ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆಯೆ?
ಟ್ರಂಪ್ ಸುಂಕ ತಪ್ಪಿಸಿಕೊಳ್ಳಲು ಮೋದಿ ಸರಕಾರ ಅಮೆರಿಕಕ್ಕೆ ವ್ಯಾಪಾರೋದ್ಯಮ ವಿಷಯದಲ್ಲಿ ಹಲವು ರಿಯಾಯಿತಿಗಳನ್ನು ನೀಡಿತ್ತು. ಆದರೂ, ಟ್ರಂಪ್ ಸುಂಕ ತಪ್ಪಿಲ್ಲ. ಇದು ಮೋದಿ ಸರಕಾರಕ್ಕೆ ಹಿನ್ನಡೆ ಎಂಬುದಂತೂ ನಿಜ. ಜವಳಿ, ಇಂಜಿನಿಯರಿಂಗ್ ಸರಕುಗಳು, ಇಲೆಕ್ಟ್ರಾನಿಕ್ಸ್, ರತ್ನಗಳು ಮತ್ತು ಆಭರಣಗಳು ಸೇರಿದಂತೆ ಪ್ರಮುಖ ರಫ್ತು ವಲಯಗಳು ಸುಂಕದ ಹೊರೆ ಎದುರಿಸಬೇಕಾಗಿದೆ ಎಂದು ಹೇಳಲಾಗುತ್ತಿದೆ. ಆದರೂ, ಭಾರತ ತನ್ನ ಕೆಲ ಪ್ರತಿಸ್ಪರ್ಧಿ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂಬ ಸಮಾಧಾನವೂ ವ್ಯಕ್ತವಾಗುತ್ತಿದೆ. ಇಲ್ಲಿ ಮಿಶ್ರ ಪರಿಣಾಮ ಬೀರಬಹುದು, ಭಾರತಕ್ಕೆ ಹಿನ್ನಡೆಯಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಉಲ್ಲೇಖಿಸಿದೆ.