ರಾಜಕೀಯದ ಭಾಗವಾಗುತ್ತಿರುವ ವಿಶ್ವವಿದ್ಯಾನಿಲಯಗಳು

ವಿಶ್ವವಿದ್ಯಾನಿಲಯಗಳ ವಿಚಾರದಲ್ಲಿ ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ. ಮೊದಲನೆಯದು, ಕರ್ನಾಟಕದ 9 ಹೊಸ ವಿವಿಗಳ ಕಥೆ. ಎರಡನೆಯದಾಗಿ, ಯುಜಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿಶ್ವವಿದ್ಯಾನಿಲಯಗಳಲ್ಲಿನ ಬೋಧಕರು ಮತ್ತು ಸಿಬ್ಬಂದಿ ನೇಮಕಾತಿಗೆ ಕನಿಷ್ಠ ಅರ್ಹತಾ ಮಾನದಂಡಗಳ ಕರಡು ನಿಯಮಗಳು.
ಕರ್ನಾಟಕದ 10 ಹೊಸ ವಿಶ್ವವಿದ್ಯಾನಿಲಯಗಳ ಪೈಕಿ ಬೀದರ್ ವಿವಿ ಹೊರತುಪಡಿಸಿ ಉಳಿದ 9 ವಿವಿಗಳ ಕಥೆ ಅತಿ ಶೋಚನೀಯ. ಈ ಹೊಸ ವಿವಿಗಳಿಗೆ ಸೂಕ್ತ ಆದಾಯವಿಲ್ಲ, ಅನುದಾನವೂ ಇಲ್ಲ, ಗುತ್ತಿಗೆ ಸಿಬ್ಬಂದಿಗೆ ಸಂಬಳವೇ ಇಲ್ಲ. ಹೊಸ ವಿವಿಗಳ ಸ್ಥಿತಿ ಹೀಗಾದರೆ, ಇನ್ನು ಪ್ರಮುಖ 6 ವಿವಿಗಳಿಗೆ ಕಳೆದ ಹಲವು ತಿಂಗಳುಗಳಿಂದ ನಿಯಮಿತ ಅಥವಾ ಪೂರ್ಣಾವಧಿ ವಿಸಿಗಳೇ ಇಲ್ಲ. 9 ಹೊಸ ವಿವಿಗಳ ವಿಷಯವಾಗಿ ಸರಕಾರದ ಮಟ್ಟದಲ್ಲೇ ಅಸಮಾಧಾನವಿದೆ. ಯಾವುದೇ ಪೂರ್ವಸಿದ್ಧತೆಯಿಲ್ಲದೆ, ಅನುದಾನವಿಲ್ಲದೆ, ಕನಿಷ್ಠ ಸೌಲಭ್ಯವೂ ಇಲ್ಲದೆ ಅವುಗಳನ್ನು ಆರಂಭಿಸಲಾಗಿದೆ ಎಂಬ ಆರೋಪಗಳಿವೆ. ಹೆಸರಿಗಷ್ಟೇ ವಿವಿಗಳಾಗಿರುವ ಅವುಗಳಿಗೆ ವಿಸಿ ನೇಮಕವಾಗಿರುವುದು ಬಿಟ್ಟರೆ, ಉಳಿದ ಯಾವುದೇ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆದಿಲ್ಲ ಎಂಬ ವರದಿಯಿದೆ.
ಆ 9 ವಿವಿಗಳೆಂದರೆ, ಬೆಂಗಳೂರಿನ ನೃಪತುಂಗ ಕ್ಲಸ್ಟರ್ ವಿವಿ, ಮಹಾರಾಣಿ ಕ್ಲಸ್ಟರ್ ವಿವಿ, ಮಂಡ್ಯ ವಿಶ್ವವಿದ್ಯಾನಿಲಯ, ಹಾಸನ ವಿಶ್ವವಿದ್ಯಾನಿಲಯ, ಚಾಮರಾಜನಗರ ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾನಿಲಯ, ಬಾಗಲಕೋಟೆ ವಿಶ್ವವಿದ್ಯಾನಿಲಯ, ಕೊಪ್ಪಳ ವಿಶ್ವವಿದ್ಯಾನಿಲಯ, ಹಾವೇರಿ ವಿಶ್ವವಿದ್ಯಾನಿಲಯ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ವಿವಿಗಳ ರಚನೆಯಾಯಿತು. ಐದು ವರ್ಷಗಳೇ ಕಳೆದಿವೆ. ಹೊಸ ವಿವಿಗಳಿಗೆ ಪ್ರಮುಖ ಕಾಲೇಜುಗಳ ಹಸ್ತಾಂತರ ಪ್ರಕ್ರಿಯೆ ನಡೆಯದೇ ಇರುವುದು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮರು ಹಂಚಿಕೆಯಾಗದೇ ಇರುವುದು, ಭೂಮಿ ವರ್ಗಾವಣೆ ಆಗದೇ ಇರುವುದು ಇಂಥ ಹಲವು ಸಮಸ್ಯೆಗಳಿವೆ. ಕೆಲ ವಿವಿಗಳ ಗುತ್ತಿಗೆ ನೌಕರರಿಗೆ 4 ತಿಂಗಳಿಂದ ವೇತನವೇ ಇಲ್ಲವೆಂಬ ವರದಿಯಿದೆ. ಕೊಡಗು ವಿವಿಗೆ ಮೈಸೂರು ವಿವಿಯಿಂದ ಹಸ್ತಾಂತರವಾಗಬೇಕಿದ್ದ ಪ್ರಮುಖ ಕಾಲೇಜುಗಳ ಹಸ್ತಾಂತರ ಪ್ರಕ್ರಿಯೆಯೇ ನಡೆಯದೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಹಾಸನ, ಕೊಡಗು ವಿವಿಗಳಿಗೆ ಎರಡು ವರ್ಷಗಳಿಂದ ಅನುದಾನ ಬಂದಿಲ್ಲ. ಚಾಮರಾಜನಗರ, ಕೊಪ್ಪಳ, ಬಾಗಲಕೋಟೆ ವಿವಿಗಳಿಗೆ ಈವರೆಗೂ ಸರಕಾರದಿಂದ ಅನುದಾನ ಬಂದೇ ಇಲ್ಲ.
ಇತ್ತೀಚಿನ ವರದಿಯ ಪ್ರಕಾರ, ಈ 9 ವಿವಿಗಳನ್ನು ಮುಚ್ಚಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ಉಪ ಸಮಿತಿ ಈ ವಿವಿಗಳನ್ನು ಮುಚ್ಚುವ ಪ್ರಸ್ತಾವವನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದೆ. ತನ್ನ ವ್ಯಾಪ್ತಿಯಲ್ಲಿ 150 ಕಾಲೇಜುಗಳನ್ನು ಹೊಂದಿದ್ದು, ಎಲ್ಲ ಸೌಕರ್ಯಗಳೊಂದಿಗಿರುವ ಬೀದರ್ ವಿವಿಯನ್ನು ಮಾತ್ರ ಮುಂದುವರಿಸಲು ಸಂಪುಟ ಉಪ ಸಮಿತಿ ಯೋಚಿಸಿದೆ ಎಂದು ವರದಿಯಾಗಿತ್ತು.
ಆದರೆ ಶುಕ್ರವಾರ ವಿಧಾನಸಭೆಯಲ್ಲಿ ಮಾತಾಡಿರುವ ಸಿಎಂ ಸಿದ್ದರಾಮಯ್ಯ, ಯಾವುದೇ ವಿವಿ ಮುಚ್ಚುವ ನಿರ್ಧಾರ ತೆಗೆದುಕೊಂಡಿಲ್ಲ, ಹೊಸ ವಿವಿಗಳನ್ನು ಮುಂದುವರಿಸಬೇಕೋ, ಬೇಡವೋ ಎಂಬ ಬಗ್ಗೆ ಅಧ್ಯಯನ ಮಾಡಲು ಸಂಪುಟ ಉಪಸಮಿತಿ ರಚಿಸಲಾಗಿದೆ. ಅದು ಇನ್ನೂ ವರದಿಯನ್ನೇ ಕೊಟ್ಟಿಲ್ಲ, ಅದಕ್ಕೂ ಮೊದಲೇ ವಿವಿಗಳನ್ನು ಮುಚ್ಚಲಾಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಹೊಸ ವಿವಿಗಳ ವಿಚಾರ ಇದಾದರೆ, ಇನ್ನು 6 ವಿವಿಗಳಲ್ಲಿ ಪೂರ್ಣಾವಧಿ ಉಪಕುಲಪತಿಗಳಿಲ್ಲ. ನೇಮಕಾತಿಗಳ ವಿಳಂಬದಿಂದಾಗಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ವಿಸಿ ಹುದ್ದೆಗಳಿಗೆ ತೀವ್ರ ಲಾಬಿ ಇರುವುದೇ ವಿಳಂಬಕ್ಕೆ ಕಾರಣ ಎಂಬ ಅಭಿಪ್ರಾಯಗಳಿವೆ. ಈಗಾಗಲೇ ಹಣದ ಕೊರತೆ ಮತ್ತು ಸಿಬ್ಬಂದಿ ಕೊರತೆಯಂತಹ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ವಿವಿಗಳಲ್ಲಿನ ಈ ಉನ್ನತ ಹುದ್ದೆಯೇ ಖಾಲಿ ಬಿದ್ದಿರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಹಂಗಾಮಿ ಕುಲಪತಿಗಳೇ ಮುನ್ನಡೆಸುತ್ತಿರುವ 6 ವಿವಿಗಳೆಂದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ, ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯ, ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ, ಗುಲ್ಬರ್ಗ ವಿಶ್ವವಿದ್ಯಾನಿಲಯ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ರಾಯಚೂರು ವಿಶ್ವವಿದ್ಯಾನಿಲಯ.
ತಜ್ಞರ ಪ್ರಕಾರ, ಹಂಗಾಮಿ ಕುಲಪತಿಗಳಿಗೆ ನಿಯಮಿತ ಕುಲಪತಿಗಳ ಸಂಪೂರ್ಣ ಅಧಿಕಾರವಿದ್ದರೂ, ನೇಮಕಾತಿಗಳಂತಹ ವಿಷಯಗಳ ಬಗ್ಗೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ. ಹಂಗಾಮಿ ಕುಲಪತಿಗಳು ತಮ್ಮ ಅಧೀನ ಅಧಿಕಾರಿಗಳು ತಮ್ಮ ನಿರ್ದೇಶನಗಳನ್ನು ಪಾಲಿಸುವುದಿಲ್ಲ ಎಂಬ ಭಯದಿಂದ ಅನೇಕ ವಿಷಯಗಳ ಬಗ್ಗೆ ಕ್ರಮಕ್ಕೆ ಹಿಂಜರಿಯುತ್ತಾರೆ ಎನ್ನಲಾಗುತ್ತದೆ.
ಪೂರ್ಣಾವಧಿ ವಿಸಿಗಳನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿರುವ ಬಗ್ಗೆ ವರದಿಯಿದೆ. ಹಿಂದಿನ ಬಿಜೆಪಿ ಸರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮತ್ತು ಹಣವನ್ನು ಒದಗಿಸುವ ಬಗ್ಗೆ ಗಮನ ಹರಿಸದೆ ಹೊಸ ವಿಶ್ವವಿದ್ಯಾನಿಲಯಗಳನ್ನು ಘೋಷಿಸುವಲ್ಲಿ ಮಾತ್ರ ನಿರತವಾಗಿತ್ತು ಎಂದು ಅವರು ಟೀಕಿಸಿದ್ದಾರೆ ಎಂದು ವರದಿ ಹೇಳುತ್ತದೆ.
ಕುಲಪತಿ ಹುದ್ದೆ ರಾಜಕೀಯ ನೇಮಕಾತಿಯಾಗಿರುವುದರಿಂದ, ಅಭ್ಯರ್ಥಿಯ ಅರ್ಹತೆಯನ್ನಲ್ಲದೆ, ಜಾತಿ ಅಥವಾ ಸಮುದಾಯವನ್ನು ಪರಿಗಣಿಸಿದ ನಂತರವೇ ನೇಮಕಾತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬ ಮಾತುಗಳೂ ಇವೆ.
ಈಗ ವಿವಿಗಳಿಗೆ ಸಂಬಂಧಿಸಿದಂತೆ ಚರ್ಚೆಯಲ್ಲಿರುವ ವಿಷಯವೆಂದರೆ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶ್ವವಿದ್ಯಾನಿಲಯಗಳಲ್ಲಿನ ಬೋಧಕರು ಮತ್ತು ಸಿಬ್ಬಂದಿ ನೇಮಕಾತಿಗೆ ಕನಿಷ್ಠ ಅರ್ಹತಾ ಮಾನದಂಡಗಳ ಕರಡು ನಿಯಮಗಳು. ಯುಜಿಸಿ ಕರಡು ನಿಯಮಗಳಿಗೆ ಭಾರೀ ಟೀಕೆಗಳು ಬಂದಿವೆ. ಈ ನಿಯಮಗಳು ವಿವಿಗಳ ಸ್ವಾಯತ್ತತೆ, ರಾಜ್ಯಗಳ ಅಧಿಕಾರ ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಅಪಾಯಕಾರಿ ಎಂಬ ಆತಂಕ ವ್ಯಕ್ತವಾಗಿದೆ. ಬಿಜೆಪಿ ವಿರೋಧಿ ಪಕ್ಷಗಳ ಸರಕಾರಗಳಿರುವ 6 ರಾಜ್ಯಗಳು ಒಟ್ಟಾಗಿ ಈ ನಿಯಮಗಳನ್ನು ವಿರೋಧಿಸಿದ್ದು, ಹಿಂಪಡೆಯುವಂತೆ ಒತ್ತಾಯಿಸಿವೆ. ಅಂತಹ 6 ರಾಜ್ಯಗಳೆಂದರೆ, ಕರ್ನಾಟಕ, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ತೆಲಂಗಾಣ.
ಈ ರಾಜ್ಯಗಳ ಉನ್ನತ ಶಿಕ್ಷಣ ಸಚಿವರು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ, ನಿಯಮಗಳಿಗೆ ತಮ್ಮ ವಿರೋಧವನ್ನು ವಿವರಿಸುವ 15 ಅಂಶಗಳ ಜಂಟಿ ನಿರ್ಣಯ ಅಂಗೀಕರಿಸಿದ್ದಾರೆ. ಜಂಟಿ ನಿರ್ಣಯದಲ್ಲಿನ ಅಂಶಗಳು ಹೀಗಿವೆ:
1. ಸರಕಾರಿ ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡುವಲ್ಲಿ ರಾಜ್ಯ ಸರಕಾರಗಳು ಪ್ರಮುಖ ಪಾತ್ರ ವಹಿಸಬೇಕು. ಕರಡು ಯುಜಿಸಿ ನಿಯಮಗಳಲ್ಲಿ ವಿವಿ ಕುಲಪತಿಗಳ ನೇಮಕದಲ್ಲಿ ರಾಜ್ಯ ಸರಕಾರಗಳಿಗೆ ಯಾವುದೇ ಪಾತ್ರ ಒದಗಿಸಿಲ್ಲ.
2. ಕುಲಪತಿಗಳ ಆಯ್ಕೆ ಸಮಿತಿಗಳನ್ನು ರಚಿಸುವಲ್ಲಿ ರಾಜ್ಯಗಳ ಹಕ್ಕುಗಳನ್ನು ತೀವ್ರವಾಗಿ ಮೊಟಕುಗೊಳಿಸಲಾಗಿದೆ.
3. ಶೈಕ್ಷಣಿಕ ವಲಯದ ಹೊರಗಿನವರನ್ನು ಕುಲಪತಿಗಳಾಗಿ ನೇಮಕ ಮಾಡಲು ಅವಕಾಶವಾಗಿದೆ.
4. ಕುಲಪತಿಗಳ ನೇಮಕಾತಿಗಾಗಿ ನಿಗದಿಪಡಿಸಿರುವ ಅರ್ಹತೆಗಳು, ಅವಧಿ ಮುಂತಾದವು ಉನ್ನತ ಶಿಕ್ಷಣದ ಗುಣಮಟ್ಟಗಳಿಗೆ ಅಡ್ಡಿಯಾಗುತ್ತವೆ.
5. ಶಿಕ್ಷಕರ ಕಾರ್ಯಕ್ಷಮತೆ ಮೌಲ್ಯಮಾಪನ ಮತ್ತು ಶೈಕ್ಷಣಿಕ ಸೂಚಕ (ಎಪಿಐ) ವ್ಯವಸ್ಥೆಯನ್ನು ತೆಗೆದುಹಾಕಿ ಹೊಸ ವ್ಯವಸ್ಥೆ ಜಾರಿ ಮರು ಪರಿಶೀಲನೆಯಾಗಬೇಕು.
6. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅಗತ್ಯವಾಗಿ ಬೇಕಾಗಿರುವ ಸಂಬಂಧಪಟ್ಟ ಐಚ್ಛಿಕ ವಿಷಯದಲ್ಲಿ ಮೂಲ ಪದವಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಹಲವಾರು ಉಪಬಂಧಗಳ ಮರು ಪರಿಶೀಲನೆ ಅಗತ್ಯವಿದೆ.
7. ಗುತ್ತಿಗೆ ನೇಮಕಾತಿ, ಅತಿಥಿ ಬೋಧಕರು, ಸಂದರ್ಶಕ ಪ್ರಾಧ್ಯಾಪಕರು ಮುಂತಾದವರ ನೇಮಕಾತಿ ಬಗ್ಗೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವ ಮುನ್ನ ಇವುಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕಿದೆ.
8. ಯುಜಿಸಿ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಆಗುವ ಶಿಕ್ಷಾರ್ಹ ಪರಿಣಾಮಗಳು ಪ್ರಜಾಸತ್ತಾತ್ಮವಾಗಿಲ್ಲದೆ ಇರುವುದರಿಂದ ಮರು ಪರಿಶೀಲಿಸಬೇಕು.
9. ಎನ್‌ಇಪಿಯಲ್ಲಿರುವ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸದಿದ್ದರೆ ಶಿಕ್ಷಾರ್ಹ ಕ್ರಮಗಳನ್ನು ತೆಗೆದುಕೊಳ್ಳುವುದು ನಿಜವಾಗಿಯೂ ಸರ್ವಾಧಿಕಾರಿ ಧೋರಣೆ ಮತ್ತು ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ರಾಜ್ಯಗಳ ಸ್ವಾಯತ್ತತೆಗೆ ವಿರುದ್ಧ.
10. ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ನಾವೀನ್ಯತೆ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆ ಹೆಚ್ಚಿಸಲು ಉದ್ಯಮ ಅಕಾಡಮಿ ಸಹಯೋಗದ ಅಗತ್ಯಕ್ಕೆ ಸಂಬಂಧಿಸಿದ ನಿಯಮಗಳಿಗೆ ಹೆಚ್ಚಿನ ಒತ್ತು ಅಗತ್ಯ.
11. ಶಿಕ್ಷಣ ಸಂಸ್ಥೆಗಳನ್ನು ಶ್ರೇಣೀಕರಣ ಮಾಡಲು ರಚಿಸಿರುವ ಮಾರ್ಗಸೂಚಿಗಳು ಸರಕಾರಿ ಸಂಸ್ಥೆಗಳ ಕಲ್ಯಾಣವನ್ನು ಬದಿಗಿಟ್ಟು, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ.
12. ಸ್ನಾತಕ ಪದವಿ ಕೋರ್ಸುಗಳ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ಕಡ್ಡಾಯ ಮಾಡಿರುವುದು ಒಟ್ಟು ದಾಖಲಾತಿ ಪ್ರವೇಶ ಅನುಪಾತ ಹೆಚ್ಚಿಸಲು ಅಡ್ಡಿಯಾಗುತ್ತದೆ.
13. ಭಡ್ತಿ, ದ್ವೈವಾರ್ಷಿಕ ಪರೀಕ್ಷೆಗಳು, ಫಾಸ್ಟ್‌ಟ್ರ್ಯಾಕ್ ಪದವಿ ಪರೀಕ್ಷೆ, ಉಭಯ ಪದವಿಗಳು, ಬಹು ಪ್ರವೇಶ ಮತ್ತು ನಿರ್ಗಮನ ಮುಂತಾದ ಅಂಶಗಳು ಮತ್ತಷ್ಟು ಚರ್ಚೆಗೊಳಪಡಬೇಕು ಮತ್ತು ಅನುಷ್ಠಾನಕ್ಕೆ ಮುಂಚೆ ಸ್ಪಷ್ಟನೆ ಬೇಕು.
14. ಕರಡು ಯುಜಿಸಿ ನಿಯಮಗಳು-2025ನ್ನು ಕೂಡಲೇ ಹಿಂಪಡೆಯಬೇಕು.
15. ಯುಜಿಸಿ ನಿಯಮಗಳನ್ನು ರಚಿಸುವ ಪ್ರಕ್ರಿಯೆಯಲ್ಲಿ ರಾಜ್ಯಗಳೊಂದಿಗೆ ಸಹಯೋಗ, ಸಮಾಲೋಚನೆಗಳಲ್ಲಿ ತೊಡಗುವುದು ಅಗತ್ಯ.
ಈ ನಡುವೆ, ಯುಜಿಸಿ ನಿಯಮಗಳಲ್ಲಿ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳನ್ನು ಕರ್ನಾಟಕ ಸರಕಾರ ತೀವ್ರವಾಗಿ ವಿರೋಧಿಸಿದೆ. ಕೇಂದ್ರ ಸರಕಾರ ಕರಡು ಮಾರ್ಗಸೂಚಿಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಕುಲಪತಿಗಳ ನೇಮಕಾತಿಗಳಿಗೆ ಸಂಬಂಧಿಸಿದ ನಿಬಂಧನೆಗಳಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಮತ್ತು ಉನ್ನತ ಶಿಕ್ಷಣವನ್ನು ಸುಧಾರಿಸುವಲ್ಲಿ ರಾಜ್ಯ ಸರಕಾರಗಳು ವಹಿಸುವ ಕಾನೂನುಬದ್ಧ ಪಾತ್ರವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ. ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಆಡಳಿತದಲ್ಲಿ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ಗುರಿಯನ್ನು ಈ ನಿಬಂಧನೆ ಹೊಂದಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಸುಧಾಕರ್ ಹೇಳಿದ್ದಾರೆ.
ಇವತ್ತಿನ ಸನ್ನಿವೇಶವನ್ನು ಗಮನಿಸಿದರೆ, ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯೇ ಬಿಕ್ಕಟ್ಟು ಎದುರಿಸುತ್ತಿದೆ. ಉನ್ನತ ಶಿಕ್ಷಣದಲ್ಲಿ, ವಿಶೇಷವಾಗಿ ಸಂಶೋಧನೆಯಲ್ಲಿ ಹೂಡಿಕೆ ಶೋಚನೀಯವಾಗಿ ಅಸಮರ್ಪಕವಾಗಿದೆ ಎಂಬುದನ್ನು ಪರಿಣಿತರು ಗುರುತಿಸಿದ್ದಾರೆ. ಸಬಲೀಕರಣ ಮತ್ತು ಪ್ರಗತಿಯ ಮಾರ್ಗವಾಗಿರುವ ಶಿಕ್ಷಣ, ಕೇವಲ ಆರ್ಥಿಕ ಬೆಳವಣಿಗೆಗೆ ಅಷ್ಟೇ ಅಲ್ಲ, ಸಾಮಾಜಿಕ ನ್ಯಾಯ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮೂಹಿಕ ಯೋಗಕ್ಷೇಮದ ಮೂಲಭೂತ ಆಧಾರಸ್ತಂಭ. ಹಾಗಿದ್ದೂ, ಭಾರತದ ಉನ್ನತ ಶಿಕ್ಷಣದ ಸ್ಥಿತಿಯಲ್ಲಿ ವಿರೋಧಾಭಾಸವಿದೆ.
ಭಾರತದ ಸ್ಥಾನವನ್ನು ತಿಳಿಯಲು ಬ್ರೆಝಿಲ್, ದಕ್ಷಿಣ ಆಫ್ರಿಕಾ, ಇಂಡೋನೇಶ್ಯ, ಮೆಕ್ಸಿಕೊ, ಥಾಯ್ಲೆಂಡ್, ವಿಯೆಟ್ನಾಂ, ಈಜಿಪ್ಟ್, ಟರ್ಕಿ, ಮಲೇಶ್ಯ ಮತ್ತು ಫಿಲಿಪ್ಪೀನ್ಸ್‌ನಂತಹ, ನಮ್ಮಷ್ಟೇ ಸಾಮಾಜಿಕ-ಆರ್ಥಿಕ ಸೂಚಕಗಳನ್ನು ಹೊಂದಿರುವ ದೇಶಗಳ ಕಡೆ ನೋಡಬೇಕು. ಯುನೆಸ್ಕೋ ಅಂಕಿಅಂಶಗಳ ಸಂಸ್ಥೆ (ಯುಐಎಸ್) ಪ್ರಕಾರ, ಈ ದೇಶಗಳು ತಮ್ಮ ಜಿಡಿಪಿಯ ಸರಾಸರಿ ಶೇ. 0.8ರಿಂದ ಶೇ. 1.5ರವರೆಗೆ ಉನ್ನತ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತವೆ. ಇದಕ್ಕೆ ವಿರುದ್ಧವಾಗಿ ಭಾರತ ಉನ್ನತ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿರುವುದು ತನ್ನ ಜಿಡಿಪಿಯ ಶೇ.0.6ರಷ್ಟನ್ನು ಮಾತ್ರ.
ಉನ್ನತ ಶಿಕ್ಷಣ ದೇಶದ ಬಜೆಟ್‌ನಲ್ಲಿ ಒಂದು ಪ್ರಮುಖ ಅಂಶ ಮಾತ್ರವಾಗಿರದೆ, ಸಮಾಜದ ಭವಿಷ್ಯದ ಬದ್ಧತೆಯನ್ನು ಪ್ರತಿಬಿಂಬಿಸಬೇಕು. ಆದರೆ ನಮ್ಮಲ್ಲಿ ನೋಡಿದರೆ, ರಕ್ಷಣೆ, ಮೂಲಸೌಕರ್ಯ ಮತ್ತು ಸಬ್ಸಿಡಿಗಳಂತಹ ಕ್ಷೇತ್ರಗಳು ಗಮನಾರ್ಹ ಹಂಚಿಕೆಗಳನ್ನು ಪಡೆದರೂ, ಶಿಕ್ಷಣಕ್ಕೆ, ಅದರಲ್ಲೂ ಉನ್ನತ ಶಿಕ್ಷಣಕ್ಕೆ ಬಹಳ ಕಡಿಮೆ ಆದ್ಯತೆಯಿದೆ. ದೀರ್ಘಾವಧಿಯ ಮಾನವ ಬಂಡವಾಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾಣಿಸುತ್ತದೆ. ಶಿಕ್ಷಣ ಇಂದು ಸಮನ್ವಯದ ಕೊರತೆ ಮತ್ತು ಕೇಂದ್ರ ಸರಕಾರದ ಅನುದಾನದ ಅಸಮರ್ಪಕತೆಯಿಂದ ಬಳಲುತ್ತಿದೆ. ಇದರಿಂದಾಗಿ ರಾಜ್ಯಗಳು ಹೆಚ್ಚಿನ ಹೊರೆ ಹೊರಬೇಕಾದ ಅನಿವಾರ್ಯತೆ ತಲೆದೋರಿದೆ. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವಲ್ಲಿ ಸಾಕಷ್ಟು ಹೂಡಿಕೆ ಇಲ್ಲ ಎಂಬ ಅಂಶಗಳ ಬಗ್ಗೆಯೂ ಪರಿಣಿತರು ಗಮನ ಸೆಳೆಯುತ್ತಾರೆ. ಸ್ಥಗಿತಗೊಂಡ ಖರ್ಚುಗಳು, ಕಿಕ್ಕಿರಿದ ತರಗತಿ ಕೊಠಡಿಗಳು, ಹಳತಾದ ಪಠ್ಯಕ್ರಮಗಳು ಮತ್ತು ಅಸಮರ್ಪಕ ಮೂಲಸೌಕರ್ಯ ಇಂತಹ ದೋಷಗಳನ್ನು ಪಟ್ಟಿ ಮಾಡಲಾಗುತ್ತದೆ. ಬಹುಪಾಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರಾಜ್ಯ ವಿಶ್ವವಿದ್ಯಾನಿಲಯಗಳು ದೀರ್ಘಕಾಲದ ಹಣಕಾಸಿನ ಕೊರತೆಯನ್ನು ಹೊಂದಿವೆ. ಈ ನಡುವೆ, ಐಐಟಿಗಳು ಮತ್ತು ಐಐಎಂಗಳಂತಹ ಉನ್ನತ ಸಂಸ್ಥೆಗಳ ಏರಿಕೆ ಪ್ರಾದೇಶಿಕ ಅಸಮಾನತೆಗಳನ್ನು ಹೆಚ್ಚಿಸಿದೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳಿಗೆ ಕಾರಣವಾಗುವ ಎರಡು ಹಂತದ ವ್ಯವಸ್ಥೆಯನ್ನು ಸೃಷ್ಟಿಸಿದೆ. 2021ರ ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತೀಯ ವಿಶ್ವವಿದ್ಯಾನಿಲಯಗಳ ಒಂದು ಸಣ್ಣ ಭಾಗ ಮಾತ್ರ ಗುಣಮಟ್ಟ ಮತ್ತು ಸಂಶೋಧನಾ ಉತ್ಪಾದನೆಗೆ ಬೇಕಿರುವ ಜಾಗತಿಕ ಮಾನದಂಡಗಳನ್ನು ಪೂರೈಸುತ್ತದೆ. ಭಾರತದ ಒಟ್ಟು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಖರ್ಚು ಜಿಡಿಪಿಯ ಕೇವಲ ಶೇ. 0.7 ರಷ್ಟಿದೆ. ಇದು ಜಾಗತಿಕ ಸರಾಸರಿ ಶೇ. 1.8ಕ್ಕಿಂತ ಕಡಿಮೆ. ಇದರ ಪರಿಣಾಮವಾಗಿ, ಜಾಗತಿಕ ಜ್ಞಾನ ಆರ್ಥಿಕತೆಯಲ್ಲಿ ಸ್ಪರ್ಧಿಸುವ ಭಾರತದ ಸಾಮರ್ಥ್ಯ ಸೀಮಿತಗೊಂಡಿದೆ.
ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾನ್ಯ ಸವಾಲೆಂದರೆ, ರಾಜಕೀಯ ಹಸ್ತಕ್ಷೇಪ. ಇದು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತಿದೆ. ಹಾಗಾದರೆ, ಉನ್ನತ ಶಿಕ್ಷಣವನ್ನು ಉತ್ತಮಗೊಳಿಸುವಲ್ಲಿ ಯುಜಿಸಿ ಏನು ಮಾಡಬೇಕು? ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಜ್ಯೋತಿ ಎಸ್. ಅವರು ‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಒಂದು ಲೇಖನ ಬರೆದಿದ್ದಾರೆ. ಅವರೊಂದು ಪ್ರಶ್ನೆಯನ್ನು ಎತ್ತುತ್ತಾರೆ. ನಮ್ಮ ವಿಶ್ವವಿದ್ಯಾನಿಲಯಗಳನ್ನು ಮೂಲತಃ ರೂಪಿಸಿದ ಪಾಶ್ಚಿಮಾತ್ಯ ಮಾದರಿಗೆ ನಾವು ಬದ್ಧರಾಗಬೇಕೇ, ನಮ್ಮದೇ ಆದ ಐತಿಹಾಸಿಕ ಕಲಿಕಾ ವಿಧಾನಗಳ ಚೌಕಟ್ಟನ್ನು ಅಭಿವೃದ್ಧಿಪಡಿಸಬೇಕೇ ಅಥವಾ ಸ್ಥಳೀಯ ಮತ್ತು ಜಾಗತಿಕ ಅಗತ್ಯಗಳನ್ನು ಪೂರೈಸಲು ಎರಡರಲ್ಲೂ ಉತ್ತಮವಾದದ್ದರ ಜೋಡಣೆಯಾಗಿ ಹೈಬ್ರಿಡ್ ಮಾದರಿ ರಚಿಸಬೇಕೇ? ಎಂದು.
ಉನ್ನತ ಶಿಕ್ಷಣದ ಪಾಶ್ಚಿಮಾತ್ಯ ಮಾದರಿಗಳು ಸಂಶೋಧನೆಗೆ ಒತ್ತು ನೀಡುತ್ತವೆ. ಆ ಮಾದರಿ, ಸಾಮಾಜಿಕ ಚಾಲಿತ ಏಜೆನ್ಸಿಗಳು ಮತ್ತು ವಿಶ್ವವಿದ್ಯಾನಿಲಯ ಇಲಾಖೆಗಳ ನಡುವಿನ ಸಹಯೋಗವನ್ನು ಹೆಚ್ಚಿಸುತ್ತದೆ. ಪರಿಹಾರ ಕಂಡುಹಿಡಿಯಲು, ಹೊಸತನ ಹೆಚ್ಚಿಸಲು ಮತ್ತು ಹೊಸ ಜ್ಞಾನ ಉತ್ಪಾದಿಸಲು ಅದು ಕೆಲಸ ಮಾಡುತ್ತದೆ. ಆದರೆ ನಮ್ಮ ವಿವಿಗಳು ಉದ್ಯೋಗವನ್ನು ಗುರಿಯಾಗಿಸಿಕೊಂಡ ಪದವಿಗಳನ್ನು ಪಡೆಯಬೇಕೆನ್ನುವ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದರೆ, ಸಂಶೋಧನೆ ಹಿಂದಕ್ಕೆ ಸರಿಯುತ್ತದೆ.
ನಮ್ಮ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಯುಜಿಸಿಯ ಬದ್ಧತೆ ಗಮನದಲ್ಲಿಟ್ಟುಕೊಂಡು ನೋಡುವುದಾದರೆ,
1. ಉಪಕುಲಪತಿಗಳು ಮತ್ತು ರಿಜಿಸ್ಟ್ರಾರ್‌ಗಳ ನೇಮಕಾತಿ ಯಾವುದೇ ಆರ್ಥಿಕ ಪ್ರಭಾವದಿಂದ ಮುಕ್ತವಾಗಿರಬೇಕು.
ಶೈಕ್ಷಣಿಕ ಸಾಧನೆಗಳು, ಆಡಳಿತಾತ್ಮಕ ಅನುಭವ ಮತ್ತು ದೃಷ್ಟಿಕೋನದ ಆಧಾರದ ಮೇಲೆ ನೇಮಕವಾಗಬೇಕು.
ನೇಮಕಾತಿಗಳ ಹಿಂದೆ ಹಣದ ಶಕ್ತಿ ಕೆಲಸ ಮಾಡುತ್ತಿದ್ದರೆ, ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಎಂಬುದಕ್ಕೆ ಯಾವ ಅರ್ಥವೂ ಇರುವುದಿಲ್ಲ.
2. ಮತ್ತೊಂದು ಸಾಮಾನ್ಯ ಸವಾಲಾಗಿರುವುದು ಅಧ್ಯಾಪಕರ ನೇಮಕಾತಿ, ಪಠ್ಯಕ್ರಮ ವಿನ್ಯಾಸ ಮತ್ತು ಸಂಶೋಧನಾ ನಿಧಿಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಮಟ್ಟದ ರಾಜಕೀಯ ಹಸ್ತಕ್ಷೇಪ.
ವ್ಯವಸ್ಥೆಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತಿರುವ ಮತ್ತು ಆಳವಾಗಿ ಬೇರೂರಿರುವ ಈ ಸಮಸ್ಯೆಗಳನ್ನು ಪರಿಹರಿಸದ ಹೊರತು, ಉನ್ನತ ಶಿಕ್ಷಣ ಉತ್ತಮಗೊಳ್ಳಲು ಸಾಧ್ಯವಿಲ್ಲ.
3. ತರಗತಿಯ ಕಲಿಕೆ ಮತ್ತು ವಾಸ್ತವ ಜಗತ್ತಿನ ನಡುವಿನ ಅಂತರ ಕಡಿಮೆ ಮಾಡುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗುತ್ತಿದೆ. ಶೈಕ್ಷಣಿಕ ಪದವಿಗಳನ್ನು ಉದ್ಯೋಗದ ದೃಷ್ಟಿಯಿಂದ ನೋಡುವುದು ನಮ್ಮ ದೊಡ್ಡ ತಪ್ಪುಗಳಲ್ಲಿ ಒಂದು. ಈ ಮನಸ್ಥಿತಿ ಉನ್ನತ ಶಿಕ್ಷಣದ ನಿಜವಾದ ಉದ್ದೇಶವಾಗಿರುವ ಸಂಶೋಧನೆಗೆ ಒತ್ತು ನೀಡುವುದನ್ನೇ ತಪ್ಪಿಸುತ್ತಿದೆ.
4. ಬೋಧನೆ ಉದ್ಯೋಗ ಆಯ್ಕೆಗೆ ಸಂಶೋಧನಾ ಪದವಿಯನ್ನು ಕಡ್ಡಾಯ ಮಾನದಂಡವನ್ನಾಗಿ ಮಾಡುವುದು ಸಂಶೋಧನೆಯ ಗುಣಮಟ್ಟವನ್ನು ಗಮನಾರ್ಹವಾಗಿ ತಗ್ಗಿಸಿದೆ.
5. ವಿವಿಧ ಸಂಸ್ಥೆಗಳು ಪ್ರಕಟಿಸುವ ವಿಶ್ವವಿದ್ಯಾನಿಲಯ ಶ್ರೇಯಾಂಕಗಳ ಸತ್ಯಾಸತ್ಯತೆ ಪ್ರಶ್ನಾರ್ಹವಾಗಿಯೇ ಉಳಿದಿದೆ.
ಓಂಂಅ ಸದಸ್ಯರು ಶ್ರೇಯಾಂಕಗಳಿಗಾಗಿ ಲಂಚ ಸ್ವೀಕರಿಸುವ ಇತ್ತೀಚಿನ ಹಗರಣ ವ್ಯವಸ್ಥೆಯಲ್ಲಿನ ಗಂಭೀರ ದೋಷಗಳನ್ನು ಬಹಿರಂಗಪಡಿಸಿದೆ.
ಯುಜಿಸಿ ಮಾಡಬಹುದಾದ ಪ್ರಮುಖ ಕ್ರಮಗಳನ್ನು ಹೀಗೆ ಪಟ್ಟಿ ಮಾಡಲಾಗಿದೆ:
1. ಸಂಶೋಧನೆ ಆಧಾರಿತ ಮೌಲ್ಯಮಾಪನ
2. ಅಂತರ್ಶಿಸ್ತೀಯ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸುವುದು
3. ಶಾಶ್ವತ ನೇಮಕಾತಿ ಮತ್ತು ತರಬೇತಿಯಲ್ಲಿ ಹೂಡಿಕೆ ಮಾಡುವ ಮೂಲಕ ಗುತ್ತಿಗೆ ಅಧ್ಯಾಪಕರ ಮೇಲಿನ ಅವಲಂಬನೆ ಕಡಿಮೆ ಮಾಡುವುದು
4. ಭಾರತೀಯ ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದು
5. ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವುದು
6. ಕೋರ್ಸ್ ಆಯ್ಕೆಯಲ್ಲಿ ವಿದ್ಯಾರ್ಥಿಗಳ ಸ್ವಾಯತ್ತತೆ ಹೆಚ್ಚಿಸುವುದು
7. ಕೃತಕ ಬುದ್ಧಿಮತ್ತೆಯಂತಹ ಹೊಸ ಕ್ಷೇತ್ರಗಳನ್ನು ಸಂಯೋಜಿಸುವುದು
8. ವಿಶ್ವವಿದ್ಯಾನಿಲಯದ ಬೆಂಬಲದ ಮೂಲಕ ವಿದ್ಯಾರ್ಥಿ ನವೋದ್ಯಮಗಳನ್ನು ಪ್ರೋತ್ಸಾಹಿಸುವುದು.
ಆದರೆ ಕಾಡುವ ಕಳವಳವೆಂದರೆ, ಯುಜಿಸಿ ಕೂಡ ಇಂದು ಏನಾಗಿದೆ ಎಂಬ ಪ್ರಶ್ನೆ. ಅದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಜೆಂಡಾವನ್ನು ತರುವ ಮತ್ತೊಂದು ಸಾಧನ ಮಾತ್ರವಾಗಿಬಿಟ್ಟಿದೆಯೆ? ಅದೇ ಹೌದಾದಲ್ಲಿ ಉನ್ನತ ಶಿಕ್ಷಣದ ಉನ್ನತಿ ಎಂಬುದು ಸುಮ್ಮನೆ ಭಾಷಣದ ವಿಷಯವಾಗಿ ಮರೆತುಹೋಗುವಂಥದ್ದಾಗುತ್ತದೆ ಅಷ್ಟೆ.