ಶರಣಾದ ನಕ್ಸಲರ ಮುಂದಿನ ಹಾದಿ ಹೇಗೆ?
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ 6 ಜನ ನಕ್ಸಲರು ಶರಣಾಗಿದ್ದಾರೆ. ಮುಖ್ಯಮಂತ್ರಿ ಎದುರು ಅವರ ಗೃಹಕಚೇರಿಯಲ್ಲಿ ಈ ಆರೂ ನಕ್ಸಲರು ಶರಣಾದರು. ಆ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಂ ಎದುರು ರಾಜ್ಯದ ನಾಲ್ವರು ಹಾಗೂ ಹೊರ ರಾಜ್ಯದ ಇಬ್ಬರು ನಕ್ಸಲರು ಶರಣಾದಂತಾಗಿದೆ. ಆದರೆ ನಕ್ಸಲರ ಪಟ್ಟಿಯಲ್ಲಿ ಇನ್ನು ಉಳಿದಿರುವ ಏಕೈಕ ನಕ್ಸಲ್ ರವೀಂದ್ರ ಮಾತ್ರ ಈವರೆಗೂ ಯಾರ ಸಂಪರ್ಕಕ್ಕೂ ಬಂದಿಲ್ಲ ಎಂದು ವರದಿಗಳು ಹೇಳುತ್ತಿವೆ. ಕಳೆದ 18 ವರ್ಷಗಳಿಂದ ಭೂಗತವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವೀಂದ್ರ ವಿರುದ್ಧ 14 ಕೇಸ್‌ಗಳಿವೆ.
ನಕ್ಸಲರ ಈ ಶರಣಾಗತಿಯೊಂದಿಗೆ ಕಳೆದ ಹಲವು ದಶಕಗಳಿಂದ ತಲೆನೋವಾಗಿದ್ದ ನಕ್ಸಲ್ ಹೋರಾಟ ರಾಜ್ಯದಲ್ಲಿ ಕೊನೆಗಾಣುವ ದಿನಗಳು ಹತ್ತಿರವಾಗಿವೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ 1990ರಿಂದ ಶುರುವಾಗಿದ್ದ ನಕ್ಸಲ್ ಹೋರಾಟ 2012ರವರೆಗೂ ಏರುಗತಿಯಲ್ಲಿತ್ತು. 40ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ನಕ್ಸಲರಲ್ಲಿ ಅನೇಕರು ನಕ್ಸಲ್ ನಿಗ್ರಹ ದಳ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ವಿಕ್ರಮ್ ಗೌಡ ಇತ್ತೀಚಿನ ಬಲಿ.
ಈ ನಡುವೆ 2015ರಲ್ಲಿ ರಾಜ್ಯ ಸರಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಿಸಿತ್ತು. ಎಚ್.ಎಸ್. ದೊರೆಸ್ವಾಮಿ, ಎ.ಕೆ. ಸುಬ್ಬಯ್ಯ, ಗೌರಿ ಲಂಕೇಶ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು. ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ನೀಲಗುಳಿ ಪದ್ಮನಾಭ, ಹೊರ್ಲೆ ಜಯ, ಹಾಗಲಗಂಚಿ ವೆಂಕಟೇಶ್ ಸೇರಿದಂತೆ 14 ಮಂದಿ ಆಗ ಶರಣಾಗಿದ್ದರು.
ಈ ಬಾರಿ ಜನವರಿ 8ರಂದು ಶರಣಾದವರು ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ. ವಸಂತ, ಟಿ.ಎನ್. ಜಿಷಾ. ಇವರಲ್ಲಿ ವಸಂತ ತಮಿಳುನಾಡಿನವರಾದರೆ, ಜಿಷಾ ಕೇರಳದವರು.
ಈ ಸಲ ಬಂಜಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯಲ್ಲಿ ಪತ್ರಕರ್ತ ಪಾರ್ವತೀಶ್ ಮತ್ತು ವಕೀಲ ಕೆ.ಪಿ. ಶ್ರೀಪಾಲ್ ಇದ್ದರು.
ಕರ್ನಾಟಕದಲ್ಲಿ 6 ನಕ್ಸಲರು ಶರಣಾಗುವುದಕ್ಕೆ ಒಂದು ವಾರ ಮುಂಚೆ ಮಹಾರಾಷ್ಟ್ರದಲ್ಲಿಯೂ 11 ಮಂದಿ ನಕ್ಸಲರು ಶರಣಾಗಿದ್ದರು. ಗಡ್ಚಿರೋಲಿಯಲ್ಲಿ ಒಬ್ಬ ಉನ್ನತ ಮಹಿಳಾ ಕಮಾಂಡರ್ ಸೇರಿದಂತೆ 11 ನಕ್ಸಲರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮುಂದೆ ಶರಣಾದರು. ಒಟ್ಟು ಎಂಟು ಮಹಿಳೆಯರು ಮತ್ತು ಮೂವರು ಪುರುಷರ ತಲೆಗೆ ಒಂದು ಕೋಟಿ ರೂ. ಗೂ ಹೆಚ್ಚು ಬಹುಮಾನ ಘೋಷಿಸಲಾಗಿತ್ತು. ಪ್ರಮುಖ ನಕ್ಸಲ್ ನಾಯಕಿ ವಿಮಲಾ ಸಿದಮ್ 34 ವರ್ಷಗಳ ನಂತರ ಶಸ್ತ್ರಾಸ್ತ್ರ ತ್ಯಜಿಸಿದರು. ರಾಜ್ಯದಲ್ಲಿ 66 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅವರ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈ 11 ನಕ್ಸಲರ ವಿರುದ್ಧ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಫಡ್ನವೀಸ್ ಶರಣಾದ ನಕ್ಸಲರಿಗೆ ಪುನರ್ವಸತಿ ಕಿಟ್‌ಗಳನ್ನು ಹಸ್ತಾಂತರಿಸಿದರು. ಉತ್ತರ ಗಡ್ಚಿರೋಲಿ ಈಗ ನಕ್ಸಲ್ ಚಟುವಟಿಕೆಯಿಂದ ಮುಕ್ತವಾಗಿದೆ ಮತ್ತು ದಕ್ಷಿಣ ಗಡ್ಚಿರೋಲಿ ಶೀಘ್ರದಲ್ಲೇ ನಕ್ಸಲ್ ಮುಕ್ತವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಯುವಕರು ಮಾವೋವಾದಿ ಚಳವಳಿಗೆ ಸೇರಿಲ್ಲ ಮತ್ತು ಹನ್ನೊಂದು ಗ್ರಾಮಗಳು ನಕ್ಸಲ್ ಚಟುವಟಿಕೆಗಳನ್ನು ನಿಷೇಧಿಸಿವೆ ಎಂದು ಅವರು ಹೇಳಿದ್ದಾರೆ. ಸಾಂವಿಧಾನಿಕ ನ್ಯಾಯದ ಮಹತ್ವವನ್ನು ಒತ್ತಿ ಹೇಳಿದ ಫಡ್ನವೀಸ್, ಗಡ್ಚಿರೋಲಿಯನ್ನು ಶೀಘ್ರದಲ್ಲೇ ಉಕ್ಕಿನ ನಗರವೆಂದು ಗುರುತಿಸಲಾಗುವುದು ಎಂದರು. ನ್ಯಾಯವನ್ನು ಸಂವಿಧಾನದ ಮೂಲಕ ಮಾತ್ರ ಸಾಧಿಸಬಹುದು, ಮಾವೋವಾದಿ ಸಿದ್ಧಾಂತದ ಮೂಲಕ ಅಲ್ಲ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು 2024ರ ಆಗಸ್ಟ್‌ನಲ್ಲಿ ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ 25 ನಕ್ಸಲರು ಶರಣಾಗಿದ್ದರು.
ಅವರಲ್ಲಿ ಐವರ ತಲೆಗೆ 28 ಲಕ್ಷ ರೂ. ಘೋಷಣೆಯಾಗಿತ್ತು. ಗಂಗಲೂರು ಮತ್ತು ಭೈರಾಮ್‌ಗಡ ಪ್ರದೇಶ ಸಮಿತಿಗಳಲ್ಲಿ ಸಕ್ರಿಯರಾಗಿದ್ದ 25 ನಕ್ಸಲರಲ್ಲಿ ಇಬ್ಬರು ಮಹಿಳೆಯರೂ ಇದ್ದರು. ಆ ಇಬ್ಬರು ಮಹಿಳೆಯರ ತಲೆಗೆ ತಲಾ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಕಳೆದ ಮೇ ತಿಂಗಳಲ್ಲಿ ಬಿಜಾಪುರದ ಪಿಡಿಯಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಹತರಾಗಿದ್ದರು.
ಛತ್ತೀಸ್‌ಗಡದಲ್ಲಿ ನಕ್ಸಲರು ಶರಣಾದ ಸಂದರ್ಭದಲ್ಲಿಯೇ ಛತ್ತೀಸ್‌ಗಡದ ರಾಯ್‌ಪುರದಲ್ಲಿ ನಕ್ಸಲ್ ಬೆದರಿಕೆಯನ್ನು ಎದುರಿಸುತ್ತಿರುವ ಏಳು ರಾಜ್ಯಗಳ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ್ದರು. 2026ರ ಮಾರ್ಚ್ ವೇಳೆಗೆ ದೇಶ ಎಡಪಂಥೀಯ ಉಗ್ರವಾದದಿಂದ ಮುಕ್ತವಾಗಲಿದೆ ಮತ್ತು ನಕ್ಸಲ್ ಬೆದರಿಕೆ ವಿರುದ್ಧದ ಅಂತಿಮ ದಾಳಿಗೆ ಬಲವಾದ ಮತ್ತು ನಿರ್ದಯ ಕಾರ್ಯತಂತ್ರದ ಅಗತ್ಯವಿದೆ ಎಂದು ಶಾ ಹೇಳಿದ್ದರು. ನಕ್ಸಲರು ಹಿಂಸಾಚಾರ ತ್ಯಜಿಸುವಂತೆ ಒತ್ತಾಯಿಸಿದ್ದ ಅವರು, ಛತ್ತೀಸ್‌ಗಡ ಸರಕಾರ ಹೊಸ ರೂಪದ ಶರಣಾಗತಿ ನೀತಿಯನ್ನು ಘೋಷಿಸಲಿದೆ ಎಂದಿದ್ದರು. ಸಭೆಯಲ್ಲಿ ಛತ್ತೀಸ್‌ಗಡ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ, ಉಪಮುಖ್ಯಮಂತ್ರಿ ವಿಜಯ್ ಶರ್ಮಾ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ಛತ್ತೀಸ್‌ಗಡ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಿದ್ದರು. ನಕ್ಸಲಿಸಂ ಪೀಡಿತ ಪ್ರದೇಶಗಳಲ್ಲಿ ಭದ್ರತೆಯನ್ನು ಸುಧಾರಿಸುವ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚೆಗಳು ನಡೆದಿದ್ದವು.
ಗೃಹ ಸಚಿವಾಲಯ ಕೆಲ ತಿಂಗಳ ಹಿಂದೆ ಸಂಸತ್ತಿಗೆ ನೀಡಿರುವ ಉತ್ತರದಲ್ಲಿ ನಕ್ಸಲ್ ಹಿಂಸಾಚಾರದ ಪ್ರದೇಶಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ತಿಳಿಸಿದೆ. ಅದರ ಪ್ರಕಾರ, ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 2013ರಲ್ಲಿ 10 ರಾಜ್ಯಗಳಲ್ಲಿ 126 ಇತ್ತು. 2024ರಲ್ಲಿ 9 ರಾಜ್ಯಗಳಲ್ಲಿ ಕೇವಲ 38 ಜಿಲ್ಲೆಗಳಿಗೆ ಸೀಮಿತವಾಗಿದೆ. 2010ಕ್ಕೆ ಹೋಲಿಸಿದರೆ, ನಕ್ಸಲ್ ಹಿಂಸಾಚಾರದ ಘಟನೆಗಳು ಶೇ.73ರಷ್ಟು ಕಡಿಮೆಯಾಗಿವೆ. ನಕ್ಸಲರಿಗೆ ಭದ್ರತಾ ಪಡೆ ಸಿಬ್ಬಂದಿ ಮತ್ತು ನಾಗರಿಕರು ಬಲಿಯಾಗುತ್ತಿದ್ದ ಪ್ರಮಾಣ ಶೇ.86ರಷ್ಟು ಕಡಿಮೆಯಾಗಿದೆ. 2010ರಲ್ಲಿ 1,005ರಷ್ಟಿದ್ದದ್ದು 2023ರಲ್ಲಿ 138ಕ್ಕೆ ಇಳಿದಿದೆ. 2024ರ ಮೊದಲ ಆರು ತಿಂಗಳುಗಳಲ್ಲಿ ನಕ್ಸಲ್ ಘಟನೆಗಳಲ್ಲಿ ಶೇ.32ರಷ್ಟು ಇಳಿಕೆ ಕಂಡುಬಂದಿದೆ. 2023ರ ಅದೇ ಅವಧಿಗೆ ಹೋಲಿಸಿದರೆ ನಕ್ಸಲ್ ಹಿಂಸಾಚಾರದಿಂದ ಸಂಭವಿಸುತ್ತಿದ್ದ ಸಾವುಗಳಲ್ಲಿ ಶೇ.17ರಷ್ಟು ಇಳಿಕೆ ಕಂಡುಬಂದಿದೆ.
ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಗಾಗಿ ಮಾರ್ಗಸೂಚಿಗಳನ್ನು ಹಿಂಸಾಚಾರ ತ್ಯಜಿಸಲು, ಶರಣಾಗಲು ಮತ್ತು ಮುಖ್ಯವಾಹಿನಿಗೆ ಸೇರಲು ಬಯಸುವ ನಕ್ಸಲರಿಗೆ ಸಹಾಯ ಮಾಡಲು ನಿರ್ದಿಷ್ಟ ಭೌಗೋಳಿಕ ಮತ್ತು ಸಾಮಾಜಿಕ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಶರಣಾಗತಿ ಮತ್ತು ಪುನರ್ವಸತಿ ನೀತಿ ಬಹುಮುಖಿ ಸಂಘರ್ಷ ನಿರ್ವಹಣೆ ಮತ್ತು ಪರಿಹಾರ ತಂತ್ರದ ಭಾಗವಾಗಿದೆ. ಪರಿಹಾರವು ಶರಣಾದ ನಕ್ಸಲರಿಗೆ ಲಾಭದಾಯಕ ಉದ್ಯೋಗ ಮತ್ತು ಉದ್ಯಮಶೀಲ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿರಬೇಕು. ಇದರಿಂದಾಗಿ ಅವರು ಮುಖ್ಯವಾಹಿನಿಗೆ ಸೇರಲು ಮತ್ತು ನಕ್ಸಲ್ ಚಳವಳಿಯ ಗುಂಪಿಗೆ ಹಿಂದಿರುಗದಿರಲು ಪ್ರೋತ್ಸಾಹ ನೀಡಿದಂತಾಗುತ್ತದೆ.
ಅದರಲ್ಲಿನ ಕೆಲವು ಅಂಶಗಳನ್ನು ಉಲ್ಲೇಖಿಸುವುದಾದರೆ,
1.ಯೋಜನೆಯಡಿಯಲ್ಲಿ ಅರ್ಹರಾಗಿರುವ ವ್ಯಕ್ತಿಗಳಿಗೆ ಅವರು ಇಷ್ಟಪಡುವ ಅಥವಾ ಅವರ ಯೋಗ್ಯತೆಗೆ ಸೂಕ್ತವಾದ ವ್ಯಾಪಾರ ಇಲ್ಲವೇ ವೃತ್ತಿಯಲ್ಲಿ ತರಬೇತಿ ನೀಡಬಹುದು. ಅವರಿಗೆ ಗರಿಷ್ಠ 36 ತಿಂಗಳ ಅವಧಿಗೆ ತಲಾ 2,000 ರೂ. ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ಆದರೂ, ಶರಣಾಗತರು ಸರಕಾರದಲ್ಲಿ ಯಾವುದೇ ಉದ್ಯೋಗ ಪಡೆದರೆ ಅಥವಾ ಯಾವುದೇ ಲಾಭದಾಯಕ ಸ್ವಉದ್ಯೋಗ ಮಾಡಿದರೆ ಮಾಸಿಕ ಸ್ಟೈಫಂಡ್ ಅನ್ನು ನಿಲ್ಲಿಸಲಾಗುತ್ತದೆ.
2. ಶರಣಾಗತ ವ್ಯಕ್ತಿಯ ಹೆಸರಿನಲ್ಲಿ 1.5 ಲಕ್ಷ ರೂ. ಗಳ ತಕ್ಷಣದ ಅನುದಾನವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿಯಾಗಿ ಇಡಬೇಕು. ಇದನ್ನು ಶರಣಾಗತರು 3 ವರ್ಷ ಪೂರ್ಣಗೊಂಡ ನಂತರ ಹಿಂಪಡೆಯಬಹುದು. ಈ ಹಣವನ್ನು ಶರಣಾಗತರು ಸ್ವಯಂ ಉದ್ಯೋಗಕ್ಕಾಗಿ ಯಾವುದೇ ಬ್ಯಾಂಕಿನಿಂದ ಪಡೆಯುವ ಸಾಲಗಳ ವಿರುದ್ಧ ಮೇಲಾಧಾರ ಭದ್ರತೆಯಾಗಿಯೂ ಬಳಸಬಹುದು.
3. ಶರಣಾಗತರು ಯಾವುದೇ ಸರಕಾರಿ ಕೆಲಸವನ್ನು ಪಡೆಯಲು ಸಾಧ್ಯವಾದರೆ, ಈ ಮೊತ್ತವನ್ನು ಶರಣಾಗತರಿಗೆ ನೀಡಲಾಗುವುದಿಲ್ಲ.
4. ಶರಣಾಗತರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನ ಇರುತ್ತದೆ.
5. ಶರಣಾಗತರು ಮಾಡಿದ ಘೋರ ಅಪರಾಧಗಳು ನ್ಯಾಯಾಲಯಗಳಲ್ಲಿ ಮುಂದುವರಿಯಬಹುದು. ಸಣ್ಣ ಅಪರಾಧಗಳಿಗೆ, ರಾಜ್ಯ ಅಧಿಕಾರಿಗಳ ವಿವೇಚನೆಯ ತೀರ್ಮಾನಕ್ಕೆ ಅವಕಾಶವಿದೆ. ಸಂಬಂಧಪಟ್ಟ ರಾಜ್ಯಗಳು ಶರಣಾದ ನಕ್ಸಲೈಟ್‌ಗೆ ಉಚಿತ ಕಾನೂನು ಸೇವೆಗಳು ಅಥವಾ ವಕೀಲರನ್ನು ಒದಗಿಸಬಹುದು. ಶರಣಾಗುವವರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಸಂಬಂಧಪಟ್ಟ ರಾಜ್ಯಗಳು ತ್ವರಿತ ನ್ಯಾಯಾಲಯಗಳನ್ನು ರಚಿಸಬಹುದು.
ಈಗ 6 ಜನ ನಕ್ಸಲರೇನೋ ರಕ್ತಚರಿತ್ರೆಯ ಅಧ್ಯಾಯದಿಂದ ಮುಖ್ಯವಾಹಿನಿಯ ಬದುಕಿನತ್ತ ಮುಖ ಮಾಡಿದ್ದಾರೆ. ಆದರೆ, ಶರಣಾದ ನಕ್ಸಲರು ತಕ್ಷಣದಿಂದಲೇ ಸಾಮಾನ್ಯ ಪ್ರಜೆಗಳಂತೆ ಜೀವನ ಮಾಡಲು ಸಾಧ್ಯವಾಗುತ್ತದೆಯೇ? ನಕ್ಸಲರು ಶರಣಾದ ನಂತರದ ಪ್ರಕ್ರಿಯೆಗಳೇನು? ಕಾನೂನು ಪ್ರಕ್ರಿಯೆಗಳು ಏನೇನಿರುತ್ತವೆ?
1.ಶರಣಾಗತರಾದವರು ಸ್ವಇಚ್ಛೆಯಿಂದ ಶರಣಾಗುತ್ತಿರುವುದಾಗಿ ಸಾರ್ವಜನಿಕ ಹೇಳಿಕೆ ನೀಡಬೇಕು.
2.ತಾವು ಈವರೆಗೆ ಇದ್ದ ಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಪೂರ್ಣ ಮಾಹಿತಿ ನೀಡಬೇಕು.
3.ಭೂಗತವಾಗಿರುವ ಎಲ್ಲರ ಹೆಸರುಗಳನ್ನು ಬಹಿರಂಗಪಡಿಸಬೇಕು.
4.ಶರಣಾಗತಿ ನಂತರ ಅರ್ಹತೆಗೆ ಅನ್ವಯವಾಗುವ ಶರಣಾಗತಿ ಸೌಲಭ್ಯಗಳನ್ನು ಸರಕಾರ ನೀಡಬೇಕು.
5.ಶರಣಾಗತರ ಮೇಲೆ ಎರಡು ವರ್ಷಗಳವರೆಗೆ ನಿಗಾ ಇಡಬೇಕು.
ಕಾನೂನು ಪ್ರಕ್ರಿಯೆಗಳು ಏನೇನು?
1.ಶರಣಾದವರ ಮೇಲೆ ಇರುವ ಪ್ರಕರಣಗಳ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳುತ್ತದೆ.
2.ಶರಣಾಗತಿ ಸಮಿತಿ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಬೇಕು.
3.ಅದಕ್ಕೆ ಸಚಿವ ಸಂಪುಟ ಅನುಮತಿ ನೀಡಬೇಕು.
4.ಬಳಿಕ ಸರಕಾರಿ ಅಭಿಯೋಜಕರು ಕೋರ್ಟ್ ಅರ್ಜಿ ಸಲ್ಲಿಸಬೇಕು.
5.ಕೋರ್ಟ್ ಪ್ರಕರಣ ವಾಪಸ್ ತೆಗೆದುಕೊಳ್ಳಲು ಅನುಮತಿ ನೀಡಿದರೆ ಪ್ರಕರಣ ಹಿಂಪಡೆಯಲಾಗುತ್ತದೆ.
ನಕ್ಸಲ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ರೀತಿಯನ್ನು ಪರಿಗಣಿಸಿ ನಕ್ಸಲರನ್ನು ಎ, ಬಿ, ಸಿ ಎಂದು ವರ್ಗೀಕರಿಸಲಾಗುತ್ತದೆ. ಎ ವರ್ಗದಲ್ಲಿ ಕರ್ನಾಟಕದ ನಿವಾಸಿಗಳಾಗಿದ್ದು, ನಕ್ಸಲ್ ಚಳವಳಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಬರುತ್ತಾರೆ. ಅದೇ ರೀತಿ ಒಂದು ಅಥವಾ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರೂ ಇದೇ ವರ್ಗದಡಿ ಬರುತ್ತಾರೆ. ಬಿ ವರ್ಗದಲ್ಲಿ ಚಳವಳಿಯಲ್ಲಿನ ಉನ್ನತ ಹುದ್ದೆಯಲ್ಲಿದ್ದವರು ಮತ್ತು ಒಂದು ಅಥವಾ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಹೊರ ರಾಜ್ಯದವರಾಗಿರುವವರು ಬರುತ್ತಾರೆ.
ಸಿ ವರ್ಗದಲ್ಲಿ ಎ ಅಥವಾ ಬಿ ಕೆಟಗರಿಗೆ ಸೇರದವರು, ಆದರೆ ನಕ್ಸಲರನ್ನು ಬೆಂಬಲಿಸುವವರು, ಮಾಹಿತಿದಾರರು ಮತ್ತು ನೇಮಕಾತಿ ಮಾಡುವವರು ಬರುತ್ತಾರೆ.
2015ರಲ್ಲಿ ಇದ್ದ ಪ್ರಕಾರ, ಶರಣಾಗುವ ನಕ್ಸಲರಿಗೆ ಅವರ ಎ, ಬಿ, ಸಿ ವರ್ಗಕ್ಕೆ ಅನುಗುಣವಾಗಿ, ಕ್ರಮವಾಗಿ 5 ಲಕ್ಷ, 3 ಲಕ್ಷ, 2 ಲಕ್ಷ ರೂ. ಪರಿಹಾರ ಧನ ಪ್ರಕಟಿಸಲಾಗಿತ್ತು. ಇದನ್ನು 2024ರ ಮಾರ್ಚ್‌ನಲ್ಲಿ ಪರಿಷ್ಕರಿಸಲಾಗಿತ್ತು. ಅದರಂತೆ ಎ, ಬಿ, ಸಿ ವರ್ಗಕ್ಕೆ ಕ್ರಮವಾಗಿ 7.5 ಲಕ್ಷ, 5 ಲಕ್ಷ, 3 ಲಕ್ಷ ರೂ. ಪರಿಹಾರ ಧನ ನಿಗದಿ ಮಾಡಲಾಗಿದೆ. ಈಗ ಶರಣಾಗಿರುವವರಲ್ಲಿ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ ಎ ವರ್ಗದಲ್ಲಿದ್ದು, ತಲಾ 7.50 ಲಕ್ಷ ರೂ. ಸಿಗಲಿದೆ. ಹೊರರಾಜ್ಯದವರಾದ ವಸಂತ ಮತ್ತು ಜಿಷಾ ಅವರಿಗೂ ಸಾಕಷ್ಟು ಪ್ರೋತ್ಸಾಹಧನ ಸಿಗಲಿದೆ.
ಶರಣಾದ ಎಲ್ಲ ಆರೂ ಮಂದಿಗೆ ಮೊದಲ ಹಂತದಲ್ಲಿ ತಲಾ 3 ಲಕ್ಷ ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿದೆ.
ಇಲ್ಲಿ ಏಳುವ ಒಂದು ದೊಡ್ಡ ಪ್ರಶ್ನೆಯೆಂದರೆ, ಈಗಾಗಲೇ ನಕ್ಸಲ್ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಶರಣಾದವರ ಕಥೆ ಏನಾಗಿದೆ? ಮುಖ್ಯವಾಹಿನಿ ಸೇರಿದ ಮೇಲೆ ಅವರ ಬದುಕಿನಲ್ಲಿ ನೆಮ್ಮದಿ ಮೂಡಿದೆಯೆ? ಎಂಬುದು. ವಿಕ್ರಮ್ ಗೌಡ ಎನ್‌ಕೌಂಟರ್ ನಡೆದ ಬಳಿಕ ಮಾಜಿ ನಕ್ಸಲರು ತಮ್ಮ ಸ್ಥಿತಿ ಏನಾಗಿದೆ ಎಂಬುದರ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರವಾಗಿ ಹೇಳಿಕೊಂಡರು. ಅವರು ಎತ್ತಿದ ಪ್ರಶ್ನೆಗಳು, ನಕ್ಸಲ್ ಪುನರ್ವಸತಿ ಪ್ಯಾಕೇಜ್ ಕುರಿತ ಚರ್ಚೆಯನ್ನು ಹುಟ್ಟುಹಾಕಿವೆ. ವಿಕ್ರಮ್ ಗೌಡ ಎನ್‌ಕೌಂಟರ್ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ನೂರ್ ಶ್ರೀಧರ್ ಆ ಘಟನೆಯ ಬಗ್ಗೆ ಆಕ್ಷೇಪವೆತ್ತಿದ್ದರು. ‘‘ಹತ್ತು ವರ್ಷ ಕರ್ನಾಟಕ ಶಾಂತವಾಗಿತ್ತು. ವಿಕ್ರಮ್‌ಗೌಡ ಮತ್ತು ತಂಡ ಪೊಲೀಸರ ಮೇಲೆ ಯಾವುದೇ ದಾಳಿ ಮಾಡಿರಲಿಲ್ಲ, ಯಾರನ್ನೂ ಕೊಂದಿರಲಿಲ್ಲ, ಬೆದರಿಸಿಯೂ ಇರಲಿಲ್ಲ. ಹಾಗಿದ್ದಾಗ ಪೊಲೀಸರಿಗೆ ಕೊಲ್ಲುವ ತುರ್ತಾದರೂ ಏನಿತ್ತು? ಕಾಡಿನಲ್ಲಿ ಕೆಲವರು ಬಂದೂಕು ಹಿಡಿದು ಓಡಾಡಿದ ಮಾತ್ರಕ್ಕೆ ಅವರನ್ನು ಕೊಂದುಬಿಡಿ ಎಂಬ ಪರವಾನಿಗೆ ಕೊಟ್ಟವರು ಯಾರು?’’ ಎಂದು ಅವರು ಪ್ರಶ್ನಿಸಿದ್ದರು. ‘ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಮರಳಿ’ ಎಂಬ ಸರಕಾರದ ಕರೆಗೆ ಓಗೊಟ್ಟು 2014-2018ರ ನಡುವೆ ಮುಖ್ಯವಾಹಿನಿಗೆ ಬಂದವರ ಕತೆ ಈಗ ಏನಾಗಿದೆ ಎಂಬುದನ್ನು ಅವರು ವಿವರಿಸಿದ್ದರು. ಅದರ ಪ್ರಕಾರ, ಆದಿವಾಸಿ ಯುವತಿ ಕನ್ಯಾಕುಮಾರಿ 8 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಮತ್ತೊಬ್ಬ ಶರಣಾಗತ ನಕ್ಸಲ್ ಪದ್ಮನಾಭ ಅವರಿಗೆ ಜಾಮೀನು ಸಿಕ್ಕಿದೆ. 8 ವರ್ಷಗಳಿಂದ ಕೋರ್ಟಿಗೆ ಅಲೆಯುವುದೇ ಅವರ ಕೆಲಸವಾಗಿದೆ. ಮಿಕ್ಕವರದೂ ಹೆಚ್ಚು ಕಡಿಮೆ ಇದೇ ಕಥೆ.
‘‘ಮುಖ್ಯವಾಹಿನಿಗೆ ಬಂದವರನ್ನು ಹೀಗೆ ನಡೆಸಿಕೊಂಡರೆ ಒಳಗಿರುವವರು ಹೇಗೆ ಹೊರಬರಲು ಮನಸ್ಸು ಮಾಡುತ್ತಾರೆ? ನಿಮ್ಮ ಮೇಲೆ ಯಾಕಾದರೂ ವಿಶ್ವಾಸವಿಡುತ್ತಾರೆ?’’ ಎಂಬ ಪ್ರಶ್ನೆಯನ್ನು ಶ್ರೀಧರ್ ಎತ್ತಿದ್ದರು. ಮಾಜಿ ನಕ್ಸಲ್ ಸಿರಿಮನೆ ನಾಗರಾಜ್ ಮಾತನಾಡಿ, ‘‘ನಕ್ಸಲ್ ಚಳವಳಿಗೆ ಆಕರ್ಷಿತರಾಗಿ ಸಶಸ್ತ್ರ ದಳಗಳನ್ನು ಸೇರುವಂತಹ ಸ್ಥಿತಿ ನಿರ್ಮಿಸಿದವರು ಯಾರೆನ್ನುವ ಪ್ರಶ್ನೆಯನ್ನು ಸರಕಾರ ಕೇಳಿಕೊಳ್ಳಬೇಕು’’ ಎಂದರು. ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಕಾಡಿನಲ್ಲಿರುವ ಜನರನ್ನೆಲ್ಲಾ ಖಾಲಿ ಮಾಡಿಸಲು ಹೊರಟ ಸರಕಾರದ ನೀತಿಯೇ ಇದಕ್ಕೆ ಮೂಲ ಕಾರಣ. ಈಗ ಒತ್ತುವರಿ ತೆರವು ಹೆಸರಲ್ಲಿ ಮತ್ತೆ ಅರಣ್ಯವಾಸಿಗಳನ್ನು ಕಾಡತೊಡಗಿದ್ದೀರಿ. ಇದು ಹೀಗೇ ಮುಂದುವರಿದರೆ ಇನ್ನೂ ಕೆಲ ಯುವಕ, ಯುವತಿಯರು ಕಾಡಿನ ಪಾಲಾದರೆ ಆಶ್ಚರ್ಯವಿಲ್ಲ. ಅದಕ್ಕೆ ಹೊಣೆ ಸರಕಾರದ ಈ ಹೃದಯಹೀನ, ಬಂಡವಾಳಿಗರ ಪರ, ಜನ ವಿರೋಧಿ ನೀತಿಗಳೇ ಆಗಲಿವೆ’’ ಎಂದು ಎಚ್ಚರಿಕೆ ನೀಡಿದರು.
ಅವರಿಬ್ಬರೂ ಹೇಳಿರುವ ಈ ವಿಚಾರಗಳು ವಿಷಯದ ಗಂಭೀರತೆಯ ಕಡೆಗೆ ಬೆರಳು ಮಾಡಿವೆ ಎಂಬುದು ನಿಜ.
ಮೊನ್ನೆ ನಕ್ಸಲ್ ಚಳವಳಿ ತೊರೆದು ಶರಣಾದ ಎಲ್ಲ ನಕ್ಸಲರಿಗೂ ಸಿಎಂ ಸಿದ್ದರಾಮಯ್ಯ ಸಂವಿಧಾನದ ಪ್ರತಿ ನೀಡಿದರೆಂಬುದು ಗಮನೀಯ. ಸಶಸ್ತ್ರ ಹೋರಾಟ ತೊರೆದ ಎಲ್ಲ ನಕ್ಸಲರ ಮೇಲಿನ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು. ಪ್ರಕರಣಗಳ ತ್ವರಿತ ಇತ್ಯರ್ಥದ ಬಳಿಕ ಅವರೆಲ್ಲ ಸಮಾಜದ ಮುಖ್ಯವಾಹಿನಿ ಸೇರಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ 6 ಮಂದಿ ನಕ್ಸಲರಿಗೆ ಶರಣಾಗತಿ ಪ್ಯಾಕೇಜ್ ನೀಡಿದ್ದಕ್ಕೆ ಬಿಜೆಪಿ ಆಘಾತ ವ್ಯಕ್ತಪಡಿಸಿದೆ. ಇದಕ್ಕೆ ಸಿಎಂ ಖಾರವಾಗಿಯೇ ಪ್ರತಿಕ್ರಿಯಿಸಿದ್ಧಾರೆ. ‘‘ಅಮಿತ್ ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಛತ್ತೀಸ್‌ಗಡದಲ್ಲಿ ಶರಣಾದ ನಕ್ಸಲರನ್ನು ಅಮಿತ್ ಶಾ ಅವರೇ ಖುದ್ದಾಗಿ ಬರ ಮಾಡಿಕೊಂಡು ಕಣ್ಣೀರು ಸುರಿಸಿದಾಗ ಯಾಕೆ ಬೆಚ್ಚಬೀಳಲಿಲ್ಲ?’’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ‘‘ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲರಿಗೆ ದೇವೇಂದ್ರ ಫಡ್ನವೀಸ್ ನೆರವು ನೀಡಿರುವುದು ಶಾಸಕ ಸುನೀಲ್ ಕುಮಾರ್‌ಗೆ ಗೊತ್ತಿರಲಿಲ್ಲವೇ? ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಇದೆಯೇ?’’ ಎಂದು ಪ್ರಶ್ನಿಸಿದ್ದಾರೆ. ‘‘ಶರಣಾಗಿರುವ ಈ ನಕ್ಸಲೀಯರು ಅನುಸರಿಸಿದ ಹಿಂಸಾ ಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ, ಇವರಲ್ಲಿ ಯಾರೊಬ್ಬರೂ ಜನರ ತೆರಿಗೆ ಹಣ ನುಂಗಿದ ಭ್ರಷ್ಟರೂ ಅಲ್ಲ. ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ’’ ಎಂದು ಹೇಳಿದ್ದಾರೆ. ‘‘ಕಳೆದ ಅವಧಿಯಲ್ಲಿ ಹನ್ನೆರಡು ಮಂದಿ ನಕ್ಸಲರು ಶರಣಾಗಿ ಬಂದು ಮುಖ್ಯವಾಹಿನಿ ಸೇರಿಕೊಂಡಿದ್ದರು. ಇದೀಗ ಶರಣಾಗಿರುವ ಆರು ಮಂದಿ ನಕ್ಸಲರು ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಬದುಕನ್ನು ಕಳೆಯಲಿದ್ದಾರೆ ಎಂಬ ನಂಬಿಕೆ ನನಗಿದೆ. ಈ ಆರು ಮಂದಿ ನಕ್ಸಲೀಯರ ಶರಣಾಗತಿಯ ನಂತರ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂಬ ವಿಶ್ವಾಸ ನನಗಿದೆ’’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಕ್ಸಲ್ ಹೋರಾಟಗಾರರ ಜೊತೆ ಶಾಂತಿ ಮಾತುಕತೆ ಮಾಡಬೇಕು ಎನ್ನುವುದು ಕೇಂದ್ರ ಗೃಹ ಸಚಿವಾಲಯದ್ದೇ ಯೋಜನೆ. ದೇಶವನ್ನು ನಕ್ಸಲ್ ಮುಕ್ತಗೊಳಿಸಬೇಕು ಎನ್ನುವ ದೃಷ್ಟಿಯಿಂದ ಕೇಂದ್ರ ಗೃಹ ಸಚಿವಾಲಯ ಶಾಂತಿ ಮಾತುಕತೆ ಮತ್ತು ನಕ್ಸಲ್ ಪ್ಯಾಕೇಜುಗಳ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತದೆ. ಕೇಂದ್ರ ಗೃಹ ಸಚಿವಾಲಯ ಸಿದ್ಧಪಡಿಸಿರುವ ನಕ್ಸಲರು ಸಕ್ರಿಯವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸರಕಾರವೂ ಇದೆ. ಕರ್ನಾಟಕ ಸರಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಆಗಾಗ ಸುತ್ತೋಲೆ ಕಳುಹಿಸಿ ನಕ್ಸಲ್ ನಿಗ್ರಹಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸ್ಪಷ್ಟನೆ ಕೇಳುತ್ತಿರುತ್ತದೆ. ನಕ್ಸಲ್ ನಿಗ್ರಹಕ್ಕೆ ಪೊಲೀಸ್ ಇಲಾಖೆಯ ಬಲವರ್ಧನೆ, ತಾಂತ್ರಿಕ ಬಳಕೆಗಳೂ ಸೇರಿದಂತೆ ಹಲವಾರು ಸೂಚನೆಗಳನ್ನು ರಾಜ್ಯಗಳಿಗೆ ಕೇಂದ್ರ ನೀಡಿದೆ. ಆ ಪೈಕಿ ಪ್ರಮುಖವಾಗಿರುವುದು ನಕ್ಸಲರ ಜೊತೆ ರಾಜ್ಯ ಸರಕಾರಗಳ ಮಾತುಕತೆ. ಕೇಂದ್ರ ಗೃಹ ಸಚಿವಾಲಯದ ಪ್ರಮುಖ ಸೂಚನೆಯೇ ಶರಣಾಗುವ ನಕ್ಸಲರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕೆನ್ನುವುದು. ಸಿದ್ದರಾಮಯ್ಯ ಸರಕಾರ ಮತ್ತು ಕರ್ನಾಟಕದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆಗಳು ನಕ್ಸಲರನ್ನು ಶರಣಾಗಲು ಮನವೊಲಿಸುವ ಮೂಲಕ ಕೇಂದ್ರ ಸರಕಾರದ ಆಶಯವನ್ನೇ ಶೀಘ್ರವಾಗಿ ಜಾರಿ ಮಾಡಿವೆ. ಇದು ಅಭಿನಂದನಾರ್ಹ ವಿಷಯವೇ ಹೊರತು ಬಿಜೆಪಿ ಮಾಡಿರುವಂತೆ ಅಪಸ್ವರ ಎತ್ತುವಂಥ ವಿಚಾರವಂತೂ ಅಲ್ಲ.