ಮಹಿಳಾ ಮತದಾರರು ಹೆಚ್ಚಿದರೂ ಪ್ರಾತಿನಿಧ್ಯದಲ್ಲಿಲ್ಲ ಪ್ರಗತಿ
ಮಹಿಳಾ ಪ್ರಾತಿನಿಧ್ಯ ಹೆಚ್ಚಬೇಕೆಂಬುದು ಮಾತಿನಲ್ಲಿ ಮಾತ್ರವೇ ಉಳಿದಿದೆ ಎಂಬುದಕ್ಕೆ ಪ್ರತೀ ಚುನಾವಣೆಯಲ್ಲಿಯೂ ಪುರಾವೆಗಳು ಸಿಗುತ್ತವೆ.
ಮಹಿಳಾ ಪ್ರಾತಿನಿಧ್ಯದ ವಿಚಾರ ಬಂದಾಗ ರಾಜಕೀಯ ಪಕ್ಷಗಳು ಹೇಳುವುದೇ ಒಂದು. ಆದರೆ ಅವರನ್ನು ನಿಜವಾಗಿಯೂ ರಾಜಕೀಯಕ್ಕೆ ಇಳಿಸುವಾಗ ಅವು ತೋರುವ ಧೋರಣೆಯೇ ಮತ್ತೊಂದು.
ಮಹಿಳಾ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವುದು ಹೆಚ್ಚುತ್ತಿದೆ. 1999ರಲ್ಲಿ ದಾಖಲಾಗಿದ್ದ ಮಹಿಳೆಯರ ಮತದಾನ ಪ್ರಮಾಣ ಶೇ.55.64; 2004ರಲ್ಲಿ ಶೇ.53.30; 2009ರಲ್ಲಿ ಶೇ.55.82; 2014ರಲ್ಲಿ ಶೇ.65.54; 2019ರಲ್ಲಿ ಶೇ.67.18ಕ್ಕೆ ಏರಿಕೆಯಾಗಿದೆ.
2024ರ ಒಟ್ಟು ಮತದಾರರು 96.8 ಕೋಟಿ. ಇವರಲ್ಲಿ ಮಹಿಳಾ ಮತದಾರರು 47.1 ಕೋಟಿ. ಮೊದಲ ಸಲದ ಮಹಿಳಾ ಮತದಾರರು (18ರಿಂದ 19 ವರ್ಷದೊಳಗಿನವರು) 85.3 ಲಕ್ಷ.
ಆದರೆ ಇದೆಲ್ಲವೂ ರಾಜಕೀಯ ಅಧಿಕಾರ ಅಥವಾ ಪ್ರಾತಿನಿಧ್ಯದ ಹೊತ್ತಲ್ಲಿ ಗೌಣವಾಗುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಬಳಿಕವೂ ರಾಜಕೀಯದಲ್ಲಿನ ಮಹಿಳಾ ಪ್ರಾತಿನಿಧ್ಯ ಎಂಬುದು ತೀರಾ ಕಡಿಮೆ.
ಪ್ರಸಕ್ತ ಮಹಿಳಾ ಸಂಸದರ ಸಂಖ್ಯೆ 78. ಟಿಎಂಸಿಯ ಮಹುವಾ ಮೊಯಿತ್ರಾ ಉಚ್ಚಾಟನೆ ಬಳಿಕ 77ಕ್ಕೆ ಇಳಿದಿದೆ. ರಾಜ್ಯಸಭೆಯಲ್ಲಿ 24 ಮಹಿಳಾ ಸದಸ್ಯರಿದ್ದಾರೆ.
ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಪ್ರಕಾರ, ಪ್ರಪಂಚದಾದ್ಯಂತ ನೀತಿ ನಿರೂಪಣೆಯ ಹೊಣೆಗಾರಿಕೆಯಲ್ಲಿ ಮಹಿಳೆಯರು ಸುಮಾರು ಶೇ.26ರಷ್ಟಿದ್ದಾರೆ. ಆದರೆ ಭಾರತದಲ್ಲಿ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಶೇ.14 ಮಾತ್ರ. 1952ರಲ್ಲಿ ಮೊದಲ ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇ.4.4ರಷ್ಟಿತ್ತು. 2014ರ ಲೋಕಸಭಾ ಚುನಾವಣೆಯ ನಂತರ, ಆ ಪ್ರಮಾಣ ಮುಟ್ಟಿದ್ದು ಶೇ.12.15ಕ್ಕೆ ಅಷ್ಟೆ. 2019ರ ಹೊತ್ತಿಗೆ ಅದು ಶೇ.14ಕ್ಕೆ ಏರಿದೆ.
ಇಂಟರ್ ಪಾರ್ಲಿಮೆಂಟರಿ ಯೂನಿಯನ್ ನಡೆಸಿದ ಸಂಶೋಧನೆಯ ಪ್ರಕಾರ, ಲೋಕಸಭೆಯಲ್ಲಿನ ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ಭಾರತ 193 ರಾಷ್ಟ್ರಗಳಲ್ಲಿ 149ನೇ ಸ್ಥಾನದಲ್ಲಿದೆ. ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿರುವ ದೇಶದಲ್ಲಿ ಲೋಕಸಭೆಯಲ್ಲಿ ಶೇ.14 ಮತ್ತು ರಾಜ್ಯಸಭೆಯಲ್ಲಿ ಶೇ.11ರಷ್ಟು ಮಾತ್ರ ಮಹಿಳಾ ಪ್ರಾತಿನಿಧ್ಯವಿದೆ.
ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಹೇಳುವಂತೆ ಯುರೋಪ್ ಮತ್ತು ಉತ್ತರ ಅಮೆರಿಕದ ಸಂಪುಟಗಳಲ್ಲಿ ಶೇ.31.6ರಷ್ಟು ಮಹಿಳೆಯರು ಹಾಗೂ ದಕ್ಷಿಣ ಅಮೆರಿಕ ಮತ್ತು ಕೆರಿಬಿಯನ್ ಸಂಪುಟಗಳಲ್ಲಿ ಶೇ.30.1ರಷ್ಟು ಮಹಿಳೆಯರು ಪ್ರಾತಿನಿಧ್ಯ ಹೊಂದಿದ್ದಾರೆ. ಆದರೆ ಭಾರತದ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಇನ್ನೂ ದುಸ್ಥಿತಿಯಲ್ಲಿಯೇ ಇದೆ. ಇದಕ್ಕೆ ಕಾರಣಗಳೇನು?
ಅನಕ್ಷರತೆ: ಇದು ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಣಗೊಳಿಸಲು ಇರುವ ದೊಡ್ಡ ಅಡಚಣೆ. ಭಾರತದಲ್ಲಿ ಪುರುಷರಲ್ಲಿ ಸಾಕ್ಷರರ ಪ್ರಮಾಣ ಶೇ.82 ಇದ್ದರೆ, ಮಹಿಳೆಯರಲ್ಲಿ ಶೇ.65ರಷ್ಟು ಮಾತ್ರ.
ರಾಜಕೀಯ ಇಚ್ಛಾಶಕ್ತಿ ಕೊರತೆ: ಮಹಿಳಾ ಮೀಸಲಾತಿ ಮಸೂದೆ ಪಾಸಾಗಲು ಎಷ್ಟು ಕಾಲ ಬೇಕಾಯಿತು ಎಂಬುದನ್ನು ಗಮನಿಸಿದರೆ ರಾಜಕೀಯ ಇಚ್ಛಾಶಕ್ತಿ ಕೊರತೆ ಎಷ್ಟೊಂದಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಈಗ ಮಸೂದೆ ಪಾಸಾದ ಬಳಿಕವೂ ಅದನ್ನು ವಾಸ್ತವಕ್ಕಿಳಿಸುವ ಬಗ್ಗೆ ನಿಜವಾಗಿಯೂ ಯಾರಿಗಾದರೂ ಆಸಕ್ತಿ ಇದೆಯೆ ಎಂದು ಕೇಳಬೇಕಾಗಿದೆ.
ಇನ್ನೂ ಕಾಡುತ್ತಲೇ ಇರುವ ಪಿತೃಪ್ರಧಾನ ವ್ಯವಸ್ಥೆಯ ನೆರಳು: ಮಹಿಳೆ ರಾಜಕೀಯದಲ್ಲಿದ್ದರೂ, ಆಕೆಯ ಹಿಂದೆ ನಿಂತು ಪುರುಷರೇ ಅಧಿಕಾರ ನಡೆಸುವ ಸನ್ನಿವೇಶವೂ ಹೆಚ್ಚಾಗಿ ಗ್ರಾಮೀಣ ರಾಜಕೀಯ ವ್ಯವಸ್ಥೆಯಲ್ಲಿ ಕಾಣಿಸುತ್ತದೆ.
ಲಿಂಗ ಅಸಮಾನತೆ: ಶಿಕ್ಷಣ, ಸಂಪನ್ಮೂಲ ಮಾಲಕತ್ವ ಮೊದಲಾದವುಗಳಲ್ಲಿ ಲಿಂಗ ಪಕ್ಷಪಾತ ಮತ್ತು ಅಸಮಾನತೆಗಳನ್ನು ಮಹಿಳೆಯರು ಈಗಲೂ ಎದುರಿಸುತ್ತಲೇ ಇದ್ದಾರೆ.
ಆತ್ಮವಿಶ್ವಾಸ ಮತ್ತು ಹಣಕಾಸಿನ ಕೊರತೆ: ಮಹಿಳೆಯರು ರಾಜಕೀಯದಲ್ಲಿ ವೃತ್ತಿಜೀವನವನ್ನು ಮುಂದುವರಿಸುವುದಕ್ಕೆ ಇವು ಕೂಡ ಅಡ್ಡಿಯಾಗಿವೆ.
ಗೃಹಕೃತ್ಯದಲ್ಲಿಯೇ ಕಳೆದುಹೋಗುವುದು: ಮಹಿಳೆಯರು ಹೆಚ್ಚಾಗಿ ಮನೆ, ಮಕ್ಕಳ ಪಾಲನೆ ಎಂದೇ ಮುಳುಗಿಹೋಗುವುದರಿಂದ, ಸಾರ್ವಜನಿಕ ಬದುಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾರದೆ ಅವರು ಹಿಂದಕ್ಕುಳಿಯುವಂತಾಗಿದೆ.
ದೂಷಣೆ ಮತ್ತು ನಿಂದನೆ: ಪ್ರಚಾರದ ಸಮಯದಲ್ಲಿ ಮಹಿಳೆಯರು ಎದುರಿಸುವ ಈ ಕಷ್ಟ ಕೂಡ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಇರುವ ದೊಡ್ಡ ಅಡೆತಡೆ.
2019ರಲ್ಲಿ ಬಿಡುಗಡೆಯಾದ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್‌ನ ವರದಿಯ ಪ್ರಕಾರ, ಕಳೆದ ಲೋಕಸಭೆ ಚುನಾವಣೆಯಲ್ಲಿ 724 ಮಹಿಳಾ ಅಭ್ಯರ್ಥಿಗಳಿದ್ದರು. ರಾಜಕೀಯ ಪಕ್ಷಗಳಲ್ಲಿ, ಪಶ್ಚಿಮ ಬಂಗಾಳದ ಆಡಳಿತಾರೂಢ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಳೆದ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.37ರಷ್ಟು ಟಿಕೆಟ್ ನೀಡಿದ ಏಕೈಕ ಪಕ್ಷ. ಟಿಎಂಸಿಯ 62 ಅಭ್ಯರ್ಥಿಗಳಲ್ಲಿ 23 ಮಹಿಳೆಯರಿದ್ದರು. ಒಡಿಶಾದ ಪ್ರಾದೇಶಿಕ ಪಕ್ಷ ಬಿಜು ಜನತಾ ದಳ (ಬಿಜೆಡಿ) ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್ ನೀಡಿತ್ತು. ಇದಲ್ಲದೆ, ಸಂಸತ್ತಿನಲ್ಲಿ 33 ಪ್ರತಿಶತದಷ್ಟು ಸಂಸದರು ಮಹಿಳೆಯರಿರುವ ಏಕೈಕ ಪಕ್ಷ ಕೂಡ ಬಿಜೆಡಿ ಎಂದು ಆ ವರದಿ ಹೇಳುತ್ತದೆ. ಆದರೆ ವಿಧಾನಸಭೆಯಲ್ಲಿ ಅದರ ಮಹಿಳಾ ಪ್ರಾತಿನಿಧ್ಯ ಕೇವಲ ಶೇ.14 ಇದೆ.
ಚುನಾಯಿತ ಪ್ರತಿನಿಧಿಗಳ ವಿಷಯದಲ್ಲಿ, ಮಹಾರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಉತ್ತರ ಪ್ರದೇಶದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಸೇರಿದಂತೆ ಸಂಸತ್ತಿನಲ್ಲಿ ಶೇ.33 ಅಥವಾ ಅದಕ್ಕಿಂತ ಹೆಚ್ಚು ಮಹಿಳಾ ಸಂಸದರನ್ನು ಹೊಂದಿರುವ ಇನ್ನೂ ಕೆಲವು ಪಕ್ಷಗಳಿವೆ. ಆದರೆ, ಈ ಪಕ್ಷಗಳ ಒಟ್ಟು ಮಹಿಳಾ ಸಂಸದರ ಸಂಖ್ಯೆ ಐದಕ್ಕಿಂತ ಕಡಿಮೆ.
ಎಡಿಆರ್‌ನ ಮತ್ತೊಂದು ವರದಿಯ ಪ್ರಕಾರ, ಸಂಸತ್ತಿನ ಎರಡೂ ಸದನಗಳಲ್ಲಿನ ಒಟ್ಟು 767 ಸಂಸದರಲ್ಲಿ 656 ಪುರುಷರಿದ್ದರೆ, ಮಹಿಳೆಯರು 111. ಅಂದರೆ ಶೇ.15ರಷ್ಟು. ಇವರಲ್ಲಿ ಅರ್ಧಕ್ಕಿಂತ ಹೆಚ್ಚು, ಅಂದರೆ 389 ಸಂಸದರು ಬಿಜೆಪಿಯವರೇ. ಕೇಂದ್ರದ ಆಡಳಿತಾರೂಢ ಪಕ್ಷ ಕೇವಲ 55 ಮಹಿಳೆಯರಿಗೆ ಸ್ಥಾನ ನೀಡಿದ್ದು, ಈ ಪ್ರಮಾಣ ಕೇವಲ ಶೇ.14ರಷ್ಟಿದೆ. ಪಕ್ಷ ಶೇ.33ರ ಮಹಿಳಾ ಮೀಸಲಾತಿ ಸೂತ್ರ ಅನುಸರಿಸಿದ್ದರೆ ಅದರ ಮಹಿಳಾ ಸಂಸದರ ಸಂಖ್ಯೆ ಕನಿಷ್ಠ 128 ಆಗಬೇಕು. ಅಂದರೆ ಅದು ಈಗಿರುವುದಕ್ಕಿಂತಲೂ 73 ಹೆಚ್ಚು. ಬಿಜೆಪಿಯಲ್ಲಿ ಮಹಿಳಾ ಸಂಸದರು ಮತ್ತು ಪುರುಷ ಸಂಸದರ ಅನುಪಾತ 1ಕ್ಕೆ 6 ಇದೆ ಎಂದು ಅಂಕಿಅಂಶಗಳು ಹೇಳುತ್ತವೆ.
ಬಿಜೆಪಿ ನಂತರ ಸಂಸತ್ತಿನಲ್ಲಿ 81 ಸದಸ್ಯರನ್ನು ಹೊಂದಿರುವ ಪಕ್ಷ ಕಾಂಗ್ರೆಸ್. ಈ ಪ್ರಮಾಣ ಶೇ.15ರಷ್ಟಿದೆ. ಅಂದರೆ ಬಿಜೆಪಿಗಿಂತಲೂ ಶೇ.1ರಷ್ಟು ಹೆಚ್ಚು ಮಹಿಳಾ ಪ್ರಾತಿನಿಧ್ಯವನ್ನು ಕಾಂಗ್ರೆಸ್ ಹೊಂದಿದೆ.
ಸಂಸತ್ತಿನಲ್ಲಿನ ನಂತರದ ದೊಡ್ಡ ಪಕ್ಷ ಟಿಎಂಸಿ ತನ್ನ 36 ಸಂಸದರಲ್ಲಿ ಒಬ್ಬರ ಉಚ್ಚಾಟನೆಗೆ ಮೊದಲು 11 ಮಹಿಳಾ ಸಂಸದರನ್ನು ಹೊಂದಿತ್ತು. ಅಂದರೆ ಈ ಪ್ರಮಾಣ ಶೇ.31ರಷ್ಟಿದ್ದು ಉತ್ತಮ ಪ್ರಾತಿನಿಧ್ಯವಾಗಿದೆ.
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 34 ಸಂಸದರನ್ನು ಹೊಂದಿದೆ ಆದರೆ ಕೇವಲ ಮೂವರು ಮಹಿಳೆಯರನ್ನು (ಶೇ.9) ಹೊಂದಿದೆ. ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ 31 ಸಂಸದರನ್ನು ಹೊಂದಿದೆ ಆದರೆ ಅವರಲ್ಲಿ ಮಹಿಳಾ ಸಂಸದರು ನಾಲ್ವರು (ಶೇ. 13) ಮಾತ್ರ.
ಭಾರತದಲ್ಲಿನ ವಿಧಾನಸಭೆಗಳಾದ್ಯಂತ ಇರುವ 4,001 ಶಾಸಕರಲ್ಲಿ ಕೇವಲ 378 ಅಂದರೆ ಶೇ.9ರಷ್ಟು ಮಾತ್ರ ಮಹಿಳೆಯರಿದ್ದಾರೆ. ಎರಡು ದೊಡ್ಡ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ವಿಧಾನಸಭೆಗಳಲ್ಲಿ ಇರುವುದಕ್ಕಿಂತ ಉತ್ತಮ ಮಹಿಳಾ ಪ್ರಾತಿನಿಧ್ಯವನ್ನು ಸಂಸತ್ತಿನಲ್ಲಿ ಹೊಂದಿವೆ.
4,001 ಶಾಸಕರ ಪೈಕಿ ಕನಿಷ್ಠ 1,356 ಮಂದಿ ಬಿಜೆಪಿಯವರಿದ್ದು, ಅವರಲ್ಲಿ ಕೇವಲ 135 ಅಂದರೆ ಶೇ. 10ರಷ್ಟು ಮಹಿಳೆಯರಿದ್ದಾರೆ. 719 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ನಲ್ಲಿ ಕೇವಲ 65 ಮಹಿಳಾ ಶಾಸಕರಿದ್ದಾರೆ. ಅಂದರೆ ಈ ಪ್ರಮಾಣ ಶೇ.9ರಷ್ಟು ಮಾತ್ರ.
ಭಾರತದ ಸಂವಿಧಾನವನ್ನು ರಚಿಸುವಾಗ, ಅಂಬೇಡ್ಕರ್ ಅವರು ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆಯನ್ನು ಪ್ರತಿಪಾದಿಸಿದ್ದರು. ಆದರೆ, ಅದಿನ್ನೂ ಕನಸಾಗಿಯೇ ಉಳಿದಿದೆ.
1996ರಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟ ಮಹಿಳಾ ಮೀಸಲಾತಿ ಮಸೂದೆ 25 ವರ್ಷಗಳಿಗೂ ಹೆಚ್ಚು ಕಾಲ ಹಾಗೆಯೇ ಉಳಿಯಿತು. ಕಳೆದ ವರ್ಷವಷ್ಟೇ ಅಂಗೀಕೃತವಾಗಿದ್ದರೂ, ಅದರ ಜಾರಿಗೆ ಇನ್ನೂ ಮತ್ತೆಷ್ಟು ಕಾಲ ಹಿಡಿಯುತ್ತದೆಯೋ ಗೊತ್ತಿಲ್ಲ.
ಮಹಿಳಾ ಮೀಸಲಾತಿ ನಿಜವಾಗಿಯೂ ಯಾವಾಗ ವಾಸ್ತವದಲ್ಲಿ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಪಕ್ಷಗಳು ತಮ್ಮ ನೆಲೆಯಲ್ಲಾದರೂ ಟಿಕೆಟ್ ನೀಡುವಾಗ ಮಹಿಳೆಯರಿಗೆ ಆದ್ಯತೆ ನೀಡಬೇಕಿದೆ.
ಆದರೆ ಗೆಲ್ಲುವ ಮಾನದಂಡಗಳನ್ನು ಮುಂದೆ ಮಾಡುವ ಪಕ್ಷಗಳು ಅಲ್ಲಿಯೂ ಹಿಂದೇಟು ಹಾಕುತ್ತಲೇ ಇವೆ.