ಮಹಿಳಾ ಮೀಸಲಾತಿ: ಅಂಗೀಕಾರವಾದರೂ ಅತಂತ್ರ ಸ್ಥಿತಿ
27ವರ್ಷಗಳಿಂದ ಇದ್ದ ಮಹಿಳಾ ಮೀಸಲಾತಿ ಕುರಿತ ಪ್ರಸ್ತಾಪ, ಒತ್ತಾಯ ಕಡೆಗೂ ಕಾಯ್ದೆಯಾಗುವ ಹಾದಿಯಲ್ಲಿದೆ. ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಗೆ ಬಹುದೊಡ್ಡ ಅವಕಾಶವನ್ನು ಒದಗಿಸಲಿದೆ ಎಂಬ ನಿರೀಕ್ಷೆಯಿರುವ ಮಹಿಳಾ ಮೀಸಲಾತಿ ಮಸೂದೆ ಅವತ್ತಿನಿಂದಲೂ ಒಂದು ಬಗೆಯ ಕಗ್ಗಂಟು ಮತ್ತು ಅಪೂರ್ಣತೆಯೊಂದಿಗೇ ಇತ್ತು. ಹತ್ತು ಹಲವು ತಕರಾರುಗಳೂ ಇದ್ದವು. ಈಗಲೂ ಅವೆಲ್ಲವೂ ಬಗೆಹರಿದಂತಿಲ್ಲ ಎಂಬುದು ನಿಜ.
ಏನಿದು ಮಹಿಳಾ ಮೀಸಲಾತಿ ಮಸೂದೆ?
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಕಲ್ಪಿಸುವ ಮಸೂದೆ ಇದು.
ಪ್ರಸ್ತುತ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಶೇ. 14ರಷ್ಟು ಮಾತ್ರ ಇದೆ.
ಅಧಿಕೃತವಾಗಿ ಮೀಸಲಾತಿ ಕಲ್ಪಿಸಿದ ಚುನಾವಣೆಯಿಂದ 15 ವರ್ಷಗಳವರೆಗೆ ಇದು ಜಾರಿಯಲ್ಲಿರುತ್ತದೆ.
ಆನಂತರ, ಪರಿಸ್ಥಿತಿ ಆಧರಿಸಿ ಮುಂದುವರಿಸುವ ನಿರ್ಧಾರ ಕೈಗೊಳ್ಳಲು ಅವಕಾಶವಿದೆ.
ಮೋದಿ ಸರಕಾರ ನಾರಿ ಶಕ್ತಿ ವಂದನಾ ಅಧಿನಿಯಮ ಎಂಬ ಹೆಸರಿನಲ್ಲಿ ಮಸೂದೆ ಮಂಡಿಸಿದ್ದು, ಅಂಗೀಕಾರವಾಗಿದೆ. ಆದರೆ, ಇದು ಈಗ ಜಾರಿಯಾಗುವುದಿಲ್ಲ. 2029ರ ಹೊತ್ತಿಗೆ ಜಾರಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಖಚಿತವಿಲ್ಲ.
ಕೆಲವು ತಾಂತ್ರಿಕ ಪ್ರಕ್ರಿಯೆಗಳ ನಿಬಂಧನೆಯನ್ನು ಮಸೂದೆಯಲ್ಲಿ ಸೇರಿಸಲಾಗಿರುವುದು ಇದಕ್ಕೆ ಕಾರಣ. ಅದರ ಪ್ರಕಾರ, ಜನಗಣತಿ ಮತ್ತು ಲೋಕಸಭಾ ಕ್ಷೇತ್ರ ಮರುವಿಂಗಡಣೆ ಬಳಿಕವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಅವಕಾಶವಿದೆ. ಮೊದಲು ಜನಗಣತಿ ನಡೆಯಬೇಕು. ಜನಗಣತಿ 2027ರಲ್ಲಿ ನಡೆಯುವ ಸಾಧ್ಯತೆಯಿದೆ. ಅದಾದ ಬಳಿಕ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾಗಬೇಕು.
ಈಗ ಪ್ರಶ್ನೆಯಿರುವುದು, 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಇನ್ನೂ ಆರು ವರ್ಷಗಳಷ್ಟು ಮುಂದಕ್ಕೆ ಹಾಕಿ ಕುಳಿತಿರುವ ಸರಕಾರ, ಆಮೇಲಾದರೂ ಅದನ್ನು ಮಾಡೀತೆ? ಎಂಬುದು. ಅನಂತರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಆದೀತೆ? ಕ್ಷೇತ್ರ ವಿಂಗಡಣೆ ಬಳಿಕ ತಲೆದೋರುವ ತಂಟೆ ತಕರಾರುಗಳು ಏನೇನಿರಬಹುದು? ಎಂಬ ಪ್ರಶ್ನೆಗಳೂ ಇವೆ.
ಮಸೂದೆ ಜಾರಿಯೇನಿದ್ದರೂ ಆಮೇಲಿನ ಮಾತು. ಹಾಗಾಗಿಯೇ, ಹಲವು ಷರತ್ತುಗಳಿಂದ ಕೂಡಿರುವ ಈ ಮಸೂದೆಯೇ ನಕಲಿ, ಇದು ಮುಂದಿನ 10 ವರ್ಷಗಳಲ್ಲಿಯೂ ಜಾರಿಯಾಗುವುದು ಅಸಾಧ್ಯ ಎಂದು ಕೆಲವು ಪ್ರತಿಪಕ್ಷಗಳು ಟೀಕಿಸಿವೆ.
ಮಸೂದೆಯ ಬಗ್ಗೆ ಎದ್ದಿರುವ ತಕರಾರುಗಳೇನು?
ಈ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಮೀಸಲಾತಿಯೇ ಇಲ್ಲ. ಮಸೂದೆ ಈಗಿರುವಂತೆಯೇ ಜಾರಿಯಾದರೆ, ಮೀಸಲಾತಿಯೆಲ್ಲ ಮುಂದುವರಿದ ಜಾತಿಯ ಮಹಿಳೆಯರ ಪಾಲಾಗಿ, ಹಿಂದುಳಿದ ಸಮುದಾಯಗಳ ಮಹಿಳೆಯರು ಪ್ರಾತಿನಿಧ್ಯದ ಅವಕಾಶ ಕಳೆದು ಕೊಳ್ಳುತ್ತಾರೆ. ಅದರಿಂದ ಮಹಿಳಾ ಮೀಸಲಾತಿಯ ಉದ್ದೇಶವೇ ಸಾಕಾರವಾಗುವುದಿಲ್ಲ ಎಂಬುದು ಈಗ ಎದ್ದಿರುವ ಕಳವಳ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಒಟ್ಟು ಸ್ಥಾನಗಳಲ್ಲಿ ಅದೇ ಸಮುದಾಯದ ಮಹಿಳೆಯರಿಗೆ ಒಳಮೀಸಲಾತಿ ಕಲ್ಪಿಸಲಾಗಿದೆ. ಆದರೆ ಸಾಮಾನ್ಯ ಕ್ಷೇತ್ರಗಳಿಗೆ ಇರುವ ಒಟ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಮಸೂದೆಯ ಒಳಗೆ ಒಬಿಸಿ ವರ್ಗಕ್ಕೆ ಮೀಸಲಾತಿ ಕಲ್ಪಿಸಿಲ್ಲ.
ಬೇಡಿಕೆಯ ಪ್ರಕಾರ, ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ ಶೇ.33 ಸ್ಥಾನಗಳೆಂದರೆ ಒಟ್ಟು ಮಹಿಳಾ ಮೀಸಲು ಸ್ಥಾನಗಳು 181; ಈ 181 ಮಹಿಳಾ ಮೀಸಲು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.15.46ರಂತೆ ಒಳಮೀಸಲಾತಿಯಡಿ ಮೀಸಲಿರಿಸಬೇಕಾದ ಸ್ಥಾನಗಳು 28; 181 ಸ್ಥಾನಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.8.65ರಂತೆ ಒಳಮೀಸಲಾತಿಯಡಿ ಮೀಸಲಿರಿಸಬೇಕಾದ ಸ್ಥಾನಗಳು 15; 181 ಸ್ಥಾನಗಳಲ್ಲಿ ಒಬಿಸಿ ಸಮುದಾಯಕ್ಕೆ ಶೇ.27ರಂತೆ ಒಳಮೀಸಲಾತಿಯಡಿ ಮೀಸಲಿರಿಸಬೇಕಾದ ಸ್ಥಾನಗಳು 48.
ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ 181 ಸ್ಥಾನಗಳು ಮಹಿಳೆಯರಿಗೆ ದೊರೆಯುವ ಸ್ಥಾನಗಳಾದ ಬಳಿಕ ಇರುವ 362 ಸ್ಥಾನಗಳ ವರ್ಗವಾರು ಹಂಚಿಕೆಯಂತೆ, ಪರಿಶಿಷ್ಟ ಜಾತಿಗಳಿಗೆ ಮೀಸಲಿರಿಸಿದ ಕ್ಷೇತ್ರಗಳು 84; ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಕ್ಷೇತ್ರಗಳು 47; ಸಾಮಾನ್ಯ ವರ್ಗಗಳಿಗೆ ಉಳಿಯುವ ಸ್ಥಾನಗಳು 231.
ಆದರೆ, ಮಸೂದೆ ಈಗಿರುವ ಸ್ವರೂಪದಲ್ಲಿ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ 84 ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ 47 ಸೇರಿ ಒಟ್ಟು 131 ಸ್ಥಾನಗಳನ್ನು ಹೊರತುಪಡಿಸಿ, ಉಳಿದ 412 ಸ್ಥಾನಗಳಲ್ಲಿ ಶೇ.33ರ ಮೀಸಲಾತಿ ಕಲ್ಪಿಸಲಾಗಿದೆ. ಅದರಂತೆ ಸಾಮಾನ್ಯ ವರ್ಗದ ಮಹಿಳೆಯರಿಗೆ ದೊರೆಯುವ ಸ್ಥಾನಗಳು - 137
ಹಾಗೂ ಸಾಮಾನ್ಯ ವರ್ಗಗಳಿಗೆ ಉಳಿಯುವ ಸ್ಥಾನಗಳು 275.
ಅಂದರೆ, ಸಂಸತ್ತಿನ 543 ಸ್ಥಾನಗಳಲ್ಲಿ 181 ಸ್ಥಾನಗಳು ಮಹಿಳೆಯರಿಗೆ ದೊರೆಯುತ್ತವಾದರೂ, ಮಹಿಳಾ ಮೀಸಲಾತಿಯೊಳಗೆ ಒಬಿಸಿ ಸಮುದಾಯಕ್ಕೆ ಸಿಗಬಹುದಾಗಿದ್ದ ಸ್ಥಾನಗಳು ಇಲ್ಲವಾಗುತ್ತವೆ. ಆ ಸ್ಥಾನಗಳೆಲ್ಲ ಸಾಮಾನ್ಯ ವರ್ಗದಲ್ಲಿ ಸೇರಿಹೋಗಿ, ಪ್ರಬಲ ಸಮುದಾಯಗಳ ಪಾಲಾಗುತ್ತವೆ. ಮತ್ತು ಒಬಿಸಿ ಸಮುದಾಯದ ಮಹಿಳೆಯರು ಸಾಮಾನ್ಯ ವರ್ಗದ ಮಹಿಳೆಯರೊಂದಿಗೆ ಪ್ರಾತಿನಿಧ್ಯಕ್ಕಾಗಿ ಪೈಪೋಟಿ ನಡೆಸಬೇಕಾಗುತ್ತದೆ. ಇದು ಬಹುದೊಡ್ಡ ಜನಸಂಖ್ಯೆಯುಳ್ಳ ಸಮುದಾಯವನ್ನು ಪ್ರಾತಿನಿಧ್ಯದ ಸಾಧ್ಯತೆಯಿಂದ ದೂರವಿಡಲಿದೆ ಎಂಬುದು ಈಗಿರುವ ಆಕ್ಷೇಪ.
ಇದನ್ನೇ ರಾಹುಲ್ ಗಾಂಧಿಯವರು ಪ್ರಸ್ತಾಪಿಸಿದ್ದು, ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದೆ ಇರುವ ಕಾರಣ ಇದು ಅಪೂರ್ಣ ಮಸೂದೆ ಎಂದಿದ್ದಾರೆ. ಮಾತ್ರವಲ್ಲ, ಜಾತಿ ಗಣತಿಗೂ ಒತ್ತಾಯಿಸಿದ್ದಾರೆ. ಒಬಿಸಿ ಮಹಿಳೆಯರಿಗೆ ಮೀಸಲಾತಿ ಇಲ್ಲದೆ ಮಸೂದೆ ಅಪೂರ್ಣ ಎಂಬ ಅಭಿಪ್ರಾಯವನ್ನು ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಕೂಡ ವ್ಯಕ್ತಪಡಿಸಿದ್ದಾರೆ.
ಇನ್ನು, ಜನಗಣತಿ, ಕ್ಷೇತ್ರ ಪುನರ್ ವಿಂಗಡಣೆ ಕುರಿತ ನಿಬಂಧನೆಗಳನ್ನು ಮಸೂದೆಯೊಳಗೆ ಸೇರಿಸಿರುವುದರ ಬಗ್ಗೆಯೂ ತೀವ್ರ ಆಕ್ಷೇಪಗಳು ಎದ್ದಿವೆ. ಈ ಮಸೂದೆಯನ್ನು ಜಾರಿಗೆ ತರಲು ಹೊಸ ಜನಗಣತಿ, ಡಿಲಿಮಿಟೇಶನ್ ಅಗತ್ಯವಿದೆ ಎಂಬ ಕಲ್ಪನೆಯೇ ವಿಚಿತ್ರವಾಗಿದೆ ಎಂದು ಟೀಕಿಸಿರುವ ರಾಹುಲ್, ಈ ಮಸೂದೆಯನ್ನು ಈಗಲೇ ಜಾರಿಗೆ ತರಬಹುದು. ತಕ್ಷಣವೇ ಜಾರಿಗೊಳಿಸಬೇಕು ಕೂಡ ಎಂದೂ ಒತ್ತಾಯಿಸಿದ್ದಾರೆ. ಸೋನಿಯಾ ಗಾಂಧಿಯವರು ಕೂಡ ಒಬಿಸಿ ಮಹಿಳೆಯರಿಗೆ ಮೀಸಲಾತಿ ಮತ್ತು ತಕ್ಷಣವೇ ಮಸೂದೆ ಜಾರಿಗೆ ಆಗ್ರಹಿಸಿದ್ದಾರೆ.
ಮಹಿಳಾ ಮೀಸಲಾತಿಯನ್ನು ಈಗ ಜಾರಿಗೊಳಿಸುವ ಪ್ರಮೇಯ ಬರದಂತೆ ಮಾಡಲೆಂದೇ ಈ ಜನಗಣತಿ ಮತ್ತು ಡಿಲಿಮಿಟೇಷನ್ ಷರತ್ತುಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ ಎಂಬುದು, ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ, ಕಾಂಗ್ರೆಸ್‌ನ ಸುಪ್ರಿಯಾ ಶ್ರಿನೇತ್, ಜೈರಾಮ್ ರಮೇಶ್ ಮೊದಲಾದವರ ತಕರಾರು.
ಮಸೂದೆ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತಿದೆಯಾದರೂ, ಮಹಿಳೆಯರಿಗೆ ನಿಜವಾಗಿಯೂ ಸಿಗಬೇಕಿರುವ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಮುಂದೇನಾಗಲಿದೆ ಎಂಬುದು ಇನ್ನೂ ಪ್ರಶ್ನೆಯೇ ಆಗುಳಿದಿದೆ.