ಮುರಿದುಬಿದ್ದ ತುಂಗಾಭದ್ರ ಅಣೆಕಟ್ಟಿನ 19ನೇ ಗೇಟ್ ಲಿಂಕ್: ತೀರವಾಸಿಗಳಿಗೆ ಆತಂಕ
ಭರ್ತಿಯಾಗಿರುವ ಜಲಾಶಯದಿಂದ ನೀರು ಖಾಲಿ ಮಾಡುವ ಕಾರ್ಯ ಆರಂಭ
ತುಂಗಾ ಭದ್ರ ಅಣೆಕಟ್ಟು (ಫೈಲ್ ಫೋಟೋ)
ವಿಜಯನಗರ, ಆ.11: ತುಂಗಭದ್ರಾ ಆಣೆಕಟ್ಟಿನ ಗೇಟ್ ನಂ.19ರಲ್ಲಿ ಚೈನ್ ಲಿಂಕ್ ತುಂಡಾದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ತುಂಗಭದ್ರಾ ಅಣೆಕಟ್ಟಿನ ಮೇಲಿರುವ ಅಧಿಕಾರಿಗಳ ಕಚೇರಿಯಲ್ಲಿ ಟಿ.ಬಿ. ಬೋರ್ಡ್ ಅಧಿಕಾರಿಗಳು ಎಂದಿನಂತೆ ಶನಿವಾರ ರಾತ್ರಿಯೂ ಕರ್ತವ್ಯದಲ್ಲಿ ನಿರತರಾಗಿದ್ದರು. ರಾತ್ರಿ 11:10ರ ವೇಳೆ ವಿಚಿತ್ರವಾದ ಶಬ್ದ ಕೇಳಿದೆ. ತಕ್ಷಣವೇ ಅಧಿಕಾರಿಗಳು ಪರಿಶೀಲಿಸಿದಾಗ ಗೇಟ್ ನಂ.19 ಚೈನ್ ಲಿಂಕ್ ಕಟ್ ಆಗಿದ್ದು, ಗೇಟ್ ಕಾಣಿಸುತ್ತಿರಲಿಲ್ಲ. ಇದರಿಂದ ಗೇಟ್ ನಂ.19 ರಿಂದ ಅಂದಾಜು 35000 ಕ್ಯೂಸೆಕ್ ನೀರು ಹರಿದು ನದಿ ಸೇರುತ್ತಿದೆ.
ವಿಷಯ ತಿಳಿದ ತಕ್ಷಣ ನಗರಭಿವೃದ್ಧಿ ಪ್ರಾಧಿಕಾರ ಎಚ್. ಎನ್.ಮಹಮ್ಮದ್ ಇಮಾಮ ನಿಯಝಿ ಸ್ಥಳಕ್ಕೆ ಧಾವಿಸಿ ಟಿ. ಬಿ.ಬೋರ್ಡ್ ಅಧಿಕಾರಿಗಳು ಜೊತೆಗೆ ಚರ್ಚಿಸಿ ಮುಂಜಾಗ್ರತವಾಗಿ ಟಿ ಬಿ ಡ್ಯಾಮ್ ಅಣೆಕಟ್ಟಿನ ಕೆಳಭಾಗದಲ್ಲಿರುವ ಪ್ರದೇಶಗಳಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ದುರಸ್ತಿಗಾಗಿ ನೀರು ಹೊರಬಿಡುವ ಕಾರ್ಯ ಆರಂಭ
19ನೇ ಕ್ರಸ್ಟ್ ಗೇಟ್ ದುರಸ್ತಿಗಾಗಿ ತುಂಗಭದ್ರಾ ಅಣೆಕಟ್ಟೆಯಿಂದ ನೀರು ಖಾಲಿ ಮಾಡುವ .ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಸದ್ಯ ಎಲ್ಲಾ 33 ಗೇಟ್ಗಳನ್ನು ತೆರೆಯಲಾಗಿದ್ದು, ಸುಮಾರು 1 ಲಕ್ಷ ಕ್ಯುಸೆಕ್ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರು ಭರ್ತಿಯಾಗಿದ್ದು, 60 ಟಿಎಂಸಿ ಅಡಿಯಷ್ಟು ಹೊರಹಾಕಿದರೆ ಅಂದರೆ 20 ಅಡಿ ನೀರಿನ ಮಟ್ಟ ಇಳಿಸಿದರೆ ಮಾತ್ರ ಗೇಟ್ ದುರಸ್ತಿ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ ಸುಮಾರು 2 ಲಕ್ಷ ಕ್ಯುಸೆಕ್ ನೀರನ್ನು ಸತತ ನಾಲ್ಕು ದಿನ ಬಿಟ್ಟರೆ ಮಾತ್ರ ಈ ಮಟ್ಟ ತಲುಪಬಹುದು ಎಂದು ಹೇಳಲಾಗುತ್ತಿದೆ.