ತುಂಗಭದ್ರಾ ಅಣೆಕಟ್ಟು ಗೇಟ್ ಅವಘಡ: ಭತ್ತ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ರೈತರ ಒತ್ತಾಯ
ತುಂಗಭದ್ರಾ ಅಣೆಕಟ್ಟು
ವಿಜಯನಗರ, ಆ.12: ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಬಾರಿ ಕೃಷಿಗೆ ನೀರಿನ ಕೊರತೆ ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ. ಒಂದು ಬೆಳೆಗೆ ಸಹ ನೀರು ಸಿಗುವುದು ಸಂಶಯ ಎಂದೆನಿಸುತ್ತಿದೆ. ಆದ್ದರಿಂದ ಸರಕಾರ ತಕ್ಷಣ ಭತ್ತ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ವಾಸುದೇವ ಮೇಟಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಒಂದು ಬೆಳೆಗೆ ನೀರು ಸಿಗುತ್ತದೆ ಎಂದು ಇನ್ನಷ್ಟು ಮಳೆಯಾದೀತು ಎಂದು ಅಂದಾಜಿಸಿ ಸರ್ಕಾರ ಹೇಳುತ್ತಿದೆ. ಆದರೆ ಹಿಂಗಾರು ಮಳೆ ಕೈಕೊಟ್ಟರೆ ಒಂದು ಬೆಳೆಗೂ ನೀರು ಸಿಗುವುದಿಲ್ಲ. ಆದ್ದರಿಂದ ಸರ್ಕಾರ ತಕ್ಷಣ ಎನ್ ಡಿಆರ್ಎಫ್ ನಿಯಮದ ಪ್ರಕಾರ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕ ಭಾಗದ ಅಣೆಕಟ್ಟುಗಳ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಗೇಟ್ ಒಡೆದು ಹೋಗಿರುವುದಕ್ಕೆ ಕೇವಲ ಅಧಿಕಾರಿಗಳನ್ನು ದೂರುವುದು ಸರಿಯಲ್ಲ, ಅಧಿಕಾರಿಗಳಷ್ಟೇ ಸರಕಾರ ಕೂಡಾ ಇದಕ್ಕೆ ಹೊಣೆಗಾರ ಎಂದವರು ಆರೋಪಿಸಿದರು.
ಮುರಿದುಬಿದ್ದಿರುವ ಗೇಟ್ ಜಾಗಕ್ಕೆ ಇನ್ನೊಂದು ವಾರದೊಳಗೆ ಮರು ಅಳವಡಿಕೆ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಗಾಳೆಪ್ಪ, ಮುಖಂಡರಾದ ಉದಿಯಪ್ಪ ನಾಯಕ್, ಬೀನಾ ರೂಪಕಲಾ, ಬಿ.ಎಸ್.ವೆಂಕಟೇಶ್ ಇತರರು ಉಪಸ್ಥಿತರಿದ್ದರು.