‘ಒಳ ಮೀಸಲಾತಿ’ಗಾಗಿ ಹೋರಾಟ ಅನಿವಾರ್ಯ : ಸಚಿವ ಕೆ.ಎಚ್.ಮುನಿಯಪ್ಪ
ವಿಜಯನಗರ : ಒಳ ಮೀಸಲಾತಿಗಾಗಿ ಪಕ್ಷ ಬೇದ ಮರೆತು ನಾವೆಲ್ಲರೂ ಹೋರಾಟ ಮಾಡಿ, ಕೇಂದ್ರ ಸರಕಾರದ ಮೇಲೆ ಒತ್ತಡ ತಂದಾಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದ್ದಾರೆ.
ರವಿವಾರ ವಿಜಯನಗರ ಜಿಲ್ಲೆ ಮಾದಿಗ ಮಹಾಸಭಾ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಲು, ನಮಗೆ ಮೂಲಭೂತವಾಗಿ ಶಿಕ್ಷಣ ಅತಿ ಮುಖ್ಯವಾಗಿ ಬೇಕಾಗುತ್ತದೆ ಎಂದರು.
ಮಹಾತ್ಮ ಗಾಂಧೀಜಿ ಕನಸು ಕಂಡಂತೆ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಬೋಧಕರ ಮಾರ್ಗದರ್ಶನ ಅತಿ ಮುಖ್ಯ. ಅದೇ ರೀತಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯವಾಗಿರುತ್ತದೆ ಎಂದು ಮುನಿಯಪ್ಪ ಹೇಳಿದರು.
ನಾನು 1991ರಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್ ರವರ ಸರಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಲಹಾ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸಿ ಆಶ್ರಮ ಶಾಲೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದೆ. ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿಯೂ ಆಶ್ರಮ ಶಾಲೆಗಳನ್ನು ನಿರ್ಮಿಸಲು ಸುತ್ತೋಲೆಯನ್ನು ಹೊರಡಿಸಿ ಕಾರ್ಯಗತಗೊಳಿಸಿದ್ದೆ ಎಂದು ಅವರು ಸ್ಮರಿಸಿದರು.
ರಾಜ್ಯದಲ್ಲಿ ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಿದ್ದಾಗ ಕೋಲಾರ ಕ್ಷೇತ್ರದಲ್ಲಿ ಸುಮಾರು 25 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಲಾಯಿತು. ಅವುಗಳಿಂದ ಹಲವಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿದೆ. ಈ ವಸತಿ ಶಾಲೆಗಳಲ್ಲಿ ಶೇಕಡಾವಾರು ಎಲ್ಲಾ ವರ್ಗದ ಮಕ್ಕಳು ದಾಖಲಾಗಲು ಸಹಕಾರಿಯಾಗುತ್ತಿದೆ ಎಂದು ಮುನಿಯಪ್ಪ ಹೇಳಿದರು.
ಮಕ್ಕಳು ಮಾಡಿರುವ ಸಾಧನೆಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತೋಷದ ಸಂಗತಿ. ಮುಂದಿನ ಅವರ ಭವಿಷ್ಯ ಸದೃಢವಾಗಲಿ ಎಂದು ಮುನಿಯಪ್ಪ ಶುಭಕೋರಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮಿ, ಶ್ರೀ ಪೂರ್ಣಾನಂದ ಭಾರತಿ ಸ್ವಾಮಿ, ಶಾಸಕ ಎಚ್.ಆರ್.ಗವಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ರಾಣಿ ಸಂಯುಕ್ತ, ಎಚ್.ಶ್ರೀನಿವಾಸ್ ಹಾಗೂ ಮಾದಿಗ ಮಹಾಸಭಾ ಮುಖಂಡರು, ಸಮುದಾಯದ ನಾಯಕರು, ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳು ಉಪಸ್ಥಿತರಿದ್ದರು.