ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಮೋದಿಯವರಿಗೆ ಖಚಿತವಾಗಿದೆ : ಸಿಎಂ ಸಿದ್ದರಾಮಯ್ಯ
Photo : x/@siddaramaiah
ವಿಜಯನಗರ : ಮೋದಿ ಪ್ರಧಾನಿಯಾಗಿ ಇಡೀ ದೇಶದ ಜನರ ಕೈಗೆ ಚೊಂಬು ಕೊಟ್ಟರು. ಶ್ರೀರಾಮುಲು ಸಚಿವರಾಗಿ, ಸಂಸದರಾಗಿ ಬಳ್ಳಾರಿ ಜಿಲ್ಲೆಗೆ ಚೊಂಬು ಕೊಟ್ಟರು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದಲ್ಲಿ ಸಂಘಟಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
"ತಾವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಮೋದಿಯವರಿಗೆ ಖಚಿತವಾಗಿದೆ. ಆಕ್ಸಿಸ್ ಪ್ರಕಟಿಸಿದ ಖಚಿತವಾದ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸುತ್ತಿರುವುದಕ್ಕೆ ಸೋಲಿನ ಭಯವೇ ಕಾರಣ. ಸೋಲು ಖಚಿತವಾಗುತ್ತಿದ್ದಂತೆ ಹೆಚ್ಚೆಚ್ಚು ಸುಳ್ಳುಗಳನ್ನು ಸೃಷ್ಟಿಸಿ ಭಾರತೀಯರ ನಡುವೆ ಬಿರುಕು ಮೂಡಿಸುತ್ತಾರೆ ಜಾಗ್ರತೆ ವಹಿಸಿ. ಬಿಜೆಪಿ 200 ಸ್ಥಾನ ಗೆದ್ದರೆ ಹೆಚ್ಚು ಎನ್ನುವ ಸಮೀಕ್ಷೆಗಳು ಬಂದಿವೆ. ತಮ್ಮ ಸೋಲನ್ನು ಖಚಿತಪಡಿಸುವ ಸಮೀಕ್ಷೆಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.
"ಮೋದಿ ಮಾಮೂಲಾಗಿಯೇ ಹಸಿ ಹಸಿ ಸುಳ್ಳು ಹೇಳುತ್ತಾರೆ. ಈಗ ಇವರ ಸೋಲಿನ ಖಚಿತ ಸಮೀಕ್ಷೆಗಳು ಬರುತ್ತಿದ್ದಂತೆ ಭಯಾನಕವಾದ ಸುಳ್ಳುಗಳನ್ನು ಸೃಷ್ಟಿಸಿ ಹೋದಲ್ಲಿ ಬಂದಲ್ಲಿ ಸುಳ್ಳು ಹಂಚುತ್ತಾ ಅಡ್ಡಾಡುತ್ತಾರೆ. ಇವರ ಸುಳ್ಳುಗಳಿಗೆ ಭಾರತೀಯರು ಮತ್ತೆ ಮತ್ತೆ ತಲೆ ಒತ್ತೆ ಇಡುವುದಿಲ್ಲ" ಎಂದು ಹೇಳಿದರು.
ಮಹಿಳೆಯರ ಖಾತೆಗೆ ಒಂದು ಲಕ್ಷ ರೂ., ರೈತರ ಸಾಲ ಮನ್ನಾ
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಜಮಾ ಆಗುತ್ತೆ. ನಿರುದ್ಯೋಗಿಗಳ ಖಾತೆಗೂ ಒಂದು ಲಕ್ಷ ರೂಪಾಯಿ ಜಮೆ ಆಗುತ್ತದೆ. ಇಡೀ ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.
ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಇಡೀ ದೇಶದ ರೈತರ 76 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದರು. ಆದರೆ ಮೋದಿ ಅಂಬಾನಿ, ಅದಾನಿಯಂತಹ ಆಗರ್ಭ ಶ್ರೀಮಂತರ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದರು. ರೈತರ ಸಾಲಮನ್ನಾ ಮಾಡಲು ಒಪ್ಪದ ಮೋದಿ ಯಾರ ಪರ ಎನ್ನುವುದನ್ನು ದೇಶದ ಜನರಿಗೆ ಮನವರಿಕೆಯಾಗಿದೆ ಎಂದರು.
ಮೋಹನ್ ಭಾಗವತ್ ಭಯಾನಕ ಸುಳ್ಳು ಹೇಳಿದ್ದಾರೆ
ತಾವು ಮೀಸಲಾತಿಗೆ ವಿರುದ್ಧವಿಲ್ಲ ಎಂದು ಸಂಘ ಪರಿವಾರದ ಮೋಹನ್ ಭಾಗವತ್ ಹೇಳಿರುವುದು ಹಸೀ ಸುಳ್ಳು. ಮೀಸಲಾತಿ ವಿರೋಧಿಸಿ ರಾಜ್ಯಸಭಾ ಸದಸ್ಯ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಾಮಾ ಜೋಯಿಸ್ ಕೋರ್ಟ್ ಮೆಟ್ಟಿಲೇರಿದ್ದು, ದೇಶದ ಹಿಂದುಳಿದ ಸಮುದಾಯಗಳು ಮರೆತಿಲ್ಲ. ಮಂಡಲ್ ವರದಿಗೆ ವಿರೋಧ ಮಾಡಿ ಹಿಂದುಳಿದ ಜಾತಿ-ಸಮುದಾಯಗಳ ಮಕ್ಕಳನ್ನು ಆತ್ಮಹತ್ಯೆಗೆ ತಳ್ಳಿದ್ದು ಇದೇ ಬಿಜೆಪಿ. ಇಂಥಾ ಹಲವು ಉದಾಹರಣೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು ಬಿಜೆಪಿ ಪರಿವಾರ ಹುಟ್ಟಿನಿಂದಲೇ ಮೀಸಲಾತಿ ವಿರೋಧಿಗಳು. ಆದರೆ ಸುಳ್ಳುಗಳ ಮೂಲಕ ಹಿಂದುಳಿದವರನ್ನು ಪದೇ ಪದೇ ವಂಚಿಸುವುದು ಇವರಿಗೆ ರೂಢಿಯಾಗಿದೆ. ಈ ಬಗ್ಗೆ ಎಚ್ಚರದಿಂದ ಇರಿ ಎಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಝಮೀರ್ ಅಹ್ಮದ್, ರಾಮಲಿಂಗಾರೆಡ್ಡಿ ಸೇರಿ ವಿಜಯನಗರ, ಬಳ್ಳಾರಿ ಜಿಲ್ಲೆಯ ಶಾಸಕರುಗಳು, ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದರು.