ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಚರ್ಚೆ ಮಾಡುವುದಿಲ್ಲ : ಸಿಎಂ ಸಿದ್ದರಾಮಯ್ಯ
"ಪ್ರಧಾನಿಯಾಗಿ ಮೋದಿಯವರು ಬಡವರು, ಯುವಕರು, ದಲಿತರು, ಅಲ್ಪಸಂಖ್ಯಾತ ಪರವಾಗಿ ಕೆಲಸ ಮಾಡಿಲ್ಲ"
Photo : x/@siddaramaiah
ವಿಜಯಪುರ : ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರ ದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ರಾಜು ಅಲಗೂರು ಅವರ ಪರವಾಗಿ ಮಾತಾಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿ ಬಡವರು, ಯುವಕರು,ದಲಿತರು ಅಲ್ಪಸಂಖ್ಯಾತ ಪರವಾಗಿ ಕೆಲಸ ಮಾಡಿಲ್ಲ. ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ. ಅವರು ಸಾಧನೆಗಳನ್ನು ಹೇಳದೆ ಭಾವನೆಗಳನ್ನು ಕೆರಳಿಸಿ, ಧರ್ಮ ಧರ್ಮಗಳ ನಡುವೆ, ಜಾತಿಗಳ ನಡುವೆ ಬೆಂಕಿ ಇಡುವ ಕೆಲಸಗಳನ್ನು ಮಾಡಿದ್ದಾರೆ. ಇತ್ತೀಚಿನ ಅವರ ಭಾಷಣಗಳನ್ನು ಗಮನಿಸಿದರೆ ಮೊದಲಹಂತದ ಚುನಾವಣೆಯಲ್ಲಿ ಅವರು ನಿರೀಕ್ಷಿಸಿದ ಮತಗಳು ಬರುವುದಿಲ್ಲ ಎಂದು ಅವರು ಹತಾಶರಾಗಿದ್ದಾರೆ. ಸಂಬಂಧಪಡದ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನದ 15 ಮತ್ತು 16 ನೇ ಕಲಂ ನಲ್ಲಿ ಸ್ಪಷ್ಟವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಹೇಳಲಾಗಿದೆ. ಅದರಲ್ಲಿ ಹಿಂದೂಗಳು ಹಾಗೂ ಮುಸಲ್ಮಾನರು, ಕ್ರಿಶ್ಚಿಯನ್ ಹಾಗೂ ಎಲ್ಲಾ ಜನರೂ ಬರುತ್ತಾರೆ. ಮುಸಲ್ಮಾನರಿಗೆ ಮೀಸಲಾತಿ ಕೊಡಲಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಿಂದೂಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಒಬ್ಬ ಪ್ರಧಾನಮಂತ್ರಿಯಾಗಿ ಈ ರೀತಿ ಮಾತುಗಳನ್ನಾಡುವುದು ಅವರ ಸ್ಥಾನಕ್ಕೆ ಚ್ಯುತಿ ತರುವ ಕೆಲಸ ಎಂದರು.
1977ನಲ್ಲಿಯೇ ಹಾವನೂರು ಆಯೋಗ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಬೇಕೆಂದು ಶಿಫಾರಸ್ಸು ಮಾಡಿದೆ. ಚಿನ್ನಪ್ಪ ರೆಡ್ಡಿ ಆಯೋಗವೂ ಇದನ್ನೇ ಶಿಫಾರಸು ಮಾಡಿದೆ. 2004 ನಲ್ಲಿ ಕರ್ನಾಟಕದಲ್ಲಿ ಮುಸಲ್ಮಾನರಿಗೆ ಮೀಸಲಾತಿಯನ್ನು 2ಬಿ ಅಡಿಯಲ್ಲಿ ಪ್ರಾರಂಭಿಸಲಾಯಿತು. 4.ಶೇ ಮೀಸಲಾತಿಯನ್ನು ಕೊಡಲು ಪ್ರಾರಂಭಿಸಲಾಯಿತು. 1994ರಿಂದ ಈವರೆಗೆ ಮೀಸಲಾತಿ ಹಾಗೆ ಉಳಿದುಕೊಂಡು ಬಂದಿದೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಸಲ್ಮಾನರ ಶೇ.4 ಮೀಸಲಾತಿಯನ್ನು ತೆಗೆದುಹಾಕಿದರು. ಅದರ ವಿರುದ್ಧ ಮುಸ್ಲಿಂ ಮುಖಂಡರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿ, ಬಿಜೆಪಿಯವರು ಅಫಿಡವಿಟ್ ಹಾಕಿ ಯಥಾಸ್ಥಿತಿ ಮುಂದುವರೆಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ಮೀಸಲಾತಿ ನೀಡುತ್ತಿರುವುದು ಸಂವಿಧಾನ ಬಾಹಿರ ಎಂಬಂತೆ ಮಾತನಾಡುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಧೃವೀಕರಣ ಮಾಡುವ ಪ್ರಯತ್ನ ಇದು. ಸುಪ್ರೀಂ ಕೋರ್ಟ್ ಆದೇಶದ ನಂತರ ಹಿಂದೆ ಅವರೇ ಮುಂದುವರೆಸಿ ಈಗ ಹೊಸದಾಗಿ ಕೊಡಲಾಗುತ್ತಿದೆ ಎಂದು ಹೇಳುತ್ತಿರುವುದು ಅತ್ಯಂತ ದೊಡ್ಡ ಸುಳ್ಳು ಎಂದು ಹೇಳಿದರು.
ನರೇಂದ್ರ ಮೋದಿಯವರು ಸುಳ್ಳು ಹೇಳುವುದರಲ್ಲಿ ಪ್ರವೀಣರು. ಸ್ವತಂತ್ರ ಭಾರತದಲ್ಲಿ ಆಗಿ ಹೋದ ಪ್ರಧಾನಮಂತ್ರಿಗಳ ಪೈಕಿ ಅತಿ ಹೆಚ್ಚು ಸುಳ್ಳು ಹೇಳುವುದು ನರೇಂದ್ರ ಮೋದಿಯವರು ಎಂದರು. ಸೋಲುವ ಹತಾಶೆಯಿಂದ ಹೇಳಿರುವುದೇ ಹೊರತು ಯಾವುದೇ ಸಂವಿಧಾನಾತ್ಮಕ ಅಂಶಗಳಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಬಿಜೆಪಿಗೆ ಮತ ಹಾಕಿ 25 ಜನರನ್ನು ಆಯ್ಕೆ ಮಾಡಿದರು. ಆಯ್ಕೆ ಆಗಿರುವ ಯಾವೊಬ್ಬ ಸಂಸದರೂ ಕರ್ನಾಟಕಕ್ಕೆ ಅನ್ಯಾಯದ ಬಗ್ಗೆ ಬಾಯಿ ಬಿಡಲಿಲ್ಲ . ರಾಜ್ಯದ ಹಿತ ಕಾಪಾಡದವರು ಲೋಕಸಭೆಗೆ ಹೋದರೆ ಪ್ರಯೋಜನವಿಲ್ಲ ಎಂದರು.
ಭರವಸೆ ಈಡೇರಿಸದ ಮೋದಿ
ನರೇಂದ್ರ ಮೋದಿಯವರು 2014ರ ನೀಡಿದ್ದ ಭರವಸೆಗಳನ್ನು ನೆನೆಸಿಕೊಳ್ಳಬೇಕು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಹಾಕಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ, ರೈತರ ಆದಾಯ ದುಪ್ಪಟ್ಟು ಆಗಲಿಲ್ಲ, ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಲಿಲ್ಲ. ಅಚ್ಚೇ ದಿನ್ ಬರಲಿಲ್ಲ ಎಂದು ವಿವರಿಸಿದರು.