ವಿಜಯನಗರ | ಚರಂಡಿಗೆ ಬಿದ್ದು ಮಗು ಮೃತ್ಯು: ನಗರಸಭೆ ಎದುರು ಸಾರ್ವಜನಿಕರ ಪ್ರತಿಭಟನೆ
ವಿಜಯನಗರ, ಆ.26: ಹೊಸಪೇಟೆ ತಾಲೂಕಿನ ನಗರಸಭೆ ವ್ಯಾಪ್ತಿಗೆ ಬರುವ 7ನೇ ವಾರ್ಡಿನ ಅನಂತಶಯನ ಗುಡಿಯಲ್ಲಿ ಹರ್ಷಿತಾ ಜೋಗಿ ಮತ್ತು ಮಚ್ಚೇಂದ್ರನಾಥ್ ಜೋಗಿ ದಂಪತಿಯ ನಾಲ್ಕು ವರ್ಷದ ಮಗು ವಿರಾಟ್ ಶುಕ್ರವಾರ ಮಧ್ಯಾಹ್ನ ತೆರದ ಚರಂಡಿಗೆ ಬಿದ್ದು ಮೃತಪಟ್ಟಿದೆ. ಈ ಸಾವಿಗೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಬಂಧಪಟ್ಟ ಜಾಗದ ಮಾಲಕರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಇಲ್ಲಿನ ನಿವಾಸಿಗಳು ನಗರಸಭೆಯ ಎದುರು ಪ್ರತಿಭಟನೆ ನಡೆಸಿದರು.
ಶುಕ್ರವಾರ ಅಪರಾಹ್ನ 3 ಗಂಟೆಗೆ ಮನೆ ಹತ್ತಿರ ಆಟವಾಡಲು ಹೋಗಿದ್ದ ವಿರಾಟ್ ಮನೆಯ ಮುಂದಿದ್ದ ಖಾಸಗಿ ಸ್ಥಳದಲ್ಲಿದ್ದ ಅಗಲವಾದ ಗುಂಡಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಈ ನಡುವೆ ಮಗುವನ್ನು ಹುಡುಕಾಡಿ ಸಿಗದಿದ್ದಾಗ ಹೆತ್ತವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಶೋಧ ನಡೆಸಿದಾಗ ರಾತ್ರಿ 8 ಗಂಟೆ ವೇಳೆ ಚರಂಡಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ತೆರೆದ ಜಾಗದಲ್ಲಿ ಅಷ್ಟು ದೊಡ್ಡದಾಗಿ ಅಗೆದಿರುವ ಗುಂಡಿಯನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಪಟ್ಟ ಜಾಗದ ಮಾಲಕ ದಳವಾಯಿಗೆ ವಿನಂತಿ ಮಾಡಿದ್ದಾರೆ. ಈ ಬಗ್ಗೆ ವಾರ್ಡ್ ಸದಸ್ಯೆ ಕಣಕಮ್ಮ ಗಂಡ ಎರಿಸ್ವಾಮಿಯ ಗಮನಕ್ಕೂ ತಂದಿದ್ದಾರೆ. ಸದಸ್ಯೆ ಮುಚ್ಚಲು ಮುಂದಾದಾಗ ಜಾಗದ ಮಾಲಕ ಅವಕಾಶ ನೀಡಿಲ್ಲ. ಇದರಿಂದ ಇದೀಗ ದುರಂತ ಸಂಭವಿಸಿದೆ ಎಂದು ಮಗುವಿನ ಪೋಷಕರು ಕಣ್ಣೀರು ಹಾಕಿದ್ದಾರೆ.
ಮಗು ಮರಣ ಹೊಂದಿ ಎರಡು ದಿನವಾದರೂ ಜಾಗದ ಮಾಲೀಕ ದಳವಾಯಿ ಅಲ್ಲೇ ಇದ್ದರೂ ಸ್ಥಳಕ್ಕೆ ಬಾರದೇ ಇರುವುದು ಖಂಡನೀಯ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಾರ್ವಜನಿಕರು ಮತ್ತು ನಗರಸಭೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.