ವಿಜಯನಗರ | ಡಾ.ಬಾಬು ಜಗಜೀವನರಾಮ್ ಅವರು ಶೋಷಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು : ಶಾಸಕ ಎಚ್.ಆರ್.ಗವಿಯಪ್ಪ

ವಿಜಯನಗರ(ಹೊಸಪೇಟೆ) : ಮಾಜಿ ಉಪ ಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಅವರು ಸಮಸಮಾಜದ ನಿರ್ಮಾಣ ಮತ್ತು ಶೋಷಿತರ ಹಕ್ಕುಗಳಿಗೆ ಹೋರಾಡಿದ ಧೀಮಂತ ವ್ಯಕ್ತಿ ಎಂದು ಹೊಸಪೇಟೆ ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ಬಾಬು ಜಗಜೀವನರಾಮ್ ಅವರ 118ನೇ ಜನ್ಮ ದಿನಾಚರಣೆ ನಿಮಿತ್ತ ಹುಡಾ ಕಚೇರಿ ಬಳಿಯಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬಾಬೂಜಿ ಸಾಮಾಜಿಕ ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿದವರು. ಶೋಷಿತ ಸಮುದಾಯದ ಮತದಾನದ ಹಕ್ಕುಗಳು, ಸಮಾನ ಅವಕಾಶಗಳಿಗಾಗಿ ದಲಿತ ಸಮುದಾಯದ ಪ್ರತಿನಿಧಿಯಾಗಿ ದುಡಿದಿದ್ದಾರೆ. ದೇಶದ ಕಾರ್ಮಿಕ ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾತಿ ವರ್ಗರಹಿತ ಸಮಸಮಾಜ ಕನಸು ಕಂಡಿದ್ದರು. ಭಾರತದ ಸಾಮಾಜಿಕ ಅಸ್ಥಿರತೆ, ಸ್ವಾತಂತ್ರ್ಯ ಚಳುವಳಿ ಅವರನ್ನು ಹೋರಾಟಕ್ಕೆ ಸ್ಫೂರ್ತಿ ನೀಡಿವೆ. ಅವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಸಹಾಯಕ ಆಯುಕ್ತ ವಿವೇಕಾನಂದ, ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹೆಚ್.ವಿ. ಮಂಜುನಾಥ್, ತಹಸೀಲ್ದಾರ ಎಂ.ಶೃತಿ, ಆರ್‌ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ ದೊಡ್ಡಮನಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ತಾಲೂಕು ಡಾ.ಬಿ.ಆರ್. ಅಂಬೇಡ್ಕರ್ ಅಟೋ ಚಾಲಕರ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀನ್ ರಾಮ್ ಅವರ ಭಾವಚಿತ್ರಗಳನ್ನು ಆಟೋದಲ್ಲಿ ಮೆರವಣಿಗೆ ನಡೆಸಲಾಯಿತು.