ವಿಜಯಪುರ ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ, ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ಗೆ ತೀವ್ರ ಮುಖಭಂಗ
ವಿಜಯಪುರ: ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಮೇಯರ್ ಆಗಿ ಕಾಂಗ್ರೆಸ್ ನ ಮಹೇಜ್ ಬಿನ್ ಅಬ್ದುಲ್ ರಝಾಕ್ ಹೊರ್ತಿ ಹಾಗೂ ಉಪಮೇಯರ್ ಆಗಿ ದಿನೇಶ್ ಹಳ್ಳಿ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಕಾಂಗ್ರೆಸ್ ವಿಜಯಪುರ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಬಿಜೆಪಿ ಶಾಸಕ ಯತ್ನಾಳ್ ಅವರಿಗೆ ತೀವ್ರ ಮುಖಭಂಗವಾಗಿದೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಜ್ ಬಿನ್ ಅಬ್ದುಲ್ ರಝಾಕ್ ಹೊರ್ತಿ ಒಟ್ಟು 22 ಮತ ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಹಾಗೂ ಎಸ್.ಟಿ ಸಮುದಾಯಕ್ಕೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಿನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
10 ಜನ ಕಾಂಗ್ರೆಸ್ ಪಕ್ಷದ ಸದಸ್ಯರು, ಓರ್ವ ಜೆಡಿಎಸ್, ಐವರು ಪಕ್ಷೇತರರು, ಇಬ್ಬರು ಎಐಎಂಐಎಂ ಸದಸ್ಯರ ಬೆಂಬಲ ಮತ್ತು ಸಚಿವ ಎಂಬಿ ಪಾಟೀಲ್, ಶಾಸಕ ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಥೋಡ್ ಮತಗಳ ಬೆಂಬಲದೊಂದಿಗೆ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನ ಗೌಡ ಪಟೀಲ್ ಯತ್ನಾಳ, ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಪೂರ್ಣವಾಗಿ ಅಕ್ರಮ ನಡೆದಿದೆ. ಇದನ್ನು ನಾವು ಒಪ್ಪಲ್ಲ. ಚುನಾವಣಾಧಿಕಾರಿಗಳು ರಾಜ್ಯ ಸರ್ಕಾರದ ಅಣತಿಯಂತೆ ನಡೆದುಕೊಂಡಿದ್ದಾರೆ. ಇದರ ಬಗ್ಗೆ ನಾವು ಕೋರ್ಟ ಮೆಟ್ಟಿಲು ಏರುತ್ತೇವೆ ಎಂದು ಅಸಮಾಧಾನ ಹೊರಹಾಕಿದರು.