ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಅವರನ್ನು ಮುಟ್ಟಲು ಆಗುವುದಿಲ್ಲ : ಝಮೀರ್ ಅಹ್ಮದ್
"ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ"

ವಿಜಯನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಅವರನ್ನು ಯಾರಿಂದಲೂ ಮುಟ್ಟಲು ಆಗುವುದಿಲ್ಲ. ಯಾರಾದರೂ ಮುಟ್ಟಿದರೆ ಭಸ್ಮ ಆಗುತ್ತಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಬುಧವಾರ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಖಾಲಿ ಇದ್ದರೆ ತಾನೇ ಬದಲಾವಣೆಯ ವಿಚಾರ ಬರೋದು. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ ಎಂದು ಹೇಳಿದರು.
ಸರಕಾರ ಹಾಗೂ ಪಕ್ಷದ ನಾಯಕತ್ವ ಬದಲಾವಣೆ ಬಗ್ಗೆ ನಾವು ನಿರ್ಧಾರ ಮಾಡಲು ಆಗುವುದಿಲ್ಲ. ನಮ್ಮದು ಹೈಕಮಾಂಡ್ ಇರುವ ಪಕ್ಷ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿ ನಾವು ಇರಬೇಕಾಗುತ್ತದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರನ್ನು ಬದಲಾವಣೆ ಮಾಡಿ ಎಂದು ಯಾರೂ ಕೇಳಿಲ್ಲ. ದಲಿತ, ಅಲ್ಪಸಂಖ್ಯಾತ, ಲಿಂಗಾಯತ, ಒಕ್ಕಲಿಗ ಹೀಗೆ ಎಲ್ಲ ಸಮಾಜದವರಿಗೂ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ, ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಅವರು ತಿಳಿಸಿದರು.