ಜನಾಭಿಪ್ರಾಯ ಬಂದರೆ ನೂರಕ್ಕೆ ನೂರು ಹೊಸ ಪಕ್ಷ : ಯತ್ನಾಳ್
"ವಿಜಯೇಂದ್ರ ಒಬ್ಬ ಮಹಾಭ್ರಷ್ಟ, ಇವನಿಂದಾಗಿಯೇ ಬಿಎಸ್ವೈ ಜೈಲಿಗೆ ಹೋದರು"

ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ : ʼಹೊಸ ರಾಜಕೀಯ ಪಕ್ಷ ಕಟ್ಟಲಿ ಎಂದು ಜನಾಭಿಪ್ರಾಯ ಬಂದರೆ ನೂರಕ್ಕೆ ನೂರು ರಾಜ್ಯದಲ್ಲಿ ನಾವು ಹೊಸ ರಾಜಕೀಯ ಪಕ್ಷವನ್ನು ಮುಂದಿನ ವಿಜಯದಶಮಿ ದಿನ ಉದ್ಘಾಟನೆ ಮಾಡುತ್ತೇವೆʼ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, " ಹಿಂದೂ ನಾಯಕರನ್ನು ಮೂಲೆಗುಂಪು ಮಾಡುವ ಕುತಂತ್ರವನ್ನು ಯಡಿಯೂರಪ್ಪ ಕುಟುಂಬ ಮಾಡುತ್ತಿದೆ. ಜನಾಭಿಪ್ರಾಯ ಆಧಾರದ ಮೇಲೆ ನಾವು ನಿರ್ಣಯ ಕೈಗೊಳ್ಳುತ್ತೇವೆ. ಜನ ಏನು ಹೇಳುತ್ತಾರೆ ಅದನ್ನು ನಾವು ಮಾಡುತ್ತೇವೆ. ನಾವು ಜನರನ್ನು ಬಿಟ್ಟು ಇರುವುದಿಲ್ಲ" ಎಂದರು.
ಮುಂದಿನ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಅವರನ್ನು ಬಿಂಬಿಸುವುದಾದರೆ ರಾಜ್ಯದ ಜನ ರಾಜ್ಯದ ಅಭಿವೃದ್ಧಿಗೆ, ಸನಾತನ ಧರ್ಮ ರಕ್ಷಣೆ ಮಾಡುವ ನಿರ್ಣಯ ಕೈಗೊಳ್ಳುತ್ತಾರೆ. ವಿಜಯೇಂದ್ರ ಒಬ್ಬ ಮಹಾಭ್ರಷ್ಟ. ಇವನಿಂದಾಗಿಯೇ ಯಡಿಯೂರಪ್ಪ ಜೈಲಿಗೆ ಹೋದರು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನಾವು ಈ ವಿಚಾರವಾಗಿ ಇವತ್ತಿನಿಂದಲೇ ಜನ ಜಾಗೃತಿ ಆರಂಭಿಸುತ್ತೇವೆ. ರಾಜ್ಯದಲ್ಲಿ ಹಿಂದು ರಕ್ಷಣೆಗಾಗಿ ಪಕ್ಷ ಕಟ್ಟಬೇಕು ಎಂದು ನನಗೆ ಬಹಳ ಜನ ಹೇಳುತ್ತಿದ್ದಾರೆ. ನನ್ನ ಹೋರಾಟ ಮೋದಿ ಅವರ ವಿರುದ್ಧ ಅಲ್ಲ, ಪಕ್ಷದ ವಿರುದ್ಧ ಅಲ್ಲ. ಇವರಿಗೆ ಯಡಿಯೂರಪ್ಪ ಕುಟುಂಬವೇ ಬೇಕು ಎಂದರೆ ನಾವು ಮುಕ್ತವಾಗಿ ಮುಂದಿನ ನಿರ್ಣಯ ಮಾಡುತ್ತೇವೆ. ಯಡಿಯೂರಪ್ಪನವರಿಗೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಇದೆ. ಡಿ.ಕೆ. ಶಿವಕುಮಾರ್ ಜೊತೆಗೆ ವ್ಯಾಪಾರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.