ಬಿಜೆಪಿ ವಿಜಯಪುರವನ್ನು ಹಿಂದುತ್ವದ ಪ್ರಯೋಗಶಾಲೆಯಾಗಿ ಬಳಸಲು ಮುಂದಾಗಿದೆ: ಸಚಿವ ಎಂ.ಬಿ.ಪಾಟೀಲ್ ಆರೋಪ
'ಅಧಿಕಾರದಲ್ಲಿದ್ದಾಗ ಹಿಂದೂ ವಿರೋಧಿ ನೀತಿ, ಈಗ ಹಿಂದೂಗಳ ಪರ ಎನ್ನುತ್ತಿರುವ ಬಿಜೆಪಿಯ ದ್ವಂದ್ವ ನಿಲುವು ಕುರಿತು ಬುಕ್ ಲೆಟ್ ಬಿಡುಗಡೆ ಮಾಡುತ್ತೇವೆ'
Minister MB Patil (File Photo)
ವಿಜಯಪುರ: ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮತ್ತು ಕೇಂದ್ರದಲ್ಲಿ ಕಳೆದ 2014ರಿಂದ ಅಧಿಕಾರದ್ದಲಿರುವ ವಕ್ಫ್ ಆಸ್ತಿ ರಕ್ಷಣೆ ಕುರಿತು ಅಪಾರ ಕಾಳಜಿ ತೋರಿದ್ದ ಬಿಜೆಪಿ ಈಗ ವಿಜಯಪುರವನ್ನು ಹಿಂದುತ್ವದ ಪ್ರಯೋಗ ಶಾಲೆಯಾಗಿ ಉಪಯೋಗಿಸಲು ಹೊರಟಿದೆ ಎಂದು ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ಇಂದು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣ ಜನಿಸಿದ ಮತ್ತು ಸೂಫಿ ಸಂತರು ನೆಲೆಸಿದ ಪುಣ್ಯಭೂಮಿ ಬಸವನಾಡು ವಿಜಯಪುರವನ್ನು ಪ್ರಯೋಗಶಾಲೆಯಾಗಿ ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ. ರೈತರು, ಧಾರ್ಮಿಕ ಸ್ಥಳಗಳನ್ನು ಮತ್ತು ಸರ್ಕಾರಿ, ಸಾರ್ವಜನಿಕ ಆಸ್ತಿಗಳನ್ನು ವಕ್ಫ್ ಗೆ ನೀಡಲು ನಾನು ಬಿಡುವುದಿಲ್ಲ. ನಾವು ಹಿಂದೂಗಳೇ ಆದರೆ, ಬಿಜೆಪಿ ಅವರು ನಕಲಿ ಮನುವಾದವನ್ನು ಪ್ರತಿಪಾದಿಸುವ ನಕಲಿ ಹಿಂದೂಗಳು. ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ವಿಜಯಪುರಕ್ಕೆ ಭೇಟಿ ನೀಡಿದ್ದು, ಕಾನೂನು ಬಾಹಿರವಾಗಿದ್ದು, ಅದು ಹಕ್ಕುಚ್ಯುತಿ ಆಗಲಿದೆ. ಶಾಸಕ ಯತ್ನಾಳ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಯ್ದೆ ರದ್ದಾಗುವವರೆ ಸತ್ಯಾಗ್ರಹ ಎಂದಿದ್ದರು. ಆದರೆ, ಸೊಳ್ಳೆ ಕಾಟದ ಭಯದಿಂದ ಜಗದಂಬಿಕಾ ಪಾಲ್ ಅವರನ್ನು ಬೆನ್ನುಹತ್ತಿ ಕರೆಯಿಸಿ, ಸತ್ಯಾಗ್ರಹ ಮುಗಿಸಿದ್ದಾರೆ. ಅವರು ಇನ್ನೂ ದೀರ್ಘಕಾಲ ಹೋರಾಟ ಮಾಡುತ್ತಾರೆ ಎಂಬ ಭರವಸೆ ಇತ್ತು. ಆದರೆ, ಬೇಗನೆ ಮುಗಿಸಿರುವುದು ಏಕೆ? ಎಂದು ಪ್ರಶ್ನಿಸಿದರು.
ಬಿಜೆಪಿ ವಕ್ಪ್ ಆಸ್ತಿ ಕುರಿತು ಸುಳ್ಳು ಆರೋಪ ಮಾಡಲು ಪ್ರಾರಂಭಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ ನೋಟಿಸ್ ಗಳನ್ನು ಹಿಂಪಡೆಯಲು ಆದೇಶ ನೀಡಿದ್ದಾರೆ. ಅಲ್ಲದೇ, ನಾನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಜೊತೆ ಸೇರಿ ಜಂಟಿ ಸುದ್ದಿಗೋಷ್ಠಿ ನಡೆಸಿ ರೈತರು, ಧಾರ್ಮಿಕ ಸ್ಥಳಗಳು ಹಾಗೂ ಜನ ಸಾಮಾನ್ಯರ ಒಂದಿಂಚೂ ಆಸ್ತಿ ವಕ್ಫ್ ಗೆ ಸೇರಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆವು. ಅಲ್ಲದೇ, ರಾಜ್ಯದಲ್ಲಿ 10.06.2023ರಿಂದ 31.10.2024ರವರೆಗೆ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮತ್ತು ತಪ್ಪು ಸರಿಪಡಿಸಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕ ಬಹಿರಂಗಪಡಿಸಿದ್ದೇವು ಎಂದು ಅವರು ತಿಳಿಸಿದರು.
ವಕ್ಫ್ ಆಸ್ತಿ ಗೊಂದಲದ ಕುರಿತು ಎಲ್ಲ ಗೊಂದಲ ಬಗೆಹರಿಸಿದ್ದರೂ ಬಿಜೆಪಿ ರಾಜಕೀಯ ಲಾಭಕ್ಕಾಗಿ ರೈತರು, ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುತ್ತಾ, ಪ್ರಚಾರ ಗಿಟ್ಟಿಸುತ್ತಿದೆ. ಅಲ್ಲದೇ, ತಾವು ಅಧಿಕಾರದಲ್ಲಿರುವಾಗ ಹಿಂದೂ ವಿರೋಧಿ ನೀತಿ ಅನುಸರಿಸಿ, ಈಗ ನಾವು ಹಿಂದೂಗಳ ಪರವಾಗಿದ್ದೇವೆ ಎಂದು ಪೋಸ್ ಕೊಡುತ್ತಿದ್ದಾರೆ. ಇವರ ಈ ಎಲ್ಲ ದ್ವಂದ್ವ ನಿಲುವುಗಳ ಕುರಿತು ಬುಕ್ ಲೆಟ್ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಈ ವಿಚಾರಗಳು ಗೊತ್ತಿಲ್ಲದ ಮುಗ್ಧ ಸ್ವಾಮೀಜಿಗಳು ಬಿಜೆಪಿ ಅವರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಈ ಎಲ್ಲ ಸ್ವಾಮೀಜಿಗಳಿಗೆ ನಿಜಾಂಶ ಕುರಿತ ದಾಖಲೆಗಳನ್ನು ತಲುಪಿಸುತ್ತೇವೆ. ಆಗ ಸ್ವಾಮೀಜಿಗಳಿಗೆ ಪ್ರಧಾನಿ ಮತ್ತು ಬಿಜೆಪಿ ಮುಖಂಡರ ನಿಜಬಣ್ಣ ತಿಳಿಯಲಿದೆ. ಕನ್ಹೇರಿ ಮಠದ ಸ್ವಾಮೀಜಿಯವರೇ ಬಿಜೆಪಿ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದವರು ಹೇಳಿದರು.
ಬಿಜೆಪಿಯಿಂದ ಅಸತ್ಯವನ್ನು ಸತ್ಯ ಮಾಡುವ ಸುಳ್ಳು ಪ್ರಚಾರ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ವಕ್ಫ್ ಆಸ್ತಿ ರಕ್ಷಣೆಗೆ ಹೊರಡಿಸಿದ ಹತ್ತಾರು ಸುತ್ತೋಲೆಗಳ ದಾಖಲೆಗಳನ್ನು ಬಿಡುಗಡೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಕಳೆದ ಒಂದೆರಡು ವಾರಗಳಿಂದ ವಕ್ಫ್ ಆಸ್ತಿ ವಿಚಾರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಸತ್ಯವನ್ನು ಸತ್ಯ ಮಾಡುವ ಸುಳ್ಳು ಪ್ರಚಾರ ನಡೆಯುತ್ತಿದೆ. ಆದರೆ, ನಿಜಾಂಶದಲ್ಲಿ ಇದೇ ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರು, ಧಾರ್ಮಿಕ ಸ್ಥಳಗಳ ಹಾಗೂ ಎಲ್ಲ ಧರ್ಮೀಯರ ಆಸ್ತಿಯನ್ನು ವಕ್ಫ್ ಗೆ ಹಿಂಪಡೆದಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ 2019ರ ಸೆಪ್ಟಂಬರ್ 17ರಂದು ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾಮದ ಮುರುಘೇಂದ್ರ ಶಿವಬಸಪ್ಪ ಖ್ಯಾಡಿ, ಮಾಶಾಬಿ ಮೌಲಾ ಸಾಬ ಮುಲ್ಲಾ, ಸುಭಾಷ ಧರ್ಮಣ್ಣ ಆನೆಗುಂದಿ, ಇಂಡಿ ತಾಲೂಕಿನಲ್ಲಿ 2023ರ ಜನವರಿ 13ರಂದು ಮಾರ್ಸನಹಳ್ಳಿ ಗ್ರಾಮದ ನಿಂಗಪ್ಪ ಭೂಮಣ್ಣ ಶಿರಶ್ಯಾಡ ಅವರಿಗೆ ಸೇರಿದ ಆಸ್ತಿಯನ್ನು ವಕ್ಫ್ ಹೆಸರಿಗೆ ಇಂಡೀಕರಣ ಮಾಡಲಾಗಿದೆ ಎಂದವರು ತಿಳಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ 2010ರ ಜನವರಿ 4ರಂದು ವಕ್ಸ್ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕ್ರಮಗೊಳಿಸುವ (ಅಪ್ಡೇಟ್) ಕುರಿತು ಅಂದಿನ ಕಂದಾಯ ಇಲಾಖೆ ಅವರು ಸುತ್ತೋಲೆ ಹೊರಡಿಸಿತ್ತು. ಅದೇರೀತಿ ಬಿಜೆಪಿ ಸರಕಾರದ ಅವಧಿಯಲ್ಲಿ 2010ರ ಮೇ 29ರಂದು ರಾಜ್ಯದಲ್ಲಿನ ವಕ್ಫ್ ಆಸ್ತಿಗಳನ್ನು ಸರ್ಕಾರದ ಇಲಾಖೆಗಳು ನಿಗಮ, ಮಂಡಳಿ ಮತ್ತು ಸ್ಥಳೀಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವಕ್ಸ್ ಆಸ್ತಿಗೆ ಅಪಾರ ನಷ್ಟ ಉಂಟಾಗಿರುವುದು ಕಂಡುಬಂದಿದ್ದು, ಅಂಥ ಅತಿಕ್ರಮಣಗಳನ್ನು ನೋಟಿಸ್ ನೀಡಿ ತೆರೆವುಗೊಳಿಸುವಂತೆ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು ಎಂದು ಸಚಿವರು ದಾಖಲೆ ಸಮೇತ ವಿವರಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ 2011ರ ಎಪ್ರಿಲ್ 2ರಂದು ವಕ್ಸ್ ಆಸ್ತಿಗಳ ಸಂರಕ್ಷಣೆ ಹಾಗೂ ದಾಖಲೆಗಳನ್ನು ಕ್ರಮಬದ್ಧಗೊಳಿಸುವ ಕುರಿತು ಕಲುಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ದಿನಾಂಕ: 23.04.2011ರಂದು ವಕ್ಫ್ ಭೂಸ್ವಾಧೀನ ಪರಿಹಾರವನ್ನು ವಕ್ಸ್ ಮಂಡಳಿಯ ಲೆಕ್ಕ ಶೀರ್ಷಿಕೆಗೆ ಕಡ್ಡಾಯವಾಗಿ ಪಾವತಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಂದ ಸುತ್ತೋಲೆ ಹೊರಡಿಸಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ದಿನಾಂಕ: 29.08.2020ರಂದು ವಕ್ಫ್ ಆಸ್ತಿಗಳ ಭೂಮಿ ತಂತ್ರಾಶದಲ್ಲಿ ಫ್ಲಾಗ್ ಮಾಡುವ ಕುರಿತು ಸರ್ಕಾರದ ಉಪಕಾರ್ಯದರ್ಶಿ (ಭೂ ಮಂಜೂರಾತಿ, ಭೂ ಸುಧಾರಣೆ ಮತ್ತು ಕಂದಾಯ ಇಲಾಖೆ) ಸುತ್ತೋಲೆ ಹೊರಡಿಸಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ದಿನಾಂಕ: 08.01.2021 ರಂದು ಜಿಲ್ಲಾ ಮಟ್ಟದ ವಕ್ಸ್ ಆಸ್ತಿಗಳ ಕಾರ್ಯಪಡೆ ರಚಿಸಿ ರಾಜ್ಯದ ವಕ್ಸ್ ಆಸ್ತಿಗಳನ್ನು ಸಂರಕ್ಷಿಸುವ ಕುರಿತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಂದ ಸುತ್ತೋಲೆ ಹೊರಡಿಸಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ದಿನಾಂಕ: 27.01.2021 ರಂದು ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ವಕ್ಸ್ ಆಸ್ತಿಗಳನ್ನು ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶದಲ್ಲಿ ಫ್ಲಾಗ್ (ಲಾಕ್) ಮಾಡುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರ ಸುತ್ತೋಲೆ ಹೊರಡಿಸಿದ್ದಾರೆ ಎಂದು ಸಚಿವರು ಈ ಕುರಿತು ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಕ್ಫ್ ಮಂಡಳಿಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರ ಜೊತೆ ಸಮಾಲೋಚನೆ ನಡೆಸಿ, ವಕ್ಫ್ ಆಸ್ತಿ ಅತಿಕ್ರಮಣವಾಗಿರುವದನ್ನು ತೆರವುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಪ್ರತಿಯನ್ನು ಸಚಿವರು ಪ್ರದರ್ಶಿಸಿದರು.
• ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ದಿನಾಂಕ: 18.07.2019ರಂದು ಸಂಸದೆ ಶೋಭಾ ಕರಂದ್ಲಾಜೆ ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ನಿಟ್ಟಿನಲ್ಲಿ ಜಿಯೋ ಟ್ಯಾಗಿಂಗ್ ಮತ್ತು ಡಿಜಿಟಲೀಕರಣ, ಲೀಸ್ ನಿಮಯಗಳು, ರಾಜ್ಯ ವಕ್ಫ್ ಮಂಡಳಿಗಳಿಗೆ ಆರ್ಥಿಕ ಸಹಾಯ, ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಒದಗಿಸಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಪ್ರಶ್ನೆ ಕೇಳಿದ್ದರು.
• ಈ ಪ್ರಶ್ನೆಗೆ ಕೇಂದ್ರ ಸರಕಾರದ ಪರ ಉತ್ತರಿಸಿದ್ದ ಅಂದಿನ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ರಾಜ್ಯ ವಕ್ಫ್ ಬೋರ್ಡ್ ಗಳು, ಐಐಟಿ ರೂರ್ಕಿ ಹಾಗೂ ಎ.ಎಂ.ಯು (ಅಲಿಘರ್), ದೇಶ್ಯಾದಂತ ಶೇ.100ರಷ್ಟು ವಕ್ಫ್ ಆಸ್ತಿಗಳನ್ನು ಹಂತಹಂತವಾಗಿ ಜಿಐಎಸ್ ಮ್ಯಾಪಿಂಗ್ ಮತ್ತು ಡಿಜಿಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ ಶೇ.85ರಷ್ಟು ಕೆಲಸ ಪೂರ್ಣವಾಗಿದ್ದು, ಸಮರೋಪಾದಯಲ್ಲಿ ಅತೀಕ್ರಮಣ ತೆಗೆದು ಹಾಕಲು ಕ್ರಮಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ವಕ್ಫ್ ಕೌನ್ಸಿಲ್ (ಸಿ.ಡಬ್ಲ್ಯೂ.ಸಿ) ಮೂಲಕ ರಾಜ್ಯ ವಕ್ಫ್ ಮಂಡಳಿಗಳಿಗೆ (ಎಸ್.ಡಬ್ಲ್ಯೂ.ಬಿ.ಎಸ್) ಹಣಕಾಸಿನ ನೆರವು ಒದಗಿಸಲಾಗಿದೆ. ಅಲ್ಲದೇ, ವಕ್ಫ್ ಆಸ್ತಿಗಳ ಡೇಟಾವನ್ನು ನಮೂದಿಸಲು ವಕ್ಫ್ ಮ್ಯಾನೇಜಮೆಂಟ್ ಸಿಸ್ಟಮ್ ಆಫ್ ಇಂಡಿಯಾ (ಡಬ್ಲ್ಯು. ಎ.ಎಂ. ಎಸ್. ಐ) ಪೋರ್ಟಲ್ ಅಭಿವೃದ್ಧಿ ಪಡಿಸಿದೆ. 20.06.2019ರವರೆಗೆ ಪೋರ್ಟಲ್ ಮಾಡ್ಯೂಲ್ ನಲ್ಲಿ 5,81.799 ಸ್ಥಿರ ವಕ್ಫ್ ಆಸ್ತಿಗಳನ್ನು ನಮೂದಿಸಿವೆ. ರಾಜ್ಯವಾರು ವಿವರಗಳು wamsi.nic.in ನಲ್ಲಿ ಲಭ್ಯವಿವೆ ಎಂದು ಉತ್ತರ ನೀಡಿದ್ದರು.
ವಕ್ಫ್ ಪ್ರಾಪರ್ಟೀಸ್ ಲೀಸ್ ನಿಯಮಗಳು 2014 ರ ಪ್ರಕಾರ ಅನುಷ್ಠಾನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಝಕಿವುಲ್ಲಾ ಖಾನ್ ನೇತೃತ್ವದಲ್ಲಿ 07.03.2018 ರಂದು ಸಮಿತಿಯನ್ನು ರಚಿಸಲಾಗಿದೆ. ದಿ.17.01.2019 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅಲ್ಲದೇ, ವಕ್ಫ್ ಆಸ್ತಿಗಳ ದಾಖಲೆಗಳ ದತ್ತಾಂಶ ನಮೂದು ಮತ್ತು ಡಿಜಿಟಲೀಕರಣ, ಜಿಐಎಸ್ ಮ್ಯಾಪಿಂಗ್, ಎಸ್ ಡಬ್ಲ್ಯುಬಿಎಸ್ ನಲ್ಲಿ ನಿಯೋಜಿಸಲಾದ ಸಿಬ್ಬಂದಿಯ ಬಲವನ್ನು ಹೆಚ್ಚಿಸುವುದು, ಮುತ್ತವಲ್ಲಿಸ್, ಕಚೇರಿ ಸಾಮರ್ಥ್ಯ ವರ್ಧನೆಯನ್ನು ಪೂರ್ಣಗೊಳಿಸಲು ಕೇಂದ್ರೀಕೃತ ಕಂಪ್ಯೂಟಿಂಗ್ ಸೌಲಭ್ಯ (ಸಿಸಿಎಫ್) ನಿರ್ವಹಣೆಗಾಗಿ ಎಸ್ ಡಬ್ಲ್ಯುಗಳಿಗೆ ಯೋಜನೆಯಡಿಯಲ್ಲಿ ಹಣಕಾಸಿನ ನೆರವು ಬಿಡುಗಡೆ ಮಾಡಲಾಗಿದೆ. ಯಾಂತ್ರಿಕೃತಗೊಂಡ ಮತ್ತು ಕಳೆದ ಮೂರು ವರ್ಷಗಳಲ್ಲಿ 28 ಎಸ್ ಡಬ್ಲ್ಯೂಬಿಗಳಿಗೆ ರೂ.11.82 ಕೋಟಿ ಬಿಡುಗಡೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 20 SWBS ಗೆ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಮುಖ್ತಾರ ಅಬ್ಬಾಸ್ ನಕ್ವಿ ಲಿಖಿತ ಉತ್ತರ ನೀಡಿದ್ದರು. ಈ ಕುರಿತ ದಾಖಲೆಗಳನ್ನು ಸಚಿವ ಎಂ.ಬಿ.ಪಾಟೀಲ ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉಪಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಉಪಸ್ಥಿತರಿದ್ದರು.