‘ರಾಯಣ್ಣ ಚೆನ್ನಮ್ಮ ಬ್ರಿಗೇಡ್’ ಸ್ಥಾಪನೆಗೆ ಮುಂದಾದ ಕೆ.ಎಸ್. ಈಶ್ವರಪ್ಪ
"ಇನ್ನು ಮುಂದೆ ನಾವು ಇಟ್ಟ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ"
ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಇದೀಗ ‘ರಾಯಣ್ಣ ಚೆನ್ನಮ್ಮ ಬ್ರಿಗೇಡ್’(RCB) ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ರವಿವಾರ ವಿಜಯಪುರ ತಾಲೂಕಿನ ಮಹಲ್ ಐನಾಪುರ ಗ್ರಾಮದಲ್ಲಿರುವ ಹುಲಜಂತಿ ಮಠದ ಆವರಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಅವರು, ʼರಾಯಣ್ಣ ಬ್ರಿಗೇಡ್’ ಮಾದರಿಯಲ್ಲೇ ‘ರಾಯಣ್ಣ ಚೆನ್ನಮ್ಮ ಬ್ರಿಗೇಡ್’ ಸ್ಥಾಪನೆ ಮಾಡಲು ಮುಂದಾಗಿದ್ದೇವೆ. ಸ್ವಾಮೀಜಿಗಳ ಬೆಂಬಲ ಸಿಕ್ಕಿದೆ. ಅಕ್ಟೋಬರ್ 20ರಂದು ಬಾಗಲಕೋಟೆಯಲ್ಲಿ ಸಭೆ ನಡೆಸಲಾಗುವುದು ಎಂದು ಪ್ರಕಟಿಸಿದರು.
ಈ ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದ ಸಂದರ್ಭದಲ್ಲಿ ಏನೆಲ್ಲಾ ಆಯಿತು ಎಂದು ಗೊತ್ತಿದೆ. ಇನ್ನು ಮುಂದೆ ನಾವು ಇಟ್ಟ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ. ಬಾಗಲಕೋಟೆಯಲ್ಲಿ ನಡೆಯುವ ಸಭೆಗೆ ಧೈರ್ಯವಿದ್ದವರು, ಗಟ್ಟಿಯಿದ್ದವರು ಮಾತ್ರ ಬನ್ನಿ. ಇದಕ್ಕೆ ಕಾಂಗ್ರೆಸ್ ಬಿಜೆಪಿ-ಜೆಡಿಎಸ್ ಪಕ್ಷ ಸಂಬಂಧವಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಎಲ್ಲ ಸಮಾಜ ಬಾಂಧವರೂ ಸಭೆಗೆ ಬರಬೇಕು. ಇತರೆ ಸಮಾಜದ ಸ್ವಾಮೀಜಿಗಳ ಜೊತೆಗೆ ನಮ್ಮ ಸಮಾಜದ ಸ್ವಾಮೀಜಿಗಳು ಸಭೆ ನಡೆಯಲಿ. ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲೆಗಳ ಪ್ರಮುಖರು ಸೇರಲಿ. ಸುದೀರ್ಘವಾಗಿ ಸಭೆಯಲ್ಲಿ ಚರ್ಚೆ ಮಾಡಿ ಬಳಿಕ ರಾಜ್ಯಮಟ್ಟದ ಸಭೆ ನಡೆಸಲು ಮುಂದಿನ ತೀರ್ಮಾನ ಕೈಗೊಳ್ಳೋಣ. ಈಶ್ವರಪ್ಪಗೆ ಅನ್ಯಾಯವಾಗಿದೆ, ಅವರಿಗೆ ಸಿಎಂ ಮಾಡಲಿಲ್ಲ ಎಂದು ಯಾರೂ ಹೇಳಬೇಡಿ. ಇಲ್ಲಿ ಬಹಳ ಜನರಿಗೆ ಅನ್ಯಾಯವಾಗಿದೆ ಎಂದು ಅವರು ನುಡಿದರು.