ವಿಜಯಪುರ | ಖಾಸಗಿ ಆಸ್ತಿಯನ್ನು ವಕ್ಫ್ ಮಂಡಳಿಗೆ ವರ್ಗಾಯಿಸುತ್ತಿಲ್ಲ : ಜಿಲ್ಲಾಧಿಕಾರಿ ಟಿ.ಭೂಬಾಲನ್
"ತಪ್ಪು ವದಂತಿಗಳಿಗೆ ಕಿವಿಗೊಡಬೇಡಿ"
ವಿಜಯಪುರ: ವಿಜಯಪುರ ಜಿಲ್ಲೆಯ ವಕ್ಫ್ ಆಸ್ತಿ ಇಂದೀಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ರವಾನೆಯಾಗುತ್ತಿದ್ದು, ಯಾವುದೇ ತಪ್ಪು ವದಂತಿಗಳಿಗೆ ರೈತರು-ಆಸ್ತಿ ಮಾಲೀಕರು ಕಿವಿಗೊಡದಂತೆ ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗಳು, ಯಾವುದೇ ವ್ಯಕ್ತಿಯ, ಖಾಸಗಿ ಆಸ್ತಿಯನ್ನು ವಕ್ಫ್ ಮಂಡಳಿಗೆ ವರ್ಗಾಯಿಸಲಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸ್ಪಷ್ಟನೆ ನೀಡಿದ್ದಾರೆ.
1974ರಲ್ಲಿ ವಕ್ಫ್ ಮಂಡಳಿಯಿಂದ ಹೊರಡಿಸಿದ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಇರುವ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ಇಂದೀಕರಣಕ್ಕಾಗಿ ಪಟ್ಟಿ ಒದಗಿಸಲಾಗಿದ್ದು, ಇದರನ್ವಯ ಖಾತೆ ಬದಲಾವಣೆಗೆ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ಸಾಮಾನ್ಯವಾಗಿ ಯಾವುದೇ ಒಂದು ಆಸ್ತಿಯ ಹಕ್ಕು ಬದಲಾವಣೆಯಲ್ಲಿ ಕೈಗೊಳ್ಳುವ ಕ್ರಮಗಳ ಪ್ರಕಾರವೇ ಈ ವಕ್ಪ್ ಆಸ್ತಿ ಇಂದೀಕರಣಕ್ಕಾಗಿ ಸಂಬಂಧಪಟ್ಟ ರೈತರು ಅಥವಾ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ಆಸ್ತಿ ಮಾಲೀಕರು- ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಹೊಂದಿರುವುದಿಲ್ಲ. ಯಾವುದೇ ಖಾಸಗಿ ವ್ಯಕ್ತಿ-ಸಂಸ್ಥೆ, ಸರ್ಕಾರಿ ಸಂಸ್ಥೆಯಾಗಲಿ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ ನಂತರ ಕೂಲಂಕೂಷವಾಗಿ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಕೆಲವೊಂದು ಆಸ್ತಿ ಮಾಲೀಕರಿಗೆ ನೋಟಿಸ್ ನೀಡದೆಯೇ ಆರ್.ಟಿ.ಸಿ.ಯಲ್ಲಿ ಏನಾದರೂ ಬದಲಾವಣೆಯಾಗಿದ್ದಲ್ಲಿ ಸಂಬಂಧಿಸಿದ ರೈತರು-ಆಸ್ತಿ ಮಾಲೀಕರು ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಅಪೀಲು ಹೋಗಲು ಅವಕಾಶ ಇರುತ್ತದೆ. ಹಾಗಾಗಿ ನೋಟಿಸ್ ಬಂದ ತಕ್ಷಣ ತಮ್ಮ ಆಸ್ತಿಯ ಖಾತೆ ಬದಲಾವಣೆಯಾಗಿದೆ ಎಂಬ ಆತಂಕ-ಭಯ ಪಡುವ ಅವಶ್ಯಕತೆ ಇಲ್ಲ. ನೋಟಿಸ್ ಬಂದಲ್ಲಿ, ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ತಹಶೀಲ್ದಾರ ಕಚೇರಿಯಲ್ಲಿ ಒದಗಿಸಿ ಮಾಹಿತಿ ನೀಡಬೇಕು. ದಾಖಲೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ 1500 ಎಕರೆ ರೈತರ ಜಮೀನುಗಳನ್ನು ಈಗಾಗಲೇ ಅಧಿಕಾರಿಗಳು ವಕ್ಪ್ ಮಂಡಳಿಗೆ ವರ್ಗಾಯಿಸಲಾಗಿದೆ ಎಂಬ ಸುಳ್ಳು ವದಂತಿಗೆ ಸಂಬಂಧಿಸಿದಂತೆ ಸ್ಪಷ್ಟಣೆ ನೀಡಿದ ಅವರು, ಹೊನವಾಡ ಗ್ರಾಮದಲ್ಲಿನ ರೈತರಿಗೆ- ಆಸ್ತಿ ಮಾಲೀಕರಿಗೆ ಈವರೆಗೆ ಯಾವುದೇ ನೋಟಿಸ್ ಜಾರಿ ಮಾಡಿರುವುದಿಲ್ಲ. ಕಳೆದ ಒಂದು ತಿಂಗಳಿನಿಂದ ಯಾವುದೇ ಆಸ್ತಿಯನ್ನು ಇಂದೀಕರಣ ಮಾಡಿ, ವಕ್ಫ್‍ಗೆ ನೀಡಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಅದರಂತೆ ಹೊನವಾಡದಲ್ಲಿ 1500 ಎಕರೆ ವಕ್ಫ್ ಆಸ್ತಿ ಇರುವುದಿಲ್ಲ. ಗೆಜೆಟ್ ನೋಟಿಫಿಕೇಶನ್ ಪ್ರಕಾರ 10-15 ಎಕರೆ ಮಾತ್ರ ವಕ್ಫ್ ಆಸ್ತಿ ಇರುವುದು ಕಂಡು ಬಂದಿದೆ. ಅದು ಕೂಡ ಈ ಎಲ್ಲ ಆಸ್ತಿ ಮಸೀದಿ, ಈದ್ಗಾ ಮೈದಾನ, ಖಬರಸ್ಥಾನ ಇರುವುದರಿಂದ ಹೊನವಾಡ ಗ್ರಾಮದ ರೈತರು ಈ ಕುರಿತು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಏನಾದರೂ ನೋಟಿಸ್ ಬಂದರೂ ಕೂಡ ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದಲ್ಲಿ ಈ ಕುರಿತು ಕೂಲಂಕೂಷವಾಗಿ ಪರಿಶೀಲನೆ ನಡೆಸಿದ ನಂತರವೇ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.