ವಿಜಯಪುರ: ಸಿನಿಮೀಯ ರೀತಿಯಲ್ಲಿ ದರೋಡೆಕೋರರ ಬೆನ್ನಟ್ಟಿದ ಪೊಲೀಸರು
ಕಾಲಿಗೆ ಗುಂಡಿಕ್ಕಿ ಓರ್ವನ ಬಂಧನ

ವಿಜಯಪುರ: ನಗರದ ಜನತೆಯನ್ನೇ ಬೆಚ್ಚಿಬೀಳಿಸಿದ್ದ ಮಧ್ಯಪ್ರದೇಶ ಮೂಲದ ದರೋಡೆಕೋರರ ಗುಂಪನ್ನು ಮಟ್ಟ ಹಾಕಲು ವಿಜಯಪುರ ಪೊಲೀಸರು ಸಿನೀಮಿಯ ರೀತಿಯ ಕಾರ್ಯಾಚರಣೆ ನಡೆಸಿದ್ದು, ತಮ್ಮ ಪ್ರಾಣ ಒತ್ತೆ ಇಟ್ಟು ದರೋಡೆಕೋರರೊಂದಿಗೆ ಸೆಣಸಾಡಿದ್ದು, ಈ ವೇಳೆ ದರೋಡೆಕೋರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ, ಮಧ್ಯಪ್ರದೇಶದ ಮೂಲದ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಮೂವರು ದರೋಡೆಕೋರರು ಪರಾರಿಯಾಗಿದ್ದು ಅವರ ಹುಡುಕಾಟಕ್ಕೆ ಜಾಲ ಬೀಸಿದ್ದಾರೆ.
ಈ ಚಕಮಕಿಯಲ್ಲಿ ಮಧ್ಯಪ್ರದೇಶ ಮೂಲದ ಮಹೇಶ ಎಂಬಾತನ ಕಾಲಿಗೆ ಮೂರು ಗುಂಡುಗಳು ತಾಗಿವೆ. ಗಾಯಾಳು ಆರೋಪಿಯನ್ನು ಜಿಲ್ಲಾ ಆಸ್ಪತ್ರಗೆ ದಾಖಲಿಸಲಾಗಿದೆ.
ಮಧ್ಯಪ್ರದೇಶ ಮೂಲದವರು ಎನ್ನಲಾದ ದರೋಡೆಕೋರರ ಗ್ಯಾಂಗ್ ಮುಸುಕುಧಾರಿಗಳಾಗಿ ನಗರದ ಜೈನಾಪೂರ ಲೇಔಟ್ ಬಳಿ ಇಬ್ಬರಿಗೆ ಚಾಕುವಿನಿಂದ ಇರಿದು ದುಷ್ಕೃತ್ಯ ಎಸಗಿದ್ದರು. ಘಟನೆಯಿಂದಾಗಿ ಸಂತೋಷ ಕನ್ನಾಳ ಹಾಗೂ ಭಾಗ್ಯಜ್ಯೋತಿ ಕನ್ನಾಳ ಅವರಿಗೆ ಗಾಯಗಳಾಗಿವೆ, ಈ ಇಬ್ಬರ ಮೇಲೆ ಹಲ್ಲೆ ನಡೆಸಿದ್ದ ಈ ಗ್ಯಾಂಗ್ ಮಾಸ್ಕ್ ಧರಿಸಿ, ಕೈಯಲ್ಲಿ ಚಾಕು ಹಾಗೂ ಮಾರಕಾಸ್ತ್ರ ಹಿಡಿದು ಮನೆಯ ಬಾಗಿಲು ಮುರಿದು ಒಳನುಗ್ಗಿ ಅವರ ಬಳಿ ಇದ್ದ ಸರ ಕಸಿದುಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಇಡೀ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣವನ್ನು ಬೇಧಿಸಲು ಚುರುಕಿನಿಂದ ಕಾರ್ಯಾಚರಣೆಯಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದರು.
ಕಾರ್ಯಾಚರಣೆ ನಡೆದಿದ್ದು ಹೇಗೆ?:
ಹೊರರಾಜ್ಯದಿಂದ ಬಂದಿರುವ ದರೋಡೆಕೋರರ ತಂಡ ನಗರದ ಹೊರಭಾಗದಲ್ಲಿ ಬೀಡು ಬಿಟ್ಟಿರುವ ವಿಷಯದ ಬಗ್ಗೆ ವಿಜಯಪುರ ಪೊಲೀಸರಿಗೆ ಖಚಿತ ಮಾಹಿತಿ ದೊರಕಿತ್ತು. ನಸುಕಿನ ಜಾವದಿಂದಲೇ ಖಾಕಿ ಪಡೆ ಕಾರ್ಯಾಚರಣೆ ನಡೆಸಿತ್ತು. ಆಗ ಟೋಲ್ ಪ್ಲಾಜಾ ಬಳಿ ಹೆದ್ದಾರಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾರೆ ಎಂಬ ಇನ್ನೊಂದು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದಿತ್ತು.
ಹೀಗಾಗಿ ಐವರು ದರೋಡೆಕೋರರನ್ನು ಪೊಲೀಸರು ಬೆನ್ನಟ್ಟಿದ್ದರು. ಈ ವೇಳೆ ಬೈಕ್ ಅಲ್ಲೇ ಬಿಟ್ಟು ಜಮೀನಿನತ್ತ ದರೋಡೆಕೋರರು ಓಡಿದ್ದರು. ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್‍ಐ ಮೊಹ್ಮದ್ ಘೋರಿ ಮೊದಲಾದವರು ದರೋಡೆಕೋರರನ್ನು ಸೀನಿಮಿಯ ರೀತಿಯಲ್ಲಿ ಬೆನ್ನಟ್ಟಿದ್ದಾರೆ, ಈ ವೇಳೆ ದರೋಡೆಕೋರರ ಮೇಲೆ ಫೈರಿಂಗ್ ಮಾಡಿದ್ದಾರೆ. ಗುಂಡು ಹಾರಿಸಿದರೂ ಸ್ಥಳದಿಂದ ಖದೀಮರು ಪರಾರಿಯಾಗಿದ್ದಾರೆ. ಓರ್ವ ಮಾತ್ರ ಬಂದಿತನಾಗಿದ್ದು, ಆತನ ಕಾಲಿಗೆ ಮೂರು ಗುಂಡುಗಳು ತಾಕಿವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಎಎಸ್‍ಪಿ ರಾಮನಗೌಡ ಹಟ್ಟಿ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ ಮಲ್ಲಯ್ಯ ಮಠಪತಿ, ಮೊಹ್ಮದ್ ಘೋರಿ ಅವರನ್ನೊಳಗೊಂಡ ತಂಡ ಧೈರ್ಯದಿಂದ ದರೋಡೆಕೋರರನ್ನು ಬೆನ್ನಟ್ಟಿರುವ ಕರ್ತವ್ಯದ ಬಗ್ಗೆ ವಿಜಯಪುರ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ವಿಜಯಪುರದ ಶಿವಾನಂದ ಭುಯ್ಯಾರ ಸೇರಿದಂತೆ ಹಲವಾರು ಜನರು ವಿಜಯಪುರ ʼಸೂಪರ್ ಕಾಪ್ʼಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.