ಸರಕಾರ ʼವಕ್ಫ್ ಅದಾಲತ್ʼಅನ್ನು ತಕ್ಷಣ ನಿಲ್ಲಿಸಲಿ : ಪ್ರಹ್ಲಾದ್ ಜೋಶಿ ಆಗ್ರಹ
ವಿಜಯಪುರ : ʼರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸಚಿವ ಝಮೀರ್ ಅಹ್ಮದ್ ವಕ್ಫ್ ಅದಾಲತ್ ನಡೆಸುತ್ತಿದ್ದು, ಮೊದಲು ಇದನ್ನು ಕೈ ಬಿಡಬೇಕುʼ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ವಿಜಯಪುರದಲ್ಲಿ ವಕ್ಫ್ ಭೂ ಕಬಳಿಕೆ ವಿರುದ್ಧ ರೈತರು ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಮಾನಾಡಿದ ಅವರು, ʼವಕ್ಫ್ ಅದಾಲತ್ ನಡೆಸಲು ಮತ್ತು ಪಹಣಿಗಳಲ್ಲಿ ವಕ್ಫ್ ಹೆಸರು ನಮೂದಿಸಲು ಸಿಎಂ ಸೂಚನೆ ಇದೆ ಎಂದು ಝಮೀರ್ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಸ್ಪಷ್ಟೀಕರಣ ನೀಡಬೇಕುʼ ಎಂದು ಒತ್ತಾಯಿಸಿದರು.
ಅಧಿಕಾರಿಗಳ ಮೇಲೆ ಝಮೀರ್ ಒತ್ತಡ: ʼರಾಜ್ಯದ ಎಲ್ಲೆಡೆ ವಕ್ಫ್ ಅದಾಲತ್ ನಡೆಸುವ ಮೂಲಕ ಝಮೀರ್ ಅಹ್ಮದ್ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ವಕ್ಫ್ ಅದಾಲತ್ ಅನ್ನು ತಕ್ಷಣವೇ ನಿಲ್ಲಿಸಬೇಕುʼ ಎಂದು ಆಗ್ರಹಿಸಿದರು.
ತಹಶೀಲ್ದಾರ್ ಅಮಾನತು ಮಾಡಿ: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯಾವುದೇ ಸೂಕ್ತ ದಾಖಲೆಗಳೇ ಇಲ್ಲದೇ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ ವಿಜಯಪುರ ಜಿಲ್ಲೆ ಇಂಡಿ ಮತ್ತು ಸಿಂಧಗಿ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳನ್ನು ಸರಕಾರ ಕೂಡಲೇ ಅಮಾನತು ಮಾಡಬೇಕು ಎಂದು ಜೋಶಿ ಆಗ್ರಹಿಸಿದರು.
ಸರಕಾರ ವಕ್ಫ್ ನಮೂದು ಕೈ ಬಿಡಲಿ: ಪಹಣಿಯ ಕಾಲಂ ನಂ.9, 11 ರಲ್ಲಿ ವಕ್ಫ್ ಎಂದು ನಮೂದು ಮಾಡಿರುವುದನ್ನು ಸರಕಾರ ಕೂಡಲೇ ಹಿಂಪಡೆಯಬೇಕು. ಕಾನೂನು ಬದ್ಧವಾಗಿಯೇ ಎಲ್ಲಾ ರೈತರ ಪಹಣಿ ಮತ್ತು ಮುಟೇಶನ್ ಅಲ್ಲಿ ವಕ್ಫ್ ಎಂದಿರುವುದನ್ನು ತೆರವುಗೊಳಿಸಬೇಕು ಎಂದರು