ವಿಜಯಪುರದಲ್ಲಿ ಸುಜ್ಲಾನ್-ರೆನೈಸಾನ್ಸ್ ನಿಂದ 36 ಸಾವಿರ ಕೋಟಿ ರೂ.ಹೂಡಿಕೆಗೆ ಆಸಕ್ತಿ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಕ್ಷೇತ್ರಗಳ ಕಂಪನಿಗಳಾಗಿರುವ ಸುಜ್ಲಾನ್ ಕಂಪೆನಿಯು 30 ಸಾವಿರ ಕೋಟಿ ರೂ. ಹಾಗೂ ರೆನೈಸಾನ್ಸ್ ಸೋಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಮೆಟೀರಿಯಲ್ಸ್ ಕಂಪೆನಿಯು 6 ಸಾವಿರ ಕೋಟಿ ರೂ.ಹೂಡಿಕೆಗೆ ಆಸಕ್ತಿ ತೋರಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುಜ್ಲಾನ್ ಮತ್ತು ರೆನೈಸಾನ್ಸ್ ಕಂಪೆನಿಗಳ ಉನ್ನತಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಜ್ಲಾನ್ ಕಂಪೆನಿಯು ಪವನ ವಿದ್ಯುತ್ ಕ್ಷೇತ್ರಕ್ಕೆ ಅಗತ್ಯವಿರುವ 160 ಮೀಟರ್ ಎತ್ತರದ ಕಂಬಗಳು ಮತ್ತು 70 ಮೀಟರ್ ಉದ್ದದ ಬೃಹತ್ ಬ್ಲೇಡುಗಳ ಉತ್ಪಾದನೆಗೆ ಹೆಸರಾಗಿದ್ದು, ವಿಜಯಪುರದಲ್ಲಿ ಹಂತಹಂತವಾಗಿ 30 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದರು.
ಮೊದಲ ಹಂತದಲ್ಲಿ ಕಂಪೆನಿಯು ಬ್ಲೇಡುಗಳ ತಯಾರಿಕಾ ಘಟಕ ಆರಂಭಿಸಲು ತೀರ್ಮಾನಿಸಿದ್ದು, 100 ಎಕರೆ ಜಮೀನನ್ನು ಕೇಳಿದೆ. ಇದು ವಿಜಯಪುರ ಜಿಲ್ಲೆಗೆ ಹರಿದು ಬರಲಿರುವ ಬೃಹತ್ ಹೂಡಿಕೆಯಾಗಲಿದೆ. ಈಗಾಗಲೇ ನಡೆಸಿರುವ ಅಧ್ಯಯನಗಳ ಪ್ರಕಾರ ಇಡೀ ದೇಶದಲ್ಲಿ ವಿಜಯಪುರ, ಆಂಧ್ರಪ್ರದೇಶದ ಅನಂತಪುರ ಮತ್ತು ರಾಜಾಸ್ಥಾನದ ಜೈಸಲ್ಮೇರ್ ಮಾತ್ರ ಪವನ ವಿದ್ಯುತ್ ಉತ್ಪಾದನೆಗೆ ಅತ್ಯಂತ ಪ್ರಶಸ್ತ ತಾಣಗಳೆಂದು ಗೊತ್ತಾಗಿದೆ ಎಂದು ಅವರು ಹೇಳಿದರು.
ಅನಂತಪುರ ಮತ್ತು ಜೈಸಲ್ಮೇರ್ ಗಳಲ್ಲಿ ಸುಜ್ಲಾನ್ ಕಂಪೆನಿಯು ಈಗಾಗಲೇ ಕ್ರಮವಾಗಿ 2 ಸಾವಿರ ಮತ್ತು 3 ಸಾವಿರ ಮೆಗಾವ್ಯಾಟ್ ಉತ್ಪಾದನಾ ಸಾಮಥ್ರ್ಯದ ಪವನ ವಿದ್ಯುತ್ ಘಟಕಗಳನ್ನು ಹೊಂದಿದೆ. ವಿಜಯಪುರದಲ್ಲಿ ಕಂಪೆನಿಯು 5 ಸಾವಿರ ಮೆಗಾವ್ಯಾಟ್ ಸಾಮಥ್ರ್ಯದ ಘಟಕವನ್ನು ಪ್ರಾರಂಭಿಸಲಿದ್ದು, ಇದು ದೇಶದಲ್ಲೇ 2ನೇ ಅತೀ ದೊಡ್ಡ ಪವನ ವಿದ್ಯುತ್ ಘಟಕವಾಗಿರಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಸುಜ್ಲಾನ್ ಕಂಪೆನಿಯು ಇಲ್ಲಿ ತಯಾರಿಸಲಿರುವ ಕಂಬ ಮತ್ತು ಬ್ಲೇಡುಗಳನ್ನು ಸ್ಥಳೀಯವಾಗಿಯೆ ಬಳಸಲಿದೆ. ಕಂಪೆನಿಗೆ ಅಗತ್ಯವಿರುವ 100 ಎಕರೆ ಜಮೀನನ್ನು ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಕೊಡಲು ಏನೂ ಸಮಸ್ಯೆ ಇಲ್ಲ. ಅಕಸ್ಮಾತ್ ಕಂಪೆನಿಯು ಜಿಲ್ಲೆಯ ಬೇರೆಡೆಗಳಲ್ಲಿ ತನಗೆ ಅಗತ್ಯವಿರುವ ಸೂಕ್ತ ಭೂಮಿ ಲಭ್ಯವಿದೆ ಎಂದು ಭಾವಿಸಿದರೆ, ಅಷ್ಟು ಪ್ರಮಾಣದ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಕೊಡಲಾಗುವುದು ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಈ ಕಂಪೆನಿಯು ವಿಜಯಪುರಕ್ಕೆ ಬರಬೇಕು ಎನ್ನುವುದು ಸರಕಾರದ ಗುರಿಯಾಗಿದ್ದು, ಇದಕ್ಕಾಗಿ ‘ಬಿಯಾಂಡ್ ಬೆಂಗಳೂರು’ ಉಪಕ್ರಮದಡಿ ಇರುವ ಸೌಲಭ್ಯ, ಪ್ರೋತ್ಸಾಹಗಳನ್ನೆಲ್ಲ ಕೊಡಲಾಗುವುದು. ಇದಕ್ಕೆ ಕಂಪೆನಿಯ ಸಿಇಒ ಒಪ್ಪಿಕೊಂಡಿದ್ದು, ಸದ್ಯದಲ್ಲೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಅಂತಿಮವಾಗಿ ಒಡಂಬಡಿಕೆಗೆ ಸಹಿ ಹಾಕಲಾಗುವುದು ಎಂದು ಅವರು ಮಾಹಿತಿ ನೀಡಿದರು.
ರೆನೈಸಾನ್ಸ್ ಕಂಪೆನಿಯಿಂದ 6 ಸಾವಿರ ಕೋಟಿ ರೂ.ಹೂಡಿಕೆ: ಸೌರ ಫಲಕಗಳ (ಸೋಲಾರ್ ಪ್ಯಾನೆಲ್ಸ್) ತಯಾರಿಕೆಗೆ ಬೇಕಾಗುವ ಬಿಡಿ ಭಾಗಗಳ ಉತ್ಪಾದನೆಗೆ ಹೆಸರಾಗಿರುವ ರೆನೈಸಾನ್ಸ್ ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪೆನಿ ವಿಜಯಪುರದಲ್ಲಿ ತನ್ನ ಘಟಕ ಆರಂಭಿಸಲು 6 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದೆ. ಈ ಸಂಬಂಧ ಕಂಪೆನಿಯ ಸಿಇಒ ಮಿಲಿಂದ್ ಕುಲಕರ್ಣಿ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಈ ಕಂಪೆನಿ ತನಗೆ 100 ಎಕರೆ ಜಮೀನು, 80 ಮೆಗಾವ್ಯಾಟ್ ವಿದ್ಯುತ್ ಮತ್ತು ಪ್ರತಿನಿತ್ಯ 10 ಎಂಎಲ್‍ಡಿ ನೀರಿನ ಅಗತ್ಯವಿದೆ ಎಂದು ತಿಳಿಸಿದೆ. ಜಮೀನು ಮತ್ತು ವಿದ್ಯುತ್ತಿಗೆ ಜಿಲ್ಲೆಯಲ್ಲಿ ಸಮಸ್ಯೆಯೇನೂ ಇಲ್ಲ. ಆಲಮಟ್ಟಿ ಅಣೆಕಟ್ಟೆಯಿಂದ ಕಂಪೆನಿಗೆ ಅಗತ್ಯವಿರುವಷ್ಟು ನೀರನ್ನೂ ಕೊಡಬಹುದು ಎಂದು ಅವರು ಹೇಳಿದರು.
ಕಂಪೆನಿಯು ಆರಂಭದಲ್ಲಿ 2,500 ಕೋಟಿ ರೂ. ಬಂಡವಾಳ ಹೂಡಲಿದ್ದು, 5 ಸಾವಿರ ಮೆಗಾವ್ಯಾಟ್ ಸಾಮಥ್ರ್ಯದ ಘಟಕವನ್ನು (ಕ್ರಿಸ್ಟಲ್ ಗ್ರೋತ್ ಮತ್ತು ವೇಫರಿಂಗ್ ಯೂನಿಟ್) ಆರಂಭಿಸಲಿದೆ. 2025ರ ಕೊನೆಯ ಹೊತ್ತಿಗೆ ತನ್ನ ವಾಣಿಜ್ಯ ಚಟುವಟಿಕೆ ಆರಂಭಿಸಲು ಉದ್ದೇಶಿಸಲಿದೆ. ಇದರಿಂದ 1 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ರೆನೈಸಾನ್ಸ್ ಕಂಪೆನಿಯು 2030ರ ಹೊತ್ತಿಗೆ ತನ್ನ ಘಟಕವನ್ನು 20 ಸಾವಿರ ಮೆಗಾವ್ಯಾಟ್ ಮಟ್ಟಕ್ಕೆ ಕೊಂಡೊಯ್ಯುವ ನೀಲನಕಾಶೆಯನ್ನು ಹೊಂದಿದೆ. ಆಗ 3 ಸಾವಿರಕ್ಕೂ ಹೆಚ್ಚು ಜನರಿಗೆ ಇಲ್ಲಿ ಉದ್ಯೋಗ ಸಿಗಲಿದೆ. ಕಂಪೆನಿಯು ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಿದ್ದು, ಅಂತಿಮವಾಗಿ ವಿಜಯಪುರವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಸುಜ್ಲಾನ್ ಸಮೂಹದ ಸಿಇಒ ಜೆ.ಪಿ.ಚಲಸಾನಿ ಮತ್ತು ರೆನೈಸಾನ್ಸ್ ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪೆನಿಯ ಸಿಇಒ ಮಿಲಿಂದ್ ಕುಲಕರ್ಣಿ ಈ ಮಹತ್ವದ ಮಾತುಕತೆಗಳಲ್ಲಿ ಪಾಲ್ಗೊಂಡಿದ್ದರು. ಕೆಐಎಡಿಬಿ ಸಿಇಒ ಡಾ.ಮಹೇಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.