ವಿಜಯಪುರ ಬೋರ್ ವೆಲ್ ದುರಂತ: ಉಪವಾಸದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿ ಆಬಿದ್
ವಿಜಯಪುರ ಜಿಲ್ಲೆಯೊಂದರಲ್ಲೇ ಇದು ಮೂರನೇ ಪ್ರಕರಣ!
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್ ನನ್ನು ಜೀವಂತವಾಗಿ ಮೇಲೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಕೊಳವೆಬಾವಿಗೆ ಬಿದ್ದಿದ್ದ 2 ವರ್ಷದ ಮಗುವನ್ನು 20 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಮೇಲೆತ್ತಿದ ಕೂಡಲೇ ಸನ್ನದ್ಧರಾಗಿದ್ದ ವೈದ್ಯರ ತಂಡ ಮಗುವಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉಪವಾಸದೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಆಬಿದ್
ಇಂಡಿ ತಾಲೂಕಿನ ಲಚ್ಯಾಣದಲ್ಲಿ ಮಗು ಕೊಳವೆಬಾವಿಯಲ್ಲಿ ಬಿದ್ದ ಪ್ರಸಂಗ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊರಡಿದ ಇಂಡಿ ಉಪವಿಭಾಗಾಧಿಕಾರಿ ಆಬಿದ್ ಗದ್ಯಾಳ ಸತತ 21 ಗಂಟೆಗಳ ಕಾಲ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳ ಬಿಟ್ಟು ಕದಲಿಲ್ಲ, ಈ ಮಧ್ಯೆ ಉಪವಾಸ ಬಿಡಲಿಲ್ಲ. ಇಫ್ತಾರ್ ವೇಳೆ ಕೇವಲ ನೀರು ಹಾಗೂ ಒಂದು ಖರ್ಜೂರಾ ತಿಂದು ಉಪವಾಸ ತೊರೆದರು. ಸತತ ಕರೆಗಳು, ಅಧಿಕಾರಿಗಳೊಂದಿಗೆ ಸಮನ್ವಯ, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿಗಳನ್ನು ನಿಭಾಯಿಸಿದರು. ಸಹರಿ ವೇಳೆಯೂ (ಉಪವಾಸ ಆಚರಣೆಗೆ ಅಣಿಯಾಗುವ ಹೊತ್ತು) ಸ್ಥಳ ಬಿಟ್ಟು ಕದಲದ ಆಬಿದ್ ಅಲ್ಲಿಯೇ ಚಹಾ, ಎರಡು ಬಿಸ್ಕಿಟ್ ಸೇವನೆ ಮಾಡಿ ಮತ್ತೆ ಉಪವಾಸ ಆಚರಿಸಿದರು.
ವಿಜಯಪುರ ಜಿಲ್ಲೆಯೊಂದರಲ್ಲೇ ಇದು ಮೂರನೇ ಪ್ರಕರಣ!
ಜಿಲ್ಲೆಯಲ್ಲಿ ಇದಕ್ಕೂ ಮುನ್ನ ಈ ರೀತಿಯ ಎರಡು ಪ್ರಕರಣಗಳು ಸಂಭವಿಸಿವೆ. 2008ರಲ್ಲಿ ಇಂಡಿ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಕೊಳವೆ ಬಾವಿಗೆ ಕಾಂಚನಾ ಎಂಬ ಬಾಲಕಿ ಬಿದ್ದಿದ್ದಳು. ಕರ್ನಾಟಕದಲ್ಲಿ ಮಗು ಕೊಳವೆ ಬಾವಿಗೆ ಬಿದ್ದ ಎರಡನೇ ಪ್ರಕರಣ ಇದಾಗಿತ್ತು. ಕಾಂಚನಾ ಎಂಬ ಬಾಲೆಯನ್ನು ರಕ್ಷಿಸುವುದಕ್ಕೆ ರಕ್ಷಣಾ ತಂಡಗಳು ಬಹಳ ಹೊತ್ತು ಕಾರ್ಯಾಚರಣೆ ನಡೆಸಿದ್ದವು. ಮಗುವನ್ನು ಕೊಳವೆ ಬಾವಿಯಿಂದ ಮೇಲೆತ್ತುವುದಕ್ಕೆ ಹಿಟಾಚಿ, ಜೆಸಿಬಿ ಬಳಸಿ ನಿರಂತರ ಕಾರ್ಯಾರಣೆ ನಡೆಸಲಾಗಿತ್ತು. ಹೀಗಿದ್ದರೂ, ಕಾಂಚನಾಳ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.
ಯಾದಗಿರಿ ಜಿಲ್ಲೆಯಿಂದ ಕೂಲಿಗಾಗಿ ಬಂದಿದ್ದ ಹನುಮಂತ ಪಾಟೀಲ ಅವರ ಮಗಳು ಮೂರು ವರ್ಷದ ಅಕ್ಷತಾ ಆಟವಾಡುತ್ತಾ ಕೊಳವೆ ಬಾವಿಯಲ್ಲಿ ಸಿಲುಕಿದ ಪ್ರಕರಣ 2014ರಲ್ಲಿ ದ್ಯಾಬೇರಿ ಗ್ರಾಮದ ಜಮೀನೊಂದರಲ್ಲಿ ನಡೆದಿತ್ತು. ಅಂದು ಬಾಲಕಿ ಅಕ್ಷತಾಳ ರಕ್ಷಣೆಗಾಗಿ ಹೈದಾರಾಬಾದ್ ನಿಂದ NDRF, ಬೆಳಗಾವಿಯಿಂದ SDRF ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ ರಕ್ಷಣಾ ತಂಡಗಳು ವಾರ ಪೂರ್ತಿ ಕಾರ್ಯಾಚರಣೆ ನಡೆಸಿದ್ದವು. ಕಾರ್ಯಾಚರಣೆ ಸಫಲವಾಯಿತಾದರೂ, ಅಕ್ಷತಾ ಜೀವ ಉಳಿಸುವುದು ಸಾಧ್ಯವಾಗಿರಲಿಲ್ಲ.
ರಾಯಚೂರು ಜಿಲ್ಲೆಯಲ್ಲಿ ಮೊದಲ ಘಟನೆ: ಕೊಳವೆ ಬಾವಿಗೆ ಬಿದ್ದು ಮಗು ಮೃತಪಟ್ಟ ಮೊದಲ ದುರಂತ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿತ್ತು. 2005ರಲ್ಲಿ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಯಲ್ಲಮ್ಮದೇವಿ ಗುಡ್ಡದ ಪರಿಸರದಲ್ಲಿ ಸಂದೀಪ ಎಂಬ ಬಾಲಕ ಇದೇ ರೀತಿ ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿದ್ದ. ಅಂದು ಆತನ ರಕ್ಷಣೆಗಾಗಿ ಐದಾರು ದಿನಗಳ ಕಾರ್ಯಾಚರಣೆ ನಡೆಸಲಾಗಿತ್ತು.