ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ : ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್
ಹೊಸಪೇಟೆ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳುತ್ತಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಪ್ರಜಾಪ್ರಭುತ್ವದ ಏಕತೆ, ಸದೃಢತೆ, ಸಾಮರಸ್ಯ ಸಾರುವ ಸಂಕೇತವಾಗಿ ಮಾನವ ಸರಪಳಿ ರೂಪಿಸುವ ಮೂಲಕ ಬೃಹತ್ ಸಂವಿಧಾನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ನಡೆಯಲಿರುವ ಈ ಐತಿಹಾಸಿಕ ಮಾನವ ಸರಪಳಿ ಕಾರ್ಯಕ್ರಮವು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿದ್ದು, ಟಿ.ಬಿ. ಡ್ಯಾಂ ಹತ್ತಿರದ ಗಣೇಶ ಗುಡಿಯ ಬಳಿಯ ಮೊದಲನೇ ಸೇತುವೆಯಿಂದ ಅರಂಭವಾಗಿ ಹೊಸಪೇಟೆ ನಗರದ ಮೂಲಕ ಭುವನಹಳ್ಳಿಯವರೆಗೆ ಸುಮಾರು 40 ಕಿ.ಮೀ ಉದ್ದ ನಡೆಯಲಿದೆ ಎಂದು ಹೇಳಿದರು.
ಮಾನವ ಸರಪಳಿಯ ಯಶಸ್ವಿ ನಿರ್ವಹಣೆಗಾಗಿ ಪ್ರತಿ 100 ಮೀಟರ್ ಗೆ ಒಬ್ಬರನ್ನು ಸೆಕ್ಟರ್ ಅಧಿಕಾರಿಗಳಾಗಿ, ಅದೇ ರೀತಿ ತಾಲ್ಲೂಕ ಮಟ್ಟದ ಅಧಿಕಾರಿಗಳನ್ನು ಪ್ರತಿ 1 ಕಿ.ಮೀ.ಗೆ ಒಬ್ಬರಂತೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ 3 ಕಿ.ಮೀ.ಗೆ ಒಬ್ಬರಂತೆ ನೋಡಲು ಅಧಿಕಾರಿಗಳಾಗಿ ನೇಮಕಮಾಡಲಾಗಿದೆ ಎಂದರು.
ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಶಾಲಾ ವಾಹನಗಳ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೇ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಅಗತ್ಯ ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಬಿಸ್ಕೇಟ್ ವಿತರಿಸಲಾಗುವುದು ಎಂದರು.
ನಿಗದಿತ ವೇಳಾ ಪಟ್ಟಿಯಂತೆ ಸೆ.15ರ ಬೆಳಿಗ್ಗೆ 9:30 ರಿಂದ 9:37 ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವುದು. 9:37 ರಿಂದ 9:40 ನಾಡಗೀತೆ, 9:40 ರಿಂದ 9:55 ರವರೆಗೆ ಮುಖ್ಯ ಅತಿಥಿಗಳಿಂದ ಭಾಷಣ. 9:55 ರಿಂದ 9:57 ರವರೆಗೆ ಸಂವಿಧಾನ ಪ್ರಸ್ತಾವನೆ ಓದುವುದು. 9.57 ರಿಂದ 9:59 ರವರೆಗೆ ಮಾನವ ಸರಪಳಿಯಲ್ಲಿ ಕೈ-ಕೈ ಹಿಡಿದು ನಿಲ್ಲುವುದು ಬೆಳಿಗ್ಗೆ 10 ಗಂಟೆಗೆ ಮಾನವ ಸರಪಳಿಯಲ್ಲಿಯೇ ಎರಡೂ ಕೈಗಳನ್ನು ಮೇಲೆತ್ತಿ "ಜೈ ಹಿಂದ್, ಜೈ ಕರ್ನಾಟಕ" ಘೋಷಣೆ ಕೂಗುವುದು.
ಈ ಎಲ್ಲಾ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯಲಿವೆ. ಹೊಸಪೇಟೆ ನಗರದ ಡಾ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಪ್ರಸ್ತಾವನೆ ಓದುವ ಕಾರ್ಯಕ್ರಮ ಅಯೋಜಿಸಲಾಗಿದೆ. ಕಾರ್ಯಕ್ರಮದ ಎಲ್ಲಾ ಚಿತ್ರೀಕರಣವು ಡ್ರೋನ್ ಕ್ಯಾಮರಾ ಮೂಲಕ ನಡೆಯಲಿದೆ. ಭಾರತ ಸಂವಿಧಾನದ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೋಂಗ್ಜಾಯ್ ಮುಹಮದ್ ಅಲಿ ಅಕ್ರಂ ಶಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್. ಸೇರಿದಂತೆ ಮತ್ತಿತರರಿದ್ದರು.