ವಿಜಯಪುರ: 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ವಿಜಯಪುರ, ಜು.29: ಗದುಗಿನ ದಲಿತ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ವಿಜಯಪುರ ನಗರದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ (ಬೆಳ್ಳಿ ಸಂಭ್ರಮ)ಕ್ಕೆ ಶನಿವಾರ ಚಾಲನೆ ನೀಡಲಾಯಿತು.
ದಲಿತ ಸಾಹಿತ್ಯ ಪರಿಷತ್ತಿನ 25ನೇ ಬೆಳ್ಳಿ ಹಬ್ಬ ಹಿನ್ನೆಲೆ ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಯಿತು. ಮಾಜಿ ಶಾಸಕ ರಾಜು ಆಲಗೂರ ಬೆಳ್ಳಿ ಹಬ್ಬದ ಮೆರವಣಿಗೆಗೆ ಚಾಲನೆ ನೀಡಿದರು.
ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಪ್ರೊ.ಎಚ್.ಟಿ.ಪೋತೆ ದಂಪತಿಯನ್ನು ಆಲಂಕೃತ ಸಾರೋಟ್ ನಲ್ಲಿ ಕೂರಿಸಿ ನಗರದ ಗಾಂಧಿ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಸಮ್ಮೇಳನ ನಡೆಯುವ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ಜಾನಪದ ಕಲಾ ಮೇಳಗಳು ಮೆರವಣಿಗೆಗೆ ಮೆರುಗು ನೀಡಿದವು.
ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಕಾರ್ಯದರ್ಶಿ ಸುಭಾಸ ಹೊದ್ಲೂರ, ಖಜಾಂಚಿ ಡಾ.ಎಚ್.ಬಿ.ಕೋಲ್ಕಾರ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮುಖಂಡರಾದ ಬಸವರಾಜ ಜಾಲವಾದಿ, ಅಡಿವೆಪ್ಪ ಸಾಲಗಲ್ಲ, ಶೇಷರಾವ್ ಮಾನೆ, ಚಂದ್ರಕಾಂತ ಸಿಂಗೆ, ಸಂತೋಷ ಬಾಗೇವಾಡಿ, ಡಾ.ಎಸ್.ಎಸ್.ದೊಡಮನಿ, ಎಂ.ಯು.ವಠಾರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಆರಂಭದಲ್ಲಿ ಸಾಹಿತಿ ದೊಡ್ಡಣ್ಣ ಭಜಂತ್ರಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ಪ್ರಬುದ್ಧ ಭಾರತ ಕುರಿತು ಉಪನ್ಯಾಸ, ಸಂವಾದ ನಡೆಯಲಿದೆ.