ವಿಜಯಪುರ: ರೇಂಜರ್ ಸ್ವಿಂಗ್ ತೊಟ್ಟಿಲಿನಿಂದ ಬಿದ್ದು ಯುವತಿ ಮೃತ್ಯು
ಕಳಪೆ ಸೇಫ್ಟಿ ಸೀಟ್ ಬೆಲ್ಟ್ ಕಾರಣ ಅವಘಡ: ಇಬ್ಬರ ಬಂಧನ
ವಿಜಯಪುರ: ರೇಂಜರ್ ಸ್ವಿಂಗ್ ತೊಟ್ಟಿಲಿನಿಂದ ಬಿದ್ದು ಯುವತಿಯೊಬ್ಬಳು ಮೃತಪಟ್ಟ ಘಟನೆ ನಗರ ಹೂರವಲಯದ ಇಲ್ಲಿನ ಎ ಪಿ ಜೆ ಕಲಾಂ ರಸ್ತೆಯಲ್ಲಿ ನಡೆದಿದೆ.
ನಿಖಿತಾ ಅರವಿಂದ ಬಿರಾದಾರ (21) ಮೃತಪಟ್ಟ ಯುವತಿ. ಎರಡು ದಿನಗಳ ಹಿಂದೆ ಸಂಭವಿಸಿರುವ ಈ ದುರಂತ ಘಟನೆಯ ವೀಡಿಯೊ ಸ್ಥಳದಲ್ಲಿದ್ದ ಕೆಲವರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಆ ದೃಶ್ಯಗಳು ನೋಡುಗರನ್ನು ಬೆಚ್ಚಿ ಬೀಳುಸುವಂತಿದೆ.
ಇಲ್ಲಿನ ಎಪಿಜೆ ಕಲಾಂ ರಸ್ತೆಯಲ್ಲಿರುವ ಫಿಶ್ ಟನಲ್ ಎಕ್ಸ್ಪೋದಲ್ಲಿ ಅ.20ರಂದು ಈ ಅವಘಡ ಸಂಭವಿಸಿದೆ. ಅಂದು ಸಂಜೆ ನಿಖಿತಾ ಇನ್ನಿಬ್ಬರು ಗೆಳೆಯತಿಯರ ಜೊತೆ ತಲೆ ಕೆಳಗಾಗಿ ತೂಗಾಡಿಸುವ ರೇಂಜರ್ ಸ್ವಿಂಗ್ ತೊಟ್ಟಿಲಿನಲ್ಲಿ ಕುಳಿತಿದ್ದರು. ತೊಟ್ಟಿಲು ಚಾಲನೆಗೊಂಡ ವೇಳೆ ನಿಖಿತಾ ಅವರಿಗೆ ಹಾಕಿದ್ದ ಸೇಫ್ಟಿ ಬೆಲ್ಟ್ ಸಡಿಲಗೊಂಡಿರುವುದು ಅರಿವಿಗೆ ಬಂದಿದೆ. ತೊಟ್ಟಿಲು ತಲೆ ಕೆಳಗಾಗಿ ತೂಗುತ್ತಿರುವಾಗಲೇ ನಿಖಿತಾ ಭಯದಿಂದ ಚೀರಾಡಿದ್ದಾರೆ.
ಈ ವೇಳೆ, ನಿಖಿತಾರ ತಾಯಿ ಗೀತಾ ಕೂಡ ರೇಂಜರ್ ಸ್ವಿಂಗ್ ಯಂತ್ರ ನಿಲ್ಲಿಸುವಂತೆ ಆಪರೇಟರ್ ಬಳಿ ಒತ್ತಾಯಿಸಿದ್ದಾರೆ. ಆದರೆ ಆಪರೇಟರ್ ರೇಂಜರ್ ಸ್ವಿಂಗ್ ನಿಲ್ಲಿಸಿಲ್ಲ ಎನ್ನಲಾಗಿದೆ. ಅಷ್ಟರಲ್ಲಿ ನಿಖಿತಾ ತೊಟ್ಟಿನಿಂದ ಕೆಳಗೆ ಬಿದ್ದಿದ್ದಾರೆ.
ಕೆಳಗಡೆ ಬಿದ್ದ ರಭಸಕ್ಕೆ ನಿಖಿತಾ ರ ತಲೆ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಖಿತಾ ಅದೇ ದಿನ ಕೊನೆಯುಸಿರೆಳೆದಿದ್ದರು. ಕಳಪೆ ಸೇಫ್ಟಿ ಬೆಲ್ಟ್ ಕಾರಣದಿಂದಲೇ ಈ ದುರಂತ ನಡೆದಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇಬ್ಬರು ಬಂಧನ: ಈ ಘಟನೆ ಸಂಬಂಧ ಫಿಶ್ ಟನಲ್ ಎಕ್ಸ್ಪೋ ಮ್ಯಾನೇಜನ್, ಆಪರೇಟರ್ಸ್ ಹಾಗೂ ಇತರರ ವಿರುದ್ಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಪರೇಟರ್ ಮತ್ತು ಕ್ಯಾಶಿಯರ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಮ್ಯಾನೇಜರ್ ರಮೇಶ ಬಾಬು ಎಂಬಾತನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.