ಮುಜುರಾಯಿ ಹಾಗೂ ವಕ್ಫ್ ಆಸ್ತಿ ದೇವರ ಸ್ವತ್ತು : ಝಮೀರ್ ಅಹ್ಮದ್ ಖಾನ್
ವಿಜಯಪುರ : ಮುಜರಾಯಿ ಆಗಲಿ ವಕ್ಫ್ ಆಸ್ತಿ ಆಗಲಿ ಅದು ದೇವರ ಸ್ವತ್ತು. ಅದರ ಸಂರಕ್ಷಣೆ ಸರಕಾರ ಮತ್ತು ಸಮಾಜದ ಜವಾಬ್ದಾರಿ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಮಂಗಳವಾರ ವಕ್ಫ್ ಅದಾಲತ್ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಸಮುದಾಯದ ಒಳಿತಿಗಾಗಿ ದಾನಿಗಳು ನೀಡಿರುವ ಆಸ್ತಿ ದೇವರ ಸ್ವತ್ತು. ಅಧಿಕಾರಿಗಳು ಸಹ ಈ ವಿಚಾರದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ವಕ್ಫ್ ಆಸ್ತಿ ವಿಚಾರದಲ್ಲಿ ಉಡಾಫೆ, ಬೇಜವಾಬ್ದಾರಿ, ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿಜಯಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 2148 ಆಸ್ತಿಗಳ ಪೈಕಿ 109 ಆಸ್ತಿಗಳಿಗೆ ಖಾತೆ ಆಗಿದ್ದು, 2039 ಬಾಕಿ ಇದೆ. ಅದೇ ರೀತಿ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 1703 ಆಸ್ತಿಗಳ ಪೈಕಿ 691 ಆಸ್ತಿಗಳಿಗೆ ಖಾತೆ ಆಗಿದ್ದು 1012 ಬಾಕಿ ಇದೆ. ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 146 ಆಸ್ತಿಗಳಿಗೆ ಖಾತೆ ಆಗಿದ್ದು 175 ಆಸ್ತಿಗಳು ಬಾಕಿ ಇದೆ. 45 ದಿನಗಳಲ್ಲಿ ಇವುಗಳನ್ನೆಲ್ಲ ಇತ್ಯರ್ಥ ಪಡಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೆಲವು ಕಡೆ ಖಾತೆ ನಂತರ ಪ್ಲಾಗಿಂಗ್ ಆಗಿಲ್ಲ. ಇದಕ್ಕೆ ಯಾವುದೇ ತೊಂದರೆ ಇಲ್ಲವಾದರೂ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ. ಈ ಕುರಿತು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ಎಚ್ಚರಿಕೆ ನೀಡಿದರು.
ಅಮಾನತು: ಸಭೆಗೆ ಗೈರು ಆಗಿದ್ದ ಸಿಂಧಗಿ ತಾಲೂಕು ಅಧಿಕಾರಿ ಶಾಸಕರ ಜೊತೆ ಇರುವುದರಿಂದ ಸಭೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದರು. ಈ ಸಂಬಂಧ ಶಾಸಕ ಅಶೋಕ್ ಮನಗೂಳಿಯವರಿಗೆ ನೇರವಾಗಿ ಕರೆ ಮಾಡಿದ ಝಮೀರ್ ಅಹ್ಮದ್ ಖಾನ್, ಅಧಿಕಾರಿ ಅಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಅವರನ್ನು ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗಠಾಣ ಶಾಸಕ ವಿಠಲ್ ಕಟಕದೊಂಡ ಅವರಿಗೆ ಸರಿಯಾದ ಮಾಹಿತಿ ನೀಡದ ಕೊಳಗೇರಿ ಅಭಿವೃದ್ಧಿ ಮಂಡಳಿ ಎಂಜಿನಿಯರ್ ವರ್ತನೆ ಕುರಿತು ಗರಂ ಆದ ಸಚಿವರು, ಇಂತಹ ನಡವಳಿಕೆ ಮರುಕಳಿಸದಂತೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ವಕ್ಫ್ ಅದಾಲತ್ ನಲ್ಲಿ ಸಲ್ಲಿಕೆಯಾದ 338 ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ನೀಡಲಾಯಿತು.
ಸಭೆಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಸಚಿವ ಶಿವಾನಂದ ಪಾಟೀಲ್, ಶಾಸಕ ವಿಠಲ್ ಕಟಕದೊಂಡ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಭೂ ಬಾಲನ್, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್, ಜಿ.ಪಂ.ಸಿಇಒ ರಿಷಿ ಆನಂದ್, ವಕ್ಫ್ ಬೋರ್ಡ್ ಸಿಇಒ ಜಿಲಾನಿ ಮೋಕಾಶಿ ಉಪಸ್ಥಿತರಿದ್ದರು.