ಟಿವಿ ನ್ಯೂಸ್ ಚಾನಲ್ ಗಳು ಸಾಕಾಗಲ್ವ ಮೋದಿ ಸರಕಾರಕ್ಕೆ ?
ದೇಶದ ಟಾಪ್ 50 ಯೂಟ್ಯೂಬರ್ ಗಳೊಂದಿಗೆ ಏನು ಚರ್ಚಿಸಿದರು ಪಿಯೂಷ್ ಗೋಯಲ್ ?
ಸತ್ಯ ಅಂದ್ರೆ ದೂರ ಓಡುವ, ಸುಳ್ಳೇ ನಮ್ಮ ಸರ್ವಸ್ವ ಎಂದು ಕೆಲಸ ಮಾಡೋ ಟಿವಿ ನ್ಯೂಸ್ ಚಾನಲ್ ಗಳನ್ನು ನಂಬಿದರೆ ಸಾಕಾಗೋದಿಲ್ಲ ಅಂತ ಮೋದಿ ಸರಕಾರಕ್ಕೆ ಏನಾದರೂ ಜ್ಞಾನೋದಯ ಆಗಿದೆಯಾ ? ಕರ್ನಾಟಕದಲ್ಲಿ ಹೀನಾಯ ಸೋಲಿನ ಬಳಿಕ ಎಚ್ಚೆತ್ತುಕೊಂಡು ಹೊಸ ಸ್ಟ್ರಾಟಜಿ ಮಾಡುತ್ತಿದ್ದಾರಾ ಮೋದಿ - ಶಾ ಜೋಡಿ ? ತಮ್ಮ ಬಗ್ಗೆ, ಕೇಂದ್ರ ಸರಕಾರದ ಬಗ್ಗೆ ಪಾಸಿಟಿವ್ ಇಮೇಜ್ ಬಿಂಬಿಸೋಕೆ ಟಿವಿ ಚಾನಲ್ ಗಳನ್ನು ನಂಬಿದರೆ ಸಾಲದು ಎಂದು ಮೋದಿ ಸರಕಾರಕ್ಕೆ ಮನವರಿಕೆ ಆಗಿದೆಯೇ? ಮೊನ್ನೆ ನಡೆದಿರೋ ಸಭೆಯೊಂದು ಇಂತಹ ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಟ್ಟಿದೆ.
ದೇಶದ ಟಾಪ್ 50 ಯೂಟ್ಯೂಬರ್ಗಳ ಜೊತೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮೊನ್ನೆ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಚರ್ಚೆಯಲ್ಲಿ ಭಾಗವಹಿಸಿದವರಲ್ಲಿ ಮೋಟಿವೇಷನಲ್ ಸ್ಪೀಕರ್ ವಿವೇಕ್ ಬಿಂದ್ರಾ, ಟೆಕ್ನಿಕಲ್ ಗುರೂಜಿ ಚಾನೆಲ್ಲಿನ ಗೌರವ್ ಚೌಧರಿ, ಮಾಂಕ್ ಎಂಟರ್‌ಟೈನ್‌ಮೆಂಟ್ ಸಹ ಸಂಸ್ಥಾಪಕ ವಿರಾಜ್ ಸೇಠ್, ಥಿಂಕ್ ಸ್ಕೂಲ್ ಚಾನೆಲ್ಲಿನ ಗಣೇಶ್ ಪ್ರಸಾದ್, ಟೆಕ್ ಬರ್ನರ್ ಚಾನೆಲ್ಲಿನ ಶ್ಲೋಕ್ ಶ್ರೀವಾಸ್ತವ, MBA ಚಾಯ್ ವಾಲಾ ಚಾನೆಲ್ ಮೂಲಕ ಹೆಸರಾಗಿರೋ ಪ್ರಫುಲ್ ಬಿಲ್ಲೂರ್, ಅನುಷ್ಕಾ ರಾಥೋಡ್ ಫೈನಾನ್ಸ್ ಚಾನೆಲ್ಲಿನ ಅನುಷ್ಕಾ ರಾಥೋಡ್ ಸೇರಿದಂತೆ ಒಟ್ಟು ಟಾಪ್ 50 ಯೂಟ್ಯೂಬರ್ಗಳಿದ್ದರು.
ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದೂ ಸೇರಿದಂತೆ ಸರಕಾರದ ಯೋಜನೆಗಳ ಬಗ್ಗೆ ಮತ್ತಷ್ಟು ಪ್ರಚಾರ ಮಾಡಲು ಈ ಯೂಟ್ಯೂಬರ್ಗಳನ್ನು ಬಳಸಿಕೊಳ್ಳುವುದು ಸರ್ಕಾರದ ಉದ್ದೇಶ ಅಂತ ವರದಿಯಾಗಿದೆ.
ಸೈಬರ್ ಭದ್ರತೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ದಾರಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಹೆಚ್ಚು ಪಾಪ್ಯುಲರ್ ಮಾಡುವುದು, ಸಿರಿಧಾನ್ಯ ಪ್ರಯೋಜನಗಳ ಕುರಿತು ಮಾಹಿತಿ ಮುಟ್ಟಿಸೋದು ಸೇರಿದಂತೆ ಇತರ ಹಲವಾರು ವಿಷಯಗಳಲ್ಲಿ ಈ ಯೂಟ್ಯೂಬರ್ಗಳ ಸಹಾಯ ಪಡೆಯುವ ವಿಚಾರವನ್ನು ಗೋಯಲ್ ಚರ್ಚಿಸಿದ್ದಾರೆ ಅನ್ನುತ್ತಿವೆ ವರದಿಗಳು.
ಜೊತೆಗೆ ಹೇಗೆಲ್ಲ ಸರಕಾರದ ಯೋಜನೆಗಳನ್ನು ಇವರ ಮೂಲಕ ಪ್ರಚಾರ ಮಾಡಬಹುದು ಅನ್ನೋದರ ಬಗ್ಗೆ ಅವರಿಂದಲೇ ಗೋಯಲ್ ವಿವರ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಯೂಟ್ಯೂಬರ್‌ಗಳು ತಮ್ಮ ಚಾನೆಲ್‌ಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವುದಕ್ಕೆ ಉತ್ಸಾಹದಿಂದಲೇ ಒಪ್ಪಿದ್ದಾರೆ ಎಂತಲೂ ವರದಿಗಳು ಹೇಳಿವೆ. ಅಲ್ಲದೆ ಇತರರು ತಪ್ಪು ಮಾಹಿತಿ ಹರಡದಂತೆ ಫ್ಯಾಕ್ಟ್ ಚೆಕರ್ ಗಳಾಗಿಯೂ ಇವರು ಸರ್ಕಾರಕ್ಕೋಸ್ಕರ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಹಣಕಾಸು, ಆರ್ಥಿಕತೆ, ತಂತ್ರಜ್ಞಾನ, ಆಹಾರ ಮತ್ತು ಜೀವನಶೈಲಿ, ಮೋಟಿವೇಷನಲ್ ಮಾತುಗಾರಿಕೆ, ಹಾಸ್ಯ, ಕಲೆ, ಪಾಡ್‌ಕಾಸ್ಟರ್‌ಗಳು ಇತ್ಯಾದಿ ಸೇರಿದಂತೆ ವಿವಿಧ ಪ್ರಕಾರಗಳ ಯೂಟ್ಯೂಬರ್ ಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಐದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ.
ಒಟ್ಟಾರೆ, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಅವರನ್ನು ಸಹಭಾಗಿಗಳಾಗಿಸಲು ಗೋಯಲ್ ಮಾತುಕತೆ ನಡೆಸಿದ್ದಾರೆ ಅಂತ ಸುದ್ದಿ ಆಗುತ್ತಾ ಇದೆ. ಆದರೆ ಈಗ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದ ಮೇಲೆ ಸರಕಾರಕ್ಕೆ ದಿಢೀರನೆ ಈ ಯೂಟ್ಯೂಬರ್ಗಳ ನೆನಪು ಸುಮ್ಮನೆ ಆಯ್ತಾ ? ಯಾವ ಯೋಜನೆಗಳನ್ನು ಹೇಗೆ ಜನರಿಗೆ ತಲುಪಿಸೋದು, ಯಾವ ಕ್ಷೇತ್ರದಲ್ಲಿ ಹೇಗೆ ಅಭಿವೃದ್ಧಿ ಮಾಡೋದು ಅಂತ ನಾಲ್ಕು ವರ್ಷ ಕಳೆದ ಮೇಲೆ ಸರಕಾರ ಸಲಹೆ ಪಡೆಯುತ್ತಾ ?
ಈಗ ಭಾರತದಲ್ಲಿ ಯೂಟ್ಯೂಬ್ ಅತ್ಯಂತ ಜನಪ್ರಿಯ ವೀಡಿಯೊ ಪ್ಲಾಟ್ ಫಾರ್ಮ್. ಬಹುತೇಕ ಎಲ್ಲ ಮೊಬೈಲ್ ಗಳಲ್ಲೂ ಯೂಟ್ಯೂಬ್ ಇದ್ದೇ ಇರುತ್ತೆ. ಮನರಂಜನೆಯ ಜೊತೆ ಈಗ ಸುದ್ದಿಗೂ ದೊಡ್ಡ ಸಂಖ್ಯೆಯ ಭಾರತೀಯರು ಯೂಟ್ಯೂಬ್ ಅನ್ನೇ ನೋಡ್ತಾರೆ. ಪಿಯೂಷ್ ಗೋಯಲ್ ಅವರು ಆಹ್ವಾನಿಸಿದ ಈ 50 ಯೌಟ್ಯೂಬರ್ ಗಳಿಗೆ ಒಟ್ಟು 30 ಕೋಟಿ ಯುಟ್ಯೂಬ್ Subscribers ಹಾಗು ಸುಮಾರು 8 ಕೋಟಿ ಫೇಸ್ ಬುಕ್ ಫಾಲೋವರ್ಸ್ ಇದ್ದಾರೆ. ಯಾವ ಲೆಕ್ಕದಲ್ಲಿ ನೋಡಿದರೂ ಇದು ಬಹಳ ದೊಡ್ಡ ಸಂಖ್ಯೆ. ಇಲ್ಲೇ ಇರೋದು ಪಿಯೂಷ್ ಗೋಯಲ್ ಸಭೆಯ ಹಿಂದಿನ ಲೆಕ್ಕಾಚಾರ.
ದೇಶದ ಬಹುಪಾಲು ಮಾಧ್ಯಮ ಸಂಸ್ಥೆಗಳು ಮೋದಿ ಸರ್ಕಾರದ ಬಿಗಿ ಹಿಡಿತದಲ್ಲೇ ಇವೆ. ಮುಖ್ಯವಾಹಿನಿಯ ಎಲ್ಲ ಚಾನೆಲ್ಗಳು ಮತ್ತು ಪತ್ರಿಕೆಗಳು ಮೋದಿ ಗುಣಗಾನದಲ್ಲಿಯೇ ಬಿಝಿಯಾಗಿವೆ. ಅವೆಲ್ಲವೂ ಸರ್ಕಾರದ ತುತ್ತೂರಿಗಳೇ ಆಗಿಬಿಟ್ಟಿವೆ. ಹಾಗಾದರೆ ಇದ್ದಕ್ಕಿದ್ದಂತೆ ಸರಕಾರಕ್ಕೆ ಹೇಗೆ ಪ್ರಭಾವಿ ಯೂಟ್ಯೂಬರ್ಗಳ ನೆನಪಾಯಿತು ? ಯೂಟ್ಯೂಬ್ ಬಗ್ಗೆ ಸರ್ಕಾರ ಇಷ್ಟು ತಲೆಕೆಡಿಸಿಕೊಳ್ಳಲು ಕಾರಣವೇನು ? ಯೂಟ್ಯೂಬರ್ಗಳ ಜೊತೆಗಿನ ಮಾತುಕೆಯ ಮೂಲಕ ಸರ್ಕಾರ ಏನು ಮಾಡಲು ಹೊರಟಿದೆ?
ಕರ್ನಾಟಕದಲ್ಲಿ ಅದೇನೇ ಮಾಡಿದರೂ ಬಿಜೆಪಿ ಹೀನಾಯವಾಗಿ ಸೋತಿದೆ. ಅಲ್ಲಿಗೆ ದಕ್ಷಿಣ ಭಾರತದ ಬಾಗಿಲು ಅದಕ್ಕೆ ಮುಚ್ಚಿದೆ. ಕೆಲವೇ ತಿಂಗಳುಗಳಲ್ಲಿ ನಾಲ್ಕು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಾದ ಕೂಡಲೇ ಲೋಕಸಭಾ ಚುನಾವಣೆಗೆ ದೇಶ ಸಜ್ಜಾಗುತ್ತದೆ.
ಕರ್ನಾಟಕದಲ್ಲಿ ಅನುಸರಿಸಿದ ಪ್ರಚಾರ ತಂತ್ರಗಳನ್ನೇ ಕಾಂಗ್ರೆಸ್ ಇತರೆಡೆಗಳಲ್ಲಿ ಪ್ರಯೋಗಿಸುವ ಸಾಧ್ಯತೆಯೂ ಇರುವುದರಿಂದ, ಅದಕ್ಕೆ ಪರ್ಯಾಯ ಅಸ್ತ್ರಗಳನ್ನು ರೂಪಿಸುವ ಅನಿವಾರ್ಯತೆ ಈಗ ಬಿಜೆಪಿಗಿದೆ. ಸಾಲದ್ದಕ್ಕೆ ಈಗ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಜೋರಾಗಿದೆ.
ಈ ನಡುವೆ ದೇಶದಲ್ಲಿ ಯೂಟ್ಯೂಬರ್ ಗಳ ಪ್ರಭಾವ ಬಹಳ ಹೆಚ್ಚಾಗಿದೆ. ಈಗ ಕೇಂದ್ರ ಸರಕಾರದ ಕಾರ್ಯವೈಖರಿ ಬಗ್ಗೆ ನಿಷ್ಪಕ್ಷ, ನಿಷ್ಠುರ ವಿಮರ್ಶೆ, ಟೀಕೆ ಟಿಪ್ಪಣಿಗಳು ಅತ್ಯಂತ ಹೆಚ್ಚು ಪ್ರಸಾರ ಆಗ್ತಾ ಇರೋದೇ ಯೂಟ್ಯೂಬ್ ನಲ್ಲಿ. ತನ್ನ ನೀತಿಗಳನ್ನು ನಿಷ್ಪಕ್ಷವಾಗಿ ಟೀಕಿಸುವ ಒಂದೊಂದೇ ಖ್ಯಾತ ಹಿಂದಿ, ಇಂಗ್ಲೀಷ್ ಪತ್ರಕರ್ತರನ್ನು ಮೋದಿ ಸರಕಾರ ಬೇರೆ ಬೇರೆ ರೀತಿಯಲ್ಲಿ ಬದಿಗೆ ಸರಿಸಿತ್ತು. ಆದರೆ ಅವರೆಲ್ಲರೂ ಯೂಟ್ಯೂಬ್ ನಲ್ಲಿ ತಮ್ಮದೇ ಚಾನಲ್ ಮಾಡಿಕೊಂಡು ಈಗ ಪ್ರತಿದಿನ ಮೋದಿ ಸರಕಾರದ ವೈಫಲ್ಯಗಳನ್ನು ಜನರೆದುರು ಇಡುತ್ತಿದ್ದಾರೆ.
ಮೋದಿಜಿ ಹಾಗು ಬಿಜೆಪಿಗೆ ತೀರಾ ಅಲರ್ಜಿಯಾಗುವ ರವೀಶ್ ಕುಮಾರ್ ಅವರು ಗೌತಮ್ ಅದಾನಿ ಎನ್ ಡಿ ಟಿ ವಿ ಖರೀದಿಸಿದ ಕೂಡಲೇ ಅಲ್ಲಿ ರಾಜೀನಾಮೆ ಕೊಟ್ಟು ತಮ್ಮದೇ ಯೂಟ್ಯೂಬ್ ಚಾನಲ್ ನಲ್ಲಿ ಸಕ್ರಿಯರಾದರು. ತಕ್ಷಣ ಅವರ ಚಾನಲ್ ಗೆ ಲಕ್ಷಾಂತರ subscribers ಬಂದು ಸೇರಿಕೊಂಡರು. ಇವತ್ತು ಅವರ ಚಾನಲ್ ಗೆ 63 ಲಕ್ಷಕ್ಕೂ ಹೆಚ್ಚು Subscribers ಇದ್ದಾರೆ. ಪ್ರತಿದಿನ ಅವರು ಮಾಡುವ ವಿಡಿಯೋ ಹತ್ತಿಪ್ಪತ್ತು ಲಕ್ಷ Views ಪಡೆಯುತ್ತದೆ. ಹಾಗಾಗಿ ಈಗ ರವೀಶ್ ಮೊದಲಿಗಿಂತ ಫೇಮಸ್ ಆಗಿಬಿಟ್ಟಿದ್ದಾರೆ. ಅವರೇ ಒಂದು ದೊಡ್ಡ ಮೀಡಿಯಾ ಬ್ರ್ಯಾಂಡ್. ಅವರ ಧ್ವನಿ ಈಗ ಎಲ್ಲರಿಗೂ ಮೊದಲಿಗಿಂತ ಹೆಚ್ಚೇ ತಲುಪುತ್ತಿದೆ.
ಅದೇ ರೀತಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೇರೆ ಬೇರೆ ಟಿವಿ ಚಾನಲ್ ಗಳಲ್ಲಿ ಕೆಲಸ ಕಳಕೊಂಡ ಹಿರಿಯ ಪತ್ರಕರ್ತರಾದ ಅಜಿತ್ ಅಂಜುಮ್, ಅಭಿಸಾರ್ ಶರ್ಮಾ, ಪುಣ್ಯ ಪ್ರಸೂನ್ ಬಾಜಪೇಯಿ ಅವರೂ ಲಕ್ಷಾಂತರ Subscribers ಇರೋ ಯೂಟ್ಯೂಬ್ ಚಾನಲ್ ಗಳ ಮೂಲಕ ಜನರನ್ನು ತಲುಪುತ್ತಿದ್ದಾರೆ. ಮೋದಿ ಸರಕಾರದ ಬಗ್ಗೆ ಟಿವಿ ಚಾನಲ್ ಗಳು ಹೇಳದ ಕಹಿ ಸತ್ಯಗಳನ್ನು ಯಾವುದೇ ಮುಲಾಜಿಲ್ಲದೆ ತಿಳಿಸುತ್ತಿದ್ದಾರೆ.
ಇನ್ನು ಒಂದೆರಡು ಲಕ್ಷಗಳಿಂದ ಹತ್ತು ಲಕ್ಷದವರೆಗೆ Subscribers ಇರೋ ಅದೆಷ್ಟೋ ನ್ಯೂಸ್ ಚಾನಲ್ ಗಳು ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಯೂಟ್ಯೂಬ್ ನಲ್ಲಿ ಸಕ್ರಿಯವಾಗಿವೆ. ಇವೆಲ್ಲವೂ ಟಿವಿ ಚಾನಲ್ ಗಳಲ್ಲಿ ಸತ್ಯ ಹೇಳಲು ಬಿಡೋದಿಲ್ಲ ಅಂತ ನಿಷ್ಠುರ ಪತ್ರಕರ್ತರು ಸ್ವತಃ ಪ್ರಾರಂಭಿಸಿರೋ ಚಾನಲ್ ಗಳು. ಈ ಎಲ್ಲ ಯೂಟ್ಯೂಬ್ ಚಾನಲ್ ಗಳು ಜೊತೆ ಸೇರಿ ಪ್ರತಿದಿನ ಕೋಟ್ಯಂತರ ಭಾರತೀಯರಿಗೆ ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕರಿಗೆ ದೇಶ ಎದುರಿಸುತ್ತಿರೋ ಸವಾಲುಗಳನ್ನು ಹೇಳುತ್ತಿವೆ. ಇನ್ನು ಪ್ರಾದೇಶಿಕ ಭಾಷೆಗಳ ಚಾನಲ್ ಗಳದ್ದು ಬೇರೆಯೇ ಲೆಕ್ಕ.
ಮೊಬೈಲ್ ನಲ್ಲಿ ಸುಲಭವಾಗಿ ಸಿಗುವ ಯೂಟ್ಯೂಬ್ ನಲ್ಲಿ ಹೀಗೆ ಕೋಟ್ಯಂತರ ಜನರಿಗೆ ಪ್ರತಿದಿನ ಸತ್ಯ ತಲುಪಿದರೆ ಅದು ಆಳುವವರಿಗೆ ಒಳ್ಳೆಯ ಸುದ್ದಿ ಅಲ್ಲ ಅಲ್ವಾ ? ಮೋದಿ ಸರಕಾರಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿ ಬಾರಿಸಿದೆ.
ಆ ಕಡೆ ಮೋದಿ ಭಟ್ಟಂಗಿ ಟಿವಿ ನ್ಯೂಸ್ ಚಾನಲ್ ಗಳು ಒಂದೊಂದಾಗಿ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಜನರಿಗೆ ನಿಧಾನವಾಗಿ ಅವುಗಳ ಮೋಸ ಗೊತ್ತಾಗುತ್ತಿದೆ. ಹಾಗಾಗಿ ಅಲ್ಲೂ ದೊಡ್ಡ ಬದಲಾವಣೆಗಳು ಆಗೋ ಲಕ್ಷಣಗಳು ಕಾಣುತ್ತಿವೆ. ಭಟ್ಟಂಗಿ ಆಂಕರ್ ಗಳು ಒಬ್ಬೊಬ್ಬರೇ ಕೆಲಸ ಕಳೆದುಕೊಳ್ಳೋ ಸುದ್ದಿಗಳು ಬರುತ್ತಿವೆ.
ಬಹುಶಃ ಇಂಥ ಹೊತ್ತಲ್ಲಿ ಅದಕ್ಕೆ ಹೊಳೆದಿರುವುದೇ ಪ್ರಭಾವಿ ಯುಟ್ಯೂಬರ್ಗಳನ್ನು ಬಳಸಿಕೊಂಡು ಅವರಿಗಿರುವ ಕೋಟ್ಯಂತರ ವೀಕ್ಷಕರನ್ನು ತಲುಪುವ ಮತ್ತು ಸರ್ಕಾರದ ಕುರಿತ ಹೊಗಳಿಕೆ ಅವರ ಕಣ್ಣು, ಕಿವಿಗಳನ್ನೂ ತುಂಬುವಂತೆ ಮಾಡುವ ತಂತ್ರ. ಈ ಪ್ರಭಾವಿ ಯೂಟ್ಯೂಬರ್ಗಳಲ್ಲಿ ಒಬ್ಬೊಬ್ಬರಿಗೂ ಲಕ್ಷಾಂತರ ವೀಕ್ಷಕರಿದ್ದಾರೆ. ಇವರಲ್ಲಿ ಹೆಚ್ಚಿನವರು ರಾಜಕೀಯಕ್ಕೆ ಹೊರತಾದ ವಿಷಯಗಳ ಬಗ್ಗೆ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವವರು.
ಈ ಪ್ರಭಾವಿ ಯೂಟ್ಯೂಬರ್ಗಳನ್ನು ಸರ್ಕಾರದ ಕಾರ್ಯಕ್ರಮಗಳ ಪ್ರಚಾರ ಮತ್ತು ಸರ್ಕಾರದ ಹೊಗಳಿಕೆಯಲ್ಲಿ ಭಾಗಿಯಾಗಿಸೋದು ಸರ್ಕಾರದ ತಂತ್ರಗಾರಿಕೆ ಆಗಿರಬಹುದು ಎನ್ನುತ್ತಿದ್ದಾರೆ ಹಿರಿಯ ಪತ್ರಕರ್ತರು ಹಾಗು ವಿಶ್ಲೇಷಕರು. ಆ ಮೂಲಕ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಬೇರೆಯದೇ ಆದ ಒಂದು ವರ್ಗವನ್ನು ತಲುಪುವುದಕ್ಕೆ ಸರ್ಕಾರ ಈ ತಂತ್ರ ಹೆಣೆದಿರುವ ಸಾಧ್ಯತೆ ಇದೆ.
ಅಂತೂ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಲ್ಲಿ ಜನರನ್ನು ಸೆಳೆಯುವ ಮತ್ತೊಂದು ಬಗೆಯ ಹೊಸ ಆಟವಾಡಲು ಬಿಜೆಪಿ ಸರ್ಕಾರ ಸಜ್ಜಾದಂತಾಗಿದೆ. ಬಿಜೆಪಿಯ ಘಟಾನುಘಟಿ ರಾಜಕಾರಣಿಗಳೂ ಜನರನ್ನು ತಲುಪಲು ಈಗ ಯೂಟ್ಯೂಬರ್‌ಗಳನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ , ಪಿಯೂಷ್ ಗೋಯಲ್ ಹಾಗು ರಾಜೀವ್ ಚಂದ್ರಶೇಖರ್ ಅವರು ಯೂಟ್ಯೂಬ್‌ನಲ್ಲಿ 56 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ರಣವೀರ್ ಅಲ್ಲಾಹಬಾದಿಯಾಗೆ ಸಂದರ್ಶನ ನೀಡಿದ್ದರು.
ಕಡೆಯದಾಗಿ ಇಲ್ಲಿ ಇನ್ನೂ ಒಂದು ವಿಚಾರವನ್ನು ಗಮನಿಸಬೇಕು. ಈಗಾಗಲೇ ತೀಳಿದಂತೆ ಈ ಟಾಪ್ 50 ಯೂಟ್ಯೂಬರ್ಗಳಲ್ಲಿ ಬಹುತೇಕರು ರಾಜಕೀಯೇತರ ಚಾನೆಲ್ಗಳ ಮೂಲಕ ಮನೆಮಾತಾಗಿರುವವರು. ಹಾಗಾಗಿ ಸರ್ಕಾರದ ವಿರುದ್ಧ ಅಹಿತಕರ ಸತ್ಯ ಹೇಳುವ, ಟೀಕಿಸುವ ಮತ್ತು ಇವರಷ್ಟೇ ಪ್ರಭಾವಿಗಳೂ ಜನಪ್ರಿಯರೂ ಆಗಿರುವ ವಸ್ತುನಿಷ್ಠ ಮತ್ತು ಪ್ರಾಮಾಣಿಕ ಪತ್ರಕರ್ತರಿಗಿಂತ ಇವರು ಬೇರೆ.
ಒಂದು ರೀತಿಯಲ್ಲಿ ಇವರೆಲ್ಲ ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಪುಣ್ಯಕೋಟಿ ಯೂಟ್ಯೂಬರ್ಗಳು. ಹಾಗಾಗಿ ಪ್ರಭುತ್ವ ಸ್ನೇಹಿಗಳಾಗುವುದು ಇವರಿಗೆ ಕಷ್ಟವೇನಲ್ಲ. ಸರ್ಕಾರಕ್ಕೂ ಇವರನ್ನು ತನಗೆ ಬೇಕಾದ ಹಾಗೆ ಬಗ್ಗಿಸುವುದು ಕಷ್ಟವಲ್ಲ. ಈಗಾಗಲೇ ಸರ್ಕಾರವನ್ನು ಹೊಗಳಲು ಈ ದೇಶದ ಎಲ್ಲ ದೊಡ್ಡ ಮುಖ್ಯ ವಾಹಿನಿ ಮಾಧ್ಯಮಗಳು ತುದಿಗಾಲಲ್ಲಿಯೇ ನಿಂತಿರುವಾಗ, ಆ ಸಾಲಿಗೆ ಇವರನ್ನೂ ಸೇರಿಸಿಕೊಳ್ಳಲಾಗುವ ಸಾಧ್ಯತೆ ಹೆಚ್ಚು. ಈ ಯೂಟ್ಯೂಬರ್ ಗಳು ಫ್ಯಾಕ್ಟ್ ಚೆಕರ್ ಗಳೂ ಆಗುತ್ತಾರೆ ಎಂದು ವರದಿಯಿದೆ. ಇವರು ಅದೇಗೆ ಫ್ಯಾಕ್ಟ್ ಚೆಕ್ ಮಾಡ್ತಾರೆ ? ಯಾವುದರ ಫ್ಯಾಕ್ಟ್ ಚೆಕ್ ಮಾಡ್ತಾರೆ ಅನ್ನೋದು ಇನ್ನೊಂದು ಪ್ರಶ್ನೆ.
ಏಕೆಂದರೆ ಸತ್ಯಕ್ಕೂ ಈ ಸರಕಾರಕ್ಕೂ ಅಷ್ಟಾಗಿ ಆಗಿ ಬರೋದಿಲ್ಲ ಅನ್ನೋದು ಬಹಳ ಸಲ ಎದ್ದು ಕಂಡಿದೆ. ಹಾಗಾಗಿ ಸರಕಾರ ಹೇಳಿದ ಹಾಗೆ ಫ್ಯಾಕ್ಟ್ ಚೆಕ್ ಮಾಡಲು ಶುರು ಮಾಡಿದರೆ ಹೇಗಾಗಬಹುದು ?
ಒಟ್ಟಾರೆ ಇನ್ನು ಸರ್ಕಾರವನ್ನು ಹೊಗಳಲು ಇನ್ನಷ್ಟು ಗಂಟಲುಗಳು ಸಿಗುತ್ತವೆ. ಸರ್ಕಾರಕ್ಕೆ ಬೇಕಾದ ಸತ್ಯಗಳನ್ನು ಮಾತ್ರವೇ ಹೇಳುವ ಅತ್ಯಂತ ಪವಿತ್ರ ಕಾರ್ಯದಲ್ಲಿ ಇವರೂ ತಮ್ಮ ಶಕ್ತ್ಯಾನುಸಾರ ಕೊಡುಗೆ ಸಲ್ಲಿಸಲಿದ್ದಾರೆ. ಅಲ್ಲಿಗೆ ಸರ್ಕಾರದ ಡಂಗುರದ ಸದ್ದು ಇನ್ನೂ ಜೋರಾಗಲಿದೆ.
ತನಗೆ ಅಪ್ರಿಯವಾಗುವ ಸತ್ಯವನ್ನು ಎದುರಿಸಲಾರದ ಸರ್ಕಾರಕ್ಕೆ, ತನಗೆ ಹಿತಕರವಾದ ಸತ್ಯಗಳ ಸದ್ದಿನಲ್ಲಿ ಟೀಕಾಕಾರರ ದನಿ ಯಾರಿಗೂ ಕೇಳಿಸದಂತೆ ಮಾಡಬಹುದೇನೊ ಎಂಬ ಭ್ರಮೆಯೂ ಇದ್ದಂತಿದೆ. ಇರಲಿ. ನೋಡೋಣ.