ಸ್ಥಳೀಯ ಜೀವಜಾತಿಗೆ ಅಪಾಯ: ಆಕ್ರಮಣಕಾರಿ ಅನ್ಯ ಪ್ರಭೇದಗಳನ್ನು ನಿಭಾಯಿಸುವ ದಾರಿ ಯಾವುದು?
3,500ಕ್ಕೂ ಹೆಚ್ಚು ಆಕ್ರಮಣಕಾರಿ ಬಾಹ್ಯ ಜೀವಿ ಪ್ರಭೇದಗಳು ಮಾನವನ ಪಾಲಿಗೆ ಗಂಭೀರ ಮಟ್ಟದ ಅಪಾಯ ತಂದೊಡ್ಡುತ್ತಿವೆ ಮತ್ತು ಪರಿಸರ ವ್ಯವಸ್ಥೆಗಳಿಗೆ ಸರಿಪಡಿಸಲಾಗದಂಥ ಹಾನಿಯನ್ನು ಉಂಟುಮಾಡುತ್ತಿವೆ ಎಂಬ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇಂಟರ್‌ಗವರ್ನಮೆಂಟಲ್ ಸೈನ್ಸ್ ಪಾಲಿಸಿ ಪ್ಲಾಟ್‌ಫಾರ್ಮ್ ಆನ್ ಬಯೋಡೈವರ್ಸಿಟಿ ಮತ್ತು ಎಕೋಸಿಸ್ಟಮ್ ಸರ್ವಿಸಸ್ (ಐಪಿಬಿಇಎಸ್) ಈ ವಿಚಾರವನ್ನು ಪ್ರಕಟಿಸಿದೆ. ಕೆಲವು ಅನ್ಯ ಜಾತಿಗಳು ವಾಸ್ತವವಾಗಿ ಮಾನವರಿಗೆ ಪ್ರಯೋಜನಕಾರಿಯಾಗಿದ್ದರೂ, ಅವುಗಳಲ್ಲಿ ಶೇ.10ರಷ್ಟು ಪ್ರಕೃತಿ ಮತ್ತು ಮನುಷ್ಯರಿಗೆ ಅಪಾಯಕಾರಿಯಾದವುಗಳಾಗಿವೆ ಎಂಬುದು ವಿಶ್ವಸಂಸ್ಥೆಯ ಅಂದಾಜು.
ಈ ಅನ್ಯ ಜಾತಿಗಳು ಸಸ್ಯಗಳು, ಪ್ರಾಣಿಗಳು ಅಥವಾ ಇತರ ಜೀವಿಗಳ ರೂಪದಲ್ಲಿದ್ದು, ಇವು ಹೊಸ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಮಾನವ ಚಟುವಟಿಕೆಗಳೇ ಕಾರಣ. ಆಕ್ರಮಣಕಾರಿ ಅನ್ಯ ಪ್ರಭೇದಗಳ ಒಂದು ಉಪವರ್ಗ ಸ್ಥಳೀಯ ಪ್ರಭೇದಗಳು ಅಳಿದುಹೋಗುವಂತೆ ಮಾಡುತ್ತದೆ. ಮಲೇರಿಯಾ, ಜಿಕಾ ಮತ್ತು ಪಶ್ಚಿಮ ನೈಲ್ ಜ್ವರದಂತಹ ರೋಗಗಳನ್ನು ಹರಡುತ್ತದೆ ಹಾಗೂ ಆಹಾರ
ಬೆಳೆಗಳನ್ನು ಹಾನಿಗೀಡು ಮಾಡುತ್ತದೆ.
ಐಪಿಬಿಇಎಸ್, ನಿಸರ್ಗದ ಸ್ಥಿತಿ ಮತ್ತು ಸಮಾಜಕ್ಕೆ ಅದರ ಕೊಡುಗೆಗಳನ್ನು ನಿರ್ಣಯಿಸುವ ಕೆಲಸದಲ್ಲಿ ತೊಡಗಿರುವ ಪರಿಣಿತರ ಸಂಸ್ಥೆಯಾಗಿದೆ. ಆಕ್ರಮಣಕಾರಿ ಅನ್ಯ ಪ್ರಭೇದಗಳು ಭೂಮಿಯ ಮೇಲಿನ ಜೀವರೂಪಗಳು ಕ್ಷೀಣಿಸಲು ಪ್ರಮುಖ ಕಾರಣವೆಂದು ಅದು ಗುರುತಿಸಿದೆ. ಜೀವ ಪ್ರಭೇದಗಳ ಇಂಥ ಅಳಿಯುವಿಕೆಗೆ ಇತರ ಕಾರಣಗಳೆಂದರೆ ಆವಾಸ ಸ್ಥಾನಗಳ ನಷ್ಟ ಮತ್ತು ನಾಶ, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಆಹಾರಕ್ಕಾಗಿ ಅವುಗಳ ಅತಿಯಾದ ಬಳಕೆ, ಬೆಲೆಬಾಳುವ ಅವುಗಳ ದೇಹಭಾಗಗಳು
ಮತ್ತು ಸಾಕುಪ್ರಾಣಿಗಳ ವ್ಯಾಪಾರ.
ನಾಲ್ಕು ವರ್ಷಗಳಲ್ಲಿ 49 ದೇಶಗಳ 86 ತಜ್ಞರು ರಚಿಸಿದ ಐಪಿಬಿಇಎಸ್ನ ಹೊಸ ವರದಿ, 13,000ಕ್ಕೂ ಹೆಚ್ಚು ವೈಜ್ಞಾನಿಕ ಅಧ್ಯಯನಗಳು ಮತ್ತು ಸ್ಥಳೀಯ ಜನರ ತಿಳುವಳಿಕೆಗಳನ್ನು ಒಳಗೊಂಡದ್ದಾಗಿದ್ದು, ಆಕ್ರಮಣಕಾರಿ ಪ್ರಭೇದಗಳ ನಿರ್ದಿಷ್ಟ ಅಪಾಯವನ್ನು ಎತ್ತಿ ತೋರಿಸುತ್ತದೆ.
ಹೆಚ್ಚುತ್ತಿರುವ ಬೆದರಿಕೆ
ಆಕ್ರಮಣಕಾರಿ ಅನ್ಯ ಪ್ರಭೇದಗಳು ಅಂಟಾರ್ಟಿಕಾ ಸೇರಿದಂತೆ ಪ್ರಪಂಚದ ಎಲ್ಲಾ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತವೆ. ಐಪಿಬಿಇಎಸ್ ಕಂಡುಕೊಂಡಿರುವ ಪ್ರಕಾರ, ಶೇ.34ರಷ್ಟು ಪರಿಣಾಮ ಅಮೆರಿಕದಲ್ಲಿ, ಶೇ.31ರಷ್ಟು ಯುರೋಪ್ ಮತ್ತು ಮಧ್ಯ ಏಶ್ಯದಲ್ಲಿ, ಶೇ.25ರಷ್ಟು ಏಶ್ಯ ಮತ್ತು ಪೆಸಿಫಿಕ್‌ನಲ್ಲಿ ಹಾಗೂ ಶೇ.7ರಷ್ಟು ಪರಿಣಾಮ ಆಫ್ರಿಕಾದಲ್ಲಿ ವರದಿಯಾಗಿದೆ.
ಹೆಚ್ಚಿನ ಪರಿಣಾಮಗಳು ಭೂಮಿಯ ಮೇಲೆ (ಶೇ.75) ಕಂಡುಬಂದರೆ, ಸಿಹಿನೀರಿನಲ್ಲಿ (ಶೇ.14) ಮತ್ತು ಸಮುದ್ರದ (ಶೇ.10) ಆವಾಸಸ್ಥಾನಗಳಲ್ಲಿ ಕಡಿಮೆ ಪ್ರಮಾಣದಲ್ಲಿ ವರದಿಯಾಗಿವೆ. ದ್ವೀಪಗಳು ವಿಶೇಷವಾಗಿ ದುರ್ಬಲವಾಗಿವೆ. ಅನ್ಯ ಪ್ರಭೇದದ ಸಸ್ಯಗಳು ಪ್ರಪಂಚದ ಶೇ.25ಕ್ಕಿಂತ ಹೆಚ್ಚು ದ್ವೀಪಗಳಲ್ಲಿ ಸ್ಥಳೀಯ ಪ್ರಭೇದಗಳನ್ನು ಮೀರಿಸಿ ಪ್ರಾಬಲ್ಯ ಸಾಧಿಸುತ್ತವೆ.
ತಾವು ವಾಸಿಸುವ ಭೂಮಿಯೊಡನೆ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಸ್ಥಳೀಯ ಜನರು ವಿಶೇಷವಾಗಿ ದುರ್ಬಲರಾಗಿದ್ದಾರೆ ಎಂಬುದನ್ನು ಈ ಅಧ್ಯಯನ ಎತ್ತಿ ತೋರಿಸುತ್ತದೆ. 2,300ಕ್ಕೂ ಹೆಚ್ಚು ಆಕ್ರಮಣಕಾರಿ ಅನ್ಯ ಪ್ರಭೇದಗಳು ಸ್ಥಳೀಯವಾಗಿ ಲಕ್ಷಾಂತರ ಜನರ ಜೀವನ ಮತ್ತು ಸಾಂಸ್ಕೃತಿಕ
ಗುರುತುಗಳಿಗೆ ಬೆದರಿಕೆ ಒಡ್ಡುತ್ತವೆ.
ಜಾಗತಿಕ ಸಸ್ಯ ಮತ್ತು ಪ್ರಾಣಿಗಳ ಅಳಿವಿನಲ್ಲಿ ಶೇ.60ರಷ್ಟಕ್ಕೆ ಆಕ್ರಮಣಕಾರಿ ಅನ್ಯ ಪ್ರಭೇದಗಳೇ ಕಾರಣ ಎಂದು ವರದಿ ಬಹಿರಂಗಪಡಿಸುತ್ತದೆ. ಇದರಿಂದಾದ ಆರ್ಥಿಕ ನಷ್ಟ 2019ರಲ್ಲಿ ವಾರ್ಷಿಕ 423 ಶತಕೋಟಿ ಡಾಲರ್ ಮೀರಿದೆ ಮತ್ತು 1970ರಿಂದ ಪ್ರತೀ ದಶಕದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ.
ಹೆಚ್ಚುತ್ತಿರುವ ವ್ಯಾಪಾರ ಮತ್ತು ಪ್ರಯಾಣದ ಕಾರಣದಿಂದಾಗಿ ಆಕ್ರಮಣಕಾರಿ ಅನ್ಯ ಪ್ರಭೇದಗಳ ಬೆದರಿಕೆ ಭವಿಷ್ಯದಲ್ಲಿ ಇನ್ನೂ ತೀವ್ರ ಮಟ್ಟದ್ದಾಗಿರಲಿದೆ. ಜೈವಿಕ ವೈವಿಧ್ಯದ ನಷ್ಟಕ್ಕೆ ಕಾರಣವಾಗುವ ಹವಾಮಾನ ಬದಲಾವಣೆಯಂತಹ ಇತರ ವಿದ್ಯಮಾನಗಳೊಂದಿಗೆ ಅವುಗಳ ಸೇರಿಕೊಳ್ಳುವಿಕೆಯಿಂದಾಗಿ ಅವುಗಳ ಅಪಾಯಕಾರಿ ಪರಿಣಾಮಗಳು ಹೆಚ್ಚಬಹುದು ಎಂಬುದನ್ನು ವರದಿ ಪ್ರತಿಪಾದಿಸುತ್ತದೆ.
ಎಲ್ಲದರ ಮೇಲೆ ನಿಯಂತ್ರಣ
ಪ್ರತೀ ಆಕ್ರಮಣಕಾರಿ ಪ್ರಭೇದಗಳಿಗೆ ಪರಿಣಾಮಕಾರಿ ಪ್ರತಿಕ್ರಿಯೆ ಅದು ಎಲ್ಲಿ ನಡೆಯುತ್ತಿದೆ ಮತ್ತು ಅದು ಹೇಗೆ ಹರಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ದೇಶಗಳು ಮತ್ತು ಕ್ಷೇತ್ರಗಳಾದ್ಯಂತ ಪ್ರಯತ್ನಗಳನ್ನು ಒಟ್ಟುಗೂಡಿಸಬೇಕಿರುವುದೂ ಅಗತ್ಯ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕೂಡ ಅಗತ್ಯ.
ಶೇ.80ರಷ್ಟು ದೇಶಗಳು ಆಕ್ರಮಣಕಾರಿ ಅನ್ಯ ಜಾತಿಗಳನ್ನು ನಿಭಾಯಿಸುವ ಗುರಿಯನ್ನು ಹೊಂದಿದ್ದರೂ, ಶೇ.17ರಷ್ಟು ದೇಶಗಳು ಮಾತ್ರವೇ ನಿರ್ದಿಷ್ಟ ರಾಷ್ಟ್ರೀಯ ಕಾನೂನುಗಳು ಅಥವಾ ನಿಯಮಗಳನ್ನು ಹೊಂದಿವೆ. ಐಪಿಬಿಇಎಸ್ ಗಮನಿಸಿರುವ ಪ್ರಕಾರ, ಶೇ.45ರಷ್ಟು ದೇಶಗಳು ಜೈವಿಕ ಆಕ್ರಮಣಗಳ ನಿರ್ವಹಣೆಯಲ್ಲಿ ಹೂಡಿಕೆ ಮಾಡುವುದಿಲ್ಲ. ಇದರ ಪರಿಣಾಮವಾಗಿ ಅಂಥ ದೇಶಗಳು ತಮ್ಮ ನೆರೆಯ ದೇಶಗಳನ್ನೂ ಅಪಾಯಕ್ಕೆ ತಳ್ಳುತ್ತವೆ.
ಹೆಚ್ಚುತ್ತಿರುವ ಬೆದರಿಕೆಯನ್ನು ನಿವಾರಿಸಲು ಪರಿಣಾಮಕಾರಿ ನಿರ್ವಹಣೆಗೆ ಈ ವರದಿ ಕೆಲವು ಕ್ರಮಗಳನ್ನು ಸೂಚಿಸುತ್ತದೆ. ಅದರ ಶಿಫಾರಸುಗಳು ಹೀಗಿವೆ:
1. ಗಡಿ ಕ್ವಾರಂಟೈನ್‌ಗಳು ಮತ್ತು ಕಟ್ಟುನಿಟ್ಟಾದ ಆಮದು ನಿಯಂತ್ರಣಗಳ ಮೂಲಕ ಸನ್ನದ್ಧತೆ ಮತ್ತು ತಡೆಗಟ್ಟುವಿಕೆ ಹೆಚ್ಚಿಸುವುದು. ಇದು ಸಾಮಾನ್ಯವಾಗಿ ಹೆಚ್ಚು ವೆಚ್ಚದ,
ಆದರೆ ಪರಿಣಾಮಕಾರಿ ಪರಿಹಾರ.
2. ಆಕ್ರಮಣಗಳ ಆರಂಭಿಕ ಪತ್ತೆ ಮತ್ತು ಸಾಮಾನ್ಯ ಕಣ್ಗಾವಲು ತಂತ್ರಗಳ ಮೂಲಕ ತ್ವರಿತ ಪ್ರತಿಕ್ರಿಯೆಗಳು. ಇದು ವಿಶೇಷವಾಗಿ ಜಲಚರಗಳ ಪರಿಸರದಲ್ಲಿ ಅಗತ್ಯ.
3. ಸಾಧ್ಯವಿರುವಲ್ಲಿ ಆಕ್ರಮಣಕಾರಿ ಜಾತಿಗಳನ್ನು ನಿರ್ಮೂಲನೆ ಮಾಡುವುದು. ಇದು ಸಣ್ಣ, ನಿಧಾನವಾಗಿ ಹರಡುವ ಜಾತಿಗಳ ವಿಚಾರದಲ್ಲಿ (ಉದಾಹರಣೆಗೆ, ಕಾಡು ಬೆಕ್ಕುಗಳು) ಮತ್ತು ವಿಶೇಷವಾಗಿ ದ್ವೀಪಗಳಂತಹ ಪ್ರತ್ಯೇಕ ಪರಿಸರ ವ್ಯವಸ್ಥೆಗಳಲ್ಲಿ ಹೆಚ್ಚು ಕಾರ್ಯಸಾಧ್ಯ.
4. ನಿಯಂತ್ರಣ. ನಿರ್ಮೂಲನೆ ಮಾಡಲಾಗದ ಆಕ್ರಮಣಕಾರಿ ಅನ್ಯ ಜಾತಿಗಳ ವಿಚಾರದಲ್ಲಿ ಇದು ಪರಿಣಾಮಕಾರಿ.
ಪ್ರಯೋಜನಕಾರಿ ಅನ್ಯ ಪ್ರಭೇದಗಳು:
ಅನ್ಯ ಜಾತಿಗಳು ಜನರಿಗೆ ಪ್ರಯೋಜನಕಾರಿಯೂ ಆಗಿರಬಹುದು. ಯಾವುದನ್ನು ಹೇಗೆ ನಿಭಾಯಿಸುವುದು ಸಾಧ್ಯ ಎಂಬುದರ ಆಧಾರದ ಮೇಲೆ ಅವುಗಳ ಬೆದರಿಕೆಯ ಬಗೆಗಳು ಬದಲಾಗಬಹುದು. ಅದು ಅವುಗಳ ನಿರ್ವಹಣೆಯನ್ನು ಸಂಕೀರ್ಣಗೊಳಿಸಬಹುದು ಎಂಬುದನ್ನು ಈ ಅಧ್ಯಯನ ಒಪ್ಪಿಕೊಂಡಿದೆ. ಆದರೆ ಇಂಥ ಪ್ರಕರಣಗಳಿಗೆ ಈ ವರದಿ ಮಾರ್ಗದರ್ಶನ ನೀಡುವುದಿಲ್ಲ, ಆದರೆ ಪ್ರತೀ ಅನ್ಯ ಜಾತಿಯ ಪ್ರಯೋಜನಗಳು ಮತ್ತು ವೆಚ್ಚಗಳ ಬಗ್ಗೆ ತಿಳಿಯುವಲ್ಲಿಂದ ನಿರ್ವಹಣೆಯನ್ನು ಆರಂಭಿಸುವುದು ಸೂಕ್ತ.
ಉದಾಹರಣೆಗೆ, ಕೆರಿಬಿಯನ್ ದ್ವೀಪವಾದ ಮೊಂಟ್ಸೆರಾಟ್‌ನಲ್ಲಿರುವ ಕಾಡು ದನಗಳು, ಕುರಿಗಳು, ಆಡುಗಳು ಮತ್ತು ಹಂದಿಗಳು ಸ್ಥಳೀಯ ಪಾಕಪದ್ಧತಿಗಳಿಗೆ ಮಾಂಸವನ್ನು ಒದಗಿಸುತ್ತವೆ. ಮಾಂಟ್ಸೆರಾಟ್ ಡಿಪಾರ್ಟ್‌ಮೆಂಟ್ ಆಫ್ ಎನ್ವಿರಾನ್ಮೆಂಟ್ ನಡೆಸಿರುವ ಮತ್ತೊಂದು ಅಧ್ಯಯನ ಈ ಕಾಡುಪ್ರಾಣಿಗಳ ನಿರ್ವಹಣೆಯನ್ನು ನಿಲ್ಲಿಸಿದರೆ ದ್ವೀಪದ ಪ್ರಕೃತಿ ಆಧಾರಿತ ಪ್ರವಾಸೋದ್ಯಮ ಆದಾಯ ಅರ್ಧಕ್ಕೆ ಇಳಿಯುತ್ತದೆ ಎಂದು ಕಂಡುಕೊಂಡಿದೆ.
ಆಕ್ರಮಣಕಾರಿ ಪ್ರಭೇದಗಳಿಂದ ಉಂಟಾಗುವ ಹಾನಿಯ ಬಗ್ಗೆ ನಿಖರವಾದ ತಿಳುವಳಿಕೆಯನ್ನು ಹೊಂದಿರುವುದು, ಹಾಗೆಯೇ ಅವುಗಳ ಸಂಭಾವ್ಯ ಪ್ರಯೋಜನಗಳು ಮತ್ತು ಅವುಗಳನ್ನು ನಿಯಂತ್ರಿಸುವ ವೆಚ್ಚದ ಕುರಿತು ತಿಳಿಯುವುದು ಭೂಮಿಯ ಜೀವವೈವಿಧ್ಯಕ್ಕೆ ಎದುರಾಗಿರುವ ದೊಡ್ಡ ಅಪಾಯಗಳಲ್ಲಿ ಒಂದನ್ನು ಸರಿಯಾಗಿ
ನಿಭಾಯಿಸುವ ನಿಟ್ಟಿನಲ್ಲಿ ಅವಶ್ಯಕ.
(ಆಧಾರ:theconversation.com)