ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸುವಲ್ಲಿ 15 ಖಾಸಗಿ ವಿವಿಗಳು ವಿಫಲ
ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ, ಇನ್ನಿತರ ವಿವರಗಳನ್ನೊಳಗೊಂಡ ಪ್ರಸ್ತಾವ
ಬೆಂಗಳೂರು, ಜು.22: ಮೂಲ ಸೌಲಭ್ಯ, ಶೈಕ್ಷಣಿಕ ಸೌಲಭ್ಯ, ಇನ್ನಿತರ ವಿವರಗಳನ್ನೊಳಗೊಂಡ ಪ್ರಸ್ತಾವಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸುವಲ್ಲಿ ರಾಜ್ಯ ಒಕ್ಕಲಿಗರ ಸಂಘದ ವಿಶ್ವವಿದ್ಯಾನಿಲಯ, ಬಿಎಂಎಸ್ ವಿಶ್ವವಿದ್ಯಾನಿಲಯವೂ ಸೇರಿದಂತೆ ರಾಜ್ಯದ ಪ್ರತಿಷ್ಠಿತ 15 ಖಾಸಗಿ ವಿಶ್ವವಿದ್ಯಾನಿಲಯಗಳು ವಿಫಲವಾಗಿರುವುದು ಇದೀಗ ಬಹಿರಂಗವಾಗಿದೆ.
ವಿದ್ಯಾರ್ಥಿಗಳ ಪ್ರವೇಶಾತಿ, ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಗುಣಮಟ್ಟ, ಯುಜಿಸಿ, ಎಐಸಿಟಿಯು ಮಾರ್ಗಸೂಚಿ ಗಳು ಪಾಲನೆಯಾಗುತ್ತಿವೆಯೇ ಇಲ್ಲವೇ? ಇನ್ನುವುದು ಸೇರಿದಂತೆ ಇನ್ನಿತರ ವಿಚಾರಗಳಿಗೆ ಸಂಬಂಧಿಸಿ ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಪರಿಷತ್ ನಿಯತಕಾಲಿಕ ಪರಿವೀಕ್ಷಣೆಗೆ ರಾಜ್ಯದ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳು ಆಕ್ಷೇಪಣೆ ವ್ಯಕ್ತಪಡಿಸಿರುವ ಬೆನ್ನಲ್ಲೇ 2013ರಿಂದ 2023ರವರೆಗೆ ಅಸ್ತಿತ್ವಕ್ಕೆ ಬಂದಿರುವ ಖಾಸಗಿ ವಿಶ್ವವಿದ್ಯಾನಿಲಯಗಳು ಸರಕಾರಕ್ಕೆ ಯಾವುದೇ ಪ್ರಸ್ತಾವ ಸಲ್ಲಿಸದಿರು ವುದು ಮುನ್ನೆಲೆಗೆ ಬಂದಿದೆ.
ಖಾಸಗಿ ವಿವಿಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿದ್ದ ಅಧಿಸೂಚನೆ ಪ್ರತಿಗಳನ್ನು ಸಂಸದೀಯ ವ್ಯವಹಾರಗಳ ಇಲಾಖೆಗೆ ಕಳಿಸಿಕೊಡಬೇಕು ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಜೂನ್ 30ರಂದು ಬರೆದಿದ್ದ ಪತ್ರಕ್ಕೆ ಉನ್ನತ ಶಿಕ್ಷಣ ಇಲಾಖೆಯು ಜುಲೈ 17ರಂದು ಬರೆದಿರುವ ಅನಧಿಕೃತ ಟಿಪ್ಪಣಿಯಲ್ಲಿ ಖಾಸಗಿ ವಿವಿಗಳು ಪ್ರಸ್ತಾವ ಸಲ್ಲಿಸಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ. ಈ ಪತ್ರದ ಪ್ರತಿಯು ‘the file.in'ಗೆ ಲಭ್ಯವಾಗಿದೆ.
2012ರಲ್ಲಿ ವೆಲ್ಲೂರು ತಾಂತ್ರಿಕ ವಿಶ್ವವಿದ್ಯಾನಿಲಯ, 2012ರಲ್ಲಿ ಆರ್ಕ, ಅಮೃತ ಸಿಂಚನ ಆಧ್ಯಾತ್ಮಿಕ, 2013ರಲ್ಲಿ ವೈದೇಹಿ, ನ್ಯೂ ಬಾಲ್ಡ್ವಿನ್, 2018ರಲ್ಲಿ ಜಗತ್, ಅಮಿಟಿ, 2021ರಲ್ಲಿ ನ್ಯೂ ಹೊರೈಜಾನ್, 2022ರಲ್ಲಿ ಆಚಾರ್ಯ, ರಾಜ್ಯ ಒಕ್ಕಲಿಗರ ವಿಶ್ವ ವಿದ್ಯಾನಿಲಯ, ಕಿಷ್ಕಿಂದ, ಸಪ್ತಗಿರಿ, ಜಿ ಎಮ್, ಟಿ ಜಾನ್, 2023ರಲ್ಲಿ ಬಿಎಂಎಸ್ ವಿಶ್ವವಿದ್ಯಾನಿಲಯಗಳು ಅಧಿನಿಯಮ ಪ್ರಕರಣ 3ರ ಉಪ ಪ್ರಕರಣ (1) (2) (3)ರ ಅನ್ವಯ ಅಗತ್ಯ ಮೂಲ ಸೌಕರ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ಇನ್ನಿತರ ಪ್ರಸ್ತಾವಗಳನ್ನು ವಿವಿಗಳ ಆಡಳಿತ ಮಂಡಳಿಯವರು ಇದು ವರೆಗೂ ಸರಕಾರಕ್ಕೆ ಸಲ್ಲಿಸಿರುವುದಿಲ್ಲ. ಅಲ್ಲದೇ ಈ ಪ್ರಸ್ತಾವಗಳು ಇನ್ನೂ ಪರಿಶೀಲನೆಯಲ್ಲಿರುವುದರಿಂದ ಇದಕ್ಕೆ ಸಂಬಂಧಿಸಿದ ಅಧಿನಿಯಮಗಳನ್ನು ಅಧಿಸೂಚನೆಗಳ ಮೂಲಕ ಇದುವರೆಗೂ ಜಾರಿಗೆ ತಂದಿರುವುದಿಲ್ಲ ಎಂಬ ಅಂಶವನ್ನು ಉನ್ನತ ಶಿಕ್ಷಣ ಇಲಾಖೆಯು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ನಿಯಮ ಉಲ್ಲಂಘನೆ: ಖಾಸಗಿ ವಿಶ್ವವಿದ್ಯಾನಿಲಯಗಳು ಒಂದೊಂದು ವಿಭಾಗದಲ್ಲಿ 400ರಿಂದ 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಅವೈಜ್ಞಾನಿಕವಾಗಿ ಪ್ರವೇಶ ನೀಡಿವೆ. ಹೀಗಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ. ಈ ವಿಶ್ವವಿದ್ಯಾನಿಲಯಗಳು ಯುಜಿಸಿ ಮತ್ತು ಎಐಸಿಟಿಇಯು ನಿಯಮಾವಳಿಗಳನ್ನು ಪದೇಪದೇ ಉಲ್ಲಂಘಿಸುತ್ತಿವೆ. ಈ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆದಿರುವ ಹಲವು ವಿದ್ಯಾರ್ಥಿಗಳು ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿಲ್ಲ ಮತ್ತು ಡೀಮ್ಡ್ ವಿವಿಗಳು ಕಟ್ಟುನಿಟ್ಟಾಗಿ ನಿಯಮಗಳ ಪ್ರಕಾರ ಪರೀಕ್ಷೆ ನಡೆಸುತ್ತಿಲ್ಲ. ಹಲವು ಸಂದರ್ಭಗಳಲ್ಲಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಗುಣಮಟ್ಟದ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುತ್ತಿಲ್ಲ. ಈ ಎಲ್ಲ ಉಲ್ಲಂಘನೆ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒಕ್ಕೂಟವು ಅಂದಿನ ಕೇಂದ್ರ ಉನ್ನತ ಶಿಕ್ಷಣ ಸಚಿವ, ಮತ್ತು 2018ರಲ್ಲಿದ್ದ ರಾಜ್ಯದ ಮುಖ್ಯಮಂತ್ರಿಗೆ ದೂರು ಸಲ್ಲಿಸಿತ್ತು.
ಈ ದೂರು ಆಧರಿಸಿ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯ ಗಳಲ್ಲಿ ತನಿಖೆ ನಡೆಸಲು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಕಾರ್ಯ ನಿರ್ವಾಹಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಸರಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದೆ. ಆದರೆ ಈ ಸಮಿತಿಯು ಆರೋಪಕ್ಕೆ ಗುರಿಯಾಗಿರುವ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳನ್ನು ಭೌತಿಕವಾಗಿ ಪರಿಶೀಲಿಸಿದೆಯೇ, ಇಲ್ಲವೇ?ಎಂಬುದರ ಕುರಿತು ಕಡತದಲ್ಲಿ ಯಾವುದೇ ದಾಖಲೆಗಳಿಲ್ಲ.
ನಿಯತಕಾಲಿಕ ಪರಿವೀಕ್ಷಣೆಗೆ ಆಕ್ಷೇಪ: ಖಾಸಗಿ ವಿಶ್ವವಿದ್ಯಾನಿಲಯಗಳು ಪ್ರಸ್ತುತ ಹೊಂದಿರುವ ಮೂಲ ಸೌಕರ್ಯಗಳು ಮತ್ತು ಬೋಧಕ, ಬೋಧಕೇತರರಿಗೆ ಹೋಲಿಕೆ ಮಾಡಿದಲ್ಲಿ ಆ ವಿಶ್ವವಿದ್ಯಾನಿಲಯಕ್ಕೆ ನಿಗದಿಪಡಿಸಬಹುದಾದ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯ ಕುರಿತು ಷರಾ ಬರೆದಿರುವ ಸಮಿತಿಯು’ ಖಾಸಗಿ ವಿಶ್ವವಿದ್ಯಾನಿಲಯಗಳನ್ನು ನಿಯತಕಾಲಿಕ ಪರಿವೀಕ್ಷಣೆ ಮಾಡಲು ವಿಶ್ವವಿದ್ಯಾನಿಲಯಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ತಪಾಸಣೆ ಕೈಗೊಂಡಿರುವುದಿಲ್ಲ ಎಂದು ಉಲ್ಲಖೇಸಿದ್ದರು. ಖಾಸಗಿ ವಿಶ್ವವಿದ್ಯಾನಿಲಯ ರಚನೆ ಮತ್ತು ಪರಿಶೀಲನೆ ಮಾಡಲು ಸರಕಾರದಿಂದಲೇ ನಿಯಮಬದ್ಧ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ವಿವಿಗಳಲ್ಲಿ ನಿಯತಕಾಲಿಕವಾಗಿ ಪರಿವೀಕ್ಷಣೆ ಮಾಡಿ ವರದಿ ನೀಡಬೇಕು. ಇದಕ್ಕೆ ನಿಯಮಗಳಲ್ಲಿ ಅವಕಾಶವಿದೆ. ಒಂದೊಮ್ಮೆ ಆಕ್ಷೇಪ ವ್ಯಕ್ತಪಡಿಸಿದರೆ ಅದು ನಿಯಮಬಾಹಿರವಾಗುತ್ತದೆ ತನಿಖೆಗೆ ಮತ್ತು ನಿಯತಕಾಲಿಕವಾಗಿ ಪರಿವೀಕ್ಷಣೆಗೆ ಎಲ್ಲ ಖಾಸಗಿ ವಿಶ್ವ ವಿದ್ಯಾಲಯಗಳೂ ಒಳಪಡಲೇಬೇಕು ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿಯಾಗಿದ್ದ ಆರ್.ಸೋಮಶೇಖರ್.
‘ಖಾಸಗಿ ವಲಯದ ಬಹುತೇಕ ಶಿಕ್ಷಣ ಸಂಸ್ಥೆಗಳು ರಾಜಕಾರಣಿ ಗಳ ಕೈಯಲ್ಲಿವೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಇಂತಹ ವಿಶ್ವ ವಿದ್ಯಾನಿಲಯಗಳಲ್ಲಿ ಹೆಚ್ಚು ಅಂಕ ನೀಡಲಾಗುತ್ತಿದೆ. ಉನ್ನತ ಶಿಕ್ಷಣಇಲಾಖೆಯು ಖಾಸಗಿ ವಿವಿಗಳಲ್ಲಿ ಪರಿವೀಕ್ಷಣೆ ನಡೆಸಿದರೆ ಅಲ್ಲಿ ನೀಡುತ್ತಿರುವ ಕಳಪೆ ಶಿಕ್ಷಣ ಬಹಿರಂಗವಾಗುತ್ತದೆ. ಆಗ ಮಾರುಕಟ್ಟೆ ಯಲ್ಲಿ ಅಂತಹ ವಿವಿಗಳಿಗೆ ಮೌಲ್ಯ ಇರುವುದಿಲ್ಲ. ಸೀಟುಗಳು ಮಾರಾಟವಾಗುವುದಿಲ್ಲ. ಹೀಗಾಗಿ ನಿಯತಕಾಲಿಕವಾಗಿ ಪರಿವೀಕ್ಷಣೆಗೆ ಆಕ್ಷೇಪಣೆ ವ್ಯಕ್ತಪಡಿಸಲಾಗುತ್ತಿದೆ. ಖಾಸಗಿ ವಿವಿಗಳ ಇಂತಹ ಕ್ರಮಕ್ಕೆ ಕಡಿವಾಣ ಹಾಕಬೇಕಾದರೆ ಸರಕಾರವು ಇಂತಹ ವಿವಿಗಳಲ್ಲಿ ನೀಡುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಒರೆಗೆ ಹಚ್ಚಲು ಪ್ರತಿ ವರ್ಷ ಸ್ವತಂತ್ರ ಸಮಿತಿ ನೇಮಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎನ್ನುತ್ತಾರೆ ಶಿಕ್ಷಣ ತಜ್ಞ ಮುಜಾಫರ್ ಅಸ್ಸಾದಿ
ವಿಚಾರಣೆಗೆ ನಿಗದಿಪಡಿಸಿದ್ದ ವಿಷಯಗಳ ಪಟ್ಟಿ
ತಾಂತ್ರಿಕ ಶಿಕ್ಷಣವನ್ನು ಬೋಧಿಸುತ್ತಿರುವ ರಾಜ್ಯದ ಪ್ರತಿ ಯೊಂದು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ತಾಂತ್ರಿಕ ಶಿಕ್ಷಣ ವನ್ನು ಬೋಧಿಸಲು ಎಐಸಿಟಿಯು ನಿಯಮಗಳು, ಮಾನದಂಡ ದಂತೆ ಮೂಲ ಸೌಕರ್ಯಗಳನ್ನು ಹೊಂದಿದೆಯೇ ಅಥವಾ ಇಲ್ಲವೇ, ತಾಂತ್ರಿಕ ಶಿಕ್ಷಣವನ್ನು ಬೋಧಿಸಲು ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಗುಣವಾಗಿ ಅಗತ್ಯ ಮೂಲ ಸೌಕರ್ಯಗಳು ಮತ್ತು ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ, ಬೋಧಕ, ಬೋಧಕೇತರ ಅನುಪಾತವು ಇದೆಯೇ?ಪ್ರಸ್ತುತ ಹೊಂದಿರುವ ಮೂಲ ಸೌಕರ್ಯಗಳು ಮತ್ತು ಬೋಧಕ, ಬೋಧಕೇತರರಿಗೆ ಹೋಲಿಕೆ ಮಾಡಿದಲ್ಲಿ ಆ ವಿಶ್ವವಿದ್ಯಾನಿಲಯಕ್ಕೆ ನಿಗದಿಪಡಿಸಬಹುದಾದ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ, ಪ್ರವೇಶಾತಿ ರದ್ದುಪಡಿಸಿದಲ್ಲಿ ವಿಧಿಸುತ್ತಿರುವ ಶುಲ್ಕದ ಬಗ್ಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಶುಲ್ಕಗಳನ್ನು ಮತ್ತು ಸರಕಾರಿ ಪ್ರಾಧಿಕಾರಗಳಿಂದ ಪಡೆದ ವಿದ್ಯಾರ್ಥಿ ವೇತನಗಳನ್ನು ಸಮ ರ್ಪಕವಾಗಿ ಸಂಬಂಧಿಸಿದ ಫಲಾನುಭವಿಗಳಿಗೆ ವರ್ಗಾಯಿ ಸುತ್ತಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸಲು ವಿಚಾರಣೆ ನಿಬಂಧನೆಗಳನ್ನು ಸಮಿತಿಗೆ ನೀಡಿತ್ತು.
ಖಾಸಗಿ ವಿಶ್ವವಿದ್ಯಾನಿಲಯಗಳು ಇಂಜಿನಿಯರಿಂಗ್ ಸೀಟ್ಗಳನ್ನು ನಿಯಮಾನುಸಾರ ಭರ್ತಿ ಮಾಡುತ್ತಿವೆಯೇ ಎಂಬ ಬಗ್ಗೆ ಪಾರದರ್ಶಕವಾಗಿ ಕ್ರಮ ಕೈಗೊಂಡು ಪ್ರತಿ ವರ್ಷವೂ ಈ ಮಾಹಿತಿ ಗಳನ್ನು ಸಾರ್ವಜನಿಕವಾಗಿ ತಿಳಿಯಪಡಿಸುವುದಕ್ಕಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮೂಲಕ ಅವಶ್ಯ ಕ್ರಮಕೈಗೊಳ್ಳು ವುದು ಮತ್ತು ಈ ಬಗ್ಗೆ ಕೈಗೊಂಡ ಕ್ರಮಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು’ ಎಂದು ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2021ರ ಎಪ್ರಿಲ್ 20ರಂದು ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.