15,088 ಕಾಮಗಾರಿಗಳು ಪ್ರಗತಿಯಲ್ಲಿ; ಬಿಡುಗಡೆಗೆ 38,607.01 ಕೋಟಿ ರೂ. ಬಾಕಿ
Photo: kbjnl.karnataka.gov.in/
ಬೆಂಗಳೂರು: ಕೃಷ್ಣಾ ಭಾಗ್ಯ ಜಲನಿಗಮ, ಕಾವೇರಿ ಮತ್ತು ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಭೂ ಸ್ವಾಧೀನ, ನಬಾರ್ಡ್, ಎಸ್ಸಿಪಿ, ಟಿಎಸ್ಪಿ, ವಿದ್ಯುತ್ ವೆಚ್ಚ, ದುರಸ್ತಿ ಮತ್ತು ನಿರ್ವಹಣೆ ಅಡಿಯಲ್ಲಿ ೨೦೨೩ರ ಎಪ್ರಿಲ್ ೧ರ ಅಂತ್ಯಕ್ಕೆ ೧೫,೦೮೮ ಕಾಮಗಾರಿಗಳು ಪ್ರಗತಿಯಲ್ಲಿದ್ದು ಇದೇ ಅವಧಿಯಲ್ಲಿ ಬಿಡುಗಡೆಗೆ ೩೮,೬೦೭.೦೧ ಕೋಟಿ ರೂ. ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.
ಅದೇ ರೀತಿ ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ನಿಗಮದಲ್ಲಿ ಬಾಕಿ ಬಿಲ್ಗಳು ಇರುವ ಕಾರಣ ನಿರೀಕ್ಷಿತ ಭೌತಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ ಮತ್ತು ಎಪ್ರಿಲ್ ತಿಂಗಳಿಗೆ ಬಂಡವಾಳ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲಾಗಿದ್ದ ೬೬ ಕೋಟಿ ರೂ.ಗಳು ಕಾವೇರಿ ನೀರಾವರಿ ನಿಗಮದ ಖಾತೆಗೆ ಜಮೆ ಆಗಿಲ್ಲ ಎಂಬ ಸಂಗತಿಯನ್ನು ನಿಗಮದ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದಿದ್ದಾರೆ.
ಜಲಸಂಪನ್ಮೂಲ ಇಲಾಖೆಯು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಗುತ್ತಿಗೆದಾರರ ಸಂಘವು ಸರಕಾರದ ಮೇಲೆ ಒತ್ತಡ ಹೇರಿರುವ ಬೆನ್ನಲ್ಲೇ ಜಲ ಸಂಪನ್ಮೂಲ ಇಲಾಖೆಯೊಂದರಲ್ಲೇ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ೩೮,೬೦೭.೦೧ ಕೋಟಿ ರೂ. ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.
ಕೃಷ್ಣಾ ಭಾಗ್ಯ ಜಲನಿಗಮ, ಕಾವೇರಿ ನೀರಾವರಿ, ಕರ್ನಾಟಕ ನೀರಾವರಿ ನಿಗಮವು ಅನುದಾನ ಬಿಡುಗಡೆಗೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು ಎಂದು ತಿಳಿದು ಬಂದಿದೆ.
ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ನಿಗಮದಲ್ಲಿ ಬಿಲ್ಗಳು ಬಾಕಿ ಇದ್ದು, ನಿರೀಕ್ಷಿತ ಭೌತಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ೨೦೨೩ರ ಜೂನ್ ಮತ್ತು ಜುಲೈ ತಿಂಗಳಿಗೆ ೧೬೧.೮೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಕೃಷ್ಣಾ ಭಾಗ್ಯ ಜಲನಿಗಮವು ಪ್ರಸ್ತಾವನೆ ಸಲ್ಲಿಸಿತ್ತು.
೨೦೨೩ರ ಎಪ್ರಿಲ್ ೧ರ ಅಂತ್ಯಕ್ಕೆ ಒಟ್ಟು ೩,೬೬೨ ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಇದೇ ಅವಧಿ ಅಂತ್ಯಕ್ಕೆ ಒಟ್ಟಾರೆ ೧೮,೮೭೭.೩೪ ಕೋಟಿ ರೂ. ಮೊತ್ತ ಬಾಕಿ ಇದೆ. ಇದರಲ್ಲಿ ಬಂಡವಾಳ ವೆಚ್ಚ ಲೆಕ್ಕ ಶೀರ್ಷಿಕೆಯಲ್ಲಿ ೯,೪೦೫.೨೦ ಕೋಟಿ ರೂ., ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಬಿಟಿಡಿಎನಲ್ಲಿ ೪,೧೦೩.೩೭ ಕೋಟಿ ರೂ., ೨೦೨೩-೨೪ರ ಭೂ ಸ್ವಾಧೀನಕ್ಕಾಗಿ ಸಕ್ಷಮ ಪ್ರಾಧಿಕಾರ ಸಲ್ಲಿಸಿರುವ ಬೇಡಿಕೆ ಅನುದಾನಕ್ಕೆ ೫,೧೦೦.೦೦ ಕೋಟಿ ರೂ., ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅಡಿಯಲ್ಲಿ ೨೭೦ ಕೋಟಿ ರೂ. ಬಾಕಿ ಇತ್ತು. ಆದರೆ ಸರಕಾರವು ಒಟ್ಟಾರೆ ೧೬೧.೮೩ ಕೋಟಿ ರೂ. ಬಿಡುಗಡೆ ಮಾಡಿ ೨೦೨೩ರ ಜುಲೈ ೨೪ರಂದು ಆದೇಶ ಹೊರಡಿಸಿದೆ.
ಅದೇ ರೀತಿ ಕರ್ನಾಟಕ ನೀರಾವರಿ ನಿಗಮದಲ್ಲಿಯೂ ೨೦೨೩ರ ಎಪ್ರಿಲ್ ೧ರ ಅಂತ್ಯಕ್ಕೆ ೬,೫೬೪ ಕಾಮಗಾರಿಗಳಿದ್ದವು. ಈ ಸಂಬಂಧ ೧೪,೭೭೦.೪೮ ಕೋಟಿ ರೂ. ಬಾಕಿ ಇದೆ. ೨೦೨೩-೨೪ನೇ ಸಾಲಿನಲ್ಲಿ ನಿಗಮದ ಕಾಮಗಾರಿಗಳಿಗೆ ವಿವಿಧ ವಿಭಾಗಗಳಲ್ಲಿ ಬಾಕಿ ಇರುವ ಬಿಲ್ಗಳ ಪಾವತಿಗಾಗಿ ನಿಗಮಕ್ಕೆ ಹಂಚಿಕೆಯಾಗಿರುವ ಅನುದಾನದಲ್ಲಿ ೨೦೨೩ರ ಜುಲೈ ನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಒಟ್ಟು ೫೯೮.೩೮ ಲಕ್ಷ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ನಿಗಮವು ೨೦೨೩ರ ಜೂನ್ನಲ್ಲಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿತ್ತು ಎಂಬುದು ತಿಳಿದು ಬಂದಿದೆ.
ಕರ್ನಾಟಕ ನೀರಾವರಿ ನಿಗಮಕ್ಕೆ ಒಟ್ಟಾರೆ ೨೯೨.೬೧ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ೨೦೨೩ರ ಆಗಸ್ಟ್ ೭ರಂದು ಆದೇಶ ಹೊರಡಿಸಲಾಗಿದೆ.
ಕರ್ನಾಟಕ ನೀರಾವರಿ ನಿಗಮಕ್ಕೆ ಎಪ್ರಿಲ್ನಲ್ಲಿ ಬಂಡವಾಳ ವೆಚ್ಚ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಗಿದ್ದ ೯೨.೬೦ ಕೋಟಿ ರೂ., ಎಸ್ಸಿಪಿ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಗಿದ್ದ ೩೬.೩೪ ಕೋಟಿ ರೂ. ಹಾಗೂ ನಬಾರ್ಡ್ ಅಡಿಯಲ್ಲಿ ಬಿಡುಗಡೆಯಾಗಿದ್ದ ೧೩೦.೦೦ ಕೋಟಿ ರೂ.ಗಳ ಅನುದಾನವನ್ನು ವಿನಿಯೋಗಿಸಬೇಕು ಎಂದು ಆದೇಶದಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ಅದೇ ರೀತಿ ಕಾವೇರಿ ನೀರಾವರಿ ನಿಗಮದಲ್ಲಿ ೨೦೨೩ರ ಎಪ್ರಿಲ್ ಅಂತ್ಯಕ್ಕೆ ಒಟ್ಟು ೪,೮೬೨ ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಜೂನ್ ಅಂತ್ಯಕ್ಕೆ ಬಂಡವಾಳ ವೆಚ್ಚ ಬಾಕಿ ಬಿಲ್ಗಳ ಪಾವತಿ, ವೇತನ ಪಾವತಿಗೆ ಮತ್ತು ನಿರ್ವಹಣಾ ವಿದ್ಯುತ್ ಬಾಕಿ ಬಿಲ್ ಪಾವತಿಗೆ ೪,೯೫೯.೧೯ ಕೋಟಿ ರೂ. ಅನುದಾನ ಅಗತ್ಯವಿದೆ ಎಂಬುದು ಆದೇಶದಿಂದ ತಿಳಿದು ಬಂದಿದೆ.
ಜುಲೈ ತಿಂಗಳಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ೨೧೭.೫೯ ಕೋಟಿ ರೂ., ಅನುದಾನವನ್ನು ಹಾಗೂ ಡ್ರಿಪ್ ಯೋಜನೆ ಅಡಿಯಲ್ಲಿ ೧೦.೨೭ ಕೋಟಿ ರೂ., ಅರಂಭಿಕ ಮೊತ್ತವಿದ್ದು ಬಾಕಿ ಬಿಲ್ ಗಳು ೧೨.೧೬ಕೋಟಿ ರೂ.ಗಳಿರುತ್ತವೆ ಎಂದು ಸರಕಾರಕ್ಕೆ ವರದಿ ಸಲ್ಲಿಸಿತ್ತು.
ಜುಲೈ ತಿಂಗಳಿಗೆ ೫.೦೪ ಕೋಟಿ ರೂ. ಸೇರಿ ಒಟ್ಟಾರೆ ೨೨೨.೬೩ ಕೋಟಿ ರೂ. ಅನುದಾನ ಬಿಡುಗಡೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಲದೆ ಎಪ್ರಿಲ್ ತಿಂಗಳಿಗೆ ಬಂಡವಾಳ ಲೆಕ್ಕ ಶೀರ್ಷಿಕೆ ಯಡಿಯಲ್ಲಿ ಬಿಡುಗಡೆ ಮಾಡಲಾಗಿದ್ದ ೬೬ ಕೋಟಿ ರೂ.ಗಳು ನಿಗಮದ ಖಾತೆಗೆ ಜಮೆ ಆಗಿರುವುದಿಲ್ಲ ಎಂಬುದು ಗೊತ್ತಾಗಿದೆ.