2024-25ನೇ ಸಾಲಿನ ಅರ್ಧ ವರ್ಷ ಕಳೆದರೂ ಶೇ.35ರಷ್ಟೇ ಪ್ರಗತಿ: ‘ಗ್ಯಾರಂಟಿ’ ಹೊರತುಪಡಿಸಿ ತೆವಳುತ್ತಿರುವ ಬಹುತೇಕ ಯೋಜನೆಗಳು
ಬೆಂಗಳೂರು: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರವು ಹಗರಣಗಳ ಸಮುದ್ರದಲ್ಲಿ ಈಜಾಡುತ್ತಿದ್ದರೆ ಇತ್ತ ಅಧಿಕಾರಿಗಳು 2024-25ನೇ ಸಾಲಿನ ಆರ್ಥಿಕ ಸಾಲಿನ ಅರ್ಧ ವರ್ಷ ಕಳೆದರೂ ಮೈಚಳಿ ಬಿಟ್ಟು ಕೆಲಸ ಮಾಡುತ್ತಿಲ್ಲ. ಅಕ್ಟೋಬರ್ ತಿಂಗಳು ಕಳೆದರೂ ಅಧಿಕಾರಿ ವರ್ಗದಲ್ಲಿರುವ ಮೈಗಳ್ಳತನ ದೂರವಾಗಿಲ್ಲ. ಹೀಗಾಗಿ ಗ್ಯಾರಂಟಿ ಹೊರತುಪಡಿಸಿದ ಇನ್ನಿತರ ಬಹುತೇಕ ಯೋಜನೆಗಳು ತೆವಳುತ್ತಿವೆ.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ವಿವಿಧ ಕಾರ್ಯಕ್ರಮಗಳಲ್ಲಿ ಮನೆ ನಿರ್ಮಾಣದಲ್ಲಿಯೂ ಪ್ರಗತಿ ಕುಂಠಿತವಾಗಿದೆ. ಅದೇ ರೀತಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಇಂಟ್ರೆಸ್ಟ್ ಡಿಪಾಸಿಟ್ ಸರ್ಟಿಫಿಕೇಟ್ ನೀಡಿಲ್ಲ. ಹೀಗಾಗಿ ಎರಡನೇ ಕಂತೂ ಬಿಡುಗಡೆ ಆಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಹೇಳಿದೆ.
2025-26ನೇ ಸಾಲಿಗೆ ಸಂಬಂಧಿಸಿದಂತೆ ಆಯವ್ಯಯ ಅಂದಾಜು ಸಿದ್ಧಪಡಿಸಲು ಅಧಿಕಾರಿಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಇದರ ಪ್ರಕಾರ ಅಧಿಕಾರಿಗಳು ಮುಂದಿನ ವರ್ಷದ ಆಯವ್ಯಯ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಆದರೆ 2024-25ನೇ ಸಾಲಿನ ಅರ್ಧ ವರ್ಷ ಕಳೆದರೂ ಸಹ ಶೇ. 35.41ರಷ್ಟೇ ಪ್ರಗತಿಯಾಗಿದೆ. ಇದು ಅಧಿಕಾರಿಗಳ ನಿಷ್ಕ್ರಿಯತೆಗೆ ಕೈಗನ್ನಡಿ ಹಿಡಿದಂತಾಗಿದೆ.
ಮತ್ತೊಂದು ವಿಶೇಷವೆಂದರೆ ಕಳೆದ ವರ್ಷ ಇದೇ ಸಮಯಕ್ಕೆ (ಅಕ್ಟೋಬರ್ 21, 2023) ಶೇ.36.98ರಷ್ಟು ಖರ್ಚು ಮಾಡಿತ್ತು. ಪ್ರಸಕ್ತ ಸಾಲಿನ ಈ ಸಮಯಕ್ಕೆ (ಅಕ್ಟೋಬರ್ 21,2024) ಹೋಲಿಸಿದರೆ ಕಳೆದ ವರ್ಷಕ್ಕಿಂತಲೂ ಶೇ.1ರಷ್ಟು ಕಡಿಮೆ ವೆಚ್ಚ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2024ರ ಅಕ್ಟೋಬರ್ 24ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಸಭೆಯ ನಡವಳಿಗಳು "The-file.iಟn"ಗೆ ಲಭ್ಯವಾಗಿದೆ.
2024-25ನೇ ಸಾಲಿನಲ್ಲಿ ಆಯವ್ಯಯ ಅಂದಾಜು 3,11,586, ಪ್ರಾಥಮಿಕ ಶಿಲ್ಕು 17,574 ಕೋಟಿ ಸೇರಿ ಒಟ್ಟು 3,29,160 ಕೋಟಿ ರೂ. ಇದೆ. ಈ ಪೈಕಿ ಅಕ್ಟೋಬರ್ 21ರ ಅಂತ್ಯಕ್ಕೆ 1,50,834.97 ಕೋಟಿ ರೂ. ಬಿಡುಗಡೆ ಆಗಿದೆ. ಇದರಲ್ಲಿ 1,33,827.97 ಕೋಟಿ ರೂ. ಖರ್ಚಾಗಿದೆ. ಒಟ್ಟು ಅನುದಾನಕ್ಕೆ ಶೇ. 35.41ರಷ್ಟು ಪ್ರಗತಿಯಾಗಿರುವುದು ನಡವಳಿಯಿಂದ ಗೊತ್ತಾಗಿದೆ. ‘ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ 1,25,115.63 ಕೋಟಿ ವೆಚ್ಚವಾಗಿದ್ದು ಒಟ್ಟಾರೆ ಅನುದಾನಕ್ಕೆ ಶೇ.36.98ರಷ್ಟು ವೆಚ್ಚವಾಗಿದೆ,’ ಎಂಬ ಅಂಶವನ್ನು ನಡಾವಳಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿರುವ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಡಿಮೆ ಪ್ರಗತಿ ಆಗಿದೆ. ಸ್ವಚ್ಛ ಭಾರತ (ನಗರ) ಕಾರ್ಯಕ್ರಮಗಳಡಿಯಲ್ಲಿ ಆರಂಭಿಕ ಶಿಲ್ಕಿನ ರೂಪದಲ್ಲಿ 1,012.00 ಕೋಟಿ ರೂ. ಇದೆ. ಆದರೆ ಬಹಳ ಕಡಿಮೆ ವೆಚ್ಚವಾಗಿದೆ. ಈ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ, ಕಾಮಗಾರಿಗಳು ತೆವಳುತ್ತಿವೆ. ಹೀಗಾಗಿ ಪ್ರಗತಿ ವಿಳಂಬವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಅಂಶವನ್ನು ಮುಖ್ಯ ಕಾರ್ಯದರ್ಶಿಗಳು ಗಂಭೀರವಾಗಿ ಗಮನಿಸಿರುವುದು ನಡವಳಿಯಿಂದ ಗೊತ್ತಾಗಿದೆ.
ಅದೇ ರೀತಿ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊ ಳಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ವೆಚ್ಚವು ಅಷ್ಟೇನೂ ಆಶಾದಾಯಕವಾಗಿಲ್ಲ. ಪೂರಕ ಪೌಷ್ಠಿಕಾಂಶ ಕಾರ್ಯಕ್ರಮದಲ್ಲಿ 419.72 ಕೋಟಿ ರೂ. ಪ್ರಾರಂಭಿಕ ಶಿಲ್ಕು ಇದೆ. ಇಷ್ಟೂ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಆದರೆ ಇದರಲ್ಲಿ 232.30 ಕೋಟಿ ರೂ.ಯಷ್ಟು ಮಾತ್ರ ವೆಚ್ಚವಾಗಿರುವುದು ತಿಳಿದು ಬಂದಿದೆ.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ, ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಗಳಲ್ಲಿನ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಯಾದ ನಂತರ ಮಾಹಿತಿಯನ್ನು ಸ್ಕಾಲರ್ ಶಿಪ್ ಪೋರ್ಟಲ್‌ನಲ್ಲಿ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
‘ವಿದ್ಯಾರ್ಥಿಗಳ ಆಧಾರ್‌ನಲ್ಲಿನ ಪರಿಷ್ಕೃತ ಬಯೋಮೆಟ್ರಿಕ್ ಮಾಹಿತಿಯು ಇಂಡೀಕರಿಸದೇ ಇರುವುದು ಹಾಗೂ ಪರೀಕ್ಷಾ ಫಲಿತಾಂಶಗಳ ಮಾಹಿತಿಯು ಯುಯುಸಿಎಂಎಸ್‌ನಲ್ಲಿ ಇಂಡೀಕರಿಸಲಾಗುತ್ತಿದೆ. ಸ್ಕಾಲರ್ ಶಿಪ್ ಪೋರ್ಟಲ್‌ಗೆ ಸಂಯೋಜನೆಯಾಗದಿರುವುದು ಪ್ರಮುಖ ಕಾರಣವಾಗಿದೆ,’ ಎಂದು ಆರ್ಥಿಕ ಇಲಾಖೆಯ ಸರಕಾರದ ಕಾರ್ಯದರ್ಶಿಯು ಸಭೆಗೆ ತಿಳಿಸಿರುವುದು ಗೊತ್ತಾಗಿದೆ.
ವಸತಿ ಇಲಾಖೆಯಡಿ ಅನುಷ್ಠಾನಗೊಳ್ಳತ್ತಿರುವ ವಿವಿಧ ಕಾರ್ಯಕ್ರಮಗಳೂ ಆಮೆ ವೇಗದಲ್ಲಿದೆ. ಫಲಾನುಭವಿಗಳಿಗೆ ಮನೆ ನಿರ್ಮಾಣದಲ್ಲಿ ಪ್ರಗತಿ ಕುಂಠಿತವಾಗಿದೆ. ಅದೇ ರೀತಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ ಕೆಲವು ಇಲಾಖೆಗಳಿಗೆ ಕಡಿಮೆ ಅನುದಾನ ಬಿಡುಗಡೆ ಮಾಡಿದೆ. ಶಾಲಾ ಶಿಕ್ಷಣ (ಶೇ.15.4), ಕೃಷಿ (ಶೇ.19.0), ಸಮಾಜ ಕಲ್ಯಾಣ ಶೇ.20.8ರಷ್ಟು ಬಿಡುಗಡೆ ಆಗಿದೆ. ಆದರೆ ಸಣ್ಣ ನೀರಾವರಿ, ಮೀನುಗಾರಿಕೆ, ಸಹಕಾರ ಮತ್ತು ಮೂಲಸೌಲಭ್ಯ ಇಲಾಖೆಗಳಿಗೆ ಬಿಡಿಗಾಸೂ ಬಂದಿಲ್ಲ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಮೆಟ್ರಿಕ್ ಪೂವ್ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿಯೂ ಪ್ರಗತಿ ಉತ್ತಮವಾಗಿಲ್ಲ. ಸಮಾಜ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಇಂಟ್ರೆಸ್ಟ್ ಡಿಪಾಸಿಟ್ ಸರ್ಟಿಫಿಕೆಟನ್ನು ನೀಡಿಲ್ಲ. ಹೀಗಾಗಿ ಎರಡನೇ ಕಂತು ಬಿಡುಗಡೆ ಆಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಸಭೆಗೆ ತಿಳಿಸಿರುವುದು ಗೊತ್ತಾಗಿದೆ.
ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ಉಪ ಯೋಜನೆ ಕಾಯಕ್ರಮಗಳಡಿಯಲ್ಲಿ ಒಟ್ಟಾರೆ ಅನುದಾನಕ್ಕೆ ಶೇ. 35.41ರಷ್ಟು ಮಾತ್ರ ವೆಚ್ಚವಾಗಿದೆ. ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳಿಗೆ ಪ್ರಗತಿ ತ್ವರಿತಗೊಳಿಸಬೇಕು ಎಂದು ಸಭೆಯು ಸೂಚಿಸಿದೆ. 2024ರ ಅಕ್ಟೋಬರ್ 1 ಅಂತ್ಯಕ್ಕೆ 32,250.02 ಕೋಟಿ ರೂ. ಖರ್ಚಾಗದೇ ಬಾಕಿ ಇತ್ತು. 22 ಇಲಾಖೆಗಳ ಪೈಕಿ ಒಂದು ಇಲಾಖೆಯೂ ಶೇ.50ರ ಗಡಿಯನ್ನೂ ದಾಟಿರಲಿಲ್ಲ.
ಸಚಿವ ಝಮೀರ್ ಅಹ್ಮದ್ ಖಾನ್, ಭೋಸರಾಜು, ಡಾ.ಶರಣ ಪ್ರಕಾಶ್ ಪಾಟೀಲ್, ಕೆ.ಎಚ್ ಮುನಿಯಪ್ಪ, ಎಚ್.ಕೆ.ಪಾಟೀಲ್, ಸಂತೋಷ್ ಲಾಡ್, ಎಂ.ಬಿ.ಪಾಟೀಲ್, ಕೆ.ವೆಂಕಟೇಶ್ ಅವರು ಸಚಿವರಾಗಿರುವ ಇಲಾಖೆಗಳೇ ಅತೀ ಹೆಚ್ಚಿನ ಮೊತ್ತವನ್ನು ಉಳಿಸಿಕೊಂಡಿದ್ದವು. ಸಣ್ಣ ನೀರಾವರಿ, ತೋಟಗಾರಿಕೆ, ಪಶು ಸಂಗೋಪನೆ, ಕರ್ನಾಟಕ ವಿಧಾನಸಭೆ, ಪರಿಷತ್, ವೈದ್ಯಕೀಯ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ, ಆಹಾರ, ಯುವ ಸಬಲೀಕರಣ, ಪ್ರವಾಸೋದ್ಯಮ, ರೇಷ್ಮೆ, ಮೀನುಗಾರಿಕೆ, ವಾರ್ತಾ, ವಾಣಿಜ್ಯ ಕೈಗಾರಿಕೆ, ಮೂಲಭೂತ ಸೌಕರ್ಯ, ಪರಿಶಿಷ್ಟ ಪಂಗಡ, ಇಂಧನ, ಕನ್ನಡ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಕಾರ್ಮಿಕ ಇಲಾಖೆಯಲ್ಲಿ ಒಟ್ಟಾರೆಯಾಗಿ 2024ರ ಸೆ.21ರ ಅಂತ್ಯಕ್ಕೆ 32,250.02 ಕೋಟಿ ರೂ. ಖರ್ಚಾಗದೇ ಹಾಗೇ ಉಳಿದುಕೊಂಡಿತ್ತು.
2024-25ನೇ ಸಾಲಿನಲ್ಲಿ ಒಟ್ಟು 3.28 ಲಕ್ಷ ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಸೆ.21ರ ಅಂತ್ಯಕ್ಕೆ 1.26 ಲಕ್ಷ ಕೋಟಿ ರೂ. ಬಿಡುಗಡೆ ಆಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ. 40.67ರಷ್ಟಿತ್ತು ಈ ಪೈಕಿ 1.11 ಲಕ್ಷ ಕೋಟಿ ರೂ. ಒಟ್ಟು ವೆಚ್ಚವಾಗಿದೆ. ಇದು ಸಹ ಒಟ್ಟು ಅನುದಾನಕ್ಕೆ ಶೇ.34ರಷ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ ಶೇ. 27.37ರಷ್ಟು ಮಾತ್ರ ವೆಚ್ಚವಾಗಿತ್ತು.ಸಣ್ಣ ನೀರಾವರಿ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟು 2,388.49 ಕೋಟಿ ರೂ. ಅನುದಾನದ ಪೈಕಿ 1,003.54 ಕೋಟಿ ರೂ. (ಶೇ.42.02) ಬಿಡುಗಡೆಯಾಗಿದೆ. ಇದರಲ್ಲಿ ಸೆ.21ರ ಅಂತ್ಯಕ್ಕೆ 761.92 ಕೋಟಿ ರೂ. ಮಾತ್ರ ಖರ್ಚಾಗಿದೆ. ಖರ್ಚು ಮಾಡಲು ಇನ್ನೂ 241.63 ಕೋಟಿ ರೂ. ಬಾಕಿ ಇರುವುದು ಗೊತ್ತಾಗಿದೆ. 2023-24ನೇ ಸಾಲಿಗೆ ಹೋಲಿಸಿದರೆ ಸೆಪ್ಟಂಬರ್ ಅಂತ್ಯಕ್ಕೆ ಶೇ.31ರಷ್ಟು ಅನುದಾನ ಖರ್ಚು ಮಾಡಿತ್ತು. 2024-25ನೇ ಸಾಲಿನ ಸೆಪ್ಟಂಬರ್ ಅಂತ್ಯಕ್ಕೆ ಶೇ.34.96ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಅವಧಿಯಲ್ಲಿ ಶೇ.3ರಷ್ಟು ಮಾತ್ರ ಖರ್ಚಾಗಿದ್ದನ್ನು ಸ್ಮರಿಸಬಹುದು.