ನವೆಂಬರ್ 2022ರಿಂದ 70 ಹೆಸರುಗಳು ಕೇಂದ್ರ ಸರ್ಕಾರದ ಬಳಿ ಬಾಕಿ !
ಸುಪ್ರೀಂಕೋರ್ಟ್ | Photo: PTI
ಕೇಂದ್ರದ ಬಿಜೆಪಿ ಸರ್ಕಾರ ನ್ಯಾಯಾಂಗದ ಸ್ವಾಯತ್ತತೆಗೆ ಧಕ್ಕೆ ತರುವ ಯತ್ನ ಶುರು ಮಾಡಿ ಬಹಳ ಸಮಯವೇ ಆಗಿದೆ. ನ್ಯಾಯಾಂಗದ ಮಾತುಗಳನ್ನು ಕಡೆಗಣಿಸಿದಂತೆ ಮಾಡುವ ಧೋರಣೆ ಮೂಲಕ, ತನ್ನದೇ ನಡೆಯಬೇಕೆಂಬಂತೆ ತೋರಿಸಿಕೊಳ್ಳುವುದು, ಅದಕ್ಕಾಗಿ ಏನೇನೋ ನೆಪಗಳನ್ನು ಮುಂದೆ ಮಾಡುವುದು ಇದೆಲ್ಲವನ್ನೂ ಈಚಿನ ದಿನಗಳಲ್ಲಿ ಮೋದಿ ಸರ್ಕಾರ ಮಾಡುತ್ತಲೇ ಬಂದಿದೆ.
ಸರ್ಕಾರಕ್ಕೆ ಎಲ್ಲವೂ ತನ್ನ ಸೂತ್ರಧಾರಿಕೆಯ ವ್ಯಾಪ್ತಿಯೊಳಗೆ ಬರಬೇಕೆಂಬ ಅಹಂ ಇದ್ದಂತಿದೆ. ಅದಕ್ಕೆ ಈ ದೇಶದ ಪ್ರಜಾಪ್ರಭುತ್ವದ ಘನತೆಯನ್ನು ಕಾಯುವಂಥ ನ್ಯಾಯಾಧೀಶರೂ ಬೇಡ, ಅಂಥ ಕಾಳಜಿಯೂ ಅದಕ್ಕಿಲ್ಲ. ಹಾಗಾಗಿಯೇ, ಕೇವಲ ಸೇಡಿನ ಕ್ರಮವಾಗಿಯೇ ಅತ್ಯುತ್ತಮ ನ್ಯಾಯಾಧೀಶರನ್ನು ಅದು ತಿರಸ್ಕರಿಸುತ್ತದೆ. ನ್ಯಾಯಮೂರ್ತಿಗಳಾದ ಅಖಿಲ್ ಖುರೇಷಿ, ಮುರಳೀಧರ್ ಅಂಥವರ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯನ್ನು ಉದಾಹರಿಸಬಹುದು. ಸುಪ್ರೀಂ ಕೋರ್ಟ್ ಗೆ ಪದೋನ್ನತಿ ಆಗಲೇ ಬೇಕಿದ್ದ ಆ ಇಬ್ಬರೂ ಅತ್ಯುತ್ತಮ ನ್ಯಾಯಾಧೀಶರೂ ಮೋದಿ ಸರಕಾರದ ಧೋರಣೆಯಿಂದಾಗಿ ಹೈಕೋರ್ಟ್ ನಲ್ಲೆ ವೃತ್ತಿ ಜೀವನ ಮುಗಿಸಬೇಕಾಯಿತು. ಅದು ದೇಶಕ್ಕಾದ ಬಹುದೊಡ್ಡ ನಷ್ಟ.
ಹಾಗೆಯೇ ಮತ್ತೊಂದು ದಿಕ್ಕಿನಿಂದ, ಸರಕಾರವನ್ನು ಯದ್ವಾತದ್ವಾ ಹೊಗಳುವ ಮತ್ತೊಂದು ವರ್ಗವೂ ನ್ಯಾಯಾಂಗ ವ್ಯವಸ್ಥೆಯೊಳಗೇ ಇದೆ. ನಿವೃತ್ತಿಯಾದ ತಕ್ಷಣ ಅವರಿಗೆ ಬೇರೆ ಬೇರೆ ಸ್ಥಾನಮಾನಗಳನ್ನು ಕೊಡುವ ಸರ್ಕಾರ, ಅಂಥವರ ಋಣ ಸಂದಾಯ ಮಾಡುತ್ತದೆ. ಇಂಥ ಅಪಾಯದ ಹೊರತಾಗಿಯೂ, ಎಲ್ಲ ಸ್ವಾಯತ್ತ ಸಂಸ್ಥೆಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸರ್ಕಾರದ ಹುನ್ನಾರದ ಎದುರಲ್ಲಿ ನ್ಯಾಯಾಂಗವಿನ್ನೂ ತನ್ನದೇ ದೃಢತೆಯೊಂದಿಗಿದೆ. ಅದನ್ನು ಸಹಿಸಲಾಗದ ಸರ್ಕಾರ ತನ್ನದೇ ಬಗೆಯಲ್ಲಿ ಆಟವಾಡುತ್ತಲೂ ಇದೆ.
ಕೊಲಿಜಿಯಂ ಬಗ್ಗೆ ಕೂಡ ಸರ್ಕಾರದ ತಿರಸ್ಕಾರದ ನಿಲುವು ಮತ್ತೆ ಮತ್ತೆ ಕಾಣಿಸುತ್ತಿದೆ. ಕೊಲಿಜಿಯಂ ವಿರುದ್ಧ ಮತ್ತು ನ್ಯಾಯಾಂಗದ ವಿರುದ್ಧ ಸರ್ಕಾರವೇ ಟೀಕಿಸುವುದನ್ನೂ ನೋಡಿದ್ದಾಗಿದೆ. ದೇಶಾದ್ಯಂತ ತ್ವರಿತ ಗತಿಯಲ್ಲಿ ನ್ಯಾಯದಾನ ಆಗಬೇಕು ಮತ್ತದಕ್ಕೆ ಪೂರಕವಾಗಿ ಅಗತ್ಯ ಹುದ್ದೆಗಳ ಭರ್ತಿಯಾಗಬೇಕು ಎಂಬ ಕಾಳಜಿ ನ್ಯಾಯಾಂಗದ್ದಾದರೆ, ಸರ್ಕಾರ ಮಾತ್ರ ಇಲ್ಲಿಯೂ ಏನೇನೋ ಪೂರ್ವಗ್ರಹಗಳನ್ನು ಮುಂದೆ ಮಾಡಿ ರಾಜಕೀಯ ಮಾಡುತ್ತಿರುವುದು ದೊಡ್ಡ ವಿಪರ್ಯಾಸ.
ಈಗ, ಹೈಕೋರ್ಟ್ನ 70 ನ್ಯಾಯಾಧೀಶರ ಹುದ್ದೆಗಳ ಭರ್ತಿ ವಿಚಾರದಲ್ಲಿಯೂ ಕೇಂದ್ರ ತೋರುತ್ತಿರುವ ಧೋರಣೆ ಒಂದು ರೀತಿಯಲ್ಲಿ ನ್ಯಾಯಾಂಗದ ಬಗೆಗಿನ ಅದರ ಅಸಡ್ಡೆಯ ಹಾಗೆಯೇ ತೋರುತ್ತಿದೆ. ಸರ್ಕಾರದ ಈ ಧೋರಣೆಯನ್ನು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿಯೇ ಟೀಕಿಸಿದೆ. ಹೈಕೋರ್ಟ್ ಗಳಲ್ಲಿ ಹೊಸ ನ್ಯಾಯಾಧೀಶರಾಗಿ ನೇಮಕಕ್ಕೆ ಶಿಫಾರಸು ಮಾಡಲಾದ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಕೇಂದ್ರ ಸರಕಾರ ತಿಂಗಳುಗಟ್ಟಲೆ ಇಟ್ಟುಕೊಳ್ಳುತ್ತಿದೆ. ಇದರಿಂದ ಅಭ್ಯರ್ಥಿಗಳು ಹಿಂದೆ ಸರಿದು ಹೊಸ ಪ್ರತಿಭೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸರಕಾರ ಅದಕ್ಕೆ ಕಳಿಸಲಾದ ಹೆಸರುಗಳನ್ನು ಇಟ್ಟುಕೊಂಡು ಅದರಲ್ಲಿ ತನಗೆ ಬೇಕಾದವರನ್ನು ಆಯ್ಕೆ ಮಾಡಲು ಪ್ರತ್ಯೇಕಿಸುತ್ತದೆ. ಯಾವುದೋ ಕಾರಣಕ್ಕಾಗಿ ಒಂದು ಹೆಸರು ಆಗಬಹುದು, ಇನ್ನೊಂದು ಆಗೋದಿಲ್ಲ ಎಂದು ಪ್ರತ್ಯೇಕಿಸುತ್ತದೆ. ಇದರಿಂದ ತಮ್ಮ ಉತ್ತಮ ವಕೀಲಿ ವೃತ್ತಿಯನ್ನು ಬಿಟ್ಟು ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲು ಮುಂದಾಗುವ ಪ್ರಖರ ಕಾನೂನು ತಜ್ಞರು ಬೇಸತ್ತು ಹಿಂದೆ ಸರಿಯುತ್ತಿದ್ದಾರೆ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ಹಾಗು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಈಗ ವಕೀಲರು ಬರಲು ಹಿಂಜರಿಯುತ್ತಿದ್ದಾರೆ. ನಾವು ಅತ್ಯುತ್ತಮ ಪ್ರತಿಭೆಗಳನ್ನು ಪಡೆಯಲು ಪ್ರಯತ್ನಿಸುತ್ತಲೇ ಇರುತ್ತೇವೆ. ಆದರೆ ಸರಕಾರದ ಈ ಪ್ರತ್ಯೇಕಿಸುವ ಪ್ರಕ್ರಿಯೆಯಿಂದಾಗಿ ನ್ಯಾಯಾಲಯಗಳು ಉತ್ತಮ ಪ್ರತಿಭೆಗಳನ್ನು ಕಳಕೊಳ್ಳುತ್ತಿವೆ. ಹಾಗಾಗಿ ಅವರು ಹಿಂದೆ ಸರಿಯುತ್ತಿದ್ದಾರೆ. ನಾನಿಲ್ಲಿ ಯಾವುದೇ ಹೆಸರು ತೆಗೆಯುವುದಿಲ್ಲ, ಆದರೆ ಒಂದೆರಡು ಬಹಳ ಒಳ್ಳೆಯ ಪ್ರತಿಭೆಗಳನ್ನು ಕಳೆದುಕೊಂಡೆವು ಎಂದು ಕೇಂದ್ರ ಸರಕಾರದ ಪರವಾಗಿ ಬಂದಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾ. ಸಂಜಯ್ ಕಿಶನ್ ಕೌಲ್ ಹೇಳಿದ್ದಾರೆ.
ಹೈಕೋರ್ಟ್ ಕೊಲಿಜಿಯಂಗಳು ನ್ಯಾಯಾಧೀಶರ ಹುದ್ದೆಗೆ ನೇಮಕಾತಿಗಾಗಿ ಕಳಿಸಿರುವ 70 ಹೆಸರುಗಳು ಕೇಂದ್ರ ಸರ್ಕಾರದ ಬಳಿ ನವೆಂಬರ್ 2022ರಿಂದಲೂ ಹಾಗೇ ಉಳಿದುಕೊಂಡಿರುವ ಬಗ್ಗೆಯೂ ನ್ಯಾ ಕೌಲ್ ಅವರು ಅಟಾರ್ನಿ ಜನರಲ್ ಗಮನ ಸೆಳೆದಿದ್ದಾರೆ. ಹೈಕೋರ್ಟ್ ನ 70 ನ್ಯಾಯಾಧೀಶರ ಹುದ್ದೆಗಳು ಖಾಲಿಯಿವೆ. ಸರಕಾರಕ್ಕೆ ಹೈಕೋರ್ಟ್ ಕೊಲಿಜಿಯಂಗಳಿಂದ ಹೆಸರುಗಳು ಬಂದ ಮೇಲೆ ಅದು ಕೆಲವು ಪ್ರಾಥಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆ ಹೆಸರುಗಳನ್ನು ಸುಪ್ರೀಂ ಕೋರ್ಟ್ ಗೆ ಕಳಿಸಬೇಕು. ಅಷ್ಟನ್ನೂ ಸರಕಾರ ಮಾಡಿಲ್ಲ. ಕನಿಷ್ಠ ಆ ಹೆಸರುಗಳ ಬಗ್ಗೆ ಸರಕಾರದ ಅಭಿಪ್ರಾಯ ಏನೆಂದು ನಮಗೆ ಗೊತ್ತಾದರೆ ನಾವು ಒಂದು ನಿರ್ಧಾರ ತೆಗೆದುಕೊಳ್ಳಬಹುದು. ನೀವು ಅದನ್ನೂ ಮಾಡೋದಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ವಕೀಲರ ಸಂಘದ ಪರವಾಗಿ ಅರ್ಜಿ ಸಲ್ಲಿಸಿದ್ದ ಹಿರಿಯ ನ್ಯಾಯವಾದಿ ಅರವಿಂದ್ ದಾತಾರ್ ಹಾಗು ವಕೀಲ ಅಮಿತ್ ಪೈ ಅವರು, ಕೊಲೀಜಿಯಂ ಕೊಟ್ಟ ಹೆಸರುಗಳಲ್ಲಿ ಕೆಲವನ್ನು ಸರಕಾರ ಕೂತು ಪ್ರತ್ಯೇಕಿಸುವುದು ತೀರಾ ಮುಜುಗರ ತರುವ ವಿಚಾರ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಈ ರೀತಿ ತಾನು ಕಳಿಸಿದ ಹೆಸರುಗಳನ್ನು ಪ್ರತ್ಯೇಕಿಸಬಾರದು ಎಂದು ಕೊಲಿಜಿಯಂ ಹೇಳಿದ್ದರೂ ಸರಕಾರ ಯಾವುದೇ ಮುಲಾಜಿಲ್ಲದೆ ಅದನ್ನು ಮಾಡುತ್ತಿದೆ. ಇನ್ನು ಮುಂದೆ ಆ ರೀತಿ ನಡೆಯದು ಎಂದು ಕೊಲಿಜಿಯಂ ಹೇಳಿದ್ದರೂ ಅದೇ ನಡೆಯುತ್ತಿದೆ. ನ್ಯಾಯಾಂಗ ನಿಂದನೆ ಮಾಡುತ್ತಿರುವುದಕ್ಕೆ ಸಂಬಂಧಪಟ್ಟವರನ್ನು ಹೊಣೆಗಾರರಾಗಿ ಮಾಡುವುದಕ್ಕೆ ಇದು ಸಕಾಲ. ಇದನ್ನು ಹೀಗೆ ಮುಂದುವರಿಯಲು ಬಿಡುವಂತಿಲ್ಲ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ಗಮನಿಸಬೇಕಿರುವ ಮತ್ತೊಂದು ಮಹತ್ವದ ಸಂಗತಿಯೆಂದರೆ, ದೇಶಾದ್ಯಂತ ವಿವಿಧ ಹೈಕೋರ್ಟ್ಗಳಲ್ಲಿ 71 ಸಾವಿರಕ್ಕೂ ಹೆಚ್ಚು ಪ್ರಕರಣಗಳು 30 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಇವೆ ಎಂಬ ವಿಚಾರವನ್ನೂ ಸರ್ಕಾರವೇ ಹೇಳಿದೆ. ಇದಲ್ಲದೆ, 30 ವರ್ಷಗಳಿಗೂ ಹಳೆಯ ಸುಮಾರು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂದೂ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಇದೇ ಜುಲೈನಲ್ಲಿ ಕೊಟ್ಟಿರುವ ಉತ್ತರದ ಪ್ರಕಾರ, ಹೈಕೋರ್ಟ್ಗಳಲ್ಲಿ 30 ವರ್ಷಗಳಿಗೂ ಹೆಚ್ಚು ಸಮಯದಿಂದ ಬಾಕಿಯಿರುವ ಕೇಸ್ಗಳು – 71,204, ಹಾಗೆಯೇ ಕೆಳ ನ್ಯಾಯಾಲಯಗಳಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿಯಿರುವ ಕೇಸ್ಗಳು – 1,01,837.
ಹಾಗೆಯೆ, ರಾಷ್ಟ್ರೀಯ ನ್ಯಾಯಾಂಗ ಮಾಹಿತಿ ಗ್ರಿಡ್ (ಎನ್ ಜಿ ಡಿ ಜಿ) ಮಾಹಿತಿ ಪ್ರಕಾರ,ಜುಲೈ 14ರವರೆಗೆ ಹೈಕೋರ್ಟ್ಗಳಲ್ಲಿ 60,62,953 ಕೇಸ್ಗಳು ಹಾಗೂ ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ 4,41,35,357 ಕೇಸ್ಗಳು ಬಾಕಿಯಿವೆ ಎಂದು ಕಾನೂನು ಸಚಿವರು ತಿಳಿಸಿದ್ದಾರೆ. ಎನ್ ಜೆ ಡಿ ಜಿ ಪ್ರಕಾರ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಉಳಿದಿರುವ ಕೇಸುಗಳ ಸಂಖ್ಯೆ 80,591.
ಇನ್ನು ದೇಶಾದ್ಯಂತ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಯೂ ಎದ್ದು ಕಾಣುವಂತಿದೆ. ದೇಶದ 25 ಹೈಕೋರ್ಟ್ ಗಳಲ್ಲಿ ಮಂಜೂರಾಗಿರುವ ನ್ಯಾಯಾಧೀಶರ ಹುದ್ದೆಗಳು 1,114 ಆದರೆ ಈಗ ಇರುವ ನ್ಯಾಯಾಧೀಶರು 774 ಅಂದ್ರೆ 340 ನ್ಯಾಯಾಧೀಶರ ಹುದ್ದೆಗಳು ಖಾಲಿಯಿವೆ. ಸುಪ್ರೀಂ ಕೋರ್ಟ್ ಮಂಜೂರಾಗಿರುವ ನ್ಯಾಯಾಧೀಶರ ಹುದ್ದೆಗಳು 34 ಆದರೆ ಈಗ ಇರುವ ನ್ಯಾಯಾಧೀಶರು 32 ಅಂದ್ರೆ 2 ನ್ಯಾಯಾಧೀಶರ ಹುದ್ದೆಗಳು ಖಾಲಿಯಿವೆ.
ಇಂಥ ಸತ್ಯವೊಂದು ಸರ್ಕಾರಕ್ಕೆ ಗೊತ್ತಿರುವಾಗಲೂ, ನ್ಯಾಯಾಧೀಶರ ನೇಮಕ ವಿಚಾರದಲ್ಲಿ ಸರ್ಕಾರದ ವಿಳಂಬ ನೀತಿ ಏನನ್ನು ತೋರಿಸುತ್ತದೆ?. ಇದು ಸ್ಪಷ್ಟವಾಗಿ ಕೊಲಿಜಿಯಂ ಶಿಫಾರಸನ್ನು ಕಡೆಗಣಿಸುವ ರೀತಿಯೇ ಆಗಿದೆಯಲ್ಲವೆ ಎಂಬ ಅನುಮಾನ ಬಾರದೇ ಇರುವುದಿಲ್ಲ. ಸರ್ಕಾರ ಇದರಿಂದ ಸಾಧಿಸುವುದಾದರೂ ಏನು? ತನ್ನ ಪ್ರತಿಷ್ಠೆಯನ್ನು ಮೆರೆಯುವುದು ಮತ್ತು ತನಗೆ ಬೇಡದವರು ನ್ಯಾಯಾಧೀಶರಾಗದಂತೆ ತಡೆಯುವುದು ಅದರ ಉದ್ದೇಶವಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿಯೇ ಗೋಚರಿಸುತ್ತದೆ.
ಹೀಗೆ ನ್ಯಾಯಾಂಗದ ನೇಮಕಾತಿಯಲ್ಲಿ ಕೊಲಿಜಿಯಂನ್ನು ಮೀರಿ ತನ್ನ ಕೈವಾಡ ತೋರಿಸಬೇಕು, ಆ ಮೂಲಕ ನ್ಯಾಯಾಂಗವನ್ನು ಪೂರ್ತಿಯಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬ ಒಳ ಅಜೆಂಡಾವೊಂದು ಈ ಸರ್ಕಾರಕ್ಕಿದೆ ಎಂಬುದು ತೀರಾ ಗುಟ್ಟಾಗಿ ಉಳಿದಿಲ್ಲ, ಈಗಾಗಲೇ ಎಲ್ಲ ಸ್ವಾಯತ್ತ ಸಂಸ್ಥೆಗಳ ಹಲ್ಲು ಕಿತ್ತು, ಅವುಗಳನ್ನು ಕೆಲಸಕ್ಕೆ ಬಾರದ ಹಾಗೆ ಮಾಡಿ, ತನಗೆ ಬೇಕಾದಂತೆ ಅವುಗಳನ್ನು ಸರ್ಕಾರ ಬಳಸಿಕೊಳ್ಳುತ್ತಿರುವುದು ಗೊತ್ತೇ ಇರುವ ವಿಚಾರ.
ನ್ಯಾಯಾಂಗ ಮಾತ್ರವೇ ಕೆಲವು ಅಪವಾದಗಳ ಹೊರತಾಗಿಯೂ ಅಂಥ ಹುನ್ನಾರಕ್ಕೆ ಬಲಿಯಾಗದೆ ಇನ್ನೂ ದೃಢವಾಗಿದೆ. ಮತ್ತು ನ್ಯಾಯಾಂಗದ ಆ ದೃಢತೆ ಮಾತ್ರವೇ ಈ ದೇಶದ ಎದುರಿನ ಭರವಸೆಯಾಗಿದೆ. ಆದರೆ ಸರ್ಕಾರದ ನಡೆ, ನ್ಯಾಯಾಂಗದ ಅಂಥ ಸ್ವಾಯತ್ತತೆಗೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಲೇ ಇದೆಯೆಂಬುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.