ಖಾಸಗಿ ನಿರ್ವಾಹಕರ ಕೋಟಾ ರದ್ದುಗೊಳಿಸಿದ ಸೌದಿ ಅರೇಬಿಯಾ: ಶೇ. 80ರಷ್ಟು ಭಾರತೀಯ ಯಾತ್ರಾರ್ಥಿಗಳಿಗೆ ಹಜ್ ಯಾತ್ರೆ ತಪ್ಪುವ ಸಾಧ್ಯತೆ

PC: PTI
ಮುಂಬೈ: ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಈ ಬಾರಿಯ ಹಜ್ ಯಾತ್ರೆಗೆ ಸೀಟು ಕಾಯ್ದಿರಿಸಿದ್ದ ಸುಮಾರು 52,000 ಭಾರತೀಯರಿಗೆ ಭಾರಿ ಹಿನ್ನಡೆಯುಂಟಾಗಿದ್ದು, ಈಗಾಗಲೇ ಖಾಸಗಿ ಕೋಟಾದಡಿ ಮುಂಗಡ ಕಾಯ್ದಿರಿಸಿರುವವರ ಪೈಕಿ ಶೇ. 20ರಷ್ಟು ಯಾತ್ರಾರ್ಥಿಗಳ ಹಜ್ ಯಾತ್ರೆಯನ್ನು ಮಾತ್ರ ದೃಢಪಡಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹೊಸದಾಗಿ ಸುತ್ತೋಲೆ ಹೊರಡಿಸಿದೆ.
ಇದರನ್ವಯ ಸಂಯೋಜಿತ ಹಜ್ ಗುಂಪು ಸಂಘಟಕರ (CHGOs) ಅಡಿ ನೋಂದಾಯಿಸಿಕೊಂಡಿರುವ ಸುಮಾರು ಶೇ. 80ರಷ್ಟು ಯಾತ್ರಾರ್ಥಿಗಳು 2025ರ ಹಜ್ ಯಾತ್ರೆ ಕೈಗೊಳ್ಳಲಾಗದ ಪರಿಸ್ಥಿತಿ ಈಗ ಸೃಷ್ಟಿಯಾಗಿದೆ.
ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಯಾತ್ರಾರ್ಥಿಗಳ ಗುತ್ತಿಗೆ ಹಾಗೂ ಸೇವೆಗಳನ್ನು ಅಂತಿಮಗೊಳಿಸಲು ಕಡ್ಡಾಯವಾಗಿ ಬಳಸಬೇಕಾದ ನುಸುಕ್ ( Nusuk ) ಪೋರ್ಟಲ್ ಗೆ ಪ್ರವೇಶವನ್ನು ಸ್ಥಗಿತಗೊಳಿಸಿದ ನಂತರ, ಈ ಬೆಳವಣಿಗೆ ನಡೆದಿದೆ. ಪಾವತಿಗಳಲ್ಲಿನ ವಿಳಂಬ ಹಾಗೂ ಸೇವಾ ಒಪ್ಪಂದಗಳು ಅಂತಿಮಗೊಳ್ಳದ ಕಾರಣಕ್ಕೆ ಸಂಯೋಜಿತ ಹಜ್ ಗುಂಪು ಸಂಘಟನೆಗಳಿಗೆ (CHGOs) ಮಂಜೂರು ಮಾಡಲಾಗಿದ್ದ ಮಿನಾ ಝೋನ್ಸ್ 1 ಹಾಗೂ 2 ಅನ್ನು ಸೌದಿ ಅರೇಬಿಯಾದ ಪ್ರಾಧಿಕಾರಗಳು ರದ್ದುಗೊಳಿಸಿವೆ. ಉಳಿದ 3, 4, 5 ವಲಯಗಳನ್ನೂ ತಡೆ ಹಿಡಿದಿರುವುದರಿಂದ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಸುತ್ತೋಲೆಯ ಪ್ರಕಾರ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಈ ಲೋಪದ ಹೊಣೆಯನ್ನು ಖಾಸಗಿ ಪ್ರವಾಸ ನಿರ್ವಾಹಕರ ಮೇಲೆ ಹೊರಿಸಿದೆ. ಪ್ರತಿ ಸಂಯೋಜಿತ ಹಜ್ ಗುಂಪು ಸಂಘಟನೆಗಳು (CHGOs)
ಸ್ವತಂತ್ರವಾಗಿ ಸೇವಾ ಒಪ್ಪಂದಗಳನ್ನು ನುಸುಕ್ ಪೋರ್ಟಲ್ ನಲ್ಲಿ ಅಂತಿಮಗೊಳಿಸಬೇಕಿತ್ತು. ಆದರೆ, ಬಹುತೇಕರು ಸಕಾಲದಲ್ಲಿ ಗುತ್ತಿಗೆ ಒಪ್ಪಂದಗಳು ಅಥವಾ ಪಾವತಿ ಪ್ರಕ್ರಿಯೆಯನ್ನು ಅಪ್ಲೋಡ್ ಮಾಡುವಲ್ಲಿ ವಿಫಲಗೊಂಡಿದ್ದಾರೆ ಎಂದು ಅದು ಹೇಳಿದೆ. ಇದರ ಪರಿಣಾಮವಾಗಿ, ಸೌದಿ ಅರೇಬಿಯಾ ಪ್ರಾಧಿಕಾರಗಳು ಎಲ್ಲ ಬಗೆಯ ಪ್ರವೇಶಗಳನ್ನು ಹಿಂಪಡೆದಿದ್ದು, ಖಾಸಗಿ ಭಾರತೀಯ ಯಾತ್ರಾರ್ಥಿಗಳಿಗೆ ಮೀಸಲಾಗಿದ್ದ ಎಲ್ಲ ವಲಯಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ.
'ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಖಾಸಗಿ ಪ್ರವಾಸ ನಿರ್ವಾಹಕರೊಬ್ಬರು, “ಈ ಲೋಪವು ಸರಕಾರದ ಕಡೆಯಿಂದಾಗಿದೆ. ಕಳೆದ ವರ್ಷ , ಸೌದಿ ಪ್ರಾಧಿಕಾರಗಳು ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿದ್ದವು . ನೇರವಾಗಿ ನಿರ್ವಾಹಕರು ಪಾವತಿ ಮಾಡುವ ಬದಲು ಸರಕಾರಿ ಮಾರ್ಗದ ಮೂಲಕ ಪಾವತಿಯನ್ನು ಠೇವಣಿ ಇಡುವಂತೆ ಖಾಸಗಿ ನಿರ್ವಾಹಕರಿಗೆ ಸೂಚಿಸಿದ್ದವು. ಸರಕಾರವು ಈ ಮೊತ್ತವನ್ನು ಸೌದಿ ಪ್ರಾಧಿಕಾರಗಳಿಗೆ ಜಮೆ ಮಾಡಬೇಕಿತ್ತು” ಎಂದು ತಿಳಿಸಿದ್ದಾರೆ.
ಬಹುತೇಕ ನಿರ್ವಾಹಕರು ತಮ್ಮ ಪಾವತಿಯನ್ನು ಸರಕಾರಕ್ಕೆ ಜಮೆ ಮಾಡಿದ್ದರು. ಆದರೆ, ಕೆಲವರು ತಮ್ಮ ಪಾವತಿಯನ್ನು ಸರಿಯಾದ ಸಮಯದಲ್ಲಿ ಜಮೆ ಮಾಡುವಲ್ಲಿ ವಿಳಂಬ ಮಾಡಿಬಹುದು ಎಂದೂ ಅವರು ಹೇಳಿದ್ದಾರೆ.
2024ಕ್ಕೂ ಮುಂಚೆ, ಖಾಸಗಿ ನಿರ್ವಾಹಕರು ತಮ್ಮ ಖಾತೆಗಳಿಂದ ನೇರವಾಗಿ ಸೌದಿ ಪ್ರಾಧಿಕಾರಗಳಿಗೆ ತಮ್ಮ ಪಾವತಿಗಳನ್ನು ಜಮೆ ಮಾಡುತ್ತಿದ್ದರು ಎಂದೂ ಅವರು ತಿಳಿಸಿದ್ದಾರೆ.
“ಆದರೆ, ಸರಕಾರವು ಎಲ್ಲ ನಿರ್ವಾಹಕರ ಪಾವತಿಗಾಗಿ ಕಾಯುತ್ತಾ ಕೂತಿದ್ದರಿಂದ, ಪಾವತಿಯಲ್ಲಿ ವಿಳಂಬವಾಗಿದ್ದು, ಇದರಿಂದಾಗಿ ಸೌದಿ ಪ್ರಾಧಿಕಾರಗಳ ಪಾವತಿ ಮಾರ್ಗಗಳು ಬಂದ್ ಆಗಿವೆ. ಸರಕಾರದ ನಿರ್ಲಕ್ಷ್ಯದಿಂದಾಗಿ, ತಮ್ಮ ಪಾವತಿ ಪ್ರಕ್ರಿಯೆಗಳನ್ನು ಸರಿಯಾಗಿ ಮುಗಿಸಿದ್ದ ನಿರ್ವಾಹಕರನ್ನೊಳಗೊಂಡಂತೆ ಎಲ್ಲ ನಿರ್ವಾಹಕರೂ ತೊಂದರೆಗೀಡಾಗಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಮಿನಾ ಎಂದರೇನು? ಈ ನಿರ್ಧಾರವೇಕೆ ಮುಖ್ಯ?
‘ಶಿಬಿರ ನಗರ’ ಎಂದೇ ಕರೆಯಲ್ಪಡುವ ಮಿನಾ, ಹಜ್ ಯಾತ್ರಾರ್ಥಿಗಳ ಪಾಲಿಗೆ ಪ್ರಮುಖ ತಾಣವಾಗಿದೆ. ಯಾತ್ರಾರ್ಥಿಗಳು ತಮ್ಮ ಹಜ್ ಕ್ರಮಗಳನ್ನು ನೆರವೇರಿಸಲು ಇಲ್ಲಿ ಐದು ದಿನಗಳ ಕಾಲ ತಂಗುತ್ತಾರೆ.
ಶೈತಾನ್ ನನ್ನು ಪ್ರತಿನಿಧಿಸುವ ಸಾಂಕೇತಿಕ ಗೋಪುರವಾದ ಜಮಾರತ್ ಮೇಲೆ ನಡೆಸಲಾಗುವ ಕಲ್ಲು ತೂರಾಟದ ಸ್ಥಳದಿಂದ ಮಿನಾಕ್ಕಿರುವ ದೂರವನ್ನು ಆಧರಿಸಿ, ಈ ಶಿಬಿರ ನಗರವನ್ನು ಐದು ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಉತ್ತಮ ಯೋಜನೆ ಹಾಗೂ ಜನಜಂಗುಳಿಯ ನಿಯಂತ್ರಣಕ್ಕಾಗಿ ಸೌದಿ ಪ್ರಾಧಿಕಾರಗಳು ಈ ವಲಯಗಳನ್ನು ಮುಂಗಡವಾಗಿ ಮಂಜೂರು ಮಾಡುತ್ತವೆ. ಭಾರತೀಯ ಸಂಯೋಜಿತ ಹಜ್ ಗುಂಪು ಸಂಘಟನೆಗಳು ಈ ಮಂಜೂರಾದ ವಲಯಗಳನ್ನು ಆಧರಿಸಿ, ಶಿಬಿರಗಳನ್ನು ಕಾಯ್ದಿರಿಸುತ್ತವೆ ಹಾಗೂ ವ್ಯವಸ್ಥೆಗಳನ್ನು ಮಾಡುತ್ತವೆ. ಆದರೆ, ಜಮಾರತ್ ಗೆ ತೀರಾ ಸನಿಹವಿರುವ ಕಾರಣಕ್ಕೆ ಬಹು ಬೇಡಿಕೆಯ ವಲಯಗಳಾಗಿರುವ ವಲಯ 1 ಹಾಗೂ 2 ಅನ್ನು ದಿಢೀರ್ ಎಂದು ರದ್ದುಗೊಳಿಸಿದ್ದರಿಂದ ಹಾಗೂ ಉಳಿದ ವಲಯಗಳಿಗೆ ಮಾಡಬೇಕಿದ್ದ ಪಾವತಿಗಳೂ ನಿಲುಗಡೆಯಾಗಿದ್ದರಿಂದ, ಎಲ್ಲ ಹಾಲಿ ವ್ಯವಸ್ಥೆಗಳು ಬುಡಮೇಲಾಗಿವೆ.
ಈ ಗೊಂದಲಗಳ ಬೆನ್ನಿಗೇ, ಭಾರತದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಈ ವಿಷಯವನ್ನು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯದ ಉನ್ನತ ಮಟ್ಟದ ನಾಯಕತ್ವದೊಂದಿಗೆ ಚರ್ಚಿಸಿತ್ತು. ಇದರ ಪರಿಣಾಮವಾಗಿ, ಸೌದಿ ಪ್ರಾಧಿಕಾರಗಳು ನುಸುಕ್ ಪೋರ್ಟಲ್ ಅನ್ನು ತಾತ್ಕಾಲಿಕವಾಗಿ ತೆರೆಯಲು ಒಪ್ಪಿಕೊಂಡಿದ್ದವು. ಆದರೆ, ಕೇವಲ ಕಿರು ಅವಧಿ ಹಾಗೂ ಅನಿರ್ದಿಷ್ಟ ಗವಾಕ್ಷಿಗಳಲ್ಲಿ. ಈ ಕಿರು ಮರು ಪ್ರಾರಂಭವು ತಮ್ಮ ಸೇವಾ ಗುತ್ತಿಗೆ ಒಪ್ಪಂದಗಳನ್ನು ಅಪ್ಲೋಡ್ ಮಾಡಲು ಹಾಗೂ ವಾಸ್ತವ್ಯವನ್ನು ಅಂತಿಮಗೊಳಿಸಲು, ತಮ್ಮ ಯಾತ್ರಾರ್ಥಿಗಳ ಸಾರಿಗೆ ಹಾಗೂ ಸರಕು ವ್ಯವಸ್ಥೆಗಳನ್ನು ಏರ್ಪಡಿಸಲು ಸಂಯೋಜಿತ ಹಜ್ ಗುಂಪು ಸಂಘಟನೆಗಳಿಗೆ ಅವಕಾಶ ಒದಗಿಸಲಿದೆ.
ಆದರೆ, ಮಿನಾದಲ್ಲೀಗ ಸೀಮಿತ ವಲಯಗಳು ಹಾಗೂ ಶಿಬಿರಗಳು ಮಾತ್ರ ಲಭ್ಯವಿರುವುದರಿಂದ, ಮಂಜೂರಾತಿಯು ಆ ಕ್ಷಣದಲ್ಲೇ ಆಗಲಿದೆ ಹಾಗೂ ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದಲ್ಲಿ ನಡೆಯಲಿದೆ ಎಂದು ಸುತ್ತೋಲೆ ಎಚ್ಚರಿಸಿದೆ.
ಆದರೆ, ಎಷ್ಟು ಶಿಬಿರಗಳು ಅಥವಾ ವಲಯಗಳು ಲಭ್ಯವಾಗಲಿವೆ ಅಥವಾ ಅವರು ಯಾವ ವಲಯಗಳನ್ನು ಪ್ರವೇಶಿಸಲಿದ್ದಾರೆ ಎಂಬ ಕುರಿತು ಈವರೆಗೆ ಯಾವುದೇ ಸ್ಪಷ್ಟತೆ ಕಂಡು ಬಂದಿಲ್ಲ.
ಈ ಪ್ರಕ್ರಿಯೆಯನ್ನು ನಿರ್ವಹಿಸಲು ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಭಾರತೀಯ ಪ್ರಧಾನ ದೂತಾವಾಸದಲ್ಲಿ ಸಹಾಯ ವಾಣಿಯನ್ನು ಸ್ಥಾಪಿಸಲಾಗಿದೆ. ಎಲ್ಲ ಸಂಯೋಜಿತ ಹಜ್ ಗುಂಪು ಸಂಘಟನೆಗಳು ಅಥವಾ ಅವುಗಳ ಪ್ರತಿನಿಧಿಗಳಿಗೆ ನೇರವಾಗಿ ಸಹಾಯ ವಾಣಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದ್ದು, ಈ ವೇಳೆ, ತಮ್ಮ ಯಾತ್ರೆಯ ವಿವರಗಳು ಹಾಗೂ ಪಾಸ್ ಪೋರ್ಟ್ ಸಂಖ್ಯೆಗಳು, ಮಕ್ಕಾ ಹಾಗೂ ಮದೀನಾದಲ್ಲಿನ ವಾಸ್ತವ್ಯದ ಪುರಾವೆಗಳು ಹಾಗೂ ಪಾವತಿಯ ಸಾಕ್ಷಿಯನ್ನು ಒದಗಿಸುವಂತೆಯೂ ಅವರಿಗೆ ಸೂಚಿಸಲಾಗಿದೆ.
ಹೀಗಿದ್ದೂ, ಎಲ್ಲ ಸಂಯೋಜಿತ ಹಜ್ ಗುಂಪು ಸಂಘಟನೆಗಳು ಸಮಾನ ಹಾಗೂ ಸಾಕಷ್ಟು ಶಿಬಿರಗಳನ್ನು ಪಡೆಯುತ್ತವೆ ಎಂಬ ಬಗ್ಗೆ ಯಾವುದೇ ಖಾತರಿಯಿಲ್ಲ ಹಾಗೂ ಒಂದು ವೇಳೆ ಶಿಬಿರಗಳೇನಾದರೂ ಭರ್ತಿಯಾಗಿ ಹೋದರೆ, ಹಲವಾರು ಯಾತ್ರಾರ್ಥಿಗಳು ಮಿನಾದಲ್ಲಿ ಮೂಲಭೂತ ವಾಸ್ತವ್ಯದಿಂದಲೂ ವಂಚಿತರಾಗಲಿದ್ದಾರೆ. ಇದರಿಂದಾಗಿ, ಯಾತ್ರಾರ್ಥಿಗಳಿಗೆ ಕಡ್ಡಾಯ ಹಜ್ ಆಚರಣೆಗಳನ್ನು ನೆರವೇರಿಸುವುದು ಅಸಾಧ್ಯವಾಗಲಿದೆ.
ಮಂಜೂರಾತಿ ನೀತಿಯ ಪ್ರಕಟಣೆ
ನೂತನ ಮಾರ್ಗಸೂಚಿಗಳ ಪ್ರಕಾರ,
• ಆರಂಭದಲ್ಲಿ ಮುಂಗಡ ಕಾಯ್ದಿರಿಸುವಿಕೆ ಕೋಟಾದಲ್ಲಿ ಶೇ. 20ರಷ್ಟನ್ನು ಪ್ರತಿ ಸಂಯೋಜಿತ ಹಜ್ ಗುಂಪು ಸಂಘಟನೆಗಳಿಗೆ ಮಂಜೂರು ಮಾಡಲಾಗುತ್ತದೆ.
• ಉಳಿದ ಶಿಬಿರಗಳನ್ನು ಎಲ್ಲ ಸಂಯೋಜಿತ ಹಜ್ ಗುಂಪು ಸಂಘಟನೆಗಳ ನಡುವೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.
• ಒಂದು ವೇಳೆ ಶಿಬಿರಗಳೇನಾದರೂ ಇನ್ನೂ ಉಳಿದರೆ, ಅವನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ನೀತಿಯಡಿಯಲ್ಲಿ ಒದಗಿಸಲಾಗುತ್ತದೆ.
ಈ ಪ್ರಕ್ರಿಯೆಯನ್ನು ಜಿದ್ದಾದಲ್ಲಿನ ಭಾರತೀಯ ಪ್ರಧಾನ ದೂತಾವಾಸ ನಿರ್ವಹಿಸಲಿದ್ದು, ಸೌದಿ ಪೋರ್ಟಲ್ ಯಾವುದೇ ಸಮಯದಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಸಂಯೋಜಿತ ಹಜ್ ಗುಂಪು ಸಂಘಟನೆಗಳಿಗೆ ಸೂಚಿಸಲಾಗಿದೆ.
ಏನು ತಪ್ಪಾಯಿತು?
ಹಿರಿಯ ಅಧಿಕಾರಿಗಳ ಪ್ರಕಾರ, ಸಂಯೋಜಿತ ಹಜ್ ಗುಂಪು ಸಂಘಟನೆಗಳು ಪಾವತಿಯಲ್ಲಿ ವಿಳಂಬ ಮಾಡಿದ್ದರಿಂದಾಗಿ, ಸೌದಿ ಪ್ರಾಧಿಕಾರಗಳು ವಲಯ 1 ಹಾಗೂ 2 ಅನ್ನು ರದ್ದುಗೊಳಿಸಿವೆ. ಆದರೆ, ಈ ಕುರಿತು ಸಂಯೋಜಿತ ಹಜ್ ಗುಂಪು ಸಂಘಟನೆಗಳು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ನುಸುಕ್ ಪೋರ್ಟಲ್ ಗೆ ಸಂಪರ್ಕಿಸಲಾಗಿರುವ ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆ ಸಂಖ್ಯೆ (IBAN) ಸಕ್ರಿಯವಾಗಿಲ್ಲದೆ ಇರುವುದರಿಂದ, ನೇರವಾಗಿ ಪಾವತಿ ಮಾಡುವ ನಮ್ಮ ಸಾಮರ್ಥ್ಯಕ್ಕೆ ತೊಡಕುಂಟಾಗಿದೆ ಎಂಬುದು ಅವುಗಳ ಆರೋಪವಾಗಿದೆ.
ಈ ಸಮಸ್ಯೆಯಿಂದಾಗಿ, ಭಾರತೀಯ ಹಜ್ ಸಮಿತಿ ಮೂಲಕ ನಿಮ್ಮ ಪಾವತಿಗಳನ್ನು ಮಾಡುವಂತೆ ಸಂಯೋಜಿತ ಹಜ್ ಗುಂಪು ಸಂಘಟನೆಗಳಿಗೆ ಸೂಚಿಸಲಾಗಿತ್ತು. ನಂತರ, ಈ ಹಣವನ್ನು ಜಿದ್ದಾದಲ್ಲಿನ ಪ್ರಧಾನ ಭಾರತೀಯ ದೂತಾವಾಸಕ್ಕೆ ವರ್ಗಾವಣೆಗೊಳಿಸಿ, ಅಂತಿಮವಾಗಿ ಸಂಯೋಜಿತ ಹಜ್ ಗುಂಪು ಸಂಘಟನೆಗಳ ಖಾತೆಗೆ ಜಮೆ ಮಾಡಬೇಕಾಗಿತ್ತು. ಆದರೆ, ಈ ಕ್ರಮಗಳನ್ನೆಲ್ಲ ಅನುಸರಿಸಿದ ಹೊರತಾಗಿಯೂ, ನಮ್ಮ ಪಾವತಿಗಳು ಈ ವ್ಯವಸ್ಥೆಯಲ್ಲಿ ಪ್ರತಿಫಲನಗೊಂಡಿಲ್ಲ ಎಂದು ಹಲವು ಸಂಯೋಜಿತನ ಹಜ್ ಗುಂಪು ಸಂಘಟನೆಗಳು ಆರೋಪಿಸಿವೆ.
“ನಮ್ಮಲ್ಲಿ ಅನೇಕರು ಹಜ್ ಸಮಿತಿ ಅಥವಾ IBANಗೆ ಸಂಪರ್ಕಗೊಂಡಿರುವ ಖಾತೆಗಳಿಗೆ ನೇರವಾಗಿ ಪಾವತಿಸಿದ್ದೇವೆ. ಆದರೆ, ನಮ್ಮ ವಹಿವಾಟುಗಳು ಅಲ್ಲಿ ಕಂಡು ಬಂದಿಲ್ಲ. ಒಂದು ವೇಳೆ IBAN ಅನ್ನು ಸಕಾಲದಲ್ಲಿ ಸಕ್ರಿಯಗೊಳಿಸಿದ್ದರೆ, ಈ ಸಂಪೂರ್ಣ ಅವ್ಯವಸ್ಥೆಯನ್ನು ತಡೆಯಬಹುದಾಗಿತ್ತು” ಎಂದು ಸಂಯೋಜಿತ ಹಜ್ ಗುಂಪು ಸಂಘಟನೆಯೊಂದರ ಪ್ರತಿನಿಧಿ ತಿಳಿಸಿದ್ದಾರೆ.
ಇನ್ನೂ ಕೆಲವು ಸಂಯೋಜಿತ ಹಜ್ ಗುಂಪು ಸಂಘಟನೆಗಳು, ಜಿದ್ದಾದಲ್ಲಿನ ಪ್ರಧಾನ ಭಾರತೀಯ ದೂತಾವಾಸ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹಾಗೂ ಸೌದಿ ಪ್ರಾಧಿಕಾರಗಳ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದೂ ದೂಷಿಸಿವೆ.
ಆರ್ಥಿಕ ನಷ್ಟ ಹಾಗೂ ರದ್ದತಿಯ ಭೀತಿ:
ಈ ಸಮಸ್ಯೆಯಿಂದಾಗಿ, ಇದೀಗ ಖಾಸಗಿ ಹಜ್ ನಿರ್ವಾಹಕರು ಬೃಹತ್ ಆರ್ಥಿಕ ನಷ್ಟವಲ್ಲದೆ ವಿಶ್ವಾಸಸಾರ್ಹತೆಯ ಸಮಸ್ಯೆಗೂ ತುತ್ತಾಗಿದ್ದಾರೆ. ಅವರು ಈಗಾಗಲೇ ಯಾತ್ರಾರ್ಥಿಗಳನ್ನು ಕಾಯ್ದಿರಿಸಿದ್ದು, ಪ್ಯಾಕೇಜ್ ಗಳಿಗೆ ಬದ್ಧರಾಗಿದ್ದಾರೆ. ವಿಮಾನಗಳ ವ್ಯವಸ್ಥೆಗಳನ್ನೂ ಮಾಡಿದ್ದಾರೆ. ಈ ಸೇವೆಗಳಿಗಾಗಿ ಮುಂಗಡ ಹಣವನ್ನೂ ಪಾವತಿಸಿದ್ದಾರೆ. ಇದೀಗ ಮಿನಾದಲ್ಲಿ ವಲಯಗಳು ರದ್ದುಗೊಂಡಿರುವುದರಿಂದ ಹಾಗೂ ಗುತ್ತಿಗೆ ಒಪ್ಪಂದಗಳು ಅಂತಿಮಗೊಳ್ಳದೆ ಇರುವುದರಿಂದ, ಇಡೀ ಕಾರ್ಯಾಚರಣೆ ಬುಡಮೇಲಾಗುವ ಅಪಾಯಕ್ಕೆ ಸಿಲುಕಿದೆ.
ಇನ್ನೂ ಪ್ರಮುಖ ಸಂಗತಿಯೆಂದರೆ, ಈ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಹಜ್ ಯಾತ್ರೆ ಕೈಗೊಳ್ಳುವ ಆಯ್ಕೆ ಮಾಡಿಕೊಂಡಿದ್ದ ಸಾವಿರಾರು ಭಾರತೀಯ ಯಾತ್ರಾರ್ಥಿಗಳು 2025ರ ಯಾತ್ರೆಯಿಂದ ಸಂಪೂರ್ಣವಾಗಿ ವಂಚಿತರಾಗುವ ಅಪಾಯಕ್ಕೆ ಸಿಲುಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಓರ್ವ ನಿರ್ವಾಹಕರು, “ನಾವು ನಮ್ಮ ಯಾತ್ರಾರ್ಥಿಗಳಿಗೆ ಜಮಾರತ್ ಬಳಿ ಉತ್ಕೃಷ್ಟ ಸ್ಥಳಗಳನ್ನು ಒದಗಿಸುವ ಭರವಸೆ ನೀಡಿದ್ದೆವು. ಸರಕಾರವು ನಮಗಾಗಿ ಉತ್ತಮ ವಲಯಗಳನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಆದರೀಗ, ಎಲ್ಲ ಯೋಜನೆಗಳೂ ಬುಡಮೇಲಾಗಿವೆ. ನಮ್ಮ ವಿಶ್ವಾಸಾರ್ಹತೆ ಹಾಗೂ ನಂಬಿಕೆಯೀಗ ಪ್ರಶ್ನೆಗೊಳಗಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಬಹುತೇಕ ಯಾತ್ರಾರ್ಥಿಗಳು ತಮಗೆ ಬೇಕಾದ ಸೇವೆಗಳು ಹಾಗೂ ಮಿನಾದ ಪ್ರಮುಖ ವಲಯಗಳಿಗೆ ಮುಂಚಿತ ಪ್ರವೇಶ ಅವಕಾಶದ ಕಾರಣಕ್ಕೆ ಸಂಯೋಜಿತ ಹಜ್ ಗುಂಪು ಸಂಘಟನೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೀಗ, ಅವರೆಲ್ಲ ಪೂರ್ಣಪ್ರಮಾಣದ ಪಾವತಿ ಮಾಡಿದ್ದರೂ, ಈ ಬಾರಿಯ ಹಜ್ ಯಾತ್ರೆಯನ್ನು ಸಂಪೂರ್ಣವಾಗಿ ತಪ್ಪಿಸಿಕೊಳ್ಳುವ ಭೀತಿಗೊಳಗಾಗಿದ್ದಾರೆ.
“ಈ ಬೆಳವಣಿಗೆ ತುಂಬಾ ನೋವು ತಂದಿದೆ. ನಾವು ಪೂರ್ಣವಾಗಿ ಪಾವತಿ ಮಾಡಿ ದೃಢೀಕರಣವನ್ನೂ ಪಡೆದಿದ್ದೆವು. ಆದರೀಗ, ನಾವು ಹೋಗುವ ಸಾಧ್ಯತೆ ಕಡಿಮೆ ಎಂದು ತಿಳಿಸಲಾಗಿದೆ” ಎಂದು ಸಂಯೋಜಿತ ಹಜ್ ಗುಂಪು ಸಂಘಟನೆಯೊಂದರ ಮೂಲಕ ಹಜ್ ಯಾತ್ರೆಯನ್ನು ಕಾಯ್ದಿರಿಸಿದ್ದ ಮುಂಬೈ ಮೂಲದ ಯಾತ್ರಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. “ನಾವು ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಿದ್ಧಗೊಂಡಿದ್ದೆವು. ಈಗ ನಾವೇನು ಮಾಡುವುದು” ಎಂದೂ ಅವರು ಹತಾಶೆ ವ್ಯಕ್ತಪಡಿಸಿದ್ದಾರೆ.
ಹಜ್ ಡೈರಿಯ ಪ್ರಕಾರ, ಹಜ್ ಯಾತ್ರೆಗಳು ಜೂನ್ ತಿಂಗಳ ಮೊದಲ ವಾರ ನಿಗದಿಯಾಗಿದ್ದು, ಹಜ್ ಯಾತ್ರಾರ್ಥಿಗಳು ಮೇ ತಿಂಗಳ ಕೊನೆಯ ವಾರದಲ್ಲಿ ಸೌದಿ ಆರೇಬಿಯಾಗೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಸಮಯ ತುಂಬಾ ಕಡಿಮೆಯಿದೆ.
ಯಾತ್ರಾರ್ಥಿಗಳು ಹಾಗೂ ಸರಕಾರಕ್ಕೆ ಭಾರಿ ಅಧಿಕಾರ:
ಭಾರತವು 2025ರಲ್ಲಿ ಒಟ್ಟು 1.75 ಲಕ್ಷ ಯಾತ್ರಾರ್ಥಿಗಳ ಕೋಟಾವನ್ನು ನಿಗದಿಗೊಳಿಸಿದೆ. ಈ ಪೈಕಿ, 52,207 ಮಂದಿ ಯಾತ್ರಾರ್ಥಿಗಳು ಸಂಯೋಜಿತ ಹಜ್ ಗುಂಪು ಸಂಘಟನೆಗಳು ಮೂಲಕ ತೆರಳುವ ಆಯ್ಕೆ ಮಾಡಿಕೊಂಡಿದ್ದರೆ, ಉಳಿದ ಯಾತ್ರಾರ್ಥಿಗಳನ್ನು ಭಾರತೀಯ ಹಜ್ ಸಮಿತಿ ನಿರ್ವಹಿಸುತ್ತಿದೆ.
ಈ ಸಮಸ್ಯೆಯಿಂದಾಗಿ ಈ ವರ್ಷದ ಶೇ. 30ರಷ್ಟು ಭಾರತೀಯ ಹಜ್ ಅರ್ಜಿದಾರರ ಯಾತ್ರೆಯ ಯೋಜನೆಗಳು ಗಂಡಾಂತರಕ್ಕೆ ಸಿಲುಕಿವೆ. ಒಂದು ವೇಳೆ ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸದಿದ್ದರೆ, ಇಡೀ ಸಂಯೋಜಿತ ಹಜ್ ಗುಂಪು ಸಂಘಟನೆಗಳ ಕೋಟಾಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ, ಮುಸ್ಲಿಂ ಸಮುದಾಯ, ಖಾಸಗಿ ಪ್ರವಾಸ ನಿರ್ವಾಹಕರು ಹಾಗೂ ಭಾರತ ಸರಕಾರದ ವರ್ಚಸ್ಸಿಗೆ ಭಾರಿ ಹಾನಿಯಾಗಲಿದೆ.
ಇದು ಕೇವಲ ಸರಕು ಸಾಗಾಟಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ, ಈ ಧಾರ್ಮಿಕ ಪ್ರವಾಸಕ್ಕಾಗಿ ಉಳಿತಾಯ ಮಾಡಲು ಹಲವಾರು ವರ್ಷಗಳನ್ನು ಸವೆಸುವ ಸಾವಿರಾರು ಮುಸ್ಲಿಮರ ಜೀವಿತಾವಧಿ ಕನಸಿಗೆ ಸಂಬಂಧಿಸಿದ್ದಾಗಿದೆ.
ಉತ್ತಮ ಸಮನ್ವಯ ಹಾಗೂ ಉತ್ತರದಾಯಿತ್ವಕ್ಕೆ ಕರೆ:
ಜೆಡ್ಡಾದಲ್ಲಿನ ಭಾರತೀಯ ದೂತಾವಾಸ, ದಿಲ್ಲಿಯಲ್ಲಿನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹಾಗೂ ಸೌದಿ ಹಜ್ ಮ್ತು ಉಮ್ರಾ ಸಚಿವಾಲಯದ ನಡುವಿನ ಸಮನ್ವಯದ ಕೊರತೆಯ ಕುರಿತು ಹಲವಾರು ಸಂಯೋಜಿತ ಹಜ್ ಗುಂಪು ಸಂಘಟನೆಗಳು ಗಂಭೀರ ಕಳವಳ ವ್ಯಕ್ತಪಡಿಸಿವೆ. ಈ ವ್ಯವಸ್ಥೆಯು ತುಂಬಾ ಸಂಕೀರ್ಣ ಹಾಗೂ ಅಸಂಘಟಿತವಾಗಿದ್ದು, ಇಂತಹ ತಾಂತ್ರಿಕ ತೊಡಕುಗಳಿಂದ ಹಜ್ ಯಾತ್ರೆಯಂತಹ ಸೂಕ್ಷ್ಮ ವಿಷಯಗಳ ಮೇಲೆ ದುಷ್ಪರಿಣಾಮವುಂಟಾಗಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಅವರೀಗ ಭವಿಷ್ಯದ ಹಜ್ ವ್ಯವಸ್ಥೆಗಳಿಗಾಗಿ ಮಾಹಿತಿ ದೊರೆಯುವಂತಾಗಲು ಸರಳೀಕೃತ, ಪಾರದರ್ಶಕ ಹಾಗೂ ಸಮನ್ವಯದ ಪ್ರಕ್ರಿಯೆಗಳು ಜರುಗಬೇಕು ಹಾಗೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಎಲ್ಲ ಪ್ರಾಧಿಕಾರಗಳಿಂದ ಸ್ಪಷ್ಟ ಮಾಹಿತಿ ದೊರೆಯಬೇಕು ಆಗ್ರಹಿಸುತ್ತಿದ್ದಾರೆ.
ಹಜ್ ಯಾತ್ರೆಯ ಗಡುವು ಸಮೀಪಿಸುತ್ತಿದ್ದು, ಸಾವಿರಾರು ಭಾರತೀಯ ಯಾತ್ರಾರ್ಥಿಗಳು ಹಾಗೂ ಹತ್ತಾರು ಪ್ರವಾಸ ನಿರ್ವಾಹಕರು ಪವಿತ್ರ ಸ್ಥಳಕ್ಕೆ ತಲುಪಲು ತಾವು ಕೈಗೊಳ್ಳಲಿರುವ ಯಾತ್ರೆಯು ಪೂರ್ಣಗೊಳ್ಳಲು ನೆರವು ನೀಡುವಂತಹ ಯಾವುದಾದರೂ ಪವಾಡ ಜರುಗಲಿ ಎಂದು ಆತಂಕದಿಂದ ಎದುರು ನೋಡುತ್ತಿದ್ದಾರೆ. ಅವರಿಗೆ ಹಜ್ ಯಾತ್ರೆ ಕೈಗೊಳ್ಳುವ ಅವಕಾಶ ದೊರೆಯಲಿದೆಯೆ ಅಥವಾ ಅವರೆಲ್ಲ ತಮ್ಮ ತವರಿಗೆ ಭಾರ ಹೃದಯದೊಂದಿಗೆ ಮರಳಲಿದ್ದಾರೆಯೆ ಎಂಬುದನ್ನು ನಿರ್ಣಯಿಸುವಲ್ಲಿ ಮುಂದಿನ ಕೆಲವು ದಿನಗಳು ಬಹು ಮುಖ್ಯವಾಗಿವೆ.
ಈ ಮುನ್ನ ಮುಂಗಡ ಕಾಯ್ದಿರಿಸಿರುವ ಯಾತ್ರಾರ್ಥಿಗಳ ಪೈಕಿ ಐದನೆ ಒಂದರಷ್ಟು ಯಾತ್ರಾರ್ಥಿಗಳ ಮುಂಗಡ ಕಾಯ್ದಿರಿಸುವಿಕೆ ಮಾತ್ರ ದೃಢಪಟ್ಟಿದ್ದು, ಈ ವರ್ಷ ಅವರಿಗೆ ಮಾತ್ರ ಸಂಯೋಜಿತ ಹಜ್ ಗುಂಪು ಸಂಘಟನೆಗಳ ಕೋಟಾದಡಿ ಹಜ್ ಯಾತ್ರೆಯನ್ನು ಮುಂದುವರಿಸಲು ಅವಕಾಶ ದೊರೆಯಲಿದೆ ಎಂಬ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಸುತ್ತೋಲೆಯು ಖಾಸಗಿ ಹಜ್ ವಲಯದಲ್ಲಿ ಆಘಾತದ ತರಂಗಗಳನ್ನೆಬ್ಬಿಸಿದೆ.
ಸೌದಿ ಪ್ರಾಧಿಕಾರಗಳೊಂದಿಗೆ ಕೊನೆಯ ಕ್ಷಣದಲ್ಲಿ ಮಹತ್ವದ ಯಶಸ್ಸು ಲಭಿಸದೆ ಹೋದರೆ, 2025ರ ಹಜ್ ಯಾತ್ರೆಯ ಕನಸು ಕಟ್ಟಿದ್ದ, ಪ್ರಾರ್ಥಿಸಿದ್ದ ಸಾವಿರಾರು ಭಾರತೀಯ ಮುಸ್ಲಿಮರು ತವರಿನಲ್ಲೇ ಉಳಿಯಬೇಕಾಗಬಹುದು.