ತಂಬಾಕು ಸೇವನೆಯಿಂದ ಪ್ರತಿ ವರ್ಷ 80 ಲಕ್ಷ ಜನರ ಅಕಾಲಿಕ ಮರಣ
Photo: freepik
ದಾವಣಗೆರೆ, ಡಿ.22: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ತಂಬಾಕು ಬಳಸುವವರಲ್ಲಿ ತಂಬಾಕು ಅದರ ಅರ್ಧದಷ್ಟು ಬಳಕೆದಾರರನ್ನು ಕೊಲ್ಲುತ್ತದೆ ಅದೇ ರೀತಿ ಪ್ರತಿ ವರ್ಷ ವಿಶ್ವದಾದ್ಯಂತ 80 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ.
ಇದರಲ್ಲಿ 67 ಲಕ್ಷ ಜನರು ನೇರ ತಂಬಾಕು ಬಳಕೆ ಮಾಡುವುದರಿಂದ 13 ಲಕ್ಷ ಜನ ಪರೋಕ್ಷ ಧೂಮಪಾನದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 15 ಲಕ್ಷಕ್ಕೂ ಹೆಚ್ಚು ಜನ ತಂಬಾಕು ಸೇವನೆಯಿಂದ ಅಕಾಲಿಕ ಮರಣ ಹೊಂದುತ್ತಿದ್ದಾರೆ.
ತಂಬಾಕು ಸೇವನೆಯಿಂದಾಗಿ ವಿವಿಧ ಕಾಯಿಲೆಗಳಿಂದ ಶೇ.2 ರಷ್ಟು ಜನರು ಜಿಲ್ಲೆಯಲ್ಲಿ ಮೃತಪಡುತ್ತಿರುವುದು ಆರೋಗ್ಯ ಇಲಾಖೆಯ ವರದಿಗಳಿಂದ ತಿಳಿದು ಬಂದಿದೆ.
ಕರ್ನಾಟಕದಲ್ಲಿ ಶೇಕಡಾ 28 ರಷ್ಟು ಅಂದರೆ 2 ಕೋಟಿ ಜನರು ಯಾವುದಾದರೂ ಒಂದು ರೀತಿಯಲ್ಲಿ ತಂಬಾಕು ಸೇವನೆ ಮಾಡುತ್ತಿದ್ದಾರೆ.
ದಾವಣಗೆರೆ ಜಿಲ್ಲಾದ್ಯಂತ ಶೇ. 30.7 ರಷ್ಟು ಜನರು ಯಾವುದಾದರೂ ಒಂದು ರೀತಿಯ ತಂಬಾಕು ಬಳಸುತ್ತಿದ್ದಾರೆ, ಅದರಲ್ಲಿ ಶೇ. 39.6 ಗ್ರಾಮೀಣ ಪ್ರದೇಶದ ಪುರುಷರು ನಗರ ಪ್ರದೇಶಕ್ಕಿಂತ ಹೆಚ್ಚು ಬಳಸುತ್ತಿದ್ದಾರೆ. ಅದರ ಅರ್ಧದಷ್ಟು ಜನ ಸಾವನ್ನಪ್ಪುತ್ತಿದ್ದಾರೆ.
ಈ ತರಹದ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಪ್ರತಿ ಮನೆ-ಮನೆಗೂ ತೆರಳಿ ತಂಬಾಕು ಉತ್ಪನ್ನ ಬಳಸುವವರನ್ನು ಕಂಡುಹಿಡಿದು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಳೆದ 2022-23ನೇ ಸಾಲಿನಲ್ಲಿ 4,70,937 ತಪಾಸಣೆ ಕೈಗೊಂಡಿದ್ದು ಅದರಲ್ಲಿ 923 ಜನ ಬಾಯಿ ಕ್ಯಾನ್ಸರ್ನ ರೋಗಿಗಳನ್ನು ಗುರುತಿಸಲ್ಪಟ್ಟಿದ್ದು 119 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿರುತ್ತದೆ. ಅದೇ ರೀತಿ 2023-24 ನೇ ಸಾಲಿನಲ್ಲಿ 2,57,694 ಜನರ ತಪಾಸಣೆ ಕೈಗೊಂಡು 561 ಬಾಯಿ ಕ್ಯಾನ್ಸರ್ನ ರೋಗಿಗಳನ್ನು ಗುರುತಿಸಲ್ಪಟ್ಟಿದ್ದು 65 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕಳೆದ ಎರಡು ವರ್ಷಗಳಿಂದ ತಂಬಾಕು ದುಷ್ಪರಿಣಾಮಗಳ ಬಗ್ಗೆ 170 ಶಾಲೆ/ಕಾಲೇಜುಗಳಲ್ಲಿ 24,362 ಮಕ್ಕಳಿಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ವ್ಯಸನಿಗಳಿಗೆ 83 ಗುಂಪು ಚರ್ಚೆಗಳ ಮೂಲಕ 1,624 ಜನರಿಗೆ ಮಾಹಿತಿ ನೀಡಲಾಗಿದ್ದು, ವ್ಯಸನಿಗಳಿಗೆ ಸಿಜಿ ಆಸ್ಪತ್ರೆಯ ಕೊಠಡಿ ಸಂ: 5 218 ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವಿದ್ದು ಇದರಲ್ಲಿ ಆಪ್ತ ಸಮಾಲೋಚನೆ ಕೈಗೊಂಡು ಅವಶ್ಯಕತೆ ಇರುವವರಿಗೆ ಉಚಿತವಾಗಿ ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಫಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ದಾವಣಗೆರೆ ಜಿಲ್ಲೆಯಾದ್ಯಂತ ಇರುವ ಕೆಲವು ಸ್ವ-ಸಹಾಯ ಸಂಘ ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡು 1,680 ಸದಸ್ಯರುಗಳಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗಿದೆ.
ತಂಬಾಕು ಮಾನವನ ದೇಹದ ಪ್ರತಿ ಒಂದು ಅಂಗಾಂಗಕ್ಕೂ ಕಾಯಿಲೆ ತರುವಂತಹ ಪದಾರ್ಥವಾಗಿದೆ. ಉದಾ: ಕೂದಲು ಉದುರುವಿಕೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮ, ಸಿಒಪಿಡಿ, ಅತೀ ಬೇಗ ಕಣ್ಣಿನ ಪೊರೆ, ದಂತ ಕ್ಷಯ, ಬಾಯಿಯ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಕ್ಷಯ ರೋಗ, ಕಿಡ್ನಿ ಕ್ಯಾನ್ಸರ್, ಹೊಟ್ಟೆಯಲ್ಲಿ ಕ್ಯಾನ್ಸರ್, ನರ ದೌರ್ಬಲ್ಯ ಇನ್ನು ಮುಂತಾದ ದೀರ್ಘಕಾಲದ ಕಾಯಿಲೆಗಳು ಮಾನವನ ದೇಹವನ್ನು ನಾಶ ಮಾಡುತ್ತದೆ.
ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ಮಾನವನ ದೇಹದ ರಕ್ತನಾಳಗಳಲ್ಲಿ ಉಬ್ಬು-ತಗ್ಗುಗಳನ್ನು ಸೃಷ್ಠಿಸಿ ಹೃದಯಾಘಾತ, ಪಾರ್ಶ್ವವಾಯು ಹಾಗೂ ಗ್ಯಾಂಗ್ರೀನ್ ನಂತಹ ದೀರ್ಘಕಾಲದ ಕಾಯಿಲೆಗಳನ್ನ ಉಂಟುಮಾಡುತ್ತದೆ.
ಕಾಲ ಕಾಲಕ್ಕೆ ತಂಬಾಕು ನಿಯಂತ್ರಣ ಕೋಶದಿಂದ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಯಾರಿಗಾದರೂ ತಂಬಾಕು ಸೇವನೆಯ ತೊಂದರೆಗಳು ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ವ್ಯಸನದಿಂದ ದೂರವಾಗಲು ಸಿಜಿ ಆಸ್ಪತ್ರೆಯಲ್ಲಿ ಉಚಿತವಾಗಿ ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಫಿ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಸದ್ಬಳಕೆ ಮಾಡಿಕೊಳ್ಳಬೇಕು.
-ಡಾ.ರಾಘವನ್, ಜಿಲ್ಲಾ ಕಾರ್ಯಕ್ರಮ ಅಧಿಕಾರಿ, ತಂಬಾಕು ನಿಯಂತ್ರಣ ಕೋಶ
ದಾವಣಗೆರೆ
ತಂಬಾಕು ಸೇವನೆಯ ದುಷ್ಪರಿಣಾಮದಿಂದ ದಿನಕ್ಕೆ 20 ಜನರು ಚಿಕಿತ್ಸೆಗೆ ಬರುತ್ತಿದ್ದಾರೆ. ದೇಶದ ಭವಿಷ್ಯದ ಪ್ರಜೆಗಳಾದ ಯುವ ಜನರೇ ಹೆಚ್ಚಾಗಿ ಕಾಯಿಲೆಗೆ ತುತ್ತಾಗುತ್ತಿರುವುದು ನೋವಿನ ಸಂಗತಿ. ಆದ್ದರಿಂದ ಸರಕಾರ ತಂಬಾಕು ಸೇವನೆಗೆ ಕಡಿವಾಣ ಹಾಕಬೇಕು.
-ಡಾ.ರಾಜೇಶ್ವರಿ ಅಣ್ಣಗೇರಿ, ಓರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ, ಕಾಲೇಜ್ ಆಫ್ ಡೆಂಟಲ್ ಸೈನ್ಸ್ ದಾವಣಗೆರೆ