ರಾಜ್ಯದ ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ 821.70 ಕೋಟಿ ರೂ. ಬಾಕಿ
ಬೆಂಗಳೂರು: 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ 2023-24ನೇ ಸಾಲಿನ ಮೊದಲ ಕಂತಿನಲ್ಲಿ ಗ್ರಾಮ ಪಂಚಾಯತ್ ಸೇರಿದಂತೆ ರಾಜ್ಯದ ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಮೊತ್ತದ ಪೈಕಿ 821.70 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಮೊದಲ ಕಂತಿನಲ್ಲಿ ಬಾಕಿ ಉಳಿಸಿಕೊಂಡಿರುವ 821.70 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಬೇಕು ಎಂದು ಆರ್ಥಿಕ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಅವರು 2023ರ ಅಕ್ಟೋಬರ್ 31ರಂದು ಕೇಂದ್ರ ಸರಕಾರದ ಆರ್ಥಿಕ ಸಚಿವಾಲಯದ ನಿರ್ದೇಶಕ ಆಭಯ್ಕುಮಾರ್ ಅವರಿಗೆ ಪತ್ರ (FD
-28/ FCC/2020-31-10-2023) ಬರೆದಿದ್ದಾರೆ. ಈ ಪತ್ರದ ಪ್ರತಿಯು "the-file.in’ಗೆ ಲಭ್ಯವಾಗಿದೆ.
15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರ ಬೆನ್ನಲ್ಲೇ ಆರ್ಥಿಕ ಇಲಾಖೆಯ ಸರಕಾರದ ಕಾರ್ಯದರ್ಶಿ ಅವರು ಬರೆದಿರುವ ಪತ್ರವೂ ಮುನ್ನೆಲೆಗೆ ಬಂದಿದೆ.
ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಕಂತಿನಲ್ಲಿ ನಿರ್ಬಂಧಿತ ಅನುದಾನವೂ ಸೇರಿದಂತೆ ಒಟ್ಟಾರೆ 1,245 ಕೋಟಿ ರೂ. ಹಂಚಿಕೆ ಆಗಿತ್ತು. ನಿರ್ಬಂಧಿತ ಅನುದಾನವೆಂದು ಹಂಚಿಕೆಯಾಗಿದದ 747.00 ಕೋಟಿ ರೂ. ಹಂಚಿಕೆಯಾಗಿದ್ದರೂ 2023ರ ಅಕ್ಟೋಬರ್ ಅಂತ್ಯದವರೆಗೂ ಬಿಡಿಗಾಸೂ ಕೂಡ ಬಂದಿಲ್ಲ.
ಉಳಿದಂತೆ ಬೇಸಿಕ್ (ಯುನೈಟೆಡ್) ವಿಭಾಗದಲ್ಲಿ ಹಂಚಿಕೆಯಾಗಿದ್ದ 498 ಕೋಟಿ ರೂ.ನಲ್ಲಿ 423.30 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರವು ಸ್ವೀಕರಿಸಿದೆ. ಇದರಲ್ಲಿ ಕೇಂದ್ರ ಸರಕಾರವು ಇನ್ನೂ 74.70 ಕೋಟಿ ರೂ. ಸೇರಿದಂತೆ ಒಟ್ಠಾರೆ 821.70 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಆರ್ಥಿಕ ಇಲಾಖೆಯ ಸರಕಾರದ ಕಾರ್ಯದರ್ಶಿ ಅವರು ಬರೆದಿರುವ ಪತ್ರದಿಂದ ಗೊತ್ತಾಗಿದೆ.
15ನೇ ಹಣಕಾಸು ಆಯೋಗದ 2020-21ರ ಪ್ರಕಾರ ವಿಶೇಷ ಅನುದಾನವಾಗಿ 5,495 ಕೋಟಿ ರೂ. ಶಿಫಾರಸು ಮಾಡಲಾಗಿತ್ತು. 2021-22ರಲ್ಲಿ ಹಣಕಾಸು ಆಯೋಗ 6 ಸಾವಿರ ಕೋಟಿ ರೂ. ಅನ್ನು ಬೆಂಗಳೂರಿನ ನೀರಾವರಿ ಕಾಮಗಾರಿ ಮತ್ತು ಪೆರಿಫರಲ್ ರಸ್ತೆ ನಿರ್ಮಾಣಕ್ಕೆ ನೀಡಿತ್ತು.
14ನೇ ಹಣಕಾಸು ಆಯೋಗವು 2020-21ರಿಂದ 2025-26ನೇ ಸಾಲಿಗೆ ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಶೇ.4.71ರಷ್ಟು ನಿಗದಿ ಮಾಡುವಂತೆ ಶಿಫಾರಸು ಮಾಡಿದ್ದರೂ 15ನೇ ಹಣಕಾಸು ಆಯೋಗವು ಈ ಪ್ರಮಾಣವನ್ನು ಶೇ.3.647ಕ್ಕೆ ಇಳಿಸಿತ್ತು.
2021-22ರಿಂದ 2025-26 ರ ಐದು ವರ್ಷಗಳವರೆಗೆ 15ನೇ ಹಣಕಾಸು ಆಯೋಗವು ಶಿಫಾರಸು ನೀರು ಮತ್ತು ನೈರ್ಮಲ್ಯಕ್ಕಾಗಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು(ಆರ್ಎಲ್ಬಿಗಳು)/ ಪಂಚಾಯತ್ಗಳಿಗೆ 1,42,084 ಕೋಟಿ ರೂ.ಗಳನ್ನು ನಿಗದಿಪಡಿಸಿತ್ತು.
ರಾಜ್ಯದಲ್ಲಿರುವ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ಅನುದಾನದ ಪೈಕಿ ಶೇ.40ರಷ್ಟು ಅನುದಾನವು ಮೂಲ (ಅನಿರ್ಬಂಧಿತ )ಮತ್ತು ಶೇ.60ರಷ್ಟು ಅನುದಾನವು ನಿರ್ಬಂಧಿತ ಅನುದಾನವಾಗಿರುತ್ತದೆ. 15ನೇ ಹಣಕಾಸು ಆಯೋಗವು ರಾಜ್ಯ ಹಣಕಾಸು ಆಯೋಗದ ಅಂಗೀಕೃತ ಶಿಫಾರಸುಗಳ ಆಧಾರದ ಮೇಲೆ ಮೂಲ ಅನುದಾನ ಮತ್ತು ನಿರ್ಬಂಧಿತ ಅನುದಾನವನ್ನು ರಾಜ್ಯದ ಮೂರು ಹಂತದ ಪಂಚಾಯತ್ಗಳಿಗೆ ನೀಡಬೇಕು ಎಂದು ಶಿಫಾರಸು ಮಾಡಿದೆ.
ಇದರ ಪ್ರಕಾರ ರಾಜ್ಯದ ಜಿಲ್ಲಾ ಪಂಚಾಯತ್ಗಳಿಗೆ ಒಟ್ಟು ಅನುದಾನದ ಶೇ.5ರಷ್ಟು, ತಾಲೂಕು ಪಂಚಾಯತ್ಗಳಿಗೆ ಒಟ್ಟು ಅನುದಾನದ ಶೇ.10ರಷ್ಟು, ಗ್ರಾಮ ಪಂಚಾಯತ್ಗಳಿಗೆ ಒಟ್ಟು ಅನುದಾನದ ಶೇ.85ರಷ್ಟು ಅನುದಾನವನ್ನು ವಿಂಗಡಿಸಲಾಗಿದೆ....
ಮೂಲ ಅನುದಾನದ ಶೇ.40ರ ಹಂಚಿಕೆಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ಉತ್ಪಾದನೆ ಹೆಚ್ಚಳ, ಬಡತನ ನಿರ್ಮೂಲನೆ ಕಾರ್ಯಕ್ರಮ, ಪ್ರಾಥಮಿಕ ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದ ಮೂಲ ಸೌಕರ್ಯ ಅಭಿವೃದ್ಧಿ, ಆರೋಗ್ಯ ಇಲಾಖೆ, ಮೂಲಭೂತ ಸೌಕರ್ಯ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿಗಾಗಿ ಅನುದಾನವನ್ನು ವಿನಿಯೋಗಿಸಲಾಗುತ್ತದೆ. ಇದನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಿದೆ.
ನಿರ್ಬಂಧಿತ ಅನುದಾನದ ಶೇ.60ರಷ್ಟು ಹಂಚಿಕೆಯನ್ನು ಬಯಲು ಶೌಚ ಮುಕ್ತ ಸ್ಥಳೀಯ ಸಂಸ್ಥೆಯ ಸ್ಥಿತಿ, ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ, ಮಳೆ ನೀರು ಕೊಯ್ಲು, ನೀರಿನ ಮರುಬಳಕೆಗೆ ಉಪಯೋಗಿಸಿಕೊಳ್ಳಬಹುದು. 2023-24ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ಗಳಿಗೆ 12,450 ಲಕ್ಷ ರೂ., ತಾಲೂಕು ಪಂಚಾಯತ್ಗಳಿಗೆ 24,900 ಲಕ್ಷ ರೂ., ಗ್ರಾಮ ಪಂಚಾಯತ್ಗಳಿಗೆ 2,11,650 ಲಕ್ಷ ರೂ. ಅನುದಾನ ಹಂಚಿಕೆಯಾಗಿರುವುದು ತಿಳಿದು ಬಂದಿದೆ.