ಅಲೆಮಾರಿ ಸಮುದಾಯಗಳ ಆಯೋಗ ರಚನೆಯಾಗಲಿ
ಕರ್ನಾಟಕದಲ್ಲಿ ಬುಡಕಟ್ಟು ಸಮುದಾಯಗಳನ್ನು ಅಧಿಸೂಚಿತ (ಡಿಎನ್‌ಟಿ) ಅಲೆಮಾರಿ(ಎನ್‌ಟಿ) ಮತ್ತು ಅರೆ- ಅಲೆಮಾರಿ(ಎಸ್‌ಎನ್‌ಟಿ) ಎಂದು ೩ ಭಾಗಗಳಲ್ಲಿ ವರ್ಗೀಕರಿಸಲಾಗಿದೆ. ಅವುಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಲ್ಲಿಯೂ ಹಂಚಿಹೋಗಿವೆ. ರಾಜ್ಯ ಸರಕಾರವು ಪರಿಶಿಷ್ಟ ವರ್ಗದ ಅಲೆಮಾರಿ, ಅರೆ-ಅಲೆಮಾರಿಗಳನ್ನು ಹೊರತುಪಡಿಸಿ ೧೯೬೬ರಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ೪೬ ಅಲೆಮಾರಿ, ಅರೆ-ಅಲೆಮಾರಿ ಸಮುದಾಯಗಳನ್ನು ಅಧಿಸೂಚನೆ ಮೂಲಕ ಪಟ್ಟಿ ಮಾಡಿದೆ.ಅವುಗಳಲ್ಲಿ ಬಹುತೇಕ ಮೀಸಲಾತಿಗಾಗಿ ಹಾವನೂರು ವರದಿ ಆಧರಿತ ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿದ ಬುಡಕಟ್ಟುಗಳೆಂದು (ಬಿಟಿ) ವಿಂಗಡಣೆಗೊಂಡಿದ್ದವು. ಪ್ರಸಕ್ತ ಎಲ್ಲಾ ೪೬ ಅಲೆಮಾರಿ, ಅರೆ-ಅಲೆಮಾರಿ ಸಮುದಾಯಗಳು ಪ್ರವರ್ಗ-೧ರಲ್ಲಿ ಸ್ಥಾನ ಪಡೆದುಕೊಂಡಿವೆ. ೫೧ ಪರಿಶಿಷ್ಟ ಜಾತಿಗೆ ಸೇರಿದ ಅಲೆಮಾರಿ, ಅರೆ -ಅಲೆಮಾರಿ ಸಮುದಾಯಗಳಲ್ಲದೆ ಪರಿಶಿಷ್ಟ ಪಂಗಡಗಳಲ್ಲಿಯೂ ಅವು ೨೩ ಇವೆ. ಸರಕಾರವೇ ೨೦೧೫ರಲ್ಲಿ ಅಲೆಮಾರಿಗಳಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜಾತಿಗಳನ್ನೂ ಗುರುತಿಸಿದೆ.
ವಸಾಹತುಶಾಹಿ ವ್ಯವಸ್ಥೆಯಲ್ಲಿ ಕೆಲವು ಜಾತಿ ಸಮುದಾಯಗಳನ್ನು ಗುನ್ಹೆಗಾರಿ ಜನಾಂಗವೆಂದು ಪರಿಗಣಿಸಿ ೧೮೭೧ರಲ್ಲಿ ಕ್ರಿಮಿನಲ್ ಕಾಯ್ದೆಗೊಳಪಡಿಸಿ ಅವುಗಳನ್ನು ಜನಸಮುದಾಯದ ಮುಖ್ಯ ವಾಹಿನಿಯಿಂದ ಪ್ರತ್ಯೇಕಗೊಳಿಸಿ ಅಮಾನವೀಯವಾಗಿ ಕಾಣಲಾಗಿತ್ತು. ಅ ಜನಾಂಗಗಳಿಗೆ ಪ್ರತ್ಯೇಕವಾಗಿ ವಾಸಿಸುವುದು ಸೇರಿದಂತೆ, ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗಬೇಕಾದ ಕ್ರೂರ ವ್ಯವಸ್ತೆಯನ್ನೂ ಜಾರಿಗೊಳಿಸಲಾಗಿತ್ತು. ಸ್ವಾತಂತ್ರ್ಯದ ತರುವಾಯ ೧೯೪೯ರಲ್ಲಿ ಕ್ರಿಮಿನಲ್ ಕಾಯ್ದೆಯನ್ನು ರದ್ದುಗೊಳಿಸಿ ೧೯೫೨ರಲ್ಲಿ ಆ ಸಮುದಾಯಗಳನ್ನು ಅಧಿಸೂಚಿಸಿ ಅವನ್ನು ಕ್ರಿಮಿನಲ್ ಪಟ್ಟಿಯಿಂದ ಮುಕ್ತಗೊಳಿಸಲಾಯಿತು. ಸದ್ಯ ಅವನ್ನು ವಿಮುಕ್ತ ಬುಡಕಟ್ಟುಗಳೆಂದು ಹೆಸರಿಸಲಾಗಿದೆ.
ನಾಗರಿಕ ಸಮಾಜದಿಂದ ಬಹುದೂರ ಉಳಿದುಕೊಂಡು ಕಾನನ, ಗುಡ್ಡ-ಬೆಟ್ಟ, ದುರ್ಗಮ ಕಣಿವೆಗಳ ಪ್ರದೇಶಗಳಲ್ಲಿ ಜೀವನ ಸಾಗಿಸುವವರಿಗೆ ಆದಿವಾಸಿಗಳು ಇಲ್ಲವೇ ಅಲೆಮಾರಿಗಳೆಂದು ಕರೆಯುತ್ತಾರೆ. ಪ್ರಪಂಚದ ಎಲ್ಲೆಡೆಗಳಲ್ಲಿಯೂ ಇಂತಹ ಲಕ್ಷಾಂತರ ಅಲೆಮಾರಿಗಳು ತಮ್ಮ ಅಲೆದಾಡುವಿಕೆಯ ಜೀವನವನ್ನು ಸವೆಸುತ್ತಾರೆ. ಆಹಾರ ಅರಸುವಿಕೆಯೇ ಅಲೆಮಾರಿಗಳ ಅಲೆದಾಟಕ್ಕೆ ಇರುವ ಪ್ರಮುಖ ಕಾರಣ. ಇವರಿಗೆ ಅವರದೇ ಆದ ಪ್ರಮುಖ ವಿಶಿಷ್ಟ ಲಕ್ಷಣಗಳಿವೆ. ಅವುಗಳೆಂದರೆ-ಒಂದು ನಿರ್ದಿಷ್ಟ ಸಾಮಾನ್ಯ ಭೌಗೋಳಿಕ ನೆಲೆ, ಸಾಮಾನ್ಯ ಭಾಷೆ, ಏಕ ಪ್ರಕಾರವಾದ ಪೂಜಾ ಪದ್ಧತಿ, ಏಕರೂಪವಾದ ಸಂಸ್ಕೃತಿ, ಒಂದು ಸಾಮಾನ್ಯ ಹೆಸರು, ಭೌಗೋಳಿಕ ನೆಲೆ ಇತ್ಯಾದಿ. ಇವರು ಸ್ಥಿರ ನೆಲ-ನೆಲೆ ಇಲ್ಲದವರು.
ಈ ಮೂರು ವರ್ಗಗಳಲ್ಲಿರುವ ಅಲೆಮಾರಿ, ಅರೆ-ಅಲೆಮಾರಿ ಸಮುದಾಯಗಳಿಗೆ ಸೇರಿರುವ ಜಾತಿಗಳಿಗೆ ಸಂಬಂಧಿಸಿದಂತೆ ಅವುಗಳ ಉಪಜಾತಿಗಳನ್ನು, ಸಾಕಷ್ಟು ಶಾಸ್ತ್ರೀಯ ಅಧ್ಯಯನದ ಕೊರತೆಯೋ ಅಥವಾ ಆಧಿಪತ್ಯದ ಉಡಾಫೆ ಮನೋಭಾವವೋ ಏನೋ ಜಾತಿಗಳೊಡನೆ ಸಮನ್ವಯತೆ ಇರದಿರುವುದರಿಂದ, ಜಾತಿ-ಉಪಜಾತಿಗಳು ಚಲ್ಲಾಪಿಲ್ಲಿಗೊಂಡಿವೆ. ಇಂಥ ಪ್ರಕರಣಗಳಿಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ೧. ಬುಡ್ಗ ಜಂಗಮ /ಬೇಡ ಜಂಗಮ, ಇದು ಪರಿಶಿಷ್ಟ ಜಾತಿಗೆ ಸೇರಿದ್ದರೂ, ಸಮಾನಾರ್ಥಕ ಹೆಸರುಗಳಾದ ಹಗಲು ವೇಷದವರು, ಜಂಗಾಲ, ಕುರು ಕುರುಮಾಮ ಇವುಗಳು ಬುಡ್ಗ ಜಂಗಮದ ಜಾತಿಗಳೆಂದು ಪರಿಗಣಿಸಿಲ್ಲ. ಅದೇ ರೀತಿ ಇನ್ನಷ್ಟು ಉದಾಹರಣೆಗಳು ಹೀಗಿವೆ-
ಪರಿಶಿಷ್ಟ ಜಾತಿ: ೧.ಚನ್ನ ದಾಸರ್/ಹೊಲೆಯ ದಾಸರ್ ,ದಾಸರು, ದಾಸ, ದೊಂಬಿ ದಾಸ, ದಂಡಿಗೆ ದಾಸ, ಶಂಖದಾಸ, ಚಕ್ರ ವಾದ್ಯ ದಾಸರ್ ಇತ್ಯಾದಿ.. ೨. ಹಂದಿ ಜೋಗಿಸ್-ಹಂದಿ ಗೊಲ್ಲ, ಹಂದಿ ಚಿಕ್ಕ ಇತ್ಯಾದಿ..೩.ಕೊರಚ, ಕೊರಚರ್ ಕೊರಮ, ಕೊರಚ ಶೆಟ್ಟಿ, ಕುಳುವ, ಎರಕುಲ, ಯರಕುಲ, ದೊಂಗ ಎರಕುಲ ಇತ್ಯಾದಿ.. ೪. ಸಿಳ್ಳೆಕ್ಯಾತಾಸ್-ಕಿಲ್ಲೆಕ್ಯಾತಾಸ್, ಕಿಲ್ಲಿಕ್ಯಾತ, ಕಟುಬ, ಗೊಂಬೆ ರಾಮ, ತೊಗಲು ಗೊಂಬೆಯವರು ಇತ್ಯಾದಿ..೫. ಸಿಂದೊಳ್ಳು, ಚಿಂದೊಳ್ಳು-ದುರ್ಗಾಮುರುಗಿ, ಬುರ್ ಬುರ್ ಚಾ, ಪೋತರಾಜ, ಊರ್ ಮಾರಿ ಇತ್ಯಾದಿ..
ಪರಿಶಿಷ್ಟ ಪಂಗಡದಲ್ಲಿಯೂ ಸಹ ಅಸಮಾನತೆ ಅಥವಾ ಏರುಪೇರು ಗಳಿವೆ. ೧.ಚೆಂಚು, ಚೆಂಚುವರ್ ಎಂಬ ಜಾತಿಗೆ ಅಡವಿಚೆಂಚು, ಚೆಂಚರು ಉಪಜಾತಿ ಅಥವಾ ಸಮಾನಾರ್ಥಕ ಜಾತಿಯಾಗಿ ಸೇರಬೇಕಾಗಿದೆ. ಆದರೆ ಇವೆರಡನ್ನೂ ಪ್ರತ್ಯೇಕಿಸಲಾಗಿದೆ. ೨. ಡುಂಗ್ರಿ ಗರಾಸಿಯ ಜಾತಿಗೆ ಗರಾಸಿಯ ಉಪ ಜಾತಿಯಾಗಿ ಸೇರಬೇಕು. ಅದು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿಯೇ ಇಲ್ಲ. ೩.ಹಕ್ಕಿಪಿಕ್ಕಿ, ನೀರ್ ಶಿಕಾರಿ, ಹರಿಣಿ ಶಿಕಾರಿ, ವಾಗ್ರಿ, ಚಿಗರಿ ಬೇಟೆಗಾರ, ಫರ್ದಿ ಇವುಗಳೆಲ್ಲ ಸಮಾನ ಅಂಶ ಮತ್ತು ಸಮಾನ ಕಸುಬುಗಳನ್ನು ಹೊಂದಿರುವ ಜಾತಿಗಳು, ಆದರೆ ವಾಗ್ರಿ ಹಿಂದುಳಿದ ವರ್ಗಗಳಲ್ಲಿ ಸೇರಿಹೋಗಿದೆ.
ಹಿಂದುಳಿದ ವರ್ಗಗಳಲ್ಲಿಯೂ ಕೂಡ ಇದೇ ಅಂಶಗಳನ್ನು ಕಾಣಬಹುದು. ೧. ಅಘೋರಿ, ಕರಕರ ಮುಂಡ ಇವುಗಳ ಜೊತೆಯಲ್ಲಿ ಮೊಂಡರು ಎಂಬೊಂದು ಜಾತಿ ಇರಬೇಕು. ಬುಡುಬುಡುಕಿ, ಬಾಗಡಿ, ಗೋಂದಳಿ, ಜೋಶಿ, ಚಿತ್ರಕಥಾ ಜೋಶಿ, ಗೊಂದಲಿಗ ಬೇರೆ ಬೇರೆಯೇ ಇವೆ. ಅಡವಿಗೊಲ್ಲ, ಪೆದ್ದಟ್ಟಿಗೊಲ್ಲ, ಚಿನ್ನಟ್ಟಿಗೊಲ್ಲ ಇವು ಗೊಲ್ಲ ಸಮುದಾಯದ ಸಮಾನ ಹೆಸರುಗಳಾದರೂ ಪಟ್ಟಿಯಲ್ಲಿ ಸೇರಿಲ್ಲ. ಇಂಥವೇ ಇನ್ನಷ್ಟು ಉದಾಹರಣೆಗಳನ್ನು ನೋಡಬಹುದು.
ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ೨೦೦೫ರಲ್ಲಿ ಅಧಿಸೂಚಿತ ಅಲೆಮಾರಿ ಮತ್ತು ಅರೆ -ಅಲೆಮಾರಿ ಬುಡಕಟ್ಟುಗಳಿಗಾಗಿ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಿ ಅದರ ಅಧ್ಯಕ್ಷರನ್ನಾಗಿ ಬಾಲಕೃಷ್ಣ ಸಿದ್ದರಾಮ್ ರೆಂಕೆ ಅವರನ್ನು ನೇಮಿಸಿತ್ತು. ಆಯೋಗವು ಮೀಸಲಾತಿ ಸೇರಿದಂತೆ ಹಲವಾರು ಶಿಫಾರಸುಗಳನ್ನು ಮಾಡಿತ್ತು. ತದನಂತರ ೨೦೧೫ರಲ್ಲಿ ಬಿಕು ರಾಮ್ ಜಿ ಇಡಾಟೆ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ಪುನರ್ ರಚಿಸಲಾಗಿದೆ ಎಂಬುದು ಉಲ್ಲೇಖನಿಯ.
ಕೇಂದ್ರ ಸರಕಾರ, ಸದ್ಯ ದೇಶದ ಅತಿ ಹಿಂದುಳಿದ ನಾಗರಿಕರ ಕಲ್ಯಾಣಕ್ಕೆ ಹಾಗೂ ನೆರವಿಗೆ ಧಾವಿಸಲು ಬದ್ಧ ಎಂದು ಹೇಳಿಕೊಂಡಿದೆ. ದೇಶದ ಅತ್ಯಂತ ಹಿಂದುಳಿದ ಸಮುದಾಯಗಳೆಂದರೆ ಅಧಿಸೂಚಿತ, ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳು. ಈ ಸಮುದಾಯಗಳನ್ನು ತಲುಪುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಅವು ನಾಗರಿಕ ಸಮಾಜದಿಂದ ಹೊರಗೆ ಉಳಿದು ಬಿಡುತ್ತವೆ. ಇವುಗಳು ದೇಶಾದ್ಯಂತ ಹರಡಿಕೊಂಡಿದ್ದು, ಅವುಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯಗಳಿವೆ. ಹಾಗೆಯೇ ಇದ್ಯಾವುದರ ವ್ಯಾಪ್ತಿಗೂ ಸೇರದವುಗಳು ಕೂಡಾ ಇವೆ ಎಂಬುದೇ ಸೋಜಿಗ.
ಈ ಕಾರಣಕ್ಕಾಗಿ ಅಧಿಸೂಚಿತ, ಅಲೆಮಾರಿ ಮತ್ತು ಅಲೆ- ಅಲೆಮಾರಿ ಸಮುದಾಯಗಳನ್ನು ಮತ್ತು ಅಧಿಕೃತವಾಗಿ ವರ್ಗೀಕರಿಸಲಾಗದವರನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ನೀತಿ ಆಯೋಗದ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದ ಪ್ರಯುಕ್ತ ಜುಲೈ, ೨೦೧೪ರಲ್ಲಿ ಅಧಿಸೂಚಿತ, ಅಲೆಮಾರಿ ಮತ್ತು ಅರೆ-ಅಲೆಮಾರಿ ಬಡಕಟ್ಟು ಸಮುದಾಯ ಕುರಿತು ರಾಷ್ಟ್ರೀಯ ಆಯೋಗವನ್ನು ಮೂರು ವರ್ಷಗಳ ಅವಧಿಗೆ ರಚಿಸಿಲಾಯಿತು. ರಾಜ್ಯ ಅಥವಾ ಕೇಂದ್ರ ಸರಕಾರಗಳು ಗುರುತಿಸಿರುವ ಅಧಿಸೂಚಿತ, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಪರಿಶೀಲಿಸಿ ರಾಜ್ಯವಾರು ಪಟ್ಟಿಯನ್ನು ಸಿದ್ಧಪಡಿಸುವ ಕೆಲಸ ಆಯೋಗಕ್ಕೆ ವಹಿಸಲಾಗಿತ್ತು. ಆಯೋಗ ೨೦೧೫ರ ಜನವರಿ ೯ರಂದು ತನ್ನ ಕೆಲಸ ಆರಂಭಿಸಿ ೨೦೧೮ರ ಜನವರಿ ೮ರಂದು ವರದಿಯನ್ನು ಸಲ್ಲಿಸಿತು.
ಆಯೋಗವು, ಈ ಸಮುದಾಯಗಳಿಗೆ ಒಂದು ಶಾಶ್ವತ ಆಯೋಗ ಸ್ಥಾಪನೆಗೆ ಶಿಫಾರಸು ಮಾಡಿತ್ತು. ಜೊತೆಗೆ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದೆಸೆಯಲ್ಲಿ ಒಂದು ಮಂಡಳಿಯನ್ನು ರಚಿಸಲು ಉದ್ದೇಶಿಸಲಾಗಿತ್ತು. ಶಾಶ್ವತ ಆಯೋಗವು ಈ ಸಮುದಾಯಗಳ ಜನರ ಅಹವಾಲುಗಳನ್ನು ಮತ್ತು ಕುಂದು ಕೊರತೆಗಳನ್ನು ಆಲಿಸುವುದೇ ಅಲ್ಲದೆ ಅಗತ್ಯ ಕ್ರಮಗಳನ್ನು ಜಾರಿಗೆ ತರಲು ರಾಜ್ಯ ಮತ್ತು ಕೇಂದ್ರ ಸರಕಾರಗಳೊಂದಿಗೆ ಸಮನ್ವಯ ಸಾಧಿಸಿ, ಈ ಸಮುದಾಯಗಳನ್ನು ಒಳಗೊಂಡಿರುವ ಸಂಪೂರ್ಣ ಜಾತಿ ಆಧಾರಿತ ಜನಗಣತಿಯನ್ನು ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದೆ.
ಕೇಂದ್ರ ಸರಕಾರದ ಮಾದರಿಯಲ್ಲಿಯೇ, ರಾಜ್ಯದಲ್ಲೂ, ಒಂದು ಆಯೋಗವನ್ನು ರಚಿಸಲು ಕೆಲವು ಸಂಘಟನೆಗಳು ರಾಜ್ಯ ಸರಕಾರವನ್ನು ಕೋರಿವೆ. ಸಂಘಟನೆಗಳ ಉದ್ದೇಶ ಸ್ಪಷ್ಟವಿದೆ. ಅತಿ ಮುಖ್ಯವಾಗಿ ಅಲೆಮಾರಿ ಸಮುದಾಯಗಳಲ್ಲಿರುವ ವೈಪರಿತ್ಯವನ್ನು ಕೊನೆಗಾಣಿಸುವುದು, ಸಮೀಕ್ಷೆ ಮೂಲಕ ಜಾತಿ ಆಧಾರಿತ ಜನಗಣತಿಯನ್ನು ಕೈಗೊಳ್ಳುವುದು, ಆ ಮೂಲಕ ಬಂದಂತಹ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ರಾಜಕೀಯ ಮುಖ್ಯವಾಹಿನಿಯಲ್ಲಿ ಅವರು ಭಾಗವಹಿಸಲು ಅವಕಾಶ ಕಲ್ಪಿಸಿಕೊಡುವುದು, ಅವರಿಗೆ ಸಲ್ಲಬೇಕಾದ ಸಂವಿಧಾನದ ಆಶಯಗಳನ್ನು ಜಾರಿಗೆ ತರುವುದು, ಅವರಿಗೆ ಅಂಟಿರುವ ಕಳಂಕವನ್ನು ತೊಡೆದು ಹಾಕುವುದಲ್ಲದೆ ಅವರಿಗಾಗುತ್ತಿರುವ ದೌರ್ಜನ್ಯದಿಂದ ಮುಕ್ತಗೊಳಿಸುವುದು, ಉಭಯ ಸರಕಾರಗಳ ಸೌಲಭ್ಯ-ಸವಲತ್ತುಗಳನ್ನು ನೇರವಾಗಿ ಅವರಿಗೆ ತಲುಪುವಂತೆ ಮಾಡುವುದು, ಇವೇ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಸುಗಮವಾಗಿ ಕಾರ್ಯರೂಪಕ್ಕೆ ತರುವಲ್ಲಿ ಸರಕಾರದ ಹೊಣೆಗಾರಿಕೆ ಇದೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿದಾರರೊಡನೆ ಮನ ಬಿಚ್ಚಿ ಮಾತನಾಡುತ್ತಾ, ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಮೊದಲಿಗೆ ಒಂದಿಬ್ಬರು ಮಾನವ ಶಾಸ್ತ್ರಜ್ಞರೊಡನೆ ಚರ್ಚಿಸುವುದು ಒಳಿತು. ಶಾಶ್ವತ ಆಯೋಗ ರಚಿಸುವಲ್ಲಿ ವಿಳಂಬವಾಗುವ ಸಂಭವ ಇದೆ. ಯಾಕೆಂದರೆ ಅದಕ್ಕಾಗಿಯೇ ಒಂದು ಪ್ರತ್ಯೇಕ ಕಾಯ್ದೆಯನ್ನು ರೂಪಿಸಬೇಕಾಗಿರುತ್ತದೆ. ತಕ್ಷಣಕ್ಕೆ ಕೇಂದ್ರ ವಿಚಾರಣಾ ಆಯೋಗದ ಕಾಯ್ದೆ (ಸೆಕ್ಷನ್ ೩) ಪ್ರಕಾರ, ಅಲೆಮಾರಿಗಳೊಡನೆ ಒಡನಾಟ ಇಟ್ಟುಕೊಂಡು, ಅವರ ಕುರಿತು ಸಾಕಷ್ಟು ಅಧ್ಯಯನ ಕಾರ್ಯ ಕೈಗೊಂಡಿರುವ ಪರಿಣಿತರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಬೇರೆ ಬೇರೆ ಬುಡಕಟ್ಟುಗಳಿಗೆ ಸೇರಿದ ೪ ಅಥವಾ ೫ ಮಂದಿ ಸದಸ್ಯರನ್ನು ಒಳಗೊಂಡ ಆಯೋಗವನ್ನು, ಪರಿಶೀಲನಾಂಶಗಳನ್ನು ನೀಡುವುದರ ಮೂಲಕ ರಚಿಸಲು ಸರಕಾರ ತುರ್ತು ಕ್ರಮ ಕೈಗೊಳ್ಳುವ ಅವಶ್ಯಕತೆ ಖಂಡಿತ ಇದೆ.
ಅಲೆಮಾರಿಗಳ ಕುರಿತು ವಿಶೇಷ ಅಕ್ಕರೆಯನ್ನು ಹೊಂದಿರುವ ಮುಖ್ಯಮಂತ್ರಿಗಳು, ತಮ್ಮ ಮೊದಲನೇ ಅವಧಿಯಲ್ಲಿ ಸಾಕಷ್ಟು ಅನುದಾನ ನೀಡಿ ಅವರ ಪುರೋಭಿವೃದ್ದಿಗೆ ಕಾರಣರಾಗಿದ್ದರು. ತತ್ಫಲವಾಗಿ ಅಲೆಮಾರಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿರುವ ಮುಖ್ಯಮಂತ್ರಿಗಳು ಅವರ ಕೋರಿಕೆಯನ್ನು ಈಡೇರಿಸುವರು ಎಂಬ ಮಹದಾಸೆಯನ್ನು ಅಲೆಮಾರಿಗಳು ಇಟ್ಟುಕೊಂಡಿದ್ದಾರೆ. ಕೋರಿಕೆ ವರ್ತಮಾನದ ತುರ್ತಾಗಿ ಕಾರ್ಯರೂಪಕ್ಕೆ ಬಂದಲ್ಲಿ ಮುಖ್ಯಮಂತ್ರಿಗಳನ್ನು ಅಲೆಮಾರಿಗಳೆಲ್ಲರೂ ಕೃತಜ್ಞತಾ ಭಾವದಿಂದ ಅನವರತ ಸ್ಮರಣೆ ಮಾಡುವಂತಾಗುತ್ತದೆ.