40 ದೇಶಗಳ 1,500ಕ್ಕೂ ಅಧಿಕ ಹಣ್ಣುಗಳ ಗಿಡಗಳನ್ನು ಬೆಳೆದ ಕೃಷಿಕ
ದ.ಕ. ಜಿಲ್ಲೆಯ ಕೃಷಿ ಇತಿಹಾಸದಲ್ಲೇ ದಾಖಲೆ ►ಜಗತ್ತಿನಾದ್ಯಂತ ಸಂಚರಿಸಿ ಹಣ್ಣುಗಳ ಗಿಡಗಳನ್ನು ಸಂಗ್ರಹಿಸುವ ಅನಿಲ್ ಬಳಂಜ
ಮಂಗಳೂರು: ಒಂದೇ ಬಗೆಯ ಬೆಳೆಯನ್ನು ಬೆಳೆಯಲು ಕಷ್ಟಪಡುತ್ತಿರುವ ಕೃಷಿಕರ ಮಧ್ಯೆ 40 ದೇಶಗಳ 1,500ಕ್ಕೂ ಮಿಕ್ಕಿ ವಿದೇಶಿ ಹಣ್ಣುಗಳ ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ ದ.ಕ. ಜಿಲ್ಲೆಯ ಬೆಳ್ತಂಡಿಯ ತಾಲೂಕಿನ ಕೃಷಿಕರೊಬ್ಬರು.
ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಅನಿಲ್ ಬಳಂಜ ಈ ಸಾಧನೆ ಮಾಡಿದ ಪ್ರಗತಿಪರ ಕೃಷಿಕ. ಪಿಯುಸಿ ಓದಿರುವ ಅವರು ಕಳೆದ ಎರಡು ದಶಕಗಳಿಂದ ವಿದೇಶಿ ಮತ್ತು ಉಷ್ಣವಲಯದ ಹಣ್ಣುಗಳ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದ.ಕ. ಜಿಲ್ಲೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದ ಹಣ್ಣುಗಳನ್ನು ಬೆಳೆಯುತ್ತಿರುವ ಪ್ರಥಮ ಕೃಷಿಕ ಅನಿಲ್ ಅನ್ನಬಹುದು.
ಅನಿಲ್ ಬಳಂಜ ತಮ್ಮ 43 ಎಕರೆ ಕೃಷಿ ತೋಟದಲ್ಲಿ 1,500ಕ್ಕೂ ಅಧಿಕ ವಿದೇಶಿ ಮತ್ತು ಉಷ್ಣವಲಯದ ಹಣ್ಣುಗಳ ಗಿಡಗಳನ್ನು ನೆಟ್ಟಿದ್ದಾರೆ. ಅವರು ಪ್ರಪಂಚದಾದ್ಯಂತ ಸಂಚರಿಸಿ ಕರಾವಳಿಯ ಹವಾಮಾನಕ್ಕೆ ಸೂಕ್ತವಾಗಿರುವ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ತಂದು ತನ್ನ ತೋಟದಲ್ಲಿ ಬೆಳೆಯುತ್ತಿದ್ದಾರೆ.
ಅನಿಲ್‌ರ ತೋಟದಲ್ಲಿ ಬ್ರೆಝಿಲ್‌ನ ಪಿನ್ಯೂಟ್ ಬಟರ್ ಫ್ರೂಟ್, ಬಾಕುಪರಿ, ಕೆಡೆರ್ಬಿ ಚೆರಿ, ಅಕೈ ಬೆರಿ, ಮಲೇಶ್ಯದ ದಾರೆಪುಳಿ, ರಾಂಬುಟಾನ್, ಥೈಲ್ಯಾಂಡ್‌ನ ಹ್ಯಾಂಡ್ ಪುಲ್ ಪೈನಾಪಲ್, ಜೈಂಟ್ ಮೆಡುಸ ಪೈನಾಪಲ್, ರಾಮ್ ಭಾಯಿ ಹಣ್ಣು, ಜಪಾನ್‌ನ ಬ್ಲ್ಯಾಕ್ ಬೆರಿ, ಜಾಮ್ ಫ್ರೂಟ್, ಇಂಡೋನೇಶ್ಯದ ಪೆಪಿಸಂಗನ್, ಬ್ಲೂ ಜಾವ ಬನಾನ ಮಕೋಟ ದೇವಾ, ಗೋಲ್ಡನ್ ಪಪ್ಪಾಯಿ ಮೊದಲಾದ ಗಿಡಗಳನ್ನು ಬೆಳೆದಿದ್ದಾರೆ.
ಪ್ರಪಂಚದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಹಣ್ಣುಗಳ ಗಿಡಗಳನ್ನು ಅಭಿವೃದ್ಧಿಪಡಿಸಿ, ಕಸಿಕಟ್ಟಿ ಕೇರಳ, ತಮಿಳುನಾಡು, ಮುಂಬೈ, ಪಶ್ಚಿಮ ಬಂಗಾಳ, ಗೋವಾ ಇನ್ನಿತರ ನರ್ಸರಿ ಮತ್ತು ಆಸಕ್ತ ರೈತರಿಗೆ ಮಾರಾಟ ಹಾಗೂ ಅದರ ಬಗ್ಗೆ ಮಾಹಿತಿ ನೀಡುತ್ತಾರೆ. ಬೆಲೆಯಲ್ಲಿನ ಏರುಪೇರು, ಹವಾಮಾನ ವೈಪರೀತ್ಯ ಹೀಗೆ ಹತ್ತು ಹಲವು ಕಾರಣಗಳ ನಡುವೆಯೂ ಅನಿಲ್ ವಿವಿಧ ಬಗೆಯ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.
‘‘ನಾನು ಮುಖ್ಯವಾಗಿ ರಬ್ಬರ್ ಮತ್ತು ಅಡಿಕೆಯನ್ನು ಬೆಳೆಸುತ್ತೇನೆ. ಅದರೊಂದಿಗೆ ಉಷ್ಣವಲಯದ ಹಣ್ಣುಗಳನ್ನು ಬೆಳೆಯುವುದು ನನ್ನ ಹವ್ಯಾಸವಾಗಿದೆ. ವಿದೇಶದ ಸಾವಿರಕ್ಕೂ ಅಧಿಕ ಬಗೆಯ ಹಣ್ಣುಗಳನ್ನು ಬೆಳೆದಿದ್ದೇನೆ. ದೇಶಕ್ಕೆ ಹೊಸ ಬಗೆಯ ಬೆಳೆಗಳ ಪರಿಚಯ ಮಾಡಿಕೊಡಬೇಕೆಂಬ ನಿಟ್ಟಿನಲ್ಲಿ ಹಣ್ಣಿನ ಗಿಡಗಳ ಸಂಗ್ರಹ ಮಾಡಲು ಆರಂಭಿಸಿದೆ. ಜಗತ್ತಿನಾದ್ಯಂತ ಸಂಚರಿಸಿ ಹೊಸ ಹೊಸ ಹಣ್ಣಿನ ಗಿಡಗಳನ್ನು ಖರೀದಿಸಿ ಸಾವಿರಕ್ಕೂ ಮಿಕ್ಕಿ ಹಣ್ಣಿನ ತಳಿಗಳನ್ನು ಇಲ್ಲಿ ಬೆಳೆಸುತ್ತಿದ್ದೇನೆ. ಮಾವಿನಲ್ಲಿ 100ಕ್ಕೂ ಮಿಕ್ಕಿ ಜಾತಿಗಳು, ವಿವಿಧ ಜಾತಿಯ ಹಲಸಿನ ಮರಗಳು, ನೂರಾರು ಹಣ್ಣಿನ ಗಿಡಗಳನ್ನು ಇಲ್ಲಿ ನಾಟಿ ಮಾಡಿದ್ದೇನೆ ಎನ್ನುತ್ತಾರೆ ಅನಿಲ್ ಬಳಂಜ.
ಇಂಡೋನೇಶ್ಯದ ಬ್ಲೂ ಜಾವ ಬನಾನ
ಇಂಡೋನೇಶ್ಯದಲ್ಲಿ ಬೆಳೆಯುವ ಅಪರೂಪದ ಹಣ್ಣು ಬ್ಲೂ ಜಾವ ಬನಾನ ಅಥವಾ ಐಸ್ಕ್ರೀಮ್ ಬನಾನ. ಈ ಹಣ್ಣಿನ ಹೊರ ಮೈ ನೀಲಿ ಬಣ್ಣದಾಗಿದ್ದು, ಇದು ಐಸ್ಕ್ರೀಮ್ನಂತೆ ಸಿಹಿಯಾಗಿ, ಮೆದುವಾಗಿರುತ್ತದೆ. ಈ ಸಸ್ಯದ ಟಿಷ್ಯೂ ಕಲ್ಚರ್ಗೆ ಭಾರತದ 21 ಸಾವಿರ ರೂ. ಬೆಲೆಯಿದೆ. ಇದು ಇಂಡೋನೇಷ್ಯಾದ ಭಾರೀ ಬೇಡಿಕೆಯ ಹಣ್ಣಾಗಿದೆ ಎನ್ನುತ್ತಾರೆ ಅನಿಲ್ ಬಳಂಜ.
ಅಡಿಕೆಗೆ ಬೆಲೆ ಕುಸಿತ ಮತ್ತು ನಿಷೇಧದ ಆತಂಕದ ನಡುವೆ ನಾನು ಉಷ್ಣವಲಯದ ಹಣ್ಣುಗಳನ್ನು ಬೆಳೆಯಲು ನಿರ್ಧರಿಸಿದೆ. ಹವಾಮಾನ ಪರಿಸ್ಥಿತಿ ಮತ್ತು ಸಸ್ಯದ ಗುಣಮಟ್ಟವನ್ನು ಅಧ್ಯಯನ ಮಾಡಿದ ಬಳಿಕ ಹಣ್ಣುಗಳನ್ನು ಬೆಳೆಯುತ್ತಿದ್ದು, ದೇಶದ್ಯಾದಂತ ಹಲವು ನರ್ಸರಿಗಳಿಗೆ ಮತ್ತು ರೈತರಿಗೆ ಹಣ್ಣುಗಳ ಸಸಿಗಳನ್ನು ಒದಗಿಸುತ್ತಿದ್ದೇನೆ. ಇದರಿಂದ ದೇಶದ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವ ವಿದೇಶಿ ಮತ್ತು ಉಷ್ಣವಲಯದ ಹಣ್ಣುಗಳನ್ನು ಬೆಳೆಯಲು ಇತರ ರೈತರಿಗೆ ಪ್ರೇರಣೆಯಾಗಲಿದೆ.
| ಅನಿಲ್ ಬಳಂಜ, ಕೃಷಿಕ
ವಿದೇಶಿ ಹಣ್ಣು ಮಾರಾಟಗಾರ ಸಂಪರ್ಕ ಹೇಗೆ?
ಅನಿಲ್ ಬಳಂಜ ವಿದೇಶಗಳ ಹಣ್ಣಿನ ಬೆಳೆಗಾರರೊಂದಿಗೆ ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣಗಳ (ಫೇಸ್ಬುಕ್,
ವಾಟ್ಸ್ಆ್ಯಪ್, ಇನ್ಸ್ಟಾ ಗ್ರಾಂ)ಮೊರೆಹೋಗುತ್ತಾರೆ. ಭಾರತದ ಭಾಷೆಗಳು ತಿಳಿಯದ ಕೆಲವೊಂದು ವಿದೇಶಿ ಹಣ್ಣು ಬೆಳೆಗಾರರಿಗೆ ಅಂಗ್ಲ ಭಾಷೆಯ ಮೂಲಕ ಗೂಗಲ್ ಟ್ರಾನ್ಸ್ಲೇಟ್ ಮಾಡಿ ಅದನ್ನು ಅಲ್ಲಿನ ಭಾಷೆಗೆ ಪರಿವರ್ತಿಸಿ ಅವರೊಂದಿಗೆ ಸಂವಹನ ಮಾಡುತ್ತಾರೆ. ಆ ಮೂಲಕ ಅಲ್ಲಿನ ಹಣ್ಣುಗಳ ಬೀಜಗಳನ್ನು ತರಿಸಿಕೊಳ್ಳುತ್ತಾರೆ.
ವಿದೇಶಗಳಿಂದ ಗಿಡಗಳನು್ನ ತರಲು ಇದೆ ಕಾನೂನು!
ವಿದೇಶಗಳಿಂದ ಹಣ್ಣಿನ ಗಿಡಗಳನ್ನು ತರಲು ಸವಾಲುಗಳಿದ್ದು, ಬೇರೆ ದೇಶಗಳಿಂದ ಖರೀದಿಸಿದ ಗೀಡಗಳನ್ನು 10 ರಿಂದ 15 ದಿನಗಳ ಕಾಲ ಅಲ್ಲಿನ ಲ್ಯಾಬ್ಗಳಲ್ಲಿ ಪರೀಕ್ಷೆ ಮಾಡಿ ನೀಡಲಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಅನಿಲ್.
ಇನ್ನು ಬೀಜಗಳಿಗೂ ನಿಯಮಗಳಿದ್ದು, ಕಾನೂನು ಪ್ರಕ್ರಿಯೆಗಳು ಸಹ ಇದೆ. ಇವುಗಳನ್ನು ಅಮದು ಮಾಡಿಕೊಳ್ಳಲು ನರ್ಸರಿ ಹೆಸರಲ್ಲಿ ಲೈಸೆನ್ಸ್ ಮಾಡಿಕೊಂಡಿರ ಬೇಕಾಗುತ್ತದೆ. ಎಲ್ಲ ಅಂತರ್ರಾಷ್ಟ್ರೀಯ ಕಾನೂನುಗಳನ್ನು ಪಾಲಿಸಿ ಗಿಡ ಮತ್ತು ಬೀಜಗಳನ್ನು ತರಲಾಗುತ್ತದೆ.