ಬಿಜೆಪಿ ಎದುರು ಹೊಸ ಸವಾಲು
ಮರಾಠರ ಬಳಿಕ ಮೀಸಲಾತಿಗಾಗಿ ಜಾಟ್ ಸಮುದಾಯದ ಬೇಡಿಕೆ
ಮರಾಠರು ಮೀಸಲಾತಿಗಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಮಹಾರಾಷ್ಟ್ರದಲ್ಲಿ ಕಠಿಣ ರಾಜಕೀಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿಗೆ, ಈಗ ಉತ್ತರ ಭಾರತದ ರಾಜ್ಯಗಳಲ್ಲಿಯೂ ಅಂಥದೇ ಬಿಕ್ಕಟ್ಟು ಎದುರಾಗಿದೆ. ಪ್ರಬಲವಾದ ಜಾಟ್ ಸಮುದಾಯ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸುತ್ತಿರುವುದರಿಂದ ಉಂಟಾಗಿರುವ ರಾಜಕೀಯ ಸಂಚಲನ ಬಿಜೆಪಿಗೆ ಹೊಸ ಸವಾಲಾಗಿ ಪರಿಣಮಿಸಿದೆ.
ಇತ್ತೀಚೆಗೆ, ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಹಲವಾರು ಜಾಟ್ ಸಮುದಾಯದ ನಾಯಕರು ಮತ್ತು ರೈತ ಮುಖಂಡರು ಒಬಿಸಿ ಮೀಸಲಾತಿಯ ವಿಷಯವನ್ನು ಚರ್ಚಿಸಲು ಸಭೆ ನಡೆಸಿದರು. ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯ ಭಾಗವಾಗಿ ಚರ್ಚೆಯನ್ನು ಆಯೋಜಿಸಿದ ಅಖಿಲ ಭಾರತೀಯ ಜಾಟ್ ಮಹಾಸಭಾ, ನವೆಂಬರ್ 20ರಂದು ಹೊಸದಿಲ್ಲಿಯಲ್ಲಿ ಒಬಿಸಿ ಮೀಸಲಾತಿಗಾಗಿ ಒತ್ತಾಯಿಸಲು ಜಾಟ್ ಸಮುದಾಯದವರ ಬೃಹತ್ ಸಮಾವೇಶವನ್ನು ನಡೆಸುವುದಾಗಿ ಘೋಷಿಸಿದೆ. ದೀರ್ಘಾವಧಿಯಿಂದ ಇರುವ ಜಾಟ್ ಮೀಸಲಾತಿ ಬೇಡಿಕೆಯು 2024ರ ಲೋಕಸಭಾ ಚುನಾವಣೆ ಮತ್ತು ಈ ವರ್ಷ ರಾಜಸ್ಥಾನ ಮತ್ತು ಮಧ್ಯಪ್ರದೇಶದ ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ ಮತ್ತೆ ಮುನ್ನೆಲೆಗೆ ಬಂದಿರುವುದು ಪ್ರಧಾನಿ ಮೋದಿ ಮತ್ತು ಅವರ ಪರಿವಾರದ ಎದುರು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರೋಹಿಣಿ ಆಯೋಗದ ಸಂಶೋಧನೆಗಳ ಆಧಾರದ ಮೇಲೆ ಶೇ.27 ಕೋಟಾದ ಉಪ ವರ್ಗೀಕರಣ, ಮರಾಠಾ ಮೀಸಲಾತಿ ಮತ್ತು ಲೋಕಸಭೆ, ರಾಜ್ಯ ವಿಧಾನಸಭೆಗಳಲ್ಲಿನ ಶೇ.33 ಮಹಿಳಾ ಮೀಸಲಾತಿಯೊಳಗೆ ಒಬಿಸಿ ಮಹಿಳೆಯರಿಗೆ ನಿಗದಿಗೊಳಿಸಲಾದ ಕೋಟಾಗಳನ್ನು ಸೇರಿಸದಿರುವುದರ ವಿರುದ್ಧದ ಪ್ರತಿಪಕ್ಷಗಳ ಆಕ್ರಮಣಕಾರಿ ನಿಲುವುಗಳ ಹಿನ್ನೆಲೆಯಲ್ಲಿ ಜಾತಿ ಗಣತಿಯ ಸವಾಲುಗಳನ್ನು ನಿಭಾಯಿಸುವ ಪ್ರಮೇಯವನ್ನು ಬಿಜೆಪಿ ಈಗಾಗಲೇ ಎದುರಿಸುತ್ತಿದೆ. ಸಾಂಪ್ರದಾಯಿಕವಾಗಿ ಭೂಮಿ ಹೊಂದಿರುವ ಕೃಷಿಕ ಸಮುದಾಯದ ಜಾಟ್‌ಗಳು ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ, ದಿಲ್ಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕಂಡುಬರುತ್ತಾರೆ. ಅವರು ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶ, ದಿಲ್ಲಿ ಮತ್ತು ರಾಜಸ್ಥಾನಗಳಲ್ಲಿ ಚುನಾವಣಾ ಮಹತ್ವ ಹೊಂದಿದ್ದು, ರಾಜಕೀಯವಾಗಿ ಸಂಘಟಿತರಾಗಿದ್ದಾರೆ. ಜಾಟ್ ಮೀಸಲಾತಿಗಾಗಿ ನಡೆದ ಪ್ರತಿಭಟನೆಗಳು, ವಿಶೇಷವಾಗಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿರುವ ಹರ್ಯಾಣದಲ್ಲಿ ಈ ಹಿಂದೆ ಹಿಂಸಾಚಾರಕ್ಕೆ ತಿರುಗಿದ ಉದಾಹರಣೆಗಳಿವೆ.
ಮೀರತ್‌ನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್, ‘‘ಮೀಸಲಾತಿ ಜಾಟ್‌ಗಳ ಹಕ್ಕು’’ ಎಂದಿದ್ದಾರೆ. ‘‘ದೇಶದ ಅಭಿವೃದ್ಧಿ ಮತ್ತು ಸ್ವಾತಂತ್ರ್ಯ ಚಳವಳಿಗೆ ಜಾಟ್ ಸಮುದಾಯ ಅಪಾರ ಕೊಡುಗೆ ನೀಡಿದೆ. ಕ್ರೀಡೆ ಹಾಗೂ ರಾಜಕೀಯದಲ್ಲೂ ಸಮುದಾಯದ ಕೊಡುಗೆ ದೊಡ್ಡದು’’ ಎಂದು ಟಿಕಾಯತ್ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2014ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಮಟ್ಟದಲ್ಲಿ ಜಾಟ್ ಸಮುದಾಯಕ್ಕೆ ಒಬಿಸಿ ಸ್ಥಾನಮಾನವನ್ನು ನೀಡುವ ಕೊನೆಯ ಹಂತದ ಅಧಿಸೂಚನೆಯನ್ನು ರದ್ದುಗೊಳಿಸಿದ 2015ರ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಜಾಟ್ ಗುಂಪುಗಳು ಒಪ್ಪುವುದಿಲ್ಲ. ಜಾಟ್‌ಗಳು ಈಗಾಗಲೇ ರಾಜಸ್ಥಾನ, ಉತ್ತರ ಪ್ರದೇಶ, ದಿಲ್ಲಿ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರಗಳಲ್ಲಿ ಒಬಿಸಿ ಮೀಸಲಾತಿಯನ್ನು ರಾಜ್ಯ ಮಟ್ಟದಲ್ಲಿ ಪಡೆದಿದ್ದಾರೆ. ಗುಜರಾತ್ ಮತ್ತು ರಾಜಸ್ಥಾನದ ಜಾಟ್‌ಗಳು (ಭರತ್‌ಪುರ ಮತ್ತು ಧೋಲ್‌ಪುರ ಜಿಲ್ಲೆಗಳನ್ನು ಹೊರತುಪಡಿಸಿ) ಒಬಿಸಿಗಳ ಕೇಂದ್ರ ಪಟ್ಟಿಯಲ್ಲಿದ್ದಾರೆ.
ಸುಪ್ರೀಂ ಕೋರ್ಟ್ ಜಾಟ್ ಮೀಸಲಾತಿಯನ್ನು ನಿರಾಕರಿಸುವಾಗ, ಸಾಮಾಜಿಕವಾಗಿ ಹಿಂದುಳಿದಿರುವುದಾಗಿ ಸ್ವಯಂ ಘೋಷಿಸಿಕೊಳ್ಳುವ ವರ್ಗದವರ ಗ್ರಹಿಕೆ ಅಥವಾ ನಿಜವಾಗಿಯೂ ಹಿಂದುಳಿದವರ ಸಾಮಾಜಿಕ ಸ್ಥಾನಮಾನದ ಬಗ್ಗೆ ಮುಂದುವರಿದ ವರ್ಗಗಳ ಗ್ರಹಿಕೆಯು ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಸಂವಿಧಾನಾತ್ಮಕವಾಗಿ ಸಮ್ಮತವಾದ ಮಾನದಂಡವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದೆ.
ಅಖಿಲ ಭಾರತೀಯ ಜಾಟ್ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚೌಧರಿ ಯುಧವೀರ್ ಸಿಂಗ್, ‘‘ಈ ತೀರ್ಪನ್ನು ಒಪ್ಪುವುದಿಲ್ಲ. ನಮಗೆ ಸಮಾನಾಂತರವಾಗಿರುವ ಸಮುದಾಯಗಳು ಮತ್ತು ಅರ್ಹತಾ ಮಾನದಂಡದಲ್ಲಿ ನಮಗಿಂತ ಕೆಳಗಿರುವ ಸಮುದಾಯಗಳನ್ನು ರಾಜಕೀಯ ಪಿತೂರಿಯ ಭಾಗವಾಗಿ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ನಾವು ಮೀಸಲಾತಿಗೆ ಅರ್ಹರು. ಮಂಡಲ್ ಆಯೋಗದ ಪ್ರಕಾರ ನಾವು ಅರ್ಹತೆ ಹೊಂದಿದ್ದೇವೆ’’ ಎಂದು ಸಿಂಗ್ ಹೇಳುತ್ತಾರೆ.
ಮೋದಿ ನೇತೃತ್ವದ ಬಿಜೆಪಿ ಸರಕಾರ ಎರಡೆರಡು ಬಾರಿ ಬಹುಮತ ಪಡೆದರೂ, 2012ರ ಮುಝಪ್ಫರ್‌ನಗರ ಕೋಮು ಹಿಂಸಾಚಾರದ ನಂತರವೂ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಲು ಹಿಂದೇಟು ಹಾಕುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ‘‘ಸರಕಾರವು ನಮಗೆ ಮೀಸಲಾತಿ ನೀಡುವ ಉದ್ದೇಶವನ್ನೇ ಹೊಂದಿದಂತಿಲ್ಲ. ಅದು ಜಾಟ್‌ಗಳಲ್ಲದ ಸಮುದಾಯಗಳ ಮೂಲಕ ಆಗಬಹುದಾದ ರಾಜಕೀಯ ಲಾಭದ ಕಡೆಗೆ ಗಮನವಿಟ್ಟಿದೆ. ಬಿಜೆಪಿಯವರು 2013ರಲ್ಲಿ ಮುಝಪ್ಫರ್‌ನಗರ ಹಿಂಸಾಚಾರದ ಹಿನ್ನೆಲೆಯಲ್ಲಿ ಜಾಟ್‌ಗಳನ್ನು ಬಳಸಿಕೊಂಡರು ಮತ್ತು ಅಧಿಕಾರಕ್ಕೆ ಏರಿದರು. ಹರ್ಯಾಣದಲ್ಲಿ ಅವರು ಜಾಟ್ ಸಮುದಾಯದವರಲ್ಲದ ವ್ಯಕ್ತಿಯನ್ನು (ಮನೋಹರ್ ಲಾಲ್ ಖಟ್ಟರ್) ಮುಖ್ಯಮಂತ್ರಿ ಹುದ್ದೆಗೆ ನೇಮಿಸಿ, ಜಾಟ್ ಮತ್ತು ಜಾಟ್ ಅಲ್ಲದವರ ನಡುವೆ ಪೈಪೋಟಿ ತಂದಿಟ್ಟರು’’ ಎಂಬುದು ಯುಧವೀರ್ ಸಿಂಗ್ ಆರೋಪ.
ಜಾಟ್ ಖಾಪ್‌ಗಳ ಹಲವಾರು ಮುಖ್ಯಸ್ಥರು ಭಾಗವಹಿಸಿದ್ದ ಮೀರತ್ ಸಭೆಯಲ್ಲಿ ಸಿಂಗ್, ಜಾಟ್ ಸಮುದಾಯವು ಶ್ರೀಮಂತವಾಗಿದೆ ಎಂಬ ವಾದದ ಬಗ್ಗೆ ಪ್ರತಿಕ್ರಿಯಿಸಿದರು. ‘‘ಪ್ರತಿಯೊಂದು ಸಮುದಾಯದಲ್ಲಿಯೂ ಶ್ರೀಮಂತರು ಮತ್ತು ಬಡವರು ಇದ್ದಾರೆ. ನಾವು ಜಾಟ್ ಸಮುದಾಯದ ಎಲ್ಲರಿಗೂ ಮೀಸಲಾತಿಯನ್ನು ಕೇಳುತ್ತಿಲ್ಲ. ಒಬಿಸಿಯ ಕೆನೆಪದರಕ್ಕಿಂತ ಕೆಳಗಿರುವವರಿಗಾಗಿ ಮಾತ್ರ ಕೇಳುತ್ತಿದ್ದೇವೆ’’ ಎಂದು ಅವರು ಹೇಳಿದರು.
ಕೇಂದ್ರೀಯ ಉದ್ಯೋಗಗಳಲ್ಲಿ ಜಾಟ್ ಮೀಸಲಾತಿ ಮತ್ತು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶದ ಬೇಡಿಕೆ ಎರಡು ದಶಕಗಳಿಗಿಂತಲೂ ಹಳೆಯದು. ಮಾರ್ಚ್ 2014ರಲ್ಲಿ, ಯುಪಿಎ ಸರಕಾರವು ತನ್ನ ಕೊನೆಯ ಸಂಪುಟ ಸಭೆಯಲ್ಲಿ ಜಾಟ್‌ಗಳಿಗೆ ಒಬಿಸಿ ಮೀಸಲಾತಿಯನ್ನು ಅನುಮೋದಿಸಿತು. ಜಾಟ್ ಸಮುದಾಯವು ಕೇಂದ್ರದಲ್ಲಿ ಸೇರ್ಪಡೆಗೊಳ್ಳುವ ಮಾನದಂಡಗಳನ್ನು ಪೂರೈಸಿಲ್ಲ ಎಂಬ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ (ಎನ್‌ಸಿಬಿಸಿ) ನಿಲುವನ್ನು ಆಗ ಸರಕಾರ ತಿರಸ್ಕರಿಸಿತ್ತು. ಒಬಿಸಿಗಳ ಪಟ್ಟಿಯಲ್ಲಿ ಕೇವಲ ಕೃಷಿ ಸಮುದಾಯಕ್ಕೆ ಸೇರಿದ ಜಾಟ್‌ಗಳಿಗೆ ಹಿಂದುಳಿದ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲ. ಸಮುದಾಯವು ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದಿಲ್ಲ ಮತ್ತು ಸಶಸ್ತ್ರ ಪಡೆಗಳು, ಸರಕಾರಿ ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಮರ್ಪಕ ಪ್ರಾತಿನಿಧ್ಯವನ್ನು ಹೊಂದಿದೆ ಎಂದು ಎನ್‌ಸಿಬಿಸಿ ಹೇಳಿದೆ.
ಸಮುದಾಯವನ್ನು ಓಲೈಸುವ ಪ್ರಯತ್ನದಲ್ಲಿ ಯುಪಿಎ ಸರಕಾರವು ಎನ್‌ಸಿಬಿಸಿಯ ಸಲಹೆಯನ್ನು ನಿರ್ಲಕ್ಷಿಸಿತು. ಆಯೋಗ ಸಮರ್ಪಕವಾಗಿ ನೆಲದ ವಾಸ್ತವಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆಗ ಸರಕಾರ ಪ್ರತಿಪಾದಿಸಿತು. ಮಾರ್ಚ್ 2014ರಲ್ಲಿ ಅಧಿಸೂಚನೆಯ ಮೂಲಕ, ಬಿಹಾರ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ದಿಲ್ಲಿ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದ ಭರತ್‌ಪುರ ಮತ್ತು ಧೋಲ್‌ಪುರ ಜಿಲ್ಲೆಗಳಲ್ಲಿ ಜಾಟ್‌ಗಳಿಗೆ ಒಬಿಸಿ ಮೀಸಲಾತಿಯನ್ನು ನೀಡಿತು. ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆಗ ಎನ್‌ಸಿಬಿಸಿ ದೃಷ್ಟಿಕೋನವು ಉತ್ತಮ ಮತ್ತು ಸ್ವೀಕಾರಾರ್ಹ ಕಾರಣಗಳಿಂದ ಕೂಡಿದೆ ಎಂದು ಗಮನಿಸಿದ ನ್ಯಾಯಾಲಯ, ಅಧಿಸೂಚನೆಯನ್ನು ರದ್ದುಗೊಳಿಸಿತು.
ಮೀರತ್ ಸಭೆಯಲ್ಲಿ ಸಿಂಗ್, ಜೈ ಶ್ರೀ ರಾಮ್ ಘೋಷಣೆಗಳಲ್ಲೇ ಯೌವನ ಹಾಳು ಮಾಡಿಕೊಳ್ಳದಿರುವಂತೆ ಜಾಟ್‌ಗಳಿಗೆ ಮನವಿ ಮಾಡಿದರು. ‘‘ಜೈ ಶ್ರೀ ರಾಮ್ ಎನ್ನುವುದು ಪ್ರೇರಿತ ಪಕ್ಷದ ಕಾರ್ಯಕರ್ತರ ಭಾಷೆ. ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕುವ ತನ್ನ ಕಾರ್ಯಸೂಚಿಯ ಭಾಗವಾಗಿ ಆರೆಸ್ಸೆಸ್ ಜೈ ಶ್ರೀ ರಾಮ್ ಘೋಷಣೆಯನ್ನು ಹರಡುತ್ತಿದೆ. ಅವರು ನಮ್ಮ ಬಳಿ ಈಗ ಹಿಂದೂ ಧರ್ಮದ ಪ್ರಮಾಣಪತ್ರಗಳನ್ನು ಕೇಳುತ್ತಿದ್ದಾರೆ’’ ಎಂದು ಸಿಂಗ್ ಹೇಳಿದರು.
2014, 2017 ಮತ್ತು 2019ರ ಚುನಾವಣೆಗಳಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ, ವಿಶೇಷವಾಗಿ ಜಾಟ್ ನೆಲೆಯಿರುವಲ್ಲಿ ಬಿಜೆಪಿಯ ಯಶಸ್ಸು ಪ್ರತಿಪಕ್ಷಗಳು ತಮ್ಮ ಪ್ರಭಾವ ಉಳಿಸಿಕೊಳ್ಳುವುದನ್ನು ತಡೆಯಿತು. 2017, 2019 ಮತ್ತು 2022ರ ಚುನಾವಣೆಗಳಿಗೆ ಮೊದಲು ಬಿಜೆಪಿಯ ಉನ್ನತ ನಾಯಕರು ಉತ್ತರ ಪ್ರದೇಶದಲ್ಲಿ ಮತದಾರರನ್ನು ಓಲೈಸಲು ಹಲವು ತಂತ್ರಗಳನ್ನು ರೂಪಿಸಿದರು. ಮುಝಪ್ಫರ್‌ನಗರ ಗಲಭೆಗಳು ಈ ಪ್ರದೇಶದಲ್ಲಿ ಹಳೆಯ ಸಾಮಾಜಿಕ ಒಕ್ಕೂಟಗಳನ್ನು ಛಿದ್ರಗೊಳಿಸುವ ಮೊದಲು ದಶಕಗಳಿಂದ ಅಲ್ಲಿ ಸಾಂಪ್ರದಾಯಿಕ ರಾಜಕೀಯ ಪಕ್ಷವಾಗಿದ್ದ ರಾಷ್ಟ್ರೀಯ ಲೋಕದಳದಿಂದ ಜಾಟ್ ಸಮುದಾಯವನ್ನು ದೂರವಿರಿಸಲು ಸಮುದಾಯದ ನಾಯಕರು ಮತ್ತು ಹಿರಿಯರೊಂದಿಗೆ ಹಲವಾರು ಸಭೆಗಳನ್ನು ಬಿಜೆಪಿ ನಡೆಸಿತು. ಅಧಿಕಾರಕ್ಕೆ ಬಂದ ನಂತರ ಸಮುದಾಯದ ಮೀಸಲಾತಿಯ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸುವುದಾಗಿಯೂ ಆಗ ಭರವಸೆ ನೀಡಲಾಗಿತ್ತು ಎಂದು ಜಾಟ್ ನಾಯಕರು ಹೇಳುತ್ತಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಹೊಸದಿಲ್ಲಿ ಸಭೆಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯ ಉಳಿದಿರುವಾಗ, ಜಾಟ್ ಗುಂಪುಗಳು ತಮ್ಮ ಮೀಸಲಾತಿ ಬೇಡಿಕೆಯನ್ನು ಚುನಾವಣಾ ವಿಷಯವನ್ನಾಗಿ ಮಾಡಲು ತಂತ್ರವನ್ನು ರೂಪಿಸುತ್ತಿವೆ. ನವೆಂಬರ್ 20ರ ಸಮಾವೇಶದಲ್ಲಿ ದೇಶಾದ್ಯಂತದ ಜಾಟ್‌ಗಳು ಪಾಲ್ಗೊಳ್ಳಲಿದ್ದಾರೆ.
‘‘ಒಂಭತ್ತು ವರ್ಷಗಳಿಗೂ ಹೆಚ್ಚು ಕಾಲ ಅವರು ನಮ್ಮನ್ನು ಮೂರ್ಖರನ್ನಾಗಿ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಮೀಸಲಾತಿ ಸಿಗದಿದ್ದರೆ ಪ್ರತೀ ಬೂತ್ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ’’ ಎಂದು ಅಖಿಲ ಭಾರತೀಯ ಜಾಟ್ ಮಹಾಸಭಾದ ಯುವ ಘಟಕ ಎಚ್ಚರಿಸಿದೆ.
(ಕೃಪೆ:thewire.in)