ಪತ್ರಿಕಾಧರ್ಮ ಎತ್ತಿ ಹಿಡಿದ ಪತ್ರಿಕೆ
‘ವಾರ್ತಾಭಾರತಿ’ಗೆ 21ರ ಸಂಭ್ರಮ. ಹೆಸರಲ್ಲಿಯೇ ಇರುವಂತೆ, ‘ವಾರ್ತಾಭಾರತಿ’ ಜನದನಿಯ ಸಾರಥಿ. ಜನರ, ಅದರಲ್ಲೂ ಶೋಷಿತರ ಹಾಗೂ ಧ್ವನಿ ಇಲ್ಲದವರ ಧ್ವನಿಯಾಗಿ 20 ವರ್ಷಗಳನ್ನು ಮುಗಿಸಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಯಾರ ಹಂಗಿಗೂ ಒಳಗಾಗದೆ, ಪೇಯ್ಡ್ ಮಾಧ್ಯಮ ಎಂಬ ಅಪಖ್ಯಾತಿಗೆ ತುತ್ತಾಗದೆ ವಸ್ತುನಿಷ್ಠವಾಗಿ ಸುದ್ದಿ ನೀಡುವ ಮೂಲಕ ತನ್ನ ಅನನ್ಯತೆಯನ್ನು ‘ವಾರ್ತಾಭಾರತಿ’ ಉಳಿಸಿಕೊಂಡಿದೆ. ಪತ್ರಿಕೆ ಎಷ್ಟು ಮಾರಾಟವಾಗುತ್ತದೆ ಎನ್ನುವುದಕ್ಕಿಂತಲೂ, ಪತ್ರಿಕೆ ಯಾವ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಮತ್ತು ಯಾರ ಪರವಾಗಿ ನಿಲ್ಲುತ್ತದೆ ಎಂಬುದು ಮುಖ್ಯ.
ಪ್ರಾರಂಭದಿಂದಲೂ ಪತ್ರಿಕೆಯ ಓದುಗನಾಗಿ ಓದಿದ್ದೇನೆ, ಬರೆದಿದ್ದೇನೆ ಮತ್ತು ಪತ್ರಿಕೆಯಲ್ಲಿ ಬಂದದ್ದನ್ನು ಬೇರೆಯವರಿಗೆ ಮುಟ್ಟಿಸಿದ್ದೇನೆ. ಸಮಾನತೆ ಸಾಮಾಜಿಕ ನ್ಯಾಯದ ನೆಲೆಯಲ್ಲಿ ಜಾತಿ ಧರ್ಮದ ಹಂಗಿಲ್ಲದೆ ವಸ್ತುನಿಷ್ಠವಾಗಿ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯುವಲ್ಲಿ ‘ವಾರ್ತಾಭಾರತಿ’ ಮುಂಚೂಣಿಯಲ್ಲಿದೆ.
ಪತ್ರಿಕೆಗೆ 20 ತುಂಬಿದ ಈ ಸಂದರ್ಭದಲ್ಲಿ ಪತ್ರಿಕೆಯು ಈ ಎತ್ತರಕ್ಕೆ ಬೆಳೆಯಲು ಕಾರಣರಾದ ಸಂಸ್ಥಾಪಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರಿಗೂ, ಹಿಂದಿನ ಹಾಗೂ ಈಗಿನ ಸಿಬ್ಬಂದಿಯ ತ್ಯಾಗ, ಪ್ರಾಮಾಣಿಕತೆ ಮತ್ತು ಬದ್ಧತೆಯ ಸೇವೆಯನ್ನು ಶ್ಲಾಘಿಸುತ್ತಾ, 21 ವರ್ಷಕ್ಕೆ ಕಾಲಿರಿಸಿದ ಪತ್ರಿಕೆಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲೆಂದು ಹಾರೈಸುತ್ತೇನೆ.