10 ವರ್ಷಗಳಿಂದ ಪ್ರತಿದಿನ ರಸ್ತೆ ಬದಿ ಸ್ವಚ್ಛ ಮಾಡುವ ಸಮಾಜ ಸೇವಕ
ಕಾರ್ಕಳದ ಸ್ವಚ್ಛತಾ ರಾಯಭಾರಿ ಫಿಲಿಕ್ಸ್ ವಾಝ್!

ಉಡುಪಿ : ಇಲ್ಲೊಬ್ಬರು ಕಳೆದೊಂದು ದಶಕದಿಂದ ರಸ್ತೆ ಬದಿಯ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುತ್ತ ಇಡೀ ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇಳಿವಯಸ್ಸಿನಲ್ಲೂ ತಪ್ಪದೇ ಪ್ರತಿದಿನ ಈ ಸೇವೆ ಮಾಡುವ ಮೂಲಕ ಇವರು ಯುವಜನತೆಗೆ ಪ್ರೇರಣೆಯಾಗಿದ್ದಾರೆ.
ಈ ರೀತಿಯ ವಿಶೇಷ ವ್ಯಕ್ತಿತ್ವದ ಸಮಾಜ ಸೇವಕ ಉಡುಪಿ ಜಿಲ್ಲೆಯ ಕಾರ್ಕಳದ ಫಿಲಿಕ್ಸ್ ವಾಝ್(೭೫). ಇವರು ಕಳೆದ 10 ವರ್ಷಗಳಿಂದ ಒಂದು ದಿನವೂ ಬಿಡದೆ ಪ್ರತಿದಿನ ಎಂಬಂತೆ ಕಾರ್ಕಳದ ಹಲವು ರಸ್ತೆಗಳ ಬದಿಯಲ್ಲಿ ಎಸೆಯಲಾದ ಕಸಗಳನ್ನು ಸ್ವಚ್ಛಗೊಳಿಸಿ, ಪುರಸಭೆಯ ಕಸ ವಿಲೇವಾರಿ ವಾಹನಗಳಿಗೆ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಅದೇ ರೀತಿ ಪರಿಸರ ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲೂ ಇವರು ತೊಡಗಿಸಿಕೊಂಡಿದ್ದಾರೆ. ಇವರ ಈ ಕಾರ್ಯವನ್ನು ನೋಡಿ ಕಾರ್ಕಳ ಪುರಸಭೆ ಇವರನ್ನು ಸ್ವಚ್ಛತಾ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ಇದು ಇವರ ಸೇವೆಗೆ ದೊರೆತ ದೊಡ್ಡ ಗೌರವ.
ವಿದೇಶದ ಸ್ವಚ್ಛತೆ ಪ್ರೇರಣೆ: ಕುವೈತ್ ದೇಶದಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದ ಇವರು, ಅಲ್ಲಿನ ರಸ್ತೆ ಬದಿಯ ಸ್ವಚ್ಛತೆ, ಸುಂದರ ಪರಿಸರವನ್ನು ಕಂಡು ತಾನೂ ಹುಟ್ಟಿ ಬೆಳೆದ ನೆಲದಲ್ಲೂ ಇದೇ ರೀತಿಯ ಸ್ವಚ್ಛ ಪರಿಸರವನ್ನು ರೂಪಿಸಬೇಕೆಂಬ ಸಂಕಲ್ಪವನ್ನು ಅಂದೇ ಮಾಡಿದ್ದರು.
ಊರಿಗೆ ಬಂದಾಗ ಇಲ್ಲಿನ ಪರಿಸರ, ಕಸಕಡ್ಡಿ, ರಸ್ತೆ ಬದಿಯ ತ್ಯಾಜ್ಯವನ್ನು ನೋಡಿ ಇವರು ತುಂಬಾ ಬೇಸರಪಡುತ್ತಿದ್ದರು. ಗಲ್ಫ್ ದೇಶಗಳಲ್ಲಿನ ಭಾರತೀಯರು ಅಲ್ಲಿನ ಸ್ವಚ್ಛತೆಯನ್ನು ಕೊಂಡಾಡುತ್ತಿ ರುವುದರಿಂದ ಪ್ರೇರಣೆಗೊಂಡ ಫಿಲಿಕ್ಸ್, ತನ್ನೂರಿನಲ್ಲೂ ಇಂತಹ ಸೇವಾ ಕಾರ್ಯಕ್ಕೆ ಹೆಜ್ಜೆ ಇಟ್ಟರು.
ಗಲ್ಪ್ ಉದ್ಯೋಗ ಬಿಟ್ಟು ಊರಿಗೆ ಬಂದು ನಿವೃತ್ತಿ ಜೀವನ ಸಾಗಿಸುತ್ತಿದ್ದ ಇವರು, ಆರಂಭದಲ್ಲಿ ಮನೆ ಸುತ್ತಮುತ್ತಲಿನ ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸುತ್ತಿದ್ದರು. ನಂತರ ಮುಂದುವರಿದು ಕಾರ್ಕಳ ಸ್ವರಾಜ್ಯ ಮೈದಾನ, ನಂತರ ಅನಂತಶಯನ, ಭುವನೇಂದ್ರ ಕಾಲೇಜು ಪರಿಸರದ ರಸ್ತೆಗಳನ್ನು ಸ್ವಚ್ಛಗೊಳಿಸಿದರು. ಹೀಗೆ ತನ್ನ ಸ್ವಚ್ಛತಾ ಕಾರ್ಯವನ್ನು ವಿಸ್ತರಿಸಿಕೊಂಡು, ಪ್ರತಿದಿನ ಬಿಡದೆ ಮಾಡುತ್ತಿದ್ದಾರೆ.
‘ಈ ರೀತಿ ಸ್ವಚ್ಛತಾ ಕಾರ್ಯ ಮಾಡುತ್ತಿರುವುದರಿಂದ ಫಿಲಿಕ್ಸ್ರಿಗೆ ಮಾನಸಿಕ ಖುಷಿ ಸಿಗುತ್ತದೆ. ಅವರು ಈ ಸ್ವಚ್ಛತೆ ಕಾರ್ಯವನ್ನು ಪ್ರತಿದಿನ ಮಾಡುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿ ಬೆಳಗ್ಗೆ ಸಾಧ್ಯವಾಗದಿದ್ದರೆ ಔಷಧಿ ತೆಗೆದುಕೊಂಡು ಸಂಜೆ ಬಂದು ಕಸಗಳನ್ನು ಹೆಕ್ಕುತ್ತಾರೆ. ಈ ರೀತಿಯ ವಿಶೇಷ ವ್ಯಕ್ತಿತ್ವ ಅವರದು’ ಎನ್ನುತ್ತಾರೆ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ವಸಂತ ಎಂ.
ಕಾರಿನಲ್ಲಿ ಎಲ್ಲ ಸಲಕರಣೆ :
ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಏಳುವ ಇವರು, ತನ್ನ ಕಾರಿನಲ್ಲಿ ಸ್ವಚ್ಛತಾ ಕಾರ್ಯ ಮಾಡಲು ಹೊರಡುತ್ತಾರೆ. ಬೆಳಗ್ಗೆ ಪರಿಸರ ಕತ್ತಲು ಇರುವುದರಿಂದ ದಾರಿದೀಪದ ಬೆಳಕು ಅಥವಾ ತನ್ನಲ್ಲಿರುವ ಟಾರ್ಚ್ ಲೈಟ್ನಿಂದ ಕಸಗಳನ್ನು ಹೆಕ್ಕುವ ಕಾರ್ಯ ಮಾಡುತ್ತಾರೆ.
ಇವರ ಕಾರು ಸಾಕಷ್ಟು ವಿಶಿಷ್ಟವಾಗಿದೆ. ಇವರ ಕಾರಿನ ಢಿಕ್ಕಿಯಲ್ಲಿರುವುದು ಕಸದ ಗೋಣಿಗಳು ಹಾಗೂ ಗಿಡಗಳಿಗೆ ನಿರುಣಿಸಲು ನೀರಿನ ಕ್ಯಾನ್ಗಳು. ಗೋಣಿಗಳಲ್ಲಿ ಕಸ, ಪ್ಲಾಸ್ಟಿಕ್ ಬಾಟಲಿಗಳನ್ನು ತುಂಬಿಸಿ, ಪುರಸಭೆಯ ಕಸ ವಿಲೇವಾರಿ ವಾಹನಗಳು ಕಸ ಸಂಗ್ರಹಿಸುವ ಸ್ಥಳದಲ್ಲಿ ಇರಿಸುತ್ತಾರೆ. ಅದೇ ರೀತಿ ಇವರ ಕಾರಿನಲ್ಲಿ ಕತ್ತಿ ಹಾರೆ, ಹುಲ್ಲು ಕತ್ತರಿಸುವ ಮೆಷಿನ್ಗಳು ಸದಾ ಇರುತ್ತವೆ. ಇವರೇ ಆ ಮೆಷಿನ್ಗಳನ್ನು ಬಳಸಿ ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಾರೆ.
‘ಕೋರೋನ ಸಂದರ್ಭದಲ್ಲಿ ಜನ ಹೊರಗೆ ಬಾರದ ಪರಿಣಾಮ ಪರಿಸರ ಸಾಕಷ್ಟು ಸ್ವಚ್ಛವಾಗಿತ್ತು. ಇದರಿಂದ ಇವರಿಗೆ ಕೆಲಸವೇ ಇಲ್ಲವಾಯಿತು. ಆಗ ಅವರು ಬೇರೊಂದು ಕೆಲಸ ಪ್ರಾರಂಭಿಸಿ, ಈಗಲೂ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮನೆ ಪರಿಸರದಲ್ಲಿ ಸುಮಾರು ೬೦ ಗಿಡ ಗಳನ್ನು ನೆಟ್ಟು ಪೋಷಿಸಿಕೊಂಡು ಬಂದು ಬೆಳೆಸಿದ್ದಾರೆ’ ಎಂದು ವಸಂತ ಎಂ. ತಿಳಿಸಿದರು.
‘ಫಿಲಿಕ್ಸ್ ವಾಝ್ ಪ್ರತಿದಿನ ಸ್ವಚ್ಛ ಮಾಡುತ್ತಿರುವುದರಿಂದ ಕಸ ಎಸೆಯುವವರಿಗೆ ಕಸಿವಿಸಿಯಾಗಿ, 10 ಮಂದಿಯಲ್ಲಿ ಒಬ್ಬರಾದರೂ ಕಸ ಎಸೆಯುವುದನ್ನು ನಿಲ್ಲಿಸಿರಬಹುದು. ಆ ರೀತಿಯಲ್ಲಿ ಇವರ ಕಾರ್ಯ ಜನರ ಮೇಲೆ ಪರಿಣಾಮ ಬೀರುತ್ತಿದೆ. ಇವರ ಈ ಕಾರ್ಯವನ್ನು ನೋಡಿ ಕಾರ್ಕಳ ಪುರಸಭೆಯು ಅವರನ್ನು ಸ್ವಚ್ಛತಾ ರಾಯ ಭಾರಿಯಾಗಿ ನೇಮಕ ಮಾಡಿದೆ’
-ಡಾ.ಶ್ರೀರಾಮ್ ಮೊಗೆರಾಯ, ಸದಸ್ಯರು, ಸ್ವಚ್ಛ ಕಾರ್ಕಳ ಬ್ರಿಗೇಡ್
‘ಕೆಲವರು ಇದು ಪುರಸಭೆಯವರು ಮಾಡುವ ಕೆಲಸ, ನೀವು ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಆದರೆ ನನಗೆ ಈ ಕೆಲಸ ಮಾಡುವುದರಿಂದ ತುಂಬಾ ಖುಷಿ ಹಾಗೂ ತೃಪ್ತಿ ಸಿಗುತ್ತಿದೆ. ಇದರಿಂದ ವ್ಯಾಯಾಮ ಆಗುತ್ತದೆ. ಬೆಳಗ್ಗೆ ಬೇಗ ಏಳುವುದರಿಂದ ಮನಸ್ಸು ಕೂಡ ಉಲ್ಲಾಸದಿಂದ ಇರುತ್ತದೆ. ಪರಿಸರ, ಸಮಾಜ ಹಾಗೂ ನನಗೂ ಇದರಿಂದ ತುಂಬಾ ಪ್ರಯೋಜನ ಆಗುತ್ತಿದೆ. ಆದುದರಿಂದ ಈ ಕಾರ್ಯವನ್ನು ನಾನು ಮುಂದುವರಿಸುತ್ತೇನೆ’
-ಫಿಲಿಕ್ಸ್ ವಾಝ್, ಸ್ವಚ್ಛತಾ ರಾಯಭಾರಿ
ನೂರಾರು ಫಲಕಗಳ ಅಳವಡಿಕೆ :
ಫಿಲಿಕ್ಸ್ ವಾಝ್ ತಾನು ಸ್ವತಃ ಕಸಗಳನ್ನು ತೆಗೆಯುವುದಲ್ಲದೆ, ಇತರರಲ್ಲೂ ಜಾಗೃತಿ ಮೂಡಿ ಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಇವರು ಸ್ವತಃ ತಾವೇ ಕಸ ತೊಟ್ಟಿಗಳನ್ನು ತಯಾರಿಸಿ ಅಲ್ಲಲ್ಲಿ ಇರಿಸಿದ್ದಾರೆ. ಆ ತೊಟ್ಟಿಗಳಲ್ಲಿ ತುಂಬಿದ ಕಸವನ್ನು ಇವರೇ ಗೋಣಿಗಳಲ್ಲಿ ಸಂಗ್ರಹಿಸುತ್ತಾರೆ. ನಂತರ ಅವುಗಳನ್ನು ಪುರಸಭೆಯ ಕಸ ವಿಲೇವಾರಿ ವಾಹನಗಳಿಗೆ ಅನುಕೂಲ ಆಗುವ ರೀತಿಯಲ್ಲಿ ತಾನೇ ರಚಿಸಿದ ಸ್ಟ್ಯಾಂಡ್ನಲ್ಲಿ ತೂಗು ಹಾಕುತ್ತಾರೆ. ಇದನ್ನೆಲ್ಲ ಅವರು ತನ್ನ ಸ್ವಂತ ಖರ್ಚಿನಲ್ಲೇ ತಯಾರಿಸಿದ್ದಾರೆ.
ಇದೇ ರೀತಿ ನೂರು ಬೋರ್ಡ್ಗಳನ್ನು ಅಳವಡಿಸಿ, ಸ್ಪಚ್ಛತೆ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕಸವನ್ನು ಪ್ರಾಣಿಗಳು ತಿನ್ನುವ ಹಾಗೆ ಇಡಬೇಡಿ ಎಂಬ ಸಂದೇಶ ಸಾರುವ ಫಲಕ ಕೂಡ ಇಲ್ಲಿ ಕಾಣಬಹುದು.