ವಿದ್ಯಾರ್ಥಿಗೆ ಹಲ್ಲೆ ಮಾಡಿಸಿದ ಶಿಕ್ಷಕಿ: ಸುಪ್ರೀಂ ಕೋರ್ಟ್ ತೀವ್ರ ತರಾಟೆ
ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ಹಾಗು ಅಲ್ಲಿನ ಪೊಲೀಸ್ ವ್ಯವಸ್ಥೆಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಇಷ್ಟೆಲ್ಲಾ ರಾದ್ಧಾಂತ ಆಗಿದ್ದರೂ ನೀವೇನು ಮಾಡುತ್ತಿದ್ದೀರಿ ಎಂದು ತೀಕ್ಷ್ಣವಾಗಿ ಕೇಳಿದೆ. ಆ ಸರಕಾರ ಹಾಗು ಅಲ್ಲಿನ ಪೋಲೀಸರ ತಾರತಮ್ಯ ನೀತಿ ಎಷ್ಟು ಘೋರವಾಗಿದೆ ಎಂಬುದನ್ನು ಇಡೀ ಜಗತ್ತಿಗೆ ಎತ್ತಿ ತೋರಿಸಿದೆ. ಆ ಘಟನೆಯೇ ಅತ್ಯಂತ ಘೋರವಾದದ್ದು. ಆದರೆ, ಅದರ ವಿಚಾರದಲ್ಲಿ ಸರ್ಕಾರ ಮತ್ತು ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಇನ್ನೂ ಭಯಂಕರ.
ಮತ್ತು ಅದನ್ನು ಸರಿಪಡಿಸುವುದಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯವೇ ಬರಬೇಕಾಗುತ್ತದೆ. ಈ ದೇಶದಲ್ಲಿ ಅಲ್ಪಸಂಖ್ಯಾತರ ವಿಚಾರದಲ್ಲಿನ ದ್ವೇಷ, ಕಡೆಗಣನೆ ಇವೆಲ್ಲವೂ ಮಕ್ಕಳನ್ನೂ ಬಿಡದೆ ಹೇಗೆ ಬಾಧಿಸುತ್ತವೆ ಎಂಬುದಕ್ಕೆ ಅತ್ಯಂತ ಕರಾಳ ನಿದರ್ಶನ ಅದೊಂದು ಘಟನೆ. ಪುಟ್ಟ ಬಾಲಕನೊಬ್ಬ ತನ್ನ ಸಹಪಾಠಿಗಳಿಂದಲೇ ಏಟು ತಿನ್ನಬೇಕಾಗಿ ಬಂದಿದ್ದು, ಮತ್ತದಕ್ಕೆ ಆತನ ಶಿಕ್ಷಕಿಯೇ ಸೂಚಿಸಿದ್ದು, ಹಾಗೂ ಇದೆಲ್ಲವೂ ನಡೆದದ್ದು ಆತನ ಧರ್ಮದ ಕಾರಣಕ್ಕಾಗಿ ಎಂಬುದನ್ನು ಯೋಚಿಸಿದರೇ ದಿಗಿಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದಲೇ ಶಿಕ್ಷಕಿ ತೃಪ್ತಾ ತ್ಯಾಗಿ ಕಪಾಳಮೋಕ್ಷ ಮಾಡಿಸಿದ ಪ್ರಕರಣದ ವಿಚಾರವಾಗಿ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಘಟನೆ ನಡೆದಿರುವ ರೀತಿಗೆ ಸರ್ಕಾರದ ಆತ್ಮಸಾಕ್ಷಿಯೇ ಅಲ್ಲಾಡಿಹೋಗಬೇಕಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಘಟನೆಯನ್ನು ಗಂಭೀರ ಮತ್ತು ಚಿಂತಾಜನಕ ಎಂದಿರುವ ಸುಪ್ರೀಂ ಕೋರ್ಟ್, ಇದು ಬದುಕುವ ಹಕ್ಕಿನ ವಿಷಯ ಎಂದು ಹೇಳಿದೆ.
ಆ ಘಟನೆಯ ತೀವ್ರತೆ ಎಂಥದು ಮತ್ತದರಲ್ಲಿ ಸಂತ್ರಸ್ತ ಬಾಲಕನ ಮನಸ್ಸಿನ ಮೇಲೆ ಆಗಿರಬಹುದಾದ ಆಘಾತ ಎಂಥದಿರಬಹುದು ಎಂಬುದನ್ನು ನೆನೆಯುವುದೇ ಕಷ್ಟವೆನ್ನಿಸುತ್ತದೆ. ಉತ್ತರ ಪ್ರದೇಶದ ಮುಝಫರ್ ನಗರದ ಶಾಲೆಯೊಂದರ ಶಿಕ್ಷಕಿ ತೃಪ್ತಾ ತ್ಯಾಗಿ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದಲೇ ಕಪಾಳಮೋಕ್ಷ ಮಾಡಿಸಿದ್ದ ವೀಡಿಯೊ ವೈರಲ್ ಆಗಿತ್ತು. ವಿದ್ಯಾರ್ಥಿ ಅಳುತ್ತ ನಿಂತಿದ್ದಾಗ ಆತನ ಸಹಪಾಠಿಗಳು ಒಬ್ಬರಾದ ಮೇಲೆ ಒಬ್ಬರಂತೆ ಆತನಿಗೆ ಕಪಾಳಮೋಕ್ಷ ಮಾಡುತ್ತಿದ್ದುದು ವೀಡಿಯೊದಲ್ಲಿ ಕಂಡಿತ್ತು. ಇನ್ನಷ್ಟು ಬಲವಾಗಿ ಹೊಡೆಯುವಂತೆ ಶಿಕ್ಷಕಿ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದುದೂ ಅದರಲ್ಲಿ ಸ್ಪಷ್ಟವಾಗಿತ್ತು.
ಆದರೆ ಇಂಥದೊಂದು ಗಂಭೀರ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ನಿಭಾಯಿಸಿರುವುದಾದರೂ ಹೇಗೆ?. ಪ್ರಕರಣವನ್ನು ಪೊಲೀಸರು ನಿಭಾಯಿಸಿದ ರೀತಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಕೆಲ ಪ್ರಮುಖ ಆರೋಪಗಳನ್ನೇ ಒಳಗೊಂಡಿಲ್ಲ ಎಂಬುದನ್ನೂ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ಗಮನಿಸಿದೆ.
“ಎಫ್‌ಐಆರ್ ದಾಖಲಾದ ರೀತಿಗೆ ನಮ್ಮ ತೀವ್ರ ಆಕ್ಷೇಪ ಇದೆ. ಧರ್ಮದ ಕಾರಣಕ್ಕಾಗಿ ಮಗನನ್ನು ಥಳಿಸಲಾಗಿದೆ ಎಂದು ತಂದೆ ಹೇಳಿಕೆ ನೀಡಿದ್ದರು. ಆದರೆ ಎಫ್‌ಐಆರ್‌ನಲ್ಲಿ ಇದನ್ನು ಉಲ್ಲೇಖಿಸಿಲ್ಲ. ವಿಡಿಯೋ ಲಿಪ್ಯಂತರ ಎಲ್ಲಿ? ಇದು ಶಿಕ್ಷಣದ ಗುಣಮಟ್ಟದ ಪ್ರಶ್ನೆ. ಗುಣಮಟ್ಟದ ಶಿಕ್ಷಣ ಸಂವೇದನಾಶೀಲ ಶಿಕ್ಷಣವನ್ನು ಒಳಗೊಂಡಿರುತ್ತದೆ. ಘಟನೆ ಸಂಭವಿಸಿದ ರೀತಿಗೆ ಸರ್ಕಾರದ ಆತ್ಮಸಾಕ್ಷಿ ಅಲ್ಲಾಡಿಹೋಗಬೇಕಿತ್ತು" ಎಂದು ನ್ಯಾಯಮೂರ್ತಿ ಓಕಾ ಬೇಸರ ವ್ಯಕ್ತಪಡಿಸಿದ್ದಾರೆ.
ಕಪಾಳಮೋಕ್ಷ ಮಾಡುವಂತೆ ಸೂಚಿಸಿದ್ದ ಶಿಕ್ಷಕಿ ತೃಪ್ತಾ ತ್ಯಾಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್, ಘಟನೆಗೆ ಅತಿಯಾದ ಕೋಮು ಆಯಾಮ ನೀಡಲಾಗಿದೆ. ಇಲ್ಲೇನೋ ಇದೆ ಎಂದು ವಾದಿಸಿದಾಗ,
"ಅಲ್ಲಿರುವುದು ಏನೋ ಅಲ್ಲ, ಇದು ತುಂಬಾ ಗಂಭೀರ ವಿಚಾರ. ಮಗುವಿನ ಧರ್ಮದ ಕಾರಣಕ್ಕೆ ಮಗುವನ್ನು ಹೊಡೆಯಲು ಶಿಕ್ಷಕಿ ಆದೇಶ ನೀಡಿದ್ದರು. ಎಂಥ ಶಿಕ್ಷಣವನ್ನು ನೀಡಲಾಗುತ್ತಿದೆ?" ಎಂದು ನ್ಯಾ. ಓಕಾ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ."ಇದೊಂದು ಅತ್ಯಂತ ಕೆಟ್ಟ ರೀತಿಯ ದೈಹಿಕ ಶಿಕ್ಷೆ. ಒಬ್ಬ ವಿದ್ಯಾರ್ಥಿ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಆತನಿಗೆ ಶಿಕ್ಷೆ ನೀಡುತ್ತಾರೆ ಎಂದರೆ ಅಲ್ಲಿ ಯಾವುದೇ ರೀತಿಯ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ " ಎಂದೂ ಪೀಠ ಹೇಳಿದೆ.
ರಾಜ್ಯ ಸರ್ಕಾರ ನೇಮಿಸುವ ಹಿರಿಯ ಐಪಿಎಸ್ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಸಬೇಕು ಎಂದು ಪೀಠ ತಾಕೀತು ಮಾಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ದ್ವೇಷ ಭಾಷಣಕ್ಕೆ ಸಮನಾದ ಕೃತ್ಯ ನಡೆದಿದೆಯೇ ಎಂದು ಅಧಿಕಾರಿ ಪರಿಶೀಲಿಸಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಸಂತ್ರಸ್ತ ಬಾಲಕ ಮತ್ತು ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಇತರ ವಿದ್ಯಾರ್ಥಿಗಳಿಗೆ ವೃತ್ತಿಪರ ಸಲಹೆಗಾರರಿಂದ ಕೌನ್ಸೆಲಿಂಗ್ ನಡೆಸುವಂತೆಯೂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಇದು ಶಿಕ್ಷಣ ಹಕ್ಕು ಕಾಯ್ದೆಯ ನಿಬಂಧನೆಗಳನ್ನು ಅನುಸರಿಸಲು ಉತ್ತರ ಪ್ರದೇಶ ಸರ್ಕಾರದ ವಿಫಲಗೊಂಡಿರುವ ಪ್ರಕರಣವೂ ಹೌದು ಎಂದು ನ್ಯಾಯಾಲಯ ಹೇಳಿದೆ. ವಿದ್ಯಾರ್ಥಿಗಳ ಕೌನ್ಸೆಲಿಂಗ್ ಕುರಿತು ವರದಿ ಸಲ್ಲಿಸಲು ಮತ್ತು ಸಂತ್ರಸ್ತ ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸಂತ್ರಸ್ತ ವಿದ್ಯಾರ್ಥಿಗೆ ಸುರಕ್ಷತೆ ಹಾಗು ಹೊಸ ಶಾಲೆಗೆ ದಾಖಲಾತಿ ಸಹಿತ ಏನೇನು ಸೌಲಭ್ಯವನ್ನು ಒದಗಿಸಲಾಗಿದೆ ಎಂಬುದರ ವರದಿ ನೀಡಬೇಕು ಎಂದೂ ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಲಾಗಿದೆ.
ವಿವಾದದ ಕೇಂದ್ರಬಿಂದುವಾಗಿರುವ ಖುಬ್ಬಾಪುರ ಗ್ರಾಮದ ಖಾಸಗಿ ಶಾಲೆಯ ಶಿಕ್ಷಕಿ ತೃಪ್ತಾ ತ್ಯಾಗಿ, ಬಾಲಕನ ಧರ್ಮ ಉಲ್ಲೇಖಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದು, ಆತನಿಗೆ ಬಲವಾಗಿ ಹೊಡೆಯುವಂತೆ ಸಹಪಾಠಿಗಳಿಗೆ ಸೂಚಿಸಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಶಾಲೆಗೆ ಬೀಗಮುದ್ರೆ ಹಾಕಲಾಗಿತ್ತು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಕಿ ತೃಪ್ತಾ ತ್ಯಾಗಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಘಟನೆಯನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಲು ಮುಂದಾಗಿತ್ತು. ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವಂತೆ, ತುಂಬಾ ತಡವಾಗಿ ಈ ಸೆಪ್ಟೆಂಬರ್ 6ರಂದು ಎಫ್ಐಆರ್ ದಾಖಲಿಸಲಾಗಿದೆ. ಅಷ್ಟಾಗಿಯೂ, ಅದರಲ್ಲಿ ಮುಖ್ಯವಾಗಿ ದಾಖಲಿಸಬೇಕಿದ್ದ ವಿಚಾರಗಳನ್ನೇ ಉಲ್ಲೇಖಿಸದಿರುವುದು ಏನನ್ನು ಸೂಚಿಸುತ್ತದೆ?
ಇದು ಪೊಲೀಸರ ನಿರ್ಲಕ್ಷ್ಯವೊ ಅಥವಾ ವ್ಯವಸ್ಥಿತವಾಗಿ ಎಲ್ಲವನ್ನೂ ಮರೆಮಾಚುವ ಬಿಜೆಪಿಯ ಯಥಾ ಪ್ರಕಾರದ ಶೈಲಿಯೊ ಎಂಬ ಪ್ರಶ್ನೆಯೂ ಏಳುತ್ತದೆ. ಘಟನೆ ಬೆಳಕಿಗೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷ ಬಿತ್ತುವುದು, ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷ ಮಾರುಕಟ್ಟೆಯನ್ನಾಗಿಸುವುದಕ್ಕಿಂತ ಕೆಟ್ಟ ಕೆಲಸ ಇನ್ನೊಂದಿಲ್ಲ. ಬಿಜೆಪಿ ಹರಡಿರುವ ಇದೇ ಸೀಮೆ ಎಣ್ಣೆಯೇ ಭಾರತದ ಪ್ರತಿ ಮೂಲೆಯಲ್ಲಿಯೂ ಬೆಂಕಿ ಹೊತ್ತಿಸಿದೆ. ಮಕ್ಕಳು ಭಾರತದ ಭವಿಷ್ಯ. ಅವರನ್ನು ದ್ವೇಷಿಸಬೇಡಿ. ನಾವೆಲ್ಲರೂ ಜತೆಯಾಗಿ ಪ್ರೀತಿ ಕಲಿಸಬೇಕಿದೆ ಎಂಬ ರಾಹುಲ್ ಮಾತು ಅತ್ಯಂತ ಮಹತ್ವದ್ದು.
ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಅಥವಾ ಅವರ ಬಿಜೆಪಿ, ಇಂಥ ಸೂಕ್ಷ್ಮಗಳನ್ನು ಎಂದೂ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲವೇನೊ. ಸುಡುವ ಕೆಲಸವನ್ನೇ ತಮ್ಮ ರಾಜಕೀಯ ಅಸ್ತಿತ್ವದ ಆಧಾರವನ್ನಾಗಿ ಮಾಡಿಕೊಂಡಿರುವ ಮಂದಿಗೆ ದೇಶದಲ್ಲಿ ಮನಸ್ಸುಗಳು ಬೆಂದುಹೋಗುತ್ತಿರುವ ಕಠೋರ ಸತ್ಯ ಅರ್ಥವಾಗುವುದಾದರೂ ಹೇಗೆ?