ಅನನ್ಯ ಚಿಂತಕ, ಸಂಘಟಕ ಮತ್ತು ಹೋರಾಟಗಾರ ಪ್ರೊ. ಮುಜಾಫರ್ ಅಸ್ಸಾದಿ
ಪ್ರೊ.ಮುಜಾಫರ್ ಅಸ್ಸಾದಿ ನಾಡು ಕಂಡ ಪ್ರತಿಭಾವಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಸಮಾಜಮುಖಿ ಚಿಂತಕರು ಮತ್ತು ಒಳಗೊಳ್ಳುವ ಅಭಿವೃದ್ಧಿ ಹರಿಕಾರರಾಗಿದ್ದಾರೆ. ಉಡುಪಿ ಜಿಲ್ಲೆಯ ಶಿರ್ವ ಎಂಬ ಊರಿನಲ್ಲಿ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ ಇವರು ಪ್ರತಿಷ್ಠಿತ ಮಂಗಳೂರು, ಗೋವಾ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಜನಪ್ರಿಯ ಅಧ್ಯಾಪಕರು, ಸಂಶೋಧಕರು ಮತ್ತು ಬರಹಗಾರರಾಗಿ ಸೇವೆ ಸಲ್ಲಿಸಿ ಅಪಾರ ವಿದ್ವತ್ತನ್ನು ಗಳಿಸಿರುವ ಅಪರೂಪದ ವ್ಯಕ್ತಿಯಾಗಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ, ಎಂ.ಫಿಲ್. ಪದವಿ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಪದವಿ, ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್-ಡಾಕ್ಟರೇಟ್ ಪದವಿ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಜೆಆರ್‌ಎಫ್ ಫೆಲೋಶಿಪ್, ರಾಕ್ ಫೆಲ್ಲರ್ ಫೆಲೋಶಿಪ್ ಮೊದಲಾದ ಪ್ರತಿಷ್ಠಿತ ಪದವಿ ಮತ್ತು ಪುರಸ್ಕಾರಗಳನ್ನು ಗಳಿಸಿರುವ ಘನ ವಿದ್ವಾಂಸರಾಗಿದ್ದಾರೆ.
ಪ್ರೊ.ಅಸ್ಸಾದಿ ರಾಜ್ಯಶಾಸ್ತ್ರ ಉಪನ್ಯಾಸಕ (1991-1994), ಪ್ರವಾಚಕ (1994-2002), ಪ್ರಾಧ್ಯಾಪಕ (2002-2023) ಮೊದಲಾದ ಹುದ್ದೆಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ, ಗೋವಾ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಸಮರ್ಥವಾಗಿ ನಿರ್ವಹಿಸಿ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ರಾಜ್ಯಶಾಸ್ತ್ರ ಮುಖ್ಯವಾಹಿನಿಯಲ್ಲಿ ಪ್ರತಿಭಾವಂತ ಬೋಧಕ, ಸಂಶೋಧಕ, ಚಿಂತಕ, ಬರಹಗಾರ ಮತ್ತು ಉತ್ತೇಜಕರಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಅವರು ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಅಭಿವೃದ್ಧಿಶಾಸ್ತ್ರ ಮೊದಲಾದವುಗಳನ್ನು ತಮ್ಮ ವಿನೂತನ ಚಿಂತನೆಗಳು ಮತ್ತು ವಿದ್ವತ್ಪೂರ್ಣ ವಿಚಾರಧಾರೆಗಳಿಂದ ಶ್ರೀಮಂತಗೊಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಪ್ರೊ.ಅಸ್ಸಾದಿ ದೇಶ ವಿದೇಶಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿ ಸಾರಸ್ವತ ಲೋಕದ ಗಮನ ಸೆಳೆದಿದ್ದಾರೆ. ಇವರು ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಸುಮಾರು 14 ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಇವರ 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪಾಂಡಿತ್ಯಪೂರ್ಣ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಬರಹಗಳನ್ನು ಸ್ನಾತಕಪೂರ್ವ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ಹಂತದ ಕೋರ್ಸ್‌ಗಳಿಗೆ ಪಠ್ಯಗಳಾಗಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಬೋಧಿಸಲಾಗುತ್ತಿದೆ. ಇವರು ವಿಶ್ವದಾದ್ಯಂತ ಸುಮಾರು 15ಕ್ಕೂ ಹೆಚ್ಚು ಪ್ರತಿಷ್ಠಿತ ನಿಯತಕಾಲಿಕೆಗಳ ಸಂಪಾದಕೀಯ ಮಂಡಳಿಯಲ್ಲಿ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಬರಹಗಳು ಫ್ರೆಂಚ್, ಮರಾಠಿ, ತಮಿಳು ಮತ್ತು ಉರ್ದು ಭಾಷೆಗಳಲ್ಲಿ ತರ್ಜುಮೆಗೊಂಡಿವೆ. ಇವರು ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ ಸೇವಾ ಆಯೋಗಗಳಲ್ಲಿ ಪರೀಕ್ಷಕರಾಗಿ ಮತ್ತು ಸಂದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಭಾರತದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಪರೀಕ್ಷಾ ಮಂಡಳಿ ಸದಸ್ಯರು, ಅಧ್ಯಯನ ಮಂಡಳಿ ಸದಸ್ಯರು, ನೇಮಕಾತಿ ಮಂಡಳಿ ಸದಸ್ಯರು ಮೊದಲಾದ ಮಹತ್ವದ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸುಮಾರು 24 ಮಂದಿ ಸಂಶೋಧಕರು ರುವಾಂಡಾ, ಅಫ್ಘಾನಿಸ್ತಾನ, ಇರಾನ್, ಯುಕೆ ಮೊದಲಾದೆಡೆ ಪಿಎಚ್.ಡಿ ಪದವಿ ಗಳಿಸಿದ್ದಾರೆ.
ಪ್ರೊ.ಅಸ್ಸಾದಿ ಪಂಜಾಬ್ ವಿಶ್ವವಿದ್ಯಾನಿಲಯ, ಕೇರಳ ವಿಶ್ವವಿದ್ಯಾನಿಲಯ, ಮದ್ರಾಸ್ ವಿಶ್ವವಿದ್ಯಾನಿಲಯ, ರಶ್ಯನ್ ಸ್ಟೇಟ್ ಯೂನಿವರ್ಸಿಟಿ ಫಾರ್ ಹ್ಯೂಮಾನಿಟೀಸ್ ಮೊದಲಾದೆಡೆ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೂರು ದಶಕಗಳಿಗೂ ಮೀರಿದ ತಮ್ಮ ಸೇವಾ ಅವಧಿಯಲ್ಲಿ ಸುಮಾರು 500ಕ್ಕೂ ಹೆಚ್ಚು ವಿಶೇಷ ಉಪನ್ಯಾಸಗಳನ್ನು ನೀಡಿ ಯುವ ವಿದ್ಯಾರ್ಥಿಗಳು ಮತ್ತು ಸಂಶೋಧಕರ ಜ್ಞಾನದ ಪರಿಧಿಯನ್ನು ಹೆಚ್ಚಿಸಿದ್ದಾರೆ. ಇವರು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮುದ್ರಣ ಮಾಧ್ಯಮಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅರ್ಥಪೂರ್ಣ ಸಂವಾದಗಳು ಮತ್ತು ಬರಹಗಳನ್ನು ಪ್ರಸಾರ ಮಾಡಿ ರಾಜ್ಯಶಾಸ್ತ್ರ ಮುಖ್ಯವಾಹಿನಿಯಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕರಾಗಿ ರೂಪುಗೊಂಡಿದ್ದಾರೆ. ಕರ್ನಾಟಕ ಅಭಿವೃದ್ಧಿ ಮಾದರಿ ಎಂಬ ವಿಷಯದಲ್ಲಿ ಇವರ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ಸಾರಸ್ವತ ಲೋಕದಲ್ಲಿ ವಿಶೇಷ ಮಾನ್ಯತೆ ಗಳಿಸಿವೆ. ಕರ್ನಾಟಕ ರಾಜ್ಯದ ಬುಡಕಟ್ಟು ಸಮುದಾಯಗಳ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ರಾಜ್ಯ ಸರಕಾರಕ್ಕೆ ಮೌಲಿಕ ವರದಿ ನೀಡಿದ್ದಾರೆ. ಅಸ್ಸಾದಿ ಸಮಿತಿ ವರದಿ ಎಂದು ಹೆಸರಾಗಿರುವ ಈ ವರದಿ ಬುಡಕಟ್ಟು ಜನರ ಒಳಗೊಳ್ಳುವ ಅಭಿವೃದ್ಧಿಗೆ ಮೌಲಿಕ ಕೊಡುಗೆ ನೀಡಿದೆ. ಇವರು ದಲಿತರ ಮೇಲಿನ ದೌರ್ಜನ್ಯಗಳು, ರೈತರ ಆತ್ಮಹತ್ಯೆ, ವಿವಿಧ ಜನಾಂಗಗಳಿಗೆ ಮೀಸಲಾತಿ ಸೌಲಭ್ಯ ಮೊದಲಾದ ವಿಷಯಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿ ವಿದ್ವತ್ಪೂರ್ಣ ಶಿಫಾರಸುಗಳನ್ನು ಮಂಡಿಸಿದ್ದಾರೆ.
ಪ್ರೊ.ಅಸ್ಸಾದಿ ಅವರ ಕಾರ್ಯಕ್ಷೇತ್ರ ವಿಶ್ವವಿದ್ಯಾನಿಲಯಗಳಿಗಷ್ಟೇ ಸೀಮಿತವಾಗಿಲ್ಲ. ಇವರು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಆ್ಯಂಡ್ ಇಕನಾಮಿಕ್ ಚೇಂಜ್ ಎಂಬ ಸಂಸ್ಥೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ಇಂಡಿಯನ್ ಸೋಷಿಯಲ್ ಸೈನ್ಸ್ ಅಕಾಡಮಿಯ ಅಧ್ಯಕ್ಷರಾಗಿ 2024-25ರ ಅವಧಿಗೆ ಚುನಾಯಿತರಾಗಿದ್ದಾರೆ. ಸಮಾಜ ವಿಜ್ಞಾನ ಶಾಖೆಯ ಅತ್ಯಂತ ಉನ್ನತ ಸಂಸ್ಥೆಯಲ್ಲಿ ಇಂತಹ ಅವಕಾಶ ಸಿಕ್ಕಿರುವುದು ಇವರ ವಿದ್ವತ್ತಿಗೆ ಸಾಕ್ಷಿಯಾಗಿದೆ. ಇವರು ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ಪೂರಕವಾದ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ತಳಸಮುದಾಯಗಳ ಶಿಕ್ಷಣ, ಸಂಘಟನೆ, ಹೋರಾಟ ಮತ್ತು ಸಬಲೀಕರಣ ಕಾರ್ಯಚಟುವಟಿಕೆಗಳಲ್ಲಿ ಪ್ರೊ.ಅಸ್ಸಾದಿ ಅತ್ಯಂತ ಪ್ರೀತಿ ಮತ್ತು ಬದ್ಧತೆಗಳಿಂದ ತೊಡಗಿಸಿಕೊಂಡಿದ್ದಾರೆ. ಆಗಸ್ಟ್ 31, 2023ರಲ್ಲಿ ಸೇವೆಯಿಂದ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಪ್ರೊ.ಅಸ್ಸಾದಿ ಅವರಿಗೆ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗಗಳು ಪ್ರೀತಿಪೂರ್ವಕ ವಿದಾಯ ಹೇಳುವ ಸಂದರ್ಭದಲ್ಲಿ ಜಾಗತೀಕರಣ, ನೆಲೆ-ಬೆಲೆ ಮತ್ತು ಪ್ರಜಾಸತ್ತೆ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆ. ಕನ್ನಡನಾಡು ಕಂಡ ಅಪೂರ್ವ ವಿದ್ವಾಂಸ, ಚಿಂತಕ ಮತ್ತು ಹೋರಾಟಗಾರ ಪ್ರೊ.ಅಸ್ಸಾದಿ ಅವರಿಗೆ ನಿವೃತ್ತಿ ಎಂಬ ಪದ ಅನ್ವಯಿಸುವುದಿಲ್ಲ. ದಣಿವರಿಯದ ಚಿಂತಕ, ಸಂಶೋಧಕ ಮತ್ತು ದೀನಬಂಧು ಪ್ರೊ.ಅಸ್ಸಾದಿ ಅವರಿಗೆ ಹೆಚ್ಚಿನ ಪುರಸ್ಕಾರ ಮತ್ತು ಅವಕಾಶಗಳು ಲಭಿಸಲೆಂದು ಹಾರೈಸುತ್ತೇನೆ.