ಕುರಿ ಸಾಕಣೆಯತ್ತ ಯುವಕನ ಚಿತ್ತ
ಕೃಷಿ ಕೈಕೊಟ್ಟಾಗ ಹೈನುಗಾರಿಕೆಗೆ ಮುಂದಾದ ಪದವೀಧರ
ಹೊಸಕೋಟೆ, ಕುರಿ ಮತ್ತು ಮೇಕೆ ಸಾಕುವು ದನ್ನು ಕೃಷಿಯೊಂದಿಗಿನ ಉಪಕಸುಬು ಎಂದು ನಂಬಿದ ದಿನಗಳಿದ್ದವು. ಈಗ ಕಾಲ ಬದಲಾಗಿದೆ. ಕುರಿ ಸಾಕಣೆ ಇದೀಗ ಲಾಭದಾಯಕ ಉದ್ಯಮವಾಗಿದೆ. ಅದಕ್ಕೊಂದು ವಾಣಿಜ್ಯ ಆಯಾಮವೂ ದೊರಕಿದೆ. ಈವರೆಗೂ 10-20ಕುರಿಗಳು ಅಥವಾ ಅಷ್ಟೇ ಸಂಖ್ಯೆಯ ಮೇಕೆಗಳನ್ನು ಸಾಕುವುದರಲ್ಲಿಯೇ ತೃಪ್ತಿಕಾಣುತ್ತಿದ್ದ ರೈತರು, ಇದೀಗ ಕುರಿ ಸಾಕಣೆಯನ್ನೇ ಸಂಪಾದನೆಯ ಹೊಸ ಮಾರ್ಗವಾಗಿ ಮಾಡಿಕೊಂಡಿದ್ದಾರೆ.
ಉದ್ಯೋಗ ನಿಮಿತ್ತ ಸಿಟಿಗೆ ಹೋಗುವ ಬದಲು ಕುರಿ ಸಾಕಣೆಯಿಂದಲೇ ಸಾಕಷ್ಟು ಲಾಭ ಮಾಡಬಹುದು ಎಂದು ಯೋಚಿಸಿ, ಯುವಕರೂ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೊಂದು ಉದಾಹರಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಪದವೀಧರ ಕಿರಣ್ ಕುಮಾರ್. ಕೃಷಿಯಲ್ಲಿ ತೊಡಗಿ ಸಿಕೊಂಡಿದ್ದ ಕಿರಣ್, ಕೃಷಿಯಲ್ಲಿ ನಷ್ಟವಾದಾಗ, ಕುರಿ ಸಾಕಣೆಯ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಈಗ, ಆಧುನಿಕ ರೀತಿಯಲ್ಲಿ ಶೆಡ್ ನಿರ್ಮಿಸಿ, 25 ಕ್ಕೂ ಹೆಚ್ಚು ಕುರಿಗಳನ್ನು ಸಾಕುತ್ತಿದ್ದಾರೆ. ನಾರಿ ಸುವರ್ಣ, ಶಿರಾ, ನಾಟಿ ತಳಿಯ ಕುರಿಗಳನ್ನು ಅವರ ಫಾರ್ಮ್ನಲ್ಲಿ ಕಾಣಬಹುದು. ನೆಲದಿಂದ 5 ಅಡಿ ಎತ್ತರದಲ್ಲಿ 30 ಅಡಿ ಅಗಲ ಮತ್ತು 25 ಅಡಿ ಉದ್ದದ ವ್ಯವಸ್ಥಿತ ಶೆಡ್ ನಿರ್ಮಿಸಿದ್ದಾರೆ.
ಒಂದು ಅಥವಾ ಒಂದೂವರೆ ತಿಂಗಳ ಕುರಿ ಮರಿಯ ಬೆಲೆ 1,000ರಿಂದ 1,500 ರೂಪಾಯಿಗಳು, ಅದನ್ನು ಒಂದು ವರ್ಷ ಕಾಲ ಉತ್ತಮ ಆಹಾರ ನೀಡಿ ಸಾಕಿದರೆ, ಆ ಕುರಿ 25ರಿಂದ 30 ಕೆ.ಜಿ.ವರೆಗೆ ತೂಕ
ಬರುತ್ತದೆ. ಈಗ, ಒಂದು ಕೆ.ಜಿ.ಕುರಿ ಮಾಂಸದ ಬೆಲೆ 750 ರಿಂದ800 ರೂ. ವರೆಗೂ ಇದೆ. ಹಾಗಾಗಿ ಕುರಿ ಸಾಕಣೆಯಿಂದ ನಷ್ಟವಂತೂ ಆಗುವುದಿಲ್ಲ ಅನ್ನುವುದು ಹೈನುಗಾರರ ಮಾತು.
ಸಾಮಾನ್ಯವಾಗಿ ಕುರಿಗಳು ಮೇವಿನಲ್ಲಿರುವ ಎಲೆ ತಿಂದು ಕಾಂಡವನ್ನು ಬಿಟ್ಟು ಬಿಡುತ್ತವೆ. ಈ ರೀತಿ ಮೇವು ವ್ಯರ್ಥವಾಗುವುದನ್ನು ತಡೆಯಲು ನಾವು ಮೇವು ಕತ್ತರಿಸುವ ಯಂತ್ರ ಬಳಸುತ್ತೇವೆ. ಹಸಿರು ಮೇವನ್ನು ಕತ್ತರಿಸಿ ಅದಕ್ಕೆ ಬೆಲ್ಲ ಹಾಗೂ ಉಪ್ಪನ್ನು ಮಿಶ್ರಣ ಮಾಡಿ, 20 ದಿನಗಳವರಗೆ ಶೇಖರಣೆ ಮಾಡಿ ನಂತರ ಕುರಿಗಳಿಗೆ ಹಾಕುತ್ತೇವೆ. ಬೆಲ್ಲ ಮತ್ತು ಉಪ್ಪು ಮಿಶ್ರಿತ ಆಹಾರ ಸೇವನೆಯಿಂದ ಕುರಿಗಳು ಚೆನ್ನಾಗಿ ಬೆಳೆಯುತ್ತವೆ.
- ಕಿರಣ್ ಕುಮಾರ್, ಕೃಷಿಕ