ಭ್ರಷ್ಟಾಚಾರ ನಿಗ್ರಹದ ಭಾಷಣ ಮಾಡಿ ಭ್ರಷ್ಟಾಚಾರಿಗಳ ಜೊತೆಗೇ ಸರಕಾರ !
70 ಸಾವಿರ ಕೋಟಿ ಹಗರಣದ ಆರೋಪ ಮುಕ್ತರಾದರೆ ಅಜಿತ್ ಪವಾರ್ ?
ನೀವೊಮ್ಮೆ ಊಹಿಸಿ ನೋಡಿ. ಬೇರೆ ಯಾರೋ ನಾಯಕರಲ್ಲ. ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೇವಲ 5 ದಿನಗಳ ಹಿಂದೆ ಭೋಪಾಲ್ ನಲ್ಲಿ ಶರದ್ ಪವಾರ್ ಅವರ ಎನ್ ಸಿ ಪಿ ಪಕ್ಷದ ಮೇಲೆ 70 ಸಾವಿರ ಕೋಟಿ ರೂಪಾಯಿಯ ಹಗರಣಗಳ ಸರಮಾಲೆಯೇ ಮಾಡಿದೆ ಅಂತ ಸಾರ್ವಜನಿಕ ಸಭೆಯಲ್ಲೇ ಗಂಭೀರ ಆರೋಪ ಮಾಡ್ತಾರೆ. ಈ ಎಲ್ಲ ಆರೋಪಗಳ ವಿರುದ್ಧ ಸಮಗ್ರ ತನಿಖೆಯ ಗ್ಯಾರಂಟಿ ನನ್ನದು ಅಂತ ಆರ್ಭಟಿಸ್ತಾರೆ ಪ್ರಧಾನಿ ಮೋದಿ. ಅದಕ್ಕೆ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಸಾರ್ವಜನಿಕರಿಂದ ಭಾರೀ ಹರ್ಷೋದ್ಘಾರ, ಘೋಷಣೆ, ಕರತಾಡನ. ಅದರ ಬೆನ್ನಿಗೆ ವಾಹ್.. ವಾಹ್.. ಭ್ರಷ್ಟಾಚಾರಿಗಳ ವಿರುದ್ಧ ಮೋದಿ ಮಾಸ್ಟರ್ ಸ್ಟ್ರೋಕ್ ಅಂತ ಅವರ ಐಟಿ ಸೆಲ್ ಎಲ್ಲಾ ಕಡೆ ಎಂದಿನಂತೆ ಹೇಳಿದ್ದೇ ಹೇಳಿದ್ದು.
ಇದೆಲ್ಲ ಆಗಿ ಐದನೇ ದಿನಕ್ಕೆ, ಹೌದು ಕೇವಲ ಐದನೇ ದಿನಕ್ಕೆ ಅದೇ ಪಕ್ಷದ, ಅದೇ ಬೃಹತ್ ಹಗರಣ ಸರಣಿಯ ರೂವಾರಿ ಎನ್ನಲಾದ ಅಜಿತ್ ಪವಾರ್ ಬಿಜೆಪಿ ಮೈತ್ರಿಕೂಟದ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗ್ತಾರೆ. ಅವರ ಜೊತೆ ಅವರದೇ ಪಕ್ಷದ ಇನ್ನೂ ಎಂಟು ಮಂದಿ ಕೂಡ ಸಚಿವರಾಗ್ತಾರೆ. ಹಾಗಾದರೆ ಭೋಪಾಲ್ ನಲ್ಲಿ ಪ್ರಧಾನಿ ಕೊಟ್ಟ ಸಮಗ್ರ ತನಿಖೆಯ ಗ್ಯಾರಂಟಿ ಅಂದ್ರೆ ಏನು ? ಆ ಎಪ್ಪತ್ತು ಸಾವಿರ ಕೋಟಿ ರೂಪಾಯಿ ಆರೋಪಗಳೆಲ್ಲಾ ಸುಳ್ಳೇ ? ಅಥವಾ ಆ ಆರೋಪ ಮಾಡಿ ತನಿಖೆಯ ಮಾತಾಡಿದ್ದೇ ಆ ಆರೋಪಿಗಳಿಗೆ ಬಂದು ತಮ್ಮ ಸರಕಾರವನ್ನು ಬೆಂಬಲಿಸಿ ಎಂದು ಸೂಚನೆ ಕೊಡಲಿಕ್ಕಾ ?
ಪ್ರಧಾನಿ ನರೇಂದ್ರ ಮೋದಿ ಮಾತ್ರ ಇಂತಹ ಕ್ರೂರ ಜೋಕ್ ಮಾಡಲು ಸಾಧ್ಯ. ಯಾಕಂದ್ರೆ ಅವರೇನೇ ಹೇಳಿದ್ರೂ ಜನರಿಗೆ ಅದರಿಂದ ಯಾವುದೇ ವ್ಯತ್ಯಾಸ ಆಗೋದಿಲ್ಲ. ಅವರು ಹಾಗೆ ಹೇಳಿದ್ದೂ ಸರಿ, ಈಗ ಹೀಗೆ ಮಾಡಿದ್ದೂ ಸರಿ ಅಂತ ನಂಬೋ ಜನ ಬೇಕಾದಷ್ಟು ಈ ದೇಶದಲ್ಲಿದ್ದಾರೆ ಅನ್ನೋ ಧೈರ್ಯ ಅವರಿಗಿದೆ.
ಇನ್ನೂ ಒಂದು ಭಯಂಕರ ತಮಾಷೆ ಏನು ಗೊತ್ತಾ ? "ನಾವು ಅಧಿಕಾರಕ್ಕೆ ಬಂದ್ರೆ ಇದೇ ಅಜಿತ್ ಪವಾರ್ ಜೈಲಿಗೆ ಹೋಗಿ ಅಲ್ಲಿ ಮೈ ಮುರಿದು ಕೆಲ್ಸ ಮಾಡ್ತಾ ಇರ್ಬೇಕು" ಅಂತ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಈ ಹಿಂದೆ ಹೇಳಿದ್ದರು. ಅದಕ್ಕವರು ಶೋಲೆ ಚಿತ್ರದ " ಚಕ್ಕಿ ಪೀಸಿಂಗ್ ಅಂಡ್ ಪೀಸಿಂಗ್ " ಡೈಲಾಗ್ ಕೂಡ ಹೊಡೆದಿದ್ದರು.
ಈಗ ಅದೇ ದೇವೇಂದ್ರ ಫಡ್ನವಿಸ್ ಇರುವ ಸರಕಾರದಲ್ಲೇ ಅದೇ ಅಜಿತ್ ಪವಾರ್, ಅವರಿಗೆ ಸಹೋದ್ಯೋಗಿ ಉಪಮುಖ್ಯಮಂತ್ರಿ !. ಈ ದೇವೇಂದ್ರ ಫಡ್ನವಿಸ್ ಅವರು ಐದು ವರ್ಷ ಸಿಎಂ ಆಗಿದ್ದವರು. ಈಗವರನ್ನು ಮೋದಿ - ಶಾ ಡಿಸಿಎಂ ಹುದ್ದೆಗೆ ಇಳಿಸಿದ್ದಾರೆ. ಸಾಲದ್ದಕ್ಕೆ, ಹಗರಣಗಳ ಆರೋಪಿ ಅಜಿತ್ ಪವಾರ್ ಕೂಡ ಅವರ ಜೊತೆಗೇ ಡಿಸಿಎಂ ಆಗಿದ್ದಾರೆ. ಅಂದ್ರೆ, "ಮೋದಿ ಹೈತೋ ಕುಛ್ ಬೀ ಮುಮ್ಕಿನ್ ಹೈ".
ಮಹಾರಾಷ್ಟ್ರದಲ್ಲಿ ರವಿವಾರ ನಡೆದಿರುವ ಬೆಳವಣಿಗೆ. ಪಕ್ಷಾಂತರ, ಆಪರೇಷನ್ ಕಮಲ ಇತ್ಯಾದಿಗಳ ಎಲ್ಲ ವ್ಯಾಖ್ಯೆಗಳನ್ನು, ಮಿತಿಗಳನ್ನು ಮೀರಿದೆ. ಅಲ್ಲೀಗ ಕೇವಲ ಒಂದೇ ವರ್ಷದ ಅವಧಿಯಲ್ಲಿ ಆ ರಾಜ್ಯದ ಎರಡು ಪ್ರಮುಖ ಹಾಗು ಅಷ್ಟೇ ಪ್ರಭಾವೀ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ನುಂಗಿ ನೀರು ಕುಡಿದಿದೆ. ಈಗಾಗಲೇ ರಾಜ್ಯದಲ್ಲಿದ್ದ ಶಿವಸೇನೆ - ಕಾಂಗ್ರೆಸ್ - ಎನ್ ಸಿ ಪಿ ಮೈತ್ರಿ ಸರಕಾರ ಉರುಳಿಸಿ, ಶಿವಸೇನೆಯ 57 ರಲ್ಲಿ 40 ಶಾಸಕರನ್ನು ತಂದು, ಬಿಜೆಪಿ - ಶಿವಸೇನೆ ಮೈತ್ರಿ ಸರಕಾರ ರಚಿಸಿ ಏಕನಾಥ್ ಶಿಂಧೆಯನ್ನು ಸಿಎಂ ಮಾಡಿತ್ತು ಬಿಜೆಪಿ. ಆ ಮೂಲಕ ಶಿವಸೇನೆಯ ಉದ್ಧವ್ ಠಾಕ್ರೆಗೇ ಪಕ್ಷವೇ ಇಲ್ಲದಂತೆ ಮಾಡಿತ್ತು.
ಈಗ ಒಂದೇ ವರ್ಷದಲ್ಲಿ ಆ ರಾಜ್ಯದ ಇನ್ನೊಂದು ಪ್ರಭಾವೀ ಪ್ರಾದೇಶಿಕ ಪಕ್ಷ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ 54ರಲ್ಲಿ ಸುಮಾರು 40 ಶಾಸಕರನ್ನು ತಂದು, ಆ ಪಕ್ಷದ ಅಜಿತ್ ಪವಾರ್ ಅವರನ್ನು ಡಿಸಿಎಂ ಮಾಡಿದೆ. ಅಲ್ಲಿಗೆ ಮರಾಠಾ ಸ್ಟ್ರಾಂಗ್ ಮ್ಯಾನ್, ಪವರ್ ಪಾಲಿಟಿಕ್ಸ್ ನ ಪಿತಾಮಹ ಶರದ್ ಪವಾರ್ ಅವರಿಗೇ ಪಕ್ಷ ಇಲ್ಲದಂತೆ ಮಾಡಿ ಬಿಟ್ಟಿದೆ ಮೋದಿ - ಅಮಿತ್ ಶಾ ಜೋಡಿಯ ಬಿಜೆಪಿ.
288 ಸದಸ್ಯ ಬಲದ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಈಗಾಗಲೇ ಬಿಜೆಪಿ - ಶಿವಸೇನೆಗೆ ಬಹುಮತ ಇತ್ತು. ಈಗ ಅದರ ಜೊತೆಗೆ ಎನ್ ಸಿ ಪಿ ಯ ಎಷ್ಟು ಶಾಸಕರು ಹೋಗಿದ್ದಾರೆ ಅವರ ಬೆಂಬಲವೂ ಸಿಕ್ಕಿತು. ಎನ್ ಸಿ ಪಿ ಯಿಂದ 40 ಶಾಸಕರು ಬೆಂಬಲ ನೀಡುತ್ತಿರೋದು ಖಚಿತ ಎಂದಾದರೆ ಈ ಸರಕಾರಕ್ಕೆ ಇನ್ನೂರಕ್ಕೂ ಹೆಚ್ಚು ಸ್ಥಾನಗಳ ಬಹುಮತವಿದೆ.
ಅಂದ್ರೆ ವಿಷಯ ಬಹಳ ಸಿಂಪಲ್. ನೀವು ಮತದಾರರು ಯಾವ ಪಕ್ಷಕ್ಕೆ ಓಟು ಹಾಕಿದ್ರೂ ಬರೋದು ಬಿಜೆಪಿ ಸರಕಾರವೇ. ನೀವು ಬಿಜೆಪಿ ವಿರುದ್ಧವೇ ಓಟು ಹಾಕಿದ್ರೂ ಕೊನೆಗೆ ಬರೋದು ಬಿಜೆಪಿ ಸರಕಾರವೇ. ಅಷ್ಟೇ ಅಲ್ಲ, ಹಾಗೆ ಬರುವ ಬಿಜೆಪಿ ಸರಕಾರಕ್ಕೆ ಬಹುಮತ ಸಿಕ್ಕಿದ್ರೆ ಸಾಲದು, ಅಲ್ಲಿ ವಿಪಕ್ಷವೇ ಇರಬಾರದು, ವಿಪಕ್ಷದ ಪಕ್ಷಗಳೂ ಇರಬಾರದು. ಅಲ್ಲೀವರೆಗೆ ಬಿಜೆಪಿ ಆಪರೇಷನ್ ಮಾಡ್ತಾನೆ ಇರುತ್ತದೆ. ಅಷ್ಟೇ.
ಹಾಗಾಗಿ ಈಗ ಎದ್ದಿರೋ ಪ್ರಶ್ನೆ - ಮೋದಿಜಿ ಮೊನ್ನೆ ಭೋಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಕೊಟ್ರಲ್ಲಾ... ಆ ಗ್ಯಾರಂಟಿ ಯಾವುದು ? ಅದು ತಮ್ಮ ಪಕ್ಷಕ್ಕೆ ಬೆಂಬಲಿಸಿ ಬಂದರೆ ನಿಮ್ಮ ವಿರುದ್ಧ ಇರೋ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಯಾವುದೇ ತನಿಖೆ ಮಾಡೋದಿಲ್ಲ ಅನ್ನೋ ಗ್ಯಾರೆಂಟಿನಾ ?
ಹಾಗೆ ನೋಡಿದರೆ ನಿನ್ನೆ ಮಹಾರಾಷ್ಟ್ರದಲ್ಲಿ ನಡೆದಿರೋ ಬೆಳವಣಿಗೆ ಹಲವು ಕ್ರೂರ ಜೋಕುಗಳ ಒಂದು ಸರಣಿ. ಅಜಿತ್ ಪವಾರ್ ಡಿಸಿಎಂ ಆಗುವಾಗ ಅವರ ಜೊತೆ ಅವರ ಪಕ್ಷದ ಇನ್ನೂ ಎಂಟು ಮಂದಿ ಪ್ರಮಾಣ ವಚನ ಸ್ವೀಕರಿಸಿದರು. ಆ ಪೈಕಿ ಹಲವರ ಮೇಲೆಯೂ ಗಂಭೀರ ಭ್ರಷ್ಟಾಚಾರ ಆರೋಪಗಳಿವೆ. ನಿನ್ನೆ ಸಚಿವರಾಗಿ ಪ್ರಮಾಣ ಮಾಡಿದ ಛಗನ್ ಭುಜಬಲ್ ರನ್ನು ಭ್ರಷ್ಟಾಚಾರ ಆರೋಪದಲ್ಲಿ ಬಿಜೆಪಿ ಸರಕಾರವೇ ಜೈಲಿಗೆ ಕಳಿಸಿತ್ತು. ಅಲ್ಲಿ ಅವರ ಆರೋಗ್ಯ ಹದಗೆಟ್ಟರೆ ಬಿಜೆಪಿ ಸರಕಾರವೇ ಹೊಣೆ ಅಂತ ಶರದ್ ಪವಾರ್ ಪತ್ರ ಬರೆದಿದ್ದರು. ಈಗ ಅದೇ ಕಳಂಕಿತ ಭುಜಬಲ್ ಮೋದಿ ಪಕ್ಷ ಇರುವ ಸರಕಾರದಲ್ಲಿ ಸಚಿವ.
ಇನ್ನೊಬ್ಬ ಹೊಸ ಸಚಿವ ಹಸನ್ ಮುಶ್ರಿಫ್. ಇವರ ಮೇಲೆ ಮನಿ ಲಾಂಡರಿಂಗ್ ಸಂಬಂಧಿತ ಈಡಿ ಕೇಸು ನಡೀತಿದೆ. ನಲ್ವತ್ತು ಸಾವಿರ ರೈತರ ಹಣ ಗುಳುಂ ಮಾಡಿದ ಗಂಭೀರ ಆರೋಪ ಇವರ ಮೇಲಿದೆ. ಆದರೆ ಈಗವರು ಮೋದಿ - ಶಾ ಅವರ ಪಕ್ಷದ ಮೈತ್ರಿ ಸರಕಾರದಲ್ಲಿ ಮಿನಿಸ್ಟರ್. ಎಲ್ಲೀವರೆಗೆಂದರೆ, ಮೋದಿ ಶಾ ಅವರ ದಿಲ್ಲಿ ಸರಕಾರದಲ್ಲಿ ಒಬ್ಬೇ ಒಬ್ಬ ಮುಸ್ಲಿಂ ಸಚಿವರಿಲ್ಲ, ಅವರ ಪಕ್ಷದಲ್ಲಿ ಮುಸ್ಲಿಂ ಲೋಕಸಭಾ ಸದಸ್ಯರಿಲ್ಲ, ರಾಜ್ಯಸಭಾ ಸದಸ್ಯರೂ ಇಲ್ಲ. ಆದರೆ ಮಹಾರಾಷ್ಟ್ರದಲ್ಲಿ ಕಳಂಕಿತ ಹಸನ್ ಮುಶ್ರಿಫ್ ರನ್ನು ಮೋದಿ - ಶಾ ಅವರ ಪಕ್ಷ ಸಚಿವರಾಗಿ ಒಪ್ಪಿಕೊಳ್ಳುವಾಗ ಬಿಜೆಪಿಗೆ, ಸಂಘ ಪರಿವಾರಕ್ಕೆ ಯಾವುದೇ ಆಕ್ಷೇಪ ಇಲ್ಲ.
ಇನ್ನು ಸ್ವತಃ ಹಸನ್ ಮುಶ್ರಿಫ್ ಕೂಡ ಕೇವಲ ಕೆಲವೇ ದಿನಗಳ ಹಿಂದೆ ಬಿಜೆಪಿ ರಾಜ್ಯದಲ್ಲಿ ಕೋಮುವಾದ ಹರಡುತ್ತಿದೆ ಎಂದು ಅದರ ವಿರುದ್ಧ ಮೆರವಣಿಗೆ ಮಾಡಿದ್ದರು. ಆ ರಾಜ್ಯದಲ್ಲಿ ಇತ್ತೀಚಿಗೆ ಕೋಮು ಹಿಂಸಾಚಾರದ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ಹಸನ್ ಅವರಿಗೂ ಬಿಜೆಪಿ ಸರಕಾರದಲ್ಲಿ ಸಚಿವರಾಗಲು ಯಾವುದೇ ಸಮಸ್ಯೆಯಿಲ್ಲ. ಒಟ್ಟಾರೆ ಬಿಜೆಪಿಗೆ, ಇರೋ ಎಲ್ಲ ಶಾಸಕರೂ, ಇರೋ ಎಲ್ಲ ಪಕ್ಷಗಳು ತನ್ನೊಳಗೆ ಬಂದು ಸೇರಿಕೊಳ್ಳಬೇಕು. ಆಗ ಅವರೆಲ್ಲರೂ ಪರಿಶುದ್ಧರಾಗ್ತಾರೆ.
ಇನ್ನು ಶಾಸಕರು, ಸಂಸದರೂ ಅಷ್ಟೇ. ಅವರಿಗೆ ಅಧಿಕಾರ ಸಿಗ್ತಾನೆ ಇರ್ಬೇಕು, ಹಾಗೇ ಜೈಲಿಗೆ ಹೋಗೋದನ್ನು ಹೇಗಾದರೂ ತಪ್ಪಿಸಲೇಬೇಕು. ಅದಕ್ಕಾಗಿ ಅವರು ಏನು ಬೇಕಾದ್ರೂ ಮಾಡ್ತಾರೆ, ಯಾರ ಜೊತೆ ಬೇಕಾದ್ರೂ ಸೇರ್ತಾರೆ, ಯಾರಿಗೆ ಬೇಕಾದ್ರೂ ಕೈ ಕೊಡ್ತಾರೆ... ಅಷ್ಟೇ. ಇದರಿಂದಾಗಿ ಮಹಾರಾಷ್ಟ್ರದ ಬಿಜೆಪಿ ಶಾಸಕರ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಯಾವುದೋ ಪಕ್ಷದಿಂದ ಬಂದವರು ಬಿಜೆಪಿ ಬೆಂಬಲದಲ್ಲಿ ದಿಢೀರನೇ ಅಲ್ಲಿ ಸಿಎಂ ಆಗ್ತಾರೆ, ಡಿಸಿಎಂ ಆಗ್ತಾರೆ , ಸಚಿವರೂ ಆಗ್ತಾರೆ. ಆದರೆ ಬಿಜೆಪಿ ಶಾಸಕರು ಮಾತ್ರ ತಮ್ಮದೇ ಭರ್ಜರಿ ಬಹುಮತದ ಸರಕಾರ ಇದ್ರೂ ಶಾಸಕರಾಗಿಯೇ ಉಳೀಬೇಕು.
ಪ್ರಧಾನಿ ಮೋದಿಜಿ ಭಾಷಣಗಳಲ್ಲಿ ನೂರಾರು ಬಾರಿ ಹೇಳಿದ ಹಾಗೆಯೇ ನಿಜವಾಗಿಯೂ ಮನಸ್ಸು ಮಾಡಿದ್ರೆ ಈ ಸಿ ಬಿ ಐ , ಐ ಟಿ ಹಾಗು ಇ ಡಿ ಇಲಾಖೆಗಳನ್ನು ಬಳಸಿಕೊಂಡು ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಎಲ್ಲ ಭ್ರಷ್ಟ ರಾಜಕಾರಣಿಗಳನ್ನು ಜೈಲಿಗೆ ಕಳಿಸಿಬಿಡಬಹುದಿತ್ತು. ಭ್ರಷ್ಟ ರಾಜಕಾರಣಿಗಳೇ ಇಲ್ಲದ ಹಾಗೆ ಮಾಡಿ ಬಿಡಬಹುದಿತ್ತು. ಅಷ್ಟು ಪವರ್ , ಪ್ರಭಾವ ಎಲ್ಲವೂ ಅವರಿಗೆ ಇದೆ.
ಆದರೆ ಈಗ ಇ ಡಿ, ಸಿಬಿಐ ಗಳೆಲ್ಲ ಹೇಗೆ ಬಳಕೆಯಾಗ್ತಾ ಇವೆ. ಅದರಿಂದ ಎಲ್ಲಾದರೂ ನಿಜವಾಗಿಯೂ ಭ್ರಷ್ಟಾಚಾರ ನಿಗ್ರಹ ಆಗ್ತಾ ಇದೆಯಾ ? ನಿನ್ನೆವರೆಗೆ ಅಜಿತ್ ಪವಾರ್ , ಛಗನ್ ಭುಜಬಲ್, ಹಸನ್ ಮುಶ್ರಿಫ್ ಮತ್ತಿತರರು ಈ ಡಿ ದೃಷ್ಟಿಯಲ್ಲಿ ಆರೋಪಿಗಳು, ಕಳಂಕಿತರು. ಇವತ್ತು ಈ ಡಿ ಅವರ ವಿರುದ್ಧ ತನಿಖೆ ಮುಂದುವರಿಸಲು ಸಾಧ್ಯವೇ ? ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾ ಈಡಿ ? ಈಡಿ ಬಳಿ ಎಲ್ಲರ ಸಿಡಿ ಇದೆ ಅನ್ನೋ ಮಾತು ರಾಜಕೀಯ ವಲಯಗಳಲ್ಲಿ ಒಂದು ಜೋಕಾಗಿ ಬಿಟ್ಟಿದ್ದು ಹೀಗೇ ಅಲ್ವಾ ಮೋದೀಜಿ ?
ಮೊನ್ನೆ ಬಿಹಾರದಲ್ಲಿ ನಡೆದ ವಿಪಕ್ಷಗಳ ಮಹಾ ಮೈತ್ರಿಕೂಟ ರಚನೆಯ ಮೀಟಿಂಗ್ ನಲ್ಲಿ ಎನ್ ಸಿ ಪಿ ಪಕ್ಷದ ನಾಯಕ ಪ್ರಫುಲ್ ಪಟೇಲ್ ಕೂಡ ಭಾಗವಹಿಸಿದ್ದರು. ಈಗ ನೋಡಿದ್ರೆ ಎನ್ ಸಿ ಪಿ ಪಕ್ಷವೇ ಹೋಗಿ ಬಿಜೆಪಿ ಜೊತೆ ಸೇರಿಕೊಂಡಿದೆ. ಶರದ್ ಪವಾರ್ ಬಳಿ ಅವರ ಪಕ್ಷವೇ ಇಲ್ಲ. ಇರೋದು ಅವರ ಮಗಳು ಹಾಗು ಈವರೆಗೆ ಹೋಗದ ಬೆರಳೆಣಿಕೆಯ ಕೆಲವು ಶಾಸಕರು ಮಾತ್ರ.
ಪಾಟ್ನಾದಲ್ಲಿ ವಿಪಕ್ಷಗಳ ಮೀಟಿಂಗ್ ಗೆ ಹೋಗಿದ್ದ ಪ್ರಫುಲ್ ಪಟೇಲ್ ಮೇಲೂ ಹಲವು ಭ್ರಷ್ಟಾಚಾರ ಪ್ರಕರಣಗಳಿವೆ. 2024 ರಲ್ಲಿ ಎಲ್ಲ ವಿಪಕ್ಷಗಳು ಒಂದಾಗಿ ಹೋರಾಡಬೇಕಿರೋದು ಬಿಜೆಪಿ ವಿರುದ್ಧ ಅಲ್ಲ, ಈ ಡಿ ವಿರುದ್ಧ ಅಂತ ವಿಶ್ಲೇಷಕರು ಹೇಳ್ತಾ ಇರೋದು ಇದೇ ಲೆಕ್ಕಾಚಾರದಲ್ಲಿ. ಪವಾರ್ ಮಹಾ ಚಾಣಾಕ್ಷ ರಾಜಕಾರಣಿ ಎಂಬುದು ನಿಜ. ಆದರೆ ನಿನ್ನೆಯ ಬೆಳವಣೆಗೆ ನೋಡಿದರೆ ಮಹಾರಾಷ್ಟ್ರದ ರಾಜಕೀಯದ ಮೇಲಿನ ಅವರ ಹಿಡಿತ ಸಂಪೂರ್ಣ ಸಡಿಲವಾಗಿರುವಂತೆ ಕಾಣುತ್ತಿದೆ. ಅದು ಹೌದು ಎಂದಾದರೆ ಮಹಾರಾಷ್ಟ್ರದಲ್ಲಿ ಪವಾರ್ ಅವರ ಆಟ ಮುಗಿದಿದೆ ಎಂದೇ ಹೇಳಬೇಕಾಗುತ್ತದೆ.
ಇರೋ ಪಕ್ಷವನ್ನು ಉಳಿಸಿಕೊಳ್ಳಲು ಆಗದ ಉದ್ಧವ್ ಠಾಕ್ರೆ ಹಾಗು ಶರದ್ ಪವಾರ್ ಈಗ ಜನರ ಬಳಿ ಹೋಗಿ ಹೊಸತಾಗಿ ಪಕ್ಷ ಕಟ್ಟುತ್ತೇವೆ, ಬಿಜೆಪಿಯ ಅನ್ಯಾಯವನ್ನು ಮನವರಿಕೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಸುಲಭದ ಮಾತಲ್ಲ. ಆದರೆ ಅಸಾಧ್ಯವೂ ಅಲ್ಲ. ಉದ್ಧವ್ ಠಾಕ್ರೆ ಹಾಗು ಶರದ್ ಪವಾರ್ ನಿಜಕ್ಕೂ ಬೀದಿಗಿಳಿದು ಹೋರಾಡಿ ಮರಾಠಾ ಅಸ್ಮಿತೆಯ, ಸ್ವಾಭಿಮಾನದ ಹಾಗು ಅದಕ್ಕಾದ ಅವಮಾನದ ಬಗ್ಗೆ ರಾಜಕೀಯ ಪ್ರಜ್ಞೆ ಬೆಳೆಸುವಲ್ಲಿ ಯಶಸ್ವಿಯಾದರೆ ಬಿಜೆಪಿಯನ್ನು ಸೋಲಿಸೋದು ಅಸಾಧ್ಯವಲ್ಲ. ಆದರೆ ಈಗ ಬಿಜೆಪಿ ಜೊತೆಗೂ ಏಕನಾಥ್ ಶಿಂಧೆ ಹಾಗು ಅಜಿತ್ ಪವಾರ್ ಇದ್ದಾರೆ. ಹಾಗಾಗಿ ಮರಾಠಾ ರಾಜಕೀಯ ಮಾಡೋದು ಬಿಜೆಪಿಗೂ ತೀರಾ ಆಗದೆ ಇರೊದೇನಲ್ಲ.
ಆದರೆ ಅಜಿತ್ ಪವಾರ್ ಬಂದ ಮೇಲೆ ಸಂಖ್ಯಾ ಬಲ ಇದೆ ಅಂತ ಶಿಂಧೆಯನ್ನು ಮನೆಗೆ ಕಳಿಸಿ ಬಿಜೆಪಿ ಮತ್ತೆ ದೇವೇಂದ್ರ ಫಡ್ನವಿಸ್ ರನ್ನೇ ಮುಖ್ಯಮಂತ್ರಿ ಮಾಡಿದರೆ ಮಹಾರಾಷ್ಟ್ರದಲ್ಲಿ ಮರಾಠ vs ಬ್ರಾಹ್ಮಣ ರಾಜಕಾರಣ ಗರಿಗೆದರುವ ಸಾಧ್ಯತೆ ಇದೆ. ಮಹಾರಾಷ್ಟ ರಾಜಕಾರಣ ಈಗ ನಿರ್ಣಾಯಕ ಕಾಲ ಘಟ್ಟಕ್ಕೆ ಬಂದು ನಿಂತಿದೆ.
ಅಲ್ಲಿನ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳು ಈಗ ಹೆಸರಿಗೆ ಮಾತ್ರ ಇವೆ. ಅದರೊಳಗಿನ ಶಾಸಕರೆಲ್ಲರೂ ಈಗ ಬಿಜೆಪಿ ಹಿಡಿತದಲ್ಲಿದ್ದಾರೆ. ಉದ್ಧವ್ ಠಾಕ್ರೆ ಹಾಗು ಶರದ್ ಪವಾರ್ ಸೋಲೊಪ್ಪಿಕೊಳ್ಳದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಿ ಮತ್ತೆ ಶಿವಸೇನೆ ಹಾಗು ಎನ್ ಸಿ ಪಿ ಯನ್ನು ಹೊಸತಾಗಿ ಮೇಲೆತ್ತಿದರೆ ಅದೊಂದು ಐತಿಹಾಸಿಕ ದಾಖಲೆಯಾಗಲಿದೆ. ಇಲ್ಲದಿದ್ದರೆ ಅಲ್ಲಿಗೆ ಆ ಎರಡು ಪಕ್ಷಗಳ ಕಾಲ ಮುಗಿದು ಹೋದಂತೆಯೇ.